ಬೆಂಗಳೂರು- ಉಪನೋಂದಣಾಧಿಕಾರಗಳ ಅಮಾನತು; ನಿರ್ದಿಷ್ಟ ಜಾತಿಯ ಅಧಿಕಾರಿಗಳೇ ಗುರಿ?

ಬೆಂಗಳೂರಿನಲ್ಲಿರುವ ಉಪನೋಂದಣಾಧಿಕಾರಿಗಳು ಕರ್ನಾಟಕ ಸರ್ಕಾರ ಹೊರಡಿಸಿದಂತಹ ಸುತ್ತೋಲೆಗಳ ಪ್ರಕಾರ ನೋಂದಣೆ ಮಾಡಿಲ್ಲವೆಂಬ ಕಾರಣಕ್ಕೆ ಹಲವು ಉಪನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು- ಉಪನೋಂದಣಾಧಿಕಾರಗಳ ಅಮಾನತು; ನಿರ್ದಿಷ್ಟ ಜಾತಿಯ ಅಧಿಕಾರಿಗಳೇ ಗುರಿ?

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತಪಾಸಣೆ ಎಂಬ ನೆಪದಲ್ಲಿ ಅನಗತ್ಯವಾಗಿ ಸಬ್‌ ರಿಜಿಸ್ಟ್ರಾರ್‌ಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ನಗರದಲ್ಲಿ 43 ಉಪ ನೋಂದಣಿ ಕಚೇರಿಗಳಿದ್ದು, ಕೆಲವು ಕಚೇರಿಗಳಲ್ಲಿ ಮಾತ್ರ ತಪಾಸಣೆ ನಡೆಸಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತಿದೆ.

ಅಚ್ಚರಿಯ ವಿಚಾರವೇನೆಂದರೆ, ತಪಾಸಣೆ ನಡೆಸಲಾದ ಎಲ್ಲಾ ಕಚೇರಿಗಳಲ್ಲಿ ತಪ್ಪುಗಳು ಕಂಡುಬಂದರೂ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಅಳೆದು ತೂಗಿದಂತೆ ಕೆಲವು ಅಧಿಕಾರಿಗಳನ್ನು ಮಾತ್ರ ಗುರಿಯಾಗಿಸಿ ಅಮಾನತು ಮಾಡಲಾಗಿದೆ. ತಮ್ಮದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಕುರಿತು ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಈ ರೀತಿಯ ತಾರತಮ್ಯ ಏಕೆ ಪ್ರದರ್ಶಿಸಿದರು ಎಂಬ ಪ್ರಶ್ನೆ ಈಗ ಎದುರಾಗಿದೆ. ಕಂದಾಯ ಇಲಾಖೆಯ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಯಾವ ಅಧಿಕಾರಿ ತನ್ನ ಮೇಲಧಿಕಾರಿಗಳಿಗೆ ʼಜಿ ಹುಜೂರ್‌ʼ ಎಂದು ಹೇಳಲಿಲ್ಲವೋ ಅಂತಹವರನ್ನೇ ಗುರಿಯಾಗಿಸಿ ಈ ʼತಪಾಸಣೆʼ ಎಂಬ ನಾಟಕವಾಡಲಾಗುತ್ತಿದೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿರ್ದಿಷ್ಟ ಸಮುದಾಯವೇ ಗುರಿ?

ಕಂದಾಯ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ ಒಟ್ಟು 9 ಜನ ಸಬ್‌ ರಿಜಿಸ್ಟ್ರಾರ್‌ಗಳನ್ನು ಅಮಾನತುಗೊಳಿಸಿದ್ದಾರೆ. ಅಚ್ಚರಿಯ ವಿಚಾರವೇನೆಂದರೆ, ಇವರಲ್ಲಿ ಆರು ಜನ ಅಧಿಕಾರಿಗಳು ಕುರುಬ ಸಮುದಾಯಕ್ಕೆ ಸೇರಿದವರು, ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಲಲಿತಮ್ಮ, ಮಧುಕುಮಾರ್‌, ರಾಮ್‌ ಪ್ರಸಾದ್‌, ಪ್ರಭಾವತಿ, ಸುಮಾ, ರಂಗಪ್ಪ, ಕೃಷ್ಣಪ್ಪ, ಶಿವಕುಮಾರ್‌ ಮತ್ತು ಲೋಕೇಶ್‌ ಎಂಬುವವರು ಅಮಾನತುಗೊಂಡ ಅಧಿಕಾರಿಗಳು. ಇವರಲ್ಲಿ ಆರು ಜನ ಅಧಿಕಾರಿಗಳು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಇದು ಒಂದು ಸಮುದಾಯದ ಅಧಿಕಾರಿಗಳನ್ನೇ ಗುರಿಯಾಗಿಸುವ ತಂತ್ರವೇ ಎಂಬ ಸಂದೇಹವೂ ಮೂಡುತ್ತಿದೆ.

