ರಾಜ್ಯ ಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ, ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿಯ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಪ್ರವಾಹದಿಂದ ಜುಲೈ, ಆಗಸ್ಟ್ ಹಾಗೂ ಈ ತಿಂಗಳು ಸಂಭವಿಸಿದ ಹಾನಿಯ ಕುರಿತು ಚರ್ಚಿಸಿದರು.
ರಾಜ್ಯದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದ ಸಂಭವಿಸಿದ ಹಾನಿಯ ಕುರಿತು ಹಾಗೂ ರಾಜ್ಯ ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ಒದಗಿಸಲಾಯಿತು.
ತಂಡವು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇದರೊಂದಿಗೆ ಅತಿ ಹೆಚ್ಚು ಭೂಕುಸಿತ, ಸಮುದ್ರ ಕೊರೆತ ಸಂಭವಿಸಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಜೊತೆಗೆ ಬೆಂಗಳೂರು ನಗರ, ನೆರೆಯ ಮಂಡ್ಯ, ರಾಮನಗರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ಸಹ ಅವಲೋಕಿಸುವಂತೆ ತಿಳಿಸಲಾಯಿತು. ಈ ಬಾರಿ ಭಾರಿ ಸಂಖ್ಯೆಯಲ್ಲಿ ಮೀನುಗಾರಿಕಾ ದೋಣಿಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಸಂಭವಿಸಿದ ಹಾನಿ ಹಾಗೂ ರಾಮನಗರದ ರೇಷ್ಮೆ ರೀಲಿಂಗ್ ಘಟಕ ಹಾಗೂ ಟ್ವಿಸ್ಟಿಂಗ್ ಘಟಕಗಳಿಗೆ ಸಂಭವಿಸಿದ ಹಾನಿಯ ಕುರಿತೂ ಸಹ ಕೇಂದ್ರ ತಂಡದ ಗಮನಕ್ಕೆ ತಂದ ಮುಖ್ಯಮಂತ್ರಿಗಳು, ಮೊದಲ ಬಾರಿಗೆ ಇಂತಹ ಹಾನಿ ಸಂಭವಿಸಿದ್ದು, ಅವರಿಗೆ ಜೀವನೋಪಾಯಕ್ಕೆ ತೊಂದರೆಯಾಗಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ಅವರಿಗೆ ನೆರವು ನೀಡಲು ಪರಿಶೀಲಿಸುವಂತೆ ಕೋರಿದರು.