ಹೈದರಾಬಾದ್: ಮೂರು ಬೀದಿ ನಾಯಿಗಳು ಒಟ್ಟಿಗೆ ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿ ಸಾಯಿಸಿರುವ ಭೀಕರ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್’ನಲ್ಲಿ ನಡೆದಿದೆ.
ಭಾನುವಾರ, ಅಂಬರ್’ಪೇಟೆಯಲ್ಲಿ ಈ ಘಟನೆ ನಡೆದಿದ್ದು, ಬೀದಿ ನಾಯಿಗಳ ದಾಳಿಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ದಾಳಿ ಮಾಡುತ್ತವೆ. ಈ ಸಂದರ್ಭ ಬಾಲಕ ಕೆಳಗೆ ಬೀಳುತ್ತಾನೆ. ಬಳಿಕ, ಪದೇ ಪದೇ ನಾಯಿಗಳು ಆತನನ್ನು ಕಚ್ಚುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಬಾಲಕ ಕೊಂಡೊಯ್ಯತ್ತಿದ್ದ ಆಹಾರ ಪೊಟ್ಟಣದ ವಾಸನೆ ಗ್ರಹಿಸಿದ ನಾಯಿಗಳು ದಾಳಿ ಮಾಡಿವೆ ಎಂದು ಹೈದರಾಬಾದ್ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಂದೆ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಆಟೊಮೊಬೈಲ್ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕುಟುಂಬ ನಿಜಾಮಾಬಾದ್ ಮೂಲದ್ದಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.