ಮಕ್ಕಳು-ಮಾಧ್ಯಮ ಪ್ರಜ್ಞೆ ಮತ್ತು ಪ್ರಜ್ಞಾವಂತ ಮಾಧ್ಯಮ

ಇಂದಿನ ಎಳೆ ಮಕ್ಕಳ ಮಿದುಳಿನಲ್ಲಿ ಸಮ ಸಮಾಜದ ಕಲ್ಪನೆಯನ್ನು ಜೀವಂತವಾಗಿರಿಸುವುದು ಮತ್ತು ವೈಜ್ಞಾನಿಕ-ವೈಚಾರಿಕ ಚಿಂತನೆಯ ನೆಲೆಯನ್ನು ಭವಿಷ್ಯಕ್ಕಾಗಿ ಕಾಪಾಡುವುದು. ಈ ನಿಟ್ಟಿನಲ್ಲಿ ನಾವು ಯೋಚಿಸದೆ ಹೋದರೆ ಇಡೀ ಪೀಳಿಗೆಯನ್ನೇ ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಲು ಮತಾಂಧ, ಜಾತಿವಾದಿ ಶಕ್ತಿಗಳು ಆವರಿಸುತ್ತವೆ.
ಮಕ್ಕಳು-ಮಾಧ್ಯಮ ಪ್ರಜ್ಞೆ ಮತ್ತು ಪ್ರಜ್ಞಾವಂತ ಮಾಧ್ಯಮ

ಡಾ ಹೆಚ್ ಕೆ ರಂಗನಾಥ್ ಅವರ ಕರ್ನಾಟಕ ರಂಗಭೂಮಿ ಕೃತಿಯ, ವಿಲಾಸಿ ರಂಗಭೂಮಿ ಅಧ್ಯಾಯದ ಒಂದೆಡೆ ಕೃತಿಕಾರರು ಹೀಗೆ ಹೇಳುತ್ತಾರೆ : “ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿ ವಿಕಾಸಗೊಳಿಸುವ ಪ್ರಯತ್ನವನ್ನು ಕನ್ನಡ ರಂಗಭೂಮಿ ಇತ್ತೀಚಿನವರೆಗೆ ಮಾಡಲಿಲ್ಲ ಅಂದರೆ ಸಲ್ಲುತ್ತದೆ,,,,,,,,ಮಕ್ಕಳ ರಂಗಭೂಮಿಯನ್ನು ನಿರ್ಮಿಸುವಲ್ಲಿ ಕರ್ನಾಟಕ ಹಿಂದೆಯೇ ಉಳಿಯಿತು. ದೊಡ್ಡವರು ಆಡುತ್ತಿದ್ದ ನಾಟಕಗಳನ್ನೇ ಮಕ್ಕಳೂ ನೋಡಿಕೊಂಡು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ದೊಡ್ಡವರಿಗಾಗಿ ಸಣ್ಣ ಅಕ್ಷರದಲ್ಲಿ ಅಚ್ಚು ಮಾಡಿದ ದಿನಪತ್ರಿಕೆಯನ್ನು ಒಲ್ಲದ ಮಕ್ಕಳೂ ಓದಬೇಕಲ್ಲವೇ ? ಹಾಗೆ ! ಮಕ್ಕಳಿಗಾಗಿಯೇ ಮೀಸಲುಗೊಂಡ ದಿನಪತ್ರಿಕೆ ಚಿತ್ರಗಳೊಡನೆ ದೊಡ್ಡ ಅಕ್ಷರದಲ್ಲಿ ಅಚ್ಚು ಆಗುವವರೆಗೆ “ ನಮ್ಮ ಮಕ್ಕಳಿಗೆ ಪ್ರಪಂಚದ ವಿದ್ಯಮಾನಗಳೇ ಗೊತ್ತಿಲ್ಲ ” ಎಂದುತಪ್ಪು ಹೊರಿಸುವುದು ಅಪರಾಧ ತಾನೇ ? ” (ಪುಟ 393 ಕರ್ನಾಟಕ ರಂಗಭೂಮಿ 1978 ಸುರುಚಿ ಪ್ರಕಾಶನ)

