ಇತ್ತೀಚಿಗೆ ನ್ಯಾಯಾಲಯವು ಬಿಹಾರದ ಕೋವಿಡ್ ಸಾವುಗಳನ್ನು ಪುನರ್ ಪರಿಶೀಲಿಸಲು ಆದೇಶ ನೀಡಿದ ನಂತರ,72%ದಷ್ಟು ಕೋವಿಡ್ ಸಾವುಗಳಲ್ಲಿ ಏರಿಕೆ ಕಂಡಿತ್ತು. ದೇಶದಲ್ಲಿಯೇ ಅತೀ ಹೆಚ್ಚು ಕೋವಿಡ್ ಸಾವುಗಳನ್ನು ಕಡಿಮೆ ರಾಜ್ಯಗಳಲ್ಲಿ ಬಿಹಾರ ಮೊದಲ ಸ್ಥಾನದಲ್ಲಿ ನಿಂತಿತ್ತು. ಈಗ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾವಿನ ಪ್ರಮಾಣ ಅಧಿಕೃತ ಅಂಕಿಅಂಶಗಳಿಗಿಂತ ಮೂರು ಪಟ್ಟು ಹೆಚ್ಚಾಗಿರುವ ಕುರಿತು ಮಾಹಿತಿ ನೀಡಿದೆ.
ದತ್ತಾಂಶ ವಿಶ್ಲೇಷಕಿ ರುಕ್ಮಿಣಿ ಅವರು ನಾಗರಿಕ ನೋಂದಣಿ ವ್ಯವಸ್ಥೆಯಿಂದ ಪಡೆದಿರುವ ಮಾಹಿತಿ ಈ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ.
2018 ಮತ್ತು 2019ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರಾಸರಿ 59,000 ಸಾವುಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ಆದರೆ, ಕೋವಿಡ್ ಎರಡನೇ ಅಲೆಯ ಸಂರ್ಭದಲ್ಲಿ ಈ ಸಾವುಗಳ ಸಂಖ್ಯೆ ಸರಾಸರಿಗಿಂತ 290% ಏರಿಕೆಯಾಗಿ 2.3 ಲಕ್ಷಕ್ಕೇರಿದೆ! ಸರಾಸರಿಗಿಂತ ಹೆಚ್ಚಾಗಿರುವ 1.74 ಲಕ್ಷ ಸಾವುಗಳಲ್ಲಿ ಅತೀ ಹೆಚ್ಚು ಸಾವುಗಳು ಮೇ ತಿಂಗಳಲ್ಲಿ ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಮೇ ಒಂದರಲ್ಲೇ 1.6 ಲಕ್ಷ ಸಾವು ಸಂಭವಿಸಿರುವ ಕುರಿತು ದತ್ತಾಂಶಗಳು ಲಭ್ಯವಾಗಿದೆ.
ಆದರೆ, ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್’ನಿಂದ ಮೃತಪಟ್ಟವರ ಸಂಖ್ಯೆ ಕೇವಲ 4,461. ಇದು ಕೋವಿಡ್ ಕುರಿತಾದ ಸರ್ಕಾರಿ ಅಂಕಿಅಂಶಗಳ ಕುರಿತು ಸಂದೇಹಪಡುವಂತೆ ಮಾಡಿದೆ. ಮಧ್ಯಪ್ರದೇಶ ಸರ್ಕಾರವೂ ಕೋವಿಡ್ ಸಾವುಗಳ ಕುರಿತ ಅಂಕಿಅಂಶಗಳನ್ನು ತಿರುಚಿ ವರದಿ ನೀಡಿತ್ತು ಎಂಬ ಸಂದೇಹ ದೃಢವಾಗತೊಡಗಿದೆ.
ರುಕ್ಮಿಣಿ ಅವರು ಹೇಳುವ ಪ್ರಕಾರ, ಈ ಎಲ್ಲಾ ಸಾವುಗಳು ಕೋವಿಡ್’ನಿಂದ ಉಂಟಾದ ಸಾವುಗಳೆಂದು ದೃಢವಾಗಿ ಹೇಳಲಾಗುವುದಿಲ್ಲ. ಆದರೆ, ಯಾವುದೇ ವರ್ಷದಲ್ಲಿ ಇಲ್ಲದಷ್ಟು ಸಾವುಗಳು ಒಂದೇ ಬಾರಿಗೆ ಹೆಚ್ಚಾಗಲು ಕಾರಣವೇನು ಎಂಬುದು ಯಾರು ಅರಿಯದ ರಹಸ್ಯವೇನಲ್ಲ. “ಕೋವಿಡ್ ಸಾವುಗಳ ಕುರಿತು ತಪ್ಪಾದ ಅಂಕಿ ಅಂಶಗಳು ಹೊರಬರಲು ಮೂರು ಕಾರಣಗಳಿವೆ. ಒಂದು, ಕರೋನಾ ಪಾಸಿಟಿವ್ ಬಂದ ನಂತರ ಸಾವನ್ನಪ್ಪಿದವರನ್ನು ಪಟ್ಟಿಯಿಂದ ಕೈಬಿಡುವುದು, ಎರಡನೇಯದು, ಕರೋನಾ ಪರೀಕ್ಷೆ ಮಾಡಿಸಿಕೊಳ್ಳದೇ ಸೋಂಕಿನಿಂದ ಮೃತಪಟ್ಟವರು ಮತ್ತು ಮೂರನೇಯದು, ಸರ್ಕಾರ ಉದ್ದೇಶಪೂರ್ವಕವಾಗಿ ಅಂಕಿ ಅಂಶಗಳನ್ನು ತಿರುಚಿದ್ದು. ಈ ಮೂರು ಕಾರಣಗಳಿಂದ ನಿಜವಾದ ಕೋವಿಡ್ ಸಾವಿನ ಪ್ರಮಾಣ ಬಯಲಾಗುತ್ತಿಲ್ಲ,” ಎಂದು ರುಕ್ಮಿಣಿ ಹೇಳಿದ್ದಾರೆ.
ಶುಕ್ರವಾರದಂದು ಮದ್ರಾಸ್ ಹೈಕೋರ್ಟ್ ಹೇಳಿರುವ ಪ್ರಕಾರ ಕೋವಿಡ್ ಸಾವುಗಳ ಅಂಕಿಅಂಶ ಅಪಾರದರ್ಶಕವಾಗಿರುವುದು ಸಂಪೂರ್ಣ ದೇಶದ ಸಮಸ್ಯೆ ಆಗಿದೆ. ಈ ಕುರಿತಾಗಿ WHO ಮತ್ತು ICMR ಕೂಡಾ ಅಧಿಕೃತ ಹೇಳಿಕೆಯನ್ನು ನೀಡಿತ್ತು. ಕೋವಿಡ್ ನಿಂದ ಮೃತಪಟ್ಟವರ ದೇಹವನ್ನು ಯಾವ ರೀತಿ ದಹನ/ದಫನ್ ಮಾಡಬೇಕು ಎಂಬುದಕ್ಕೆ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ಕೋವಿಡ್ ನಿಂದ ಮೃತಪಟ್ಟರೂ, ಅಂತಹ ಸಾವುಗಳನ್ನು ಕೋವಿಡ್ ಸಾವುಗಳೆಂದು ಪರಿಗಣಿಸದಿದ್ದರೆ, ಮಾರ್ಗಸೂಚಿ ಪಾಲಿಸಲು ಸಾಧ್ಯವಿಲ್ಲ ಎಂಬುದು ನಿಚ್ಚಳ.
ಈ ಹಿಂದೆ ಗುಜರಾತ್, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಕೋವಿಡ್ ಸಾವುಗಳ ಸಂಖ್ಯೆಯನ್ನು ಯಾವ ರೀತಿ ತಿರುಚಲಾಗಿತ್ತು ಎಂಬ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು. ಗುಜರಾತ್’ನಲ್ಲಂತು ಕೋವಿಡ್ ಸಾವುಗಳ ವಾಸ್ತವ ಪ್ರಮಾಣ ಸರ್ಕಾರಿ ಅಂಕಿಅಂಶಗಳಿಗಿಂತ ಹತ್ತು ಪಟ್ಟು ಹೆಚ್ಚಿರುವುದು ಕಂಡು ಬಂದಿತ್ತು.
ಭಾರತದಲ್ಲಿ ಈವರೆಗೆ ಕೋವಿಡ್’ನಿಂದ ಒಟ್ಟು 3.67 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. ಆದರೆ, ತಜ್ಞರ ಪ್ರಕಾರ ಈ ವಾಸ್ತವದಲ್ಲಿ ಕರೋನಾ ಸೋಂಕಿನಿಂದ ಸರ್ಕಾರಿ ಸಂಖ್ಯೆಗಳಿಗಿಂತಲು ನಾಲ್ಕು ಪಟ್ಟು ಹೆಚ್ಚು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ.