ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬುಧವಾರ ಬಿಎಂಟಿಸಿ ಬಸ್’ನಲ್ಲಿ ಮಹಿಳೆಯರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇಂದು (ಮಾ.7) ಮಧ್ಯರಾತ್ರಿ 12 ಗಂಟೆಯಿಂದ ನಾಳೆ (ಮಾ.8) ಮಧ್ಯರಾತ್ರಿ 12 ಗಂಟೆ ರವರೆಗೆ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಿಬಿಎಂಟಿಸಿ ಬಸ್’ಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಜ್ರ, ವಾಯುವಜ್ರ ಸೇರಿ ಎಲ್ಲ ಬಸ್’ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಒಂದು ದಿನ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಪತ್ರ ಬರೆದಿದ್ದರು. ಎಂಡಿ ಸತ್ಯವತಿ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.
ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು. ಮಹಿಳೆಯರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಉಪಯೋಗಿಸುವುದರಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಿದಂತಾಗಲಿದೆ ಎಂದು ಬಿಎಂಟಿಸಿ ತಿಳಿಸಿದೆ.
ಬಿಎಂಟಿಸಿ 48 ಘಟಕಗಳು, 50 ಬಸ್ ನಿಲ್ದಾಣಗಳು, 6,600 ಬಸ್ಗಳನ್ನು ಹೊಂದಿದ್ದು, ಪ್ರತಿನಿತ್ಯ 54 ಸಾವಿರ ಸುತ್ತುವಳಿಗಳಲ್ಲಿ 10.84 ಲಕ್ಷ ಕಿಲೋ ಮೀಟರ್ ಕ್ರಮಿಸುತ್ತಿದೆ. ಸರಾಸರಿ 29 ಲಕ್ಷ ಪ್ರಯಾಣಿಕರು ನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ವಿವರಿಸಿದೆ.