ತಪಾಸಣೆ ನಡೆಸಲು ಕಾರಣವೇನು?

ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡುವಾಗ ಭಾರತೀಯ ನೋಂದಣೆ ಕಾಯ್ದೆ – 1908 ಅಡಿಯಲ್ಲಿ ನೀಡಲಾದ ಮಾರ್ಗದರ್ಶನಗಳನ್ನು ಪಾಲಿಸಬೇಕಾಗಿದೆ. ನೋಂದಣಿಯ ವೇಳೆ ಯಾವ ಯಾವ ದಾಖಲೆಗಳನ್ನು ಪಡೆಯಬಹುದಾಗಿದೆ ಎಂಬ ಕುರಿತಾದ ಸ್ಪಷ್ಟವಾದ ಮಾಹಿತಿಯು ಈ ಕಾಯ್ದೆಯಲ್ಲಿ ನಮೂದಿಸಲಾಗಿದೆ. ಇದಕ್ಕೆ ಹೊರತಾಗಿ, ಕರ್ನಾಟಕ ಸರ್ಕಾರವು 6 ಏಪ್ರಿಲ್‌ 2009ರಂದು ನೀಡಿರುವ ಸುತ್ತೋಲೆಯ ಅನ್ವಯ ಇತರೆ ಮಾರ್ಗದರ್ಶನಗಳನ್ನೂ ನೀಡಲಾಗಿದೆ. ಈ ಸುತ್ತೋಲೆಯಲ್ಲಿ ಈವರೆಗೆ ಕಾಲ ಕಾಲಕ್ಕೆ ಹಲವು ಬದಲಾವಣೆಗಳನ್ನೂ ಮಾಡಲಾಗಿದೆ.

Attachment
PDF
Registrar Circulars by GoK.pdf
Preview

ಆದರೆ, ಈ ಎಲ್ಲಾ ಸುತ್ತೋಲೆಗಳು ನೋಂದಣಿ ಕಾಯ್ದೆಯ ಅನುಸಾರವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. G Ramachar vs State of Karnataka (WC no. 18939/2009 & 14050/2009) ಪ್ರಕರಣದಲ್ಲಿ ತೀರ್ಪುನೀಡಿದ್ದ ಜಸ್ಟೀಸ್‌ ಬಿ ವಿ ನಾಗರತ್ನ ಅವರು, ಕರ್ನಾಟಕ ಸರ್ಕಾರವು 6 ಏಪ್ರಿಲ್‌ 2009ರಂದು ನೀಡರುವ ಸುತ್ತೋಲೆಯು ಅಸಿಂಧು ಎಂದು ಪರಿಗಣಿಸಿದ್ದರು. ಆ ಸುತ್ತೋಲೆಯಲ್ಲಿ ಕಾಲ ಕಾಲಕ್ಕೆ ಮಾಡಿದಂತಹ ಬದಲಾವಣೆಗಳು ಕೂಡಾ ಅಸಿಂಧು ಎಂದು ಪರಿಗಣಿಸಿ 2016ರಲ್ಲಿ ತೀರ್ಪು ನೀಡಿದ್ದರು.

ಈಗ ನೋಂದಣಿ ಮಾಡುವಾಗ ತಪ್ಪೆಸಗಿದ್ದಾರೆ ಎಂಬ ಕಾರಣಕ್ಕಾಗಿ ತಪಾಸಣೆಯನ್ನು ನಡೆಸಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸರ್ಕಾರ ನೀಡಿರುವ ಸುತ್ತೋಲೆಗಳನ್ನು ಅಸಿಂಧು ಎಂದು ಹೈಕೋರ್ಟ್‌ ಪರಿಗಣಿಸಿದ ನಂತರವೂ, ಆ ಸುತ್ತೋಲೆಗಳ ಪ್ರಕಾರ ನೋಂದಣಿ ಮಾಡಿಲ್ಲ ಎಂದು ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಈಗ ಉದ್ಭವವಾಗಿದೆ.

ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಂದಣಿ ಮಾಡಲು ಬಳಸುವ E-Swathu ತಂತ್ರಾಂಶ ನೋಂದಣಿ ಕಾಯ್ದೆಯ ಅನ್ವಯವಾಗಿಲ್ಲ ಎಂದು ಕೂಡಾ ಕರ್ನಾಟಕ ಹೈಕೋರ್ಟ್‌ Manu N Vs State of Karnataka (WC no. 10582/2018) ಪ್ರಕರಣದಲ್ಲಿ ತೀರ್ಪು ನೀಡಿತ್ತು. ಈ ತಂತ್ರಾಂಶವನ್ನು ನೋಂದಣಿ ಕಾಯ್ದೆ, 1908ರ ಅನ್ವಯ ಸಿದ್ದಪಡಿಸುವಂತೆ ಹೇಳಿತ್ತು.

ಗ್ರಾಮ ಪಂಚಾಯತ್‌ ಖಾತೆಗಳಿಗೆ ಸಂಬಂಧಪಟ್ಟಂತೆ ಕೈ ಬರಹ ಖಾತೆ (Manual Khata) ಪಡೆದು ನೋಂದಣಿ ಮಾಡಿಸಿದ ಕಾರಣಕ್ಕೆ ಕ್ರಿಮಿನಲ್‌ ಪ್ರಕರಣಗಳು ಕೂಡಾ ದಾಖಲಾಗಿದ್ದವು. ಈ ಕ್ರಿಮಿನಲ್‌ ಪ್ರಕರಣಗಳನ್ನು ಕೂಡಾ Devaraju and others Vs State of Karnataka (WC no. 4158/2014) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿತ್ತು.

Attachment
PDF
Devaraju Vs State of Karnataka Case.pdf
Preview

ಹೈಕೋರ್ಟ್‌ನ ಈ ಎಲ್ಲಾ ತೀರ್ಪುಗಳನ್ನು ಗಮಿಸಿದಾಗ ಉಪನೋಂದಣಿ ಅಧಿಕಾರಿಗಳನ್ನು ಈಗ ತಪಾಸಣೆಯ ನೆಪದಲ್ಲಿ ಅಮಾನತಿನಲ್ಲಿ ಇಟ್ಟಿರುವುದು ಸರಿಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಹಿಂದೆ ಇಲಾಖಾ ವಿಚಾರಣೆಗೆ ಒಳಗಾಗಿದ್ದ ಪಿ ಲಕ್ಷ್ಮಿನಾರಾಯಣ ಎಂಬ ಪ್ರಥಮ ದರ್ಜೆ ಸಹಾಯಕರ ಪ್ರಕರಣವನ್ನು ಗಮನಿಸಿದಾಗ, 25 ಆಗಸ್ಟ್‌ 2020ರಲ್ಲಿ ಆದೇಶ ನೀಡಿದ್ದ ಕರ್ನಾಟಕ ಸರ್ಕಾರವು ಅವರ ವಿರುದ್ದ ಆರೋಪ ಸಾಬೀತಾಗಲಿಲ್ಲ ಎಂದು ಹೇಳಿತ್ತು.

ಲಕ್ಷ್ಮಿನಾರಾಯಣ ಅವರು ಬೊಮ್ಮನಹಳ್ಳಿ ಉಪನೋಂದಣಿ ಕಚೇರಿಯಲ್ಲಿ ಪ್ರಭಾರ ಉಪನೋಂದಣಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಸರ್ಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರ ವಿರುದ್ದ ಇಲಾಖಾ ವಿಚಾರಣೆ ನಡೆದಿತ್ತು. ಲಕ್ಷ್ಮಿನಾರಾಯಣ ಅವರು, Devaraju and others Vs State of Karnataka ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ತಮ್ಮಿಂದ ತಪ್ಪು ನಡೆದಿಲ್ಲ ಎಂದು ಹೇಳಿದ್ದರು. ಈ ಆಧಾರದ ಮೇಲೆ ಅವರ ಮೇಲಿನ ಆರೋಪಗಳು ಸಾಬೀತಾಗಿಲ್ಲ ಎಂದು ಸರ್ಕಾರವೇ ಹೇಳಿತ್ತು.

Attachment
PDF
Lakshminarayana Case.pdf
Preview

ಈ ಪ್ರಕರಣವನ್ನು ಗಮನಿಸಿದರೂ, ಈಗ ಉಪನೋಂದಣಿ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಕೂಡಾ ತಪ್ಪಾಗುತ್ತದೆ. ಇದಕ್ಕೂ ಮಿಗಿಲಾಗಿ ಒಂದು ನಿರ್ದಿಷ್ಟ ಸಮುದಾಯದ ಅಧಿಕಾರಿಗಳನ್ನು ಗುರಿಯಾಗಿಸುತ್ತಿರುವುದರ ಹಿಂದೆಯೂ ಸಂಶಯಗಳು ಎದ್ದಿರುವುದು, ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com