ಸಂಘಟಿತ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 52 ರನ್ ಗಳಿಂದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಅಹಮದಾಬಾದ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ಬುಮ್ರಾ ಮಾರಕ ದಾಳಿ ನಡುವೆಯೂ 20 ಓವರ್ ಗಳಲ್ಲಿ 9 ವಿಕೆಟ್ ಗೆ 165 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಮುಂಬೈ ಇಂಡಿಯನ್ಸ್ 17.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಕೆಕೆಆರ್ ಆಡಿದ 12 ಪಂದ್ಯಗಳಿಂದ 5 ಜಯ ಹಾಗೂ 7 ಸೋಲಿನೊಂದಿಗೆ 10 ಅಂಕ ಸಂಪಾದಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ 2 ಜಯ ಹಾಗೂ 9 ಸೋಲಿನೊಂದಿಗೆ 4 ಅಂಕದೊಂದಿಗೆ ಪಾತಾಳಕ್ಕೆ ಕುಸಿಯಿತು.
ಮುಂಬೈ ಪರ ಇಶಾನ್ ಕಿಶನ್ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 51 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ರಮಣ್ ದೀಪ್ (12), ಟಿಮ್ ಡೇವಿಡ್ (13), ಮತ್ತು ಕೀರನ್ ಪೊಲಾರ್ಡ್ (13) ಹೋರಾಟ ಸಾಕಾಗಲಿಲ್ಲ.
ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರೆ, ಆಂಡ್ರೆ ರಸೆಲ್ 2 ವಿಕೆಟ್ ಗಳಿಸಿ ಮುಂಬೈ ಗೆಲುವಿನ ಆಸೆಯನ್ನು ಚಿವುಟಿ ಹಾಕಿದರು.