ಯಡಿಯೂರಪ್ಪ ಪಕ್ಷದ ಮಾಲೀಕರಲ್ಲ ಎಂಬ ಸಿ ಟಿ ರವಿ ಹೇಳಿಕೆ ಹಿಂದಿನ ಮರ್ಮವೇನು..?

ಸಿ ಟಿ ರವಿಯವರ ಹೊಸ ಹೇಳಿಕೆ, ಸಹಜವಾಗೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದು, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಚುನಾವಣೆಯ ಬಳಿಕ ನಡೆಯಲಿರುವ ಬೆಳವಣಿಗೆಗಳಿಗೆ ರವಿ ಈಗಲೇ ದಿಕ್ಸೂಚಿ ತೋರಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಪಕ್ಷದ ಮಾಲೀಕರಲ್ಲ ಎಂಬ ಸಿ ಟಿ ರವಿ ಹೇಳಿಕೆ ಹಿಂದಿನ ಮರ್ಮವೇನು..?

“ಯಡಿಯೂರಪ್ಪ ನಮ್ಮ ಪಕ್ಷದ ನಾಯಕರೇ ಹೊರತು, ಮಾಲೀಕರಲ್ಲ” ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ರಾಜ್ಯ ರಾಜಕಾರಣದಿಂದ ಕೆಲವು ದಿನಗಳಿಂದ ದೂರವೇ ಉಳಿದಿದ್ದ ರವಿ, ಅಲ್ಲಿಂದ ವಾಪಸ್ಸಾಗುತ್ತಲೇ ನೀಡಿರುವ ಈ ಹೇಳಿಕೆ, ಬಿಜೆಪಿಯ ಸದ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಹಲವು ಆಯಾಮಗಳಿಂದ ವಿಶ್ಲೇಷಣೆಗೊಳಗಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಖ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಸಚಿವರು, ಶಾಸಕರಿಗೆ ಸಂಬಂಧಿಸಿದ ಇಲಾಖೆ ಮತ್ತು ಕ್ಷೇತ್ರ ಮಟ್ಟದ ಕೆಲಸ ಕಾರ್ಯಗಳ ವಿಷಯದಲ್ಲಿ ಕೂಡ ವಿಜಯೇಂದ್ರ ಮೂಗು ತೂರಿಸುತ್ತಿದ್ದು, ಸಂಬಂಧಪಟ್ಟ ಸಚಿವರು, ಶಾಸಕರನ್ನು ಉಪೇಕ್ಷೆ ಮಾಡಿ ಎಲ್ಲಾ ನಿರ್ಧಾರವನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಹಿರಿಯ ನಾಯಕ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ಅವರಂಥವರಿಂದಲೇ ಕೇಳಿಬಂದಿರುವಾಗ, ತಮ್ಮ ಖಾತೆಯಲ್ಲಿ ಸಿಎಂ ಮತ್ತು ಅವರ ಕುಟುಂಬ ಹಸ್ತಕ್ಷೇಪ ನಡೆಸುತ್ತಿದೆ ಎಂದು ರಾಜ್ಯಪಾಲರಿಗೇ ದೂರು ನೀಡಿರುವ ವಿಷಯ ದೊಡ್ಡ ವಿವಾದ ಎಬ್ಬಿಸಿರುವ ಹೊತ್ತಿನಲ್ಲಿ ಸಿ ಟಿ ರವಿ ಅವರ ಈ ಹೇಳಿಕೆ ಸಹಜವಾಗೇ ಬಿಜೆಪಿ ವಲಯದಲ್ಲಿ ತಲ್ಲಣ ಎಬ್ಬಿಸಿದೆ.

ಅದರಲ್ಲೂ ಸಿ ಟಿ ರವಿ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿದ್ದಾರೆ. ಕೇಂದ್ರ ವರಿಷ್ಠರು ಮತ್ತು ಆರ್ ಎಸ್ ಎಸ್ ಹಿನ್ನೆಲೆಯ ಪ್ರಮುಖರೊಂದಿಗೆ ರಾಜ್ಯದ ಇತರೆ ಬಿಜೆಪಿ ನಾಯಕರಿಗಿಂತ ಹೆಚ್ಚು ಹತ್ತಿರದಲ್ಲಿದ್ಧಾರೆ. ಹಾಗಾಗಿ, ಅವರ ಈ ಹೇಳಿಕೆಗೆ ಇನ್ನಿಲ್ಲದ ಮಹತ್ವ ಬಂದಿದೆ.

ಯಡಿಯೂರಪ್ಪ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ; ಪ್ರಧಾನಿ ಮೋದಿ ನಮ್ಮ ನಾಯಕ, ಅಮಿತ್ ಶಾ ಕೂಡ ನಾಯಕ. ಹಾಗೇ ಯಡಿಯೂರಪ್ಪ ಕೂಡ. ಆದರೆ, ಕಾರ್ಯಕರ್ತರೇ ಅಂತಿಮವಾಗಿ ಪಕ್ಷದ ಮಾಲೀಕರು ವಿನಃ ನಾಯಕರಲ್ಲ; ನಾಯಕರು ಮಕ್ಕಳೂ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೆಹರೂ ಕುಟುಂಬ, ಡಿಎಂಕೆಗೆ ಕರುಣಾನಿಧಿ ಕುಟುಂಬ, ಸಮಾಜವಾದಿ ಪಕ್ಷಕ್ಕೆ ಯಾದವ್ ಕುಟುಂಬ, ಹೀಗೆ ಎಲ್ಲಾ ಪಕ್ಷಗಳಿಗೂ ಕುಟುಂಬ ಮಾಲೀಕತ್ವ ಇದೆ. ಆದರೆ ನಮಲ್ಲ ಅಂತಹ ಪ್ರವೃತ್ತಿ ಇಲ್ಲ. ಹಾಗಾಗಿ ಕರ್ನಾಟಕದಲ್ಲಿ ಕೂಡ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ ಪಕ್ಷದ ಡಿಎನ್ ಎಯಲ್ಲೂ ವಂಶಪಾರಂಪರ್ಯ ಇಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ಅಲ್ಲದೆ, ಕೋರ್ ಕಮಿಟಿ ಮತ್ತು ಸಂಸದೀಯ ಮಂಡಳಿಯ ಕುರಿತೂ ಪ್ರಸ್ತಾಪಿಸಿರುವ ಅವರು, ಇತರ ಪಕ್ಷಗಳಲ್ಲಿ ಅಂತಿಮ ನಿರ್ಧಾರವನ್ನು ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ. ಆದರೆ ನಮ್ಮಲ್ಲಿ ಕೋರ್ ಕಮಿಟಿ, ಸಂಸದೀಯ ಮಂಡಳಿಗಳು ನಿರ್ಧಾರ ಕೈಗೊಳ್ಳುತ್ತವೆ. ನಮ್ಮಲ್ಲಿ ಅವರ ಯೋಗ್ಯತೆ ಮತ್ತು ಪರಿಶ್ರಮದ ಮೇಲೆ ಎಲ್ಲರಿಗೂ ಅವಕಾಶಗಳು ಸಿಗುತ್ತವೆಯೇ ವಿನಃ ಉತ್ತರಾಧಿಕಾರಿ ಸಂಸ್ಕೃತಿ ಇಲ್ಲ. ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ. ನಮ್ಮದು ಕೇಡರ್ ಬೇಸ್ಡ್ ಡಿಎನ್ ಎ ಎಂದಿದ್ದಾರೆ. ಹಾಗೇ, ಕೋರ್ ಕಮಿಟಿ ಪಕ್ಷದ ಸಮಿತಿಯೇ ಹೊರತು ಯಾವೊಬ್ಬ ನಾಯಕರ ಕುಟುಂಬದ ಸದಸ್ಯರ ಸಮಿತಿ ಅಲ್ಲ, ಸಂಸದೀಯ ಮಂಡಳಿಯೂ ಕೂಡ ಯಾವ ನಾಯಕರ ಕುಟುಂಬ ಸಮಿತಿಯಲ್ಲ. ಅದು ಪಕ್ಷದ ಸಮಿತಿ ಎಂದೂ ಹೇಳಿದ್ಧಾರೆ.

ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ನೇರ ಬಂಡಾಯ ಸಾರಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯವಾಗಿ ಉತ್ತರಾಧಿಕಾರಿ ಮತ್ತು ವಂಶಪಾರಂಪರ್ಯ ವಿಷಯಗಳನ್ನೇ ಮುಂದಿಟ್ಟುಕೊಂಡು ಸಿಎಂ ಮತ್ತು ಪಕ್ಷದ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ಕೂಡ, ಅವರು, “ಬಿಜೆಪಿಯ ಕೇಂದ್ರ ನಾಯಕರು ರಾಜ್ಯದ ಉಸ್ತುವಾರಿಯನ್ನು ಅರುಣ್ ಸಿಂಗ್ ಅವರಿಗೆ ನೀಡಿದ್ದಾರೆಯೇ ಅಥವಾ ಬಿಎಸ್ ವೈ ಮತ್ತು ಅವರ ಕುಟುಂಬದ ಉತ್ತರಾಧಿಕಾರಿ ವಿಜಯೇಂದ್ರ ಅವರಿಗೆ ನೀಡಿದ್ದಾರೆಯೇ"ಎಂದು ನೇರ ಪ್ರಶ್ನೆ ಮಾಡಿದ್ದರು. ಯತ್ನಾಳರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಸಿಟಿ ರವಿ ಹೇಳಿಕೆ ಮತ್ತೊಂದು ಆಯಾಮದ ಚರ್ಚೆಗೆ ನಾಂದಿ ಹಾಡಿದೆ.

ಜೊತೆಗೆ ಸಿಎಂ ವಿರುದ್ಧ ರಾಜ್ಯಪಾಲರು ಮತ್ತು ಪಕ್ಷದ ಕೇಂದ್ರ ವರಿಷ್ಠರಿಗೆ ಪತ್ರವನ್ನೇ ಬರೆದಿದ್ದ ಕೆ ಎಸ್ ಈಶ್ವರಪ್ಪ ಕೂಡ ತಮ್ಮ ಪತ್ರದಲ್ಲಿ ಪ್ರಮುಖವಾಗಿ ಕುಟುಂಬ ರಾಜಕಾರಣ ಮತ್ತು ಕುಟುಂಬ ವರ್ಗದವರ ಆಡಳಿತ ಹಸ್ತಕ್ಷೇಪವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದರು. ಅಲ್ಲದೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರ ಸೂಚನೆಯಂತೆ ತಾವು ಸಿಎಂ ಬಿಡುಗಡೆ ಮಾಡಿದ್ದ ತಮ್ಮ ಇಲಾಖೆ ವ್ಯಾಪ್ತಿಯ ಅನುದಾನವನ್ನು ತಡೆ ಹಿಡಿದಿರುವುದಾಗಿಯೂ ಹೇಳಿದ್ದರು. ಹಾಗಾಗಿ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದ ಈಶ್ವರಪ್ಪ ಕ್ರಮದಷ್ಟೇ, ಅವರು ಸಿ ಟಿ ರವಿ ಸೂಚನೆಯಂತೆ ಅನುದಾನ ತಡೆಹಿಡಿದಿದ್ದೇನೆ ಎಂದಿರುವುದು ಕೂಡ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿತ್ತು.

ಆ ಹಿನ್ನೆಲೆಯಲ್ಲಿ ಸಿ ಟಿ ರವಿ ಇದೀಗ ವಂಶಪಾರಂಪರ್ಯ, ಕುಟುಂಬ ರಾಜಕಾರಣ, ಉತ್ತರಾಧಿಕಾರ ಮುಂತಾದ ಸಂಗತಿಗಳ ಕುರಿತು ಬಹಿರಂಗ ಹೇಳಿಕೆ ನೀಡಿರುವುದು ಬಿಜೆಪಿಯಲ್ಲಿ ಆಂತರಿಕವಾಗಿ ಈಶ್ವರಪ್ಪ ಪತ್ರ ಮತ್ತು ಯತ್ನಾಳ್ ಹೇಳಿಕೆಗಳು ಸೃಷ್ಟಿಸಿರುವ ಅಲ್ಲೋಲಕಲ್ಲೋಲ ಇನ್ನಷ್ಟು ಉಬ್ಬರವೇಳುವ ಸೂಚನೆ ನೀಡಿದೆ. ಅದರಲ್ಲೂ ಈಶ್ವರಪ್ಪ ಪತ್ರದ ವಿಷಯ ಐದು ರಾಜ್ಯಗಳ ಚುನಾವಣೆ ಬಳಿಕ ಪಕ್ಷದ ವರಿಷ್ಠರ ವಲಯದಲ್ಲಿ ಚರ್ಚೆಗೆ ಬರಲಿದೆ ಎಂಬ ಹಿನ್ನೆಲೆಯಲ್ಲಿ, ಪಕ್ಷದ ಕೋರ್ ಕಮಿಟಿ, ಸಂಸದೀಯ ಮಂಡಳಿಗಳು ಕುಟುಂಬದ ಸೊತ್ತಲ್ಲ ಎಂಬರ್ಥದ ಹೇಳಿಕೆ ಕೂಡ ಮುಂದಿನ ದಿನಗಳಲ್ಲಿ ಸಿಎಂ ಮತ್ತು ಕುಟುಂಬದ ವಿಷಯದಲ್ಲಿ ಪಕ್ಷ ತೆಗೆದುಕೊಳ್ಳಲಿರುವ ಕ್ರಮಗಳ ದಿಕ್ಸೂಚಿ ಎಂಬ ಮಾತೂ ಕೇಳಿಬರುತ್ತಿದೆ.

ಇಂತಹ ವಿಶ್ಲೇಷಣೆಗೆ ಪೂರಕವಾಗಿ ಸಿ ಟಿ ರವಿ, ಸಿಎಂ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಘರ್ಷದ ಕುರಿತು ಪ್ರಸ್ತಾಪಿಸಿ, ಇಬ್ಬರೂ ಹಿರಿಯರು. ಅವರಿಗೆ ನಾನೇನೂ ಹೇಳಲಾರೆ. ಆದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಎಲ್ಲಿ ಏನನ್ನು ಮಾತನಾಡಬೇಕೋ ಅದನ್ನು ಮಾತನಾಡುತ್ತೇನೆ ಎಂದಿದ್ದಾರೆ!

ಅಂದರೆ; ಸಿ ಟಿ ರವಿಯವರ ಪ್ರತಿ ಹೇಳಿಕೆಯೂ, ಪಕ್ಷ, ಸಂಘಟನೆ, ಪಕ್ಷದ ಭವಿಷ್ಯವೇ ತಮಗೆ ಮುಖ್ಯವೇ ವಿನಃ ಯಾವುದೇ ಒಂದು ಕುಟುಂಬ, ವ್ಯಕ್ತಿಯಲ್ಲ. ಯಾವುದೇ ನಾಯಕನ ಮಕ್ಕಳಲ್ಲ ಎಂಬುದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವಂತಿದೆ. ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ತಮ್ಮನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಪಕ್ಷದ ಹಿರಿಯ ನಾಯಕನಾಗಿದ್ದರೂ ತಮಗೆ ಕೆಲಸಕ್ಕೆ ಬಾರದ ಖಾತೆಯನ್ನು ನೀಡಿ ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಸಾಕಷ್ಟು ಅಸಮಾಧಾನ ಹೊಂದಿದ್ದ ಸಿ ಟಿ ರವಿ, ಅದೇ ಕಾರಣಕ್ಕೆ ಪಕ್ಷದ ವರಿಷ್ಠರ ಬಳಿ ಮಾತನಾಡಿ, ಅವರ ಸಲಹೆಯಂತೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಸಂಘಟನೆಯ ಹೊಣೆಗಾರಿಕೆಗೆ ಹೆಗಲು ಕೊಟ್ಟಿದ್ದರು. ಜೊತೆಗೆ ಯಡಿಯೂರಪ್ಪ ವಿರೋಧಿ ಬಣದ ಸೂತ್ರಧಾರ ಎನ್ನಲಾಗುವ ಬಿ ಎಲ್ ಸಂತೋಷ್ ಅವರ ಆಪ್ತ ವಲಯದಲ್ಲಿ ಕೂಡ ಸಿ ಟಿ ರವಿ ಗುರುತಿಸಿಕೊಂಡಿದ್ದಾರೆ. ಈಗ ಸಚಿವ ಈಶ್ವರಪ್ಪ ಬಂಡಾಯದ ಹಿಂದೆ ಕೂಡ ಪಕ್ಷನಿಷ್ಠ, ಸಿದ್ಧಾಂತನಿಷ್ಠ ಆ ಗುಂಪಿನ ತಂತ್ರಗಾರಿಕೆಯೇ ಅಡಗಿದೆ ಎಂಬ ಮಾತೂ ಕೇಳಿಬರುತ್ತಿದೆ.

ಆ ಎಲ್ಲಾ ಹಿನ್ನೆಲೆಯಲ್ಲಿ ಸಿ ಟಿ ರವಿಯವರ ಹೊಸ ಹೇಳಿಕೆ, ಸಹಜವಾಗೇ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದು, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಚುನಾವಣೆಯ ಬಳಿಕ ನಡೆಯಲಿರುವ ಬೆಳವಣಿಗೆಗಳಿಗೆ ರವಿ ಈಗಲೇ ದಿಕ್ಸೂಚಿ ತೋರಿದ್ದಾರೆ ಎನ್ನಲಾಗುತ್ತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com