ಜಾರಕಿಹೊಳಿ ಪ್ರಕರಣ: ಪೊಲೀಸ್‌ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ದಾಖಲಿಸಿದ ಜನಾಧಿಕಾರ ಸಂಘರ್ಷ ಪರಿಷತ್

ಸಿ.ಡಿ ಪ್ರಕರಣದಲ್ಲಿ, ಸಂತ್ರಸ್ತೆ ಪರ ವಕೀಲ ಜಗದೀಶ್ ದೂರು ನೀಡಿದ ನಂತರ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಅದಕ್ಕೂ ಮೊದಲೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು
ಜಾರಕಿಹೊಳಿ ಪ್ರಕರಣ: ಪೊಲೀಸ್‌ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ದಾಖಲಿಸಿದ ಜನಾಧಿಕಾರ ಸಂಘರ್ಷ ಪರಿಷತ್

ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ಆಧರಿಸಿ FIR ದಾಖಲಿಸದಿರುವ ಕುರಿತು ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ದೂರು (ಪಿಸಿಆರ್‌) ನೀಡಿದೆ.

ಸಿ.ಡಿ ಪ್ರಕರಣದಲ್ಲಿ, ಸಂತ್ರಸ್ತೆ ಪರ ವಕೀಲ ಜಗದೀಶ್ ದೂರು ನೀಡಿದ ನಂತರ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಅದಕ್ಕೂ ಮೊದಲೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲಸ ಕೇಳಿಕೊಂಡು ಬಂದಿದ್ದ ಯುವತಿಯನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದಿನೇಶ್‌ ದೂರಿನಲ್ಲಿ ಆರೋಪಿಸಿದ್ದರು. ಆದರೆ, ಅವರ ದೂರಿನ ಆಧಾರದಲ್ಲಿ ಯಾವುದೇ ಎಫ್‌ಐಆರ್‌ ಅನ್ನು ದಾಖಲು ಮಾಡಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ದಿನೇಶ್ ಕಲ್ಲಹಳ್ಳಿ ಅವರ ದೂರನ್ನು ಆಧರಿಸಿ ಜನಾಧಿಕಾರ ಸಂಘರ್ಷ ಪರಿಷತ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಐಯರ್, “ಕ್ರಿಮಿನಲ್‌ ಅಪರಾಧದ ಕುರಿತಂತೆ ಯಾವುದೇ ವ್ಯಕ್ತಿ ದೂರು ನೀಡಿದರೂ ಪೊಲೀಸರು ಎಫ್‌ಐಆರ್‌ ದಾಖಲಿಸಬೇಕು. ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ ಆಧಾರದಲ್ಲಿ ನಿರ್ಭಯಾ ಆಕ್ಟ್ ಪ್ರಕಾರ ತಕ್ಷಣ ಎಫ್‌ಐಆರ್‌ ದಾಖಲಿಸಬೇಕಿತ್ತು. ಆದರೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ಅವರು ಈ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಈ ಕುರಿತಂತೆ, ನಾವು ಈ ಹಿಂದೆಯೂ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆವು. ಆ ವೇಳೆ ದೂರು ಸ್ವೀಕರಿಸಲು ಹಿಂಜರಿದ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಮಾರುತಿ.ಬಿ ಅವರು, ನಮ್ಮ ವಿರುದ್ಧ ನಮಗೆ ಹೇಗೆ ದೂರು ನೀಡುತ್ತೀರೆಂದು ಪ್ರಶ್ನಿಸಿದ್ದಾರೆ. ಕಾನೂನು ಪ್ರಕಾರ ನಿಮಗೇ ಕೊಡಬೇಕು, ಜ್ಯುರಿಸ್ಡಿಕ್ಷನ್‌ ಠಾಣೆಗೆ ನೀಡಬೇಕು ಎಂದು ತಿಳಿಸಿಕೊಟ್ಟರೂ ನಮ್ಮ ದೂರನ್ನು ಸ್ವೀಕರಿಸಿಲ್ಲ. ಹಾಗಾಗಿ ಇಮೇಲೆ ಕಳಿಸಿದ್ದೆವು, ಬಳಿಕ ರಿಜಿಸ್ಟರ್‌ ಪೋಸ್ಟ್‌ನಲ್ಲಿ ಕಳಿಸಿದ್ದೆವು, ಅದಾದ ಬಳಿಕ ಡಿಸಿಪಿಗೂ ನೀಡಿದೆವು. ಅದರ ಮುಂದುವರೆದ ಭಾಗವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದೇವೆ. ಅಲ್ಲಿ ಪಿಸಿಆರ್‌ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 36 ಪ್ರಕಾರ ಆಯುಕ್ತರಿರಲಿ, ಡಿಸಿಪಿ ಇರಲಿ ಅವರಿಗೆ FIR ದಾಖಲಿಸುವ ಭಾದ್ಯತೆ ಇದೆ. ಆದರೆ ಕಮಲ್ ಪಂತ್, ಡಿಸಿಪಿ ಅನುಚೇತನ್ ಮತ್ತು ಮಾರುತಿ.ಬಿ ಈ ಸೆಕ್ಷನ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಐಯರ್‌ ಹೇಳಿದ್ದಾರೆ.

ಲಲಿತಕುಮಾರ್‌ vs ಉತ್ತರಪ್ರದೇಶ ಸರ್ಕಾರದ ಪ್ರಕರಣದ ಅನ್ವಯ ಕಲ್ಲಹಳಿ ದೂರನ್ನು ಪ್ರಾಥಮಿಕ ತನಿಖೆ ಮಾಡಲಾಗಿದೆ. ಹಾಗಾಗಿ, ಎಪ್‌ಐಆರ್‌ ದಾಖಲಿಸಿಲ್ಲ ಎಂದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ನಮಗೆ ತಿಳಿಸಿದ್ದಾರೆ. ಆದರೆ, ಲಲಿತ್‌ ಕುಮಾರಿ ಪ್ರಕರಣ ಅಥವಾ ಬೇರೆ ಯಾವುದೇ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಆ ವಿಷಯದಲ್ಲಿ ಯಾವುದೇ ಕಾನೂನು ಇಲ್ಲದಾಗ ಅನ್ವಯ ಮಾಡಬಹುದು. ಆದರೆ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ನಿರ್ಭಯಾ ಕಾನೂನಿದೆ. ಹಾಗಾಗಿ ಲಲಿತ ಕುಮಾರಿ ಪ್ರಕರಣ ಇಲ್ಲಿ ಅನ್ವಯವಾಗುವುದಿಲ್ಲ ಎಂದು ಆದರ್ಶ್‌ ಐಯರ್‌ ತಿಳಿಸಿದ್ದಾರೆ.

ಮಂಗಳವಾರದಂದು ನ್ಯಾಯಾಲಯದಲ್ಲಿ ಪಿಸಿಆರ್‌ ದಾಖಲು ಮಾಡಲಾಗಿದೆ. ಎಪ್ರಿಲ್‌ 16 ರಂದು ವಿಚಾರಣೆ ಆರಂಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Attachment
PDF
PCR-CoP-DCP-PI-166AIPC-Annexures-PresentationIndex.pdf
Preview

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com