ಇಲ್ಲಿ ರಂಗಭೂಮಿಯ ಪ್ರಶ್ನೆಯನ್ನು ಪಕ್ಕಕ್ಕಿಡೋಣ. ಏಕೆಂದರೆ 1978ರ ನಂತರದಲ್ಲಿ ಮಕ್ಕಳಿಗಾಗಿಯೇ ನಾಟಕಗಳನ್ನು ರಚಿಸುವಲ್ಲಿ ಯಶಸ್ವಿ ಪ್ರಯತ್ನಗಳು ನಡೆದಿವೆ. ಈ ಮಾತುಗಳಲ್ಲಿ ನಾವು ಗಮನಿಸಬೇಕಿರುವುದು ದಿನಪತ್ರಿಕೆಗಳ ಬಗ್ಗೆ ರಂಗನಾಥ್ ಅವರು ಹೇಳಿರುವ ಮಾತುಗಳನ್ನು. ಈ ಪ್ರಶ್ನೆ ಇಂದಿಗೂ ಪ್ರಶ್ನೆಯಾಗೇ ಉಳಿದಿದ್ದರೆ ಅಥವಾ ಉತ್ತರಗಳು ದೊರೆತು ಮತ್ತದೇ ಪ್ರಶ್ನೆಯ ಪುನರಾರ್ತನೆಯಾಗುವ ಪರಿಸ್ಥಿತಿ ಉಂಟಾಗಿದ್ದರೆ ಇದು ಖಂಡಿತವಾಗಿಯೂ ಯೋಚಿಸಬೇಕಾದ ವಿಚಾರ. 1978ರ ಸಂದರ್ಭದ ಮಕ್ಕಳು ಎನ್ನುವ ಪರಿಕಲ್ಪನೆಗೂ ಇಂದಿನ ಪರಿಕಲ್ಪನೆಗೂ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ನವ ಶತಮಾನದ ಮಕ್ಕಳ ಮನಸ್ಸು ಹೊರ ಪ್ರಪಂಚಕ್ಕೆ ಬೇಗನೆ ತೆರೆದುಕೊಳ್ಳುತ್ತದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಮಕ್ಕಳು ಹಾಗೆಯೇ ಇರಲಿಕ್ಕೆ ಸಾಧ್ಯ .

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾವೂ ದಶಕಗಳ ಕಾಲ ದಿನಪತ್ರಿಕೆಗಳನ್ನು ಓದುತ್ತಲೇ ಬಂದಿದ್ದೇವೆ. ಬಹುಶಃ 1970ರ ದಶಕದ ಉತ್ತರಾರ್ಧದಲ್ಲಿ ಮತ್ತು 1980ರ ದಶಕದಲ್ಲಿ ಶಾಲೆಗಳಲ್ಲಿ ದಿನಪತ್ರಿಕೆಗಳ ಮುಖ್ಯ ಸುದ್ದಿ ಓದುವ ಒಂದು ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಇದೂ ಸಹ ಪ್ರೌಢಶಾಲೆಯ ಹಂತದಿಂದ ಆರಂಭವಾಯಿತು ಎನಿಸುತ್ತದೆ. ಪ್ರಾಥಮಿಕ ಶಾಲೆಯ ಹಂತದಲ್ಲಿ ಇತ್ತೀಚೆಗೆ ಇದು ಚಾಲ್ತಿಯಲ್ಲಿರಬಹುದು. ಇಲ್ಲಿ ರಂಗನಾಥ್ ಅವರು ಎತ್ತಿರುವ ಪ್ರಶ್ನೆ ನಮ್ಮಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂದಿನ ಮಕ್ಕಳು ಪತ್ರಿಕೆಗಳನ್ನು ಓದುವುದಿಲ್ಲ, ನಿತ್ಯ ಸುದ್ದಿಗಳನ್ನು ತಿಳಿದುಕೊಳ್ಳುವುದಿಲ್ಲ, ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಪರಿವೆ ಇರುವುದಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇದೆ. ಇಲ್ಲಿ ಮಕ್ಕಳು ಎಂದರೆ ಯಾವ ಓರಿಗೆಯವರು ? ಪ್ರಾಥಮಿಕ ಶಾಲೆಯ ಮಕ್ಕಳಿಗೆ ಈ ತಿಳುವಳಿಕೆ ಬೇಕೋ ಬೇಡವೋ ಎನ್ನುವ ಜಿಜ್ಞಾಸೆಯನ್ನು ಬದಿಗಿಟ್ಟು ಯೋಚಿಸಿದಾಗ ಆಧುನಿಕ ಜಗತ್ತಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ವಿಕಸನದ ಹಂತದಲ್ಲಿರುವ ಮಕ್ಕಳನ್ನು ತಲುಪುತ್ತಿವೆಯೇ ಎಂಬ ಪ್ರಶ್ನೆ ಹೆಚ್ಚು ಪ್ರಸ್ತುತ ಎನಿಸುತ್ತದೆ.

ಇಂದಿನ ವಿದ್ಯುನ್ಮಾನ ತಂತ್ರಜ್ಞಾನ ಯುಗದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಂತರ್ಜಾಲ ಕೇಂದ್ರಿತ ಮಾಹಿತಿ ಕಣಜ ಇರುವುದನ್ನು ಕಾಣಬಹುದು. ಗೂಗಲ್ ಇಂದು ಸಕಲ ಜ್ಞಾನದ ಆಕರದಂತೆ ಕಾಣುತ್ತಿದ್ದು ಎಂಟು ಹತ್ತು ವರ್ಷದ ಮಕ್ಕಳೂ ಸಹ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಗೂಗಲ್ ಹುಡುಕಾಟದಲ್ಲಿ ತೊಡಗಿರುತ್ತಾರೆ. ತಮ್ಮ ಅಥವಾ ತಮ್ಮ ಪೋಷಕರ, ಕುಟುಂಬದ ಹಿರಿಯ ಕೈಯ್ಯಲ್ಲಿನ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಈ ಮಕ್ಕಳಿಗೆ ಹೊರ ಜಗತ್ತನ್ನು ಕಂಡುಕೊಳ್ಳುವ ಮಹಾದ್ವಾರದಂತೆ ಕಾಣುತ್ತದೆ. ಕೊರೋನಾ ಸಂದರ್ಭದ ಆನ್ ಲೈನ್ ಶಿಕ್ಷಣದಿಂದ ಈಗ ಮಧ್ಯಮ ವರ್ಗಗಳ ಎಳೆಯ ಮಕ್ಕಳ ಬಳಿಯೂ ಒಂದು ಸ್ಮಾರ್ಟ್ ಫೋನ್ ಇರುವುದು ಸಾಮಾನ್ಯ ಸಂಗತಿಯಾಗಿದೆ.

ಆದರೆ ಈ ಮಕ್ಕಳಲ್ಲಿನ ಪ್ರಾಪಂಚಿಕ ತಿಳುವಳಿಕೆ ಅಥವಾ ಸುತ್ತಲಿನ ನಿತ್ಯದ ವಿದ್ಯಮಾನಗಳ ಬಗ್ಗೆ ಅರಿವು ಮತ್ತು ತಾವು ಬದುಕುತ್ತಿರುವ ಒಂದು ಸಮಾಜದ ಪರಿವೆ ಇವುಗಳನ್ನು ಪರೀಕ್ಷಿಸಲು ಹೋದಾಗ ನಿರಾಸೆಯಾಗುವುದೇ ಹೆಚ್ಚು. ಏಕೆಂದರೆ ಬಹುತೇಕ ಮಕ್ಕಳನ್ನು ಪೋಷಕರು ಶಿಕ್ಷಣ ಬಂಧಿಗಳನ್ನಾಗಿ ಮಾಡಿರುತ್ತಾರೆ. ಶಾಲೆ-ಟ್ಯೂಷನ್-ಶಾಲೆ ವ್ಯೂಹದಿಂದ ಹೊರಬರಲು ಸಮಯ ಸಿಕ್ಕಾಗಲೆಲ್ಲಾ ಈ ಮಕ್ಕಳು ಪರದೆಯ ಮೊರೆ ಹೋಗುತ್ತಾರೆ. ಟಿವಿ, ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್‍ಫೋನ್ ಅವರ ಮತ್ತೊಂದು ಪ್ರಪಂಚವಾಗಿ ಪರಿಣಮಿಸುತ್ತದೆ. ಈ ಪ್ರವೃತ್ತಿಯನ್ನು ನಗರ ಪ್ರದೇಶಗಳ ಕೆಳಮಧ್ಯಮ ವರ್ಗಗಳಲ್ಲೂ ಕಾಣಬಹುದು, ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲೂ ಕಾಣಬಹುದು.

ಇಲ್ಲಿ ಬಲಿಯಾಗುತ್ತಿರುವುದು ಓದು ಮತ್ತು ಓದಿನ ಹವ್ಯಾಸ. ಪಠ್ಯೇತರ ಓದು ಎನ್ನುವುದನ್ನು ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ಹಂತಹಂತವಾಗಿ ಕೊಲ್ಲುತ್ತಲೇ ಬಂದಿದ್ದು ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳಿಗೆ ದಿನಪತ್ರಿಕೆಗಳೂ ಸಹ ಓದಿಗೆ ಸಹ್ಯ ಎನಿಸುವುದಿಲ್ಲ. ಈ ಸಂದರ್ಭದಲ್ಲೇ ಡಾ ರಂಗನಾಥ್ ಅವರ ಪ್ರಶ್ನೆ ಮಹತ್ವ ಪಡೆಯುತ್ತದೆ. ಮಕ್ಕಳ ಚಂಚಲ ಮನಸಿಗೆ ನಿಲುಕುವಂತೆ ದಿನನಿತ್ಯದ ಸುದ್ದಿಗಳನ್ನು ನೀಡುವಂತಹ ಪತ್ರಿಕೆಗಳು ಸಾಧ್ಯವಿಲ್ಲವೇ ? ಮಕ್ಕಳಿಗಾಗಿ ಒಂದು ಪುರವಣಿಯನ್ನೋ ಅಥವಾ ವಾರಪತ್ರಿಕೆಗಳಲ್ಲಿ ಒಂದೆರಡು ಪುಟಗಳನ್ನೋ ಮೀಸಲಿಡುವ ಮೂಲಕ ಮಕ್ಕಳ ಹಾಡು, ಕಥೆ, ವಿನೋದ ಇತ್ಯಾದಿಗಳನ್ನು ನೋಡುತ್ತಿದ್ದೇವೆ. ಆದರೆ ಇವು ಮನರಂಜನೆಯ ಸರಕುಗಳಷ್ಟೇ. ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಪತ್ರಿಕೆಯನ್ನು ರೂಪಿಸಲು ಸಾಧ್ಯವೇ ? ಇದಕ್ಕೆ ನೇರ ಉತ್ತರ ಕಷ್ಟವಾಗಬಹುದು. ಆದರೆ ಚರ್ಚೆ ಮಾಡಲು ಅಡ್ಡಿಯಿಲ್ಲ.

ಆದರೆ ಸಮಸ್ಯೆಯಿಂದ ಅಥವಾ ಪ್ರಶ್ನೆಯಿಂದ ನಾವು ವಿಮುಖರಾಗುವಂತಿಲ್ಲ. ರಾಜಕೀಯ ಎಂದರೆ ಹೊಲಸು ಎಂದು ಮೂಗುಮುರಿಯುವ ಸಂದರ್ಭದಲ್ಲಿ ನಾವಿರುವಾಗಲೇ ಹೊಲಸು ರಾಜಕಾರಣ ಮನೆಮನೆಯನ್ನೂ ತಲುಪುತ್ತಿದೆ. ಮಕ್ಕಳಿಗೇಕೆ ರಾಜಕೀಯ ಎನ್ನುವ ಕಾಲವೂ ಒಂದಿತ್ತು ಆದರೆ ಇಂದಿನ ಸಾಂಸ್ಕೃತಿಕ-ಮತೀಯ ರಾಜಕಾರಣ ಮಕ್ಕಳ ಮನಸುಗಳನ್ನೂ ಹೊಕ್ಕಿದೆ. ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಅಸ್ಮಿತೆಗಳ ಲೋಕ ತಾಂಡವಾಡುತ್ತಿದೆ. ‘ ನಮ್ಮವರು ’ ಮತ್ತು ‘ ಅನ್ಯ ’ರನ್ನು ಗುರುತಿಸುವಷ್ಟು ಮಟ್ಟಿಗೆ ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಮತಾಂಧತೆ, ಜಾತೀಯತೆಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಈ ವಿಷಬೀಜಗಳಿಂದಲೇ ಮುಗಿಲೆತ್ತರಕೆ ಬೆಳೆದಿರುವ ವಿಷವೃಕ್ಷಗಳೇ ಆಡಳಿತ ವ್ಯವಸ್ಥೆಯ ಮೇಲೆ ಅಧಿಪತ್ಯ ಸಾಧಿಸುತ್ತಿದೆ. ಅಂದರೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುತ್ತಿದ್ದವರೇ ಈಗ ಆ ಪ್ರಜೆಗಳನ್ನು ಅಸ್ಮಿತೆಗಳ ಮೂಲಕ ಗುರುತಿಸಲು ಸಜ್ಜಾಗಬೇಕಿದೆ.

ಈ ಅಸ್ಮಿತೆಗಳ ವಿಷವರ್ತುಲದಿಂದ ಮಕ್ಕಳನ್ನು ಹೊರತರಬೇಕಾದರೆ ಎಳೆಯ ಮಕ್ಕಳಿಗೂ ತಮ್ಮ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ , ರಾಜಕೀಯ ವಿದ್ಯಮಾನಗಳು ಅರ್ಥವಾಗುವಂತೆ ತಿಳಿಸಬೇಕಾಗುತ್ತದೆ. ಸಾಂಸ್ಕೃತಿಕ ನೆಲೆಯಲ್ಲಿ, ಮತಧಾರ್ಮಿಕ ಚೌಕಟ್ಟಿನಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಕ್ರಮೇಣ ಸಾಮಾಜಿಕ ಮತ್ತು ರಾಜಕೀಯ ಫಲ ನೀಡುವಷ್ಟರಲ್ಲಿ ವಿಷಬೇರುಗಳು ಮತ್ತಷ್ಟು ವ್ಯಾಪಕವಾಗಿ ಹರಡಿರುತ್ತವೆ. ಆದರೆ ಇದಕ್ಕೆ ಪ್ರತಿಯಾಗಿ ಸಂವೇದನಾಶೀಲ ಸಾಂಸ್ಕೃತಿಕ ನೆಲೆಗಳನ್ನು ಮಕ್ಕಳ ನಡುವೆ ಸ್ಥಾಪಿಸುವಲ್ಲಿ ಬಹುಶಃ ನಾವು ಎಡವಿದ್ದೇವೆ ಎನಿಸುತ್ತದೆ. ಈ ವೈಫಲ್ಯದ ಪರಿಣಾಮವನ್ನು ಶತಮಾನದ ಮಕ್ಕಳ ಸಮೂಹ ಸಾಂಸ್ಕೃತಿಕ ವಲಸೆಯಲ್ಲಿ ಕಾಣುತ್ತಿದ್ದೇವೆ. ಇಂದಿನ ಎಳೆಯ ಮಕ್ಕಳು ಒಂದು ದಶಕದ ನಂತರ ಇದೇ ವಲಸೆಯ ಮುಂದುವರೆದ ಭಾಗವಾಗಿ ಕಂಡರೆ ಅಚ್ಚರಿಯೇನಿಲ್ಲ ಅಲ್ಲವೇ ?

ಇಲ್ಲಿ ನಮಗೆ ಪ್ರಜಾತಂತ್ರ ವ್ಯವಸ್ಥೆಯ ಮತ್ತು ಪ್ರಜ್ಞಾವಂತ ಸಮಾಜದ ನಾಲ್ಕನೆಯ ಸ್ತಂಭ, ಮಾಧ್ಯಮ ಲೋಕ ಮುಖ್ಯವಾಗುತ್ತದೆ. ಸ್ಮಾರ್ಟ್ ಫೋನ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ಇಂದು ಪ್ರತಿಯೊಬ್ಬ ವ್ಯಕ್ತಿಗೂ ನೇರವಾಗಿ ತಲುಪುವ ಸುಲಭ ಸಾಧನಗಳಾಗಿವೆ. ಮಕ್ಕಳೂ ಸಹ ಇದನ್ನೇ ಬಳಸಿಕೊಳ್ಳುತ್ತಿದ್ದಾರೆ. ಇಡೀ ಪ್ರಪಂಚದ ವಿದ್ಯಮಾನಗಳನ್ನು ಒಂದು ಪರದೆಯಲ್ಲಿ ಸೆರೆಹಿಡಿದು ಮಕ್ಕಳ ಮುಂದಿಟ್ಟರೂ ಅವರ ಗಮನ ಹರಿಯುವುದು ಆಕರ್ಷಣೀಯ ಆಟಗಳ ಕಡೆಗೆ. ಈ ಆಟಗಳೂ ಸಹ ಮಕ್ಕಳಿಗಾಗಿ ದೊಡ್ಡವರ ಮನಸ್ಥಿತಿಯಲ್ಲಿ ರೂಪಿಸಲಾಗಿರುತ್ತದೆ. ಹೊಡೆದುರುಳಿಸುವುದು, ತೊಡೆದುಹಾಕುವುದು, ಗೆಲ್ಲುವ ಹಪಹಪಿ , ಸಾಫಲ್ಯ ಮತ್ತು ವೈಫಲ್ಯ ಹೀಗೆ ವಯಸ್ಕ ಬದುಕಿನ ವಿದ್ಯಮಾನಗಳನ್ನೇ ಮಕ್ಕಳ ಆಟಗಳ ರೂಪದಲ್ಲಿ ಅಳವಡಿಸಲಾಗಿರುತ್ತದೆ. ಮಕ್ಕಳು ಇಡೀ ದಿನ ಇಂತಹ ಆಟಗಳ ನಡುವೆಯೇ ಕಾಲ ಕಳೆಯುತ್ತಾರೆ.

ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ಮುದ್ರಣ ಮಾಧ್ಯಮದ ಯಾವುದೇ ಪತ್ರಿಕೆಗಳೂ ಮಕ್ಕಳ ಮನಸನ್ನು ತಲುಪುವಂತಹ ಪುಟಗಳನ್ನು ಹೊಂದಿರುವುದಿಲ್ಲ. ಭಾನುವಾರದ ಪುರವಣಿಗಳಲ್ಲಿನ ಹಳೆಯ ವಿನ್ಯಾಸದ ಹಾಡು, ಪದ್ಯ, ಸಣ್ಣ ಕಥೆ ಮತ್ತು ಮನರಂಜನೆಯ ಸರಕುಗಳನ್ನು ಬಿಟ್ಟರೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದಂತಹ ಸರಕುಗಳು ಇರುವುದಿಲ್ಲ. ಕೋವಿದ್ 19 ಸಂದರ್ಭದಲ್ಲಿ ಬಹುಪಾಲು ಎಲ್ಲ ಪತ್ರಿಕೆಗಳ ಪುರವಣಿಗಳೇ ತಮ್ಮ ಮೂಲ ಅಸ್ತಿತ್ವ ಕಳೆದುಕೊಂಡಿದ್ದು, ಮಕ್ಕಳ ಅವಶ್ಯಕತೆಗಳು ನಿರ್ಲಕ್ಷಿತವಾಗಿವೆ. ಮಕ್ಕಳಿಗಾಗಿಯೇ ವರುಷಕ್ಕೊಮ್ಮೆ ಹೊರತರುವ ವಿಶೇಷ ಸಂಚಿಕೆಗಳು ಇದ್ದುದರಲ್ಲಿ ಕೊಂಚ ಆಶಾಭಾವನೆ ಮೂಡಿಸುವಂತಿವೆ.

ಆದರೆ ಮುದ್ರಣ ಮಾಧ್ಯಮದಿಂದ ಬಹುಪಾಲು ವಿಮುಖವಾಗಿರುವ ಮಕ್ಕಳಿಗೆ ವಿದ್ಯುನ್ಮಾನ ಮಾಧ್ಯಮಗಳು ಕನಿಷ್ಟ ಮಟ್ಟದಲ್ಲಿ ತಲುಪುವ ಪ್ರಯತ್ನಗಳನ್ನೂ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟ. ಅನ್ಯ ಭಾಷೆಯ ಮತ್ತು ಕನ್ನಡದಲ್ಲಿ ಡಬ್ ಆದ ಕಾರ್ಟೂನ್ ವಾಹಿನಿಗಳ ಪುನರಾವರ್ತಿತ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಬೌದ್ಧಿಕ ವಿಕಸನಕ್ಕೆ ಮತ್ತು ಮಕ್ಕಳ ಪಠ್ಯೇತರ