ರಾಜ್ಯದಲ್ಲಿ ಲಾಕ್ಡೌನ್ ತೆರೆಯುವಿಕೆಯ ಮುಂದಿನ ಹಂತದ ಮಾರ್ಗಸೂಚಿ ಆದೇಶ ಹೊರಬಂದಿದ್ದು ಸೋಮವಾರದಿಂದ ರಾಜ್ಯಾದ್ಯಂತ ಸಿನಿಮಾ ಮಂದಿರಗಳು ಪ್ರೇಕ್ಷಕರಿಗೆ ತೆರೆಯಲಿದೆ. ಹಾಗೂ ಜುಲೈ 26 ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸಚಿವರು ಮತ್ತು ಅಧಿಕಾರಿಗಳ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಸಡಿಲಗೊಳಿಸಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿಧಿಸಿ ಆದೇಶಿಸಿದ್ದಾರೆ.
ಸಿನಿಮಾ ಥಿಯೇಟರ್ ಗಳಲ್ಲಿ ಶೇ. 50 ರಷ್ಟು ಸೀಟುಗಳ ಭರ್ತಿಯೊಂದಿಗೆ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ.
ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದವರು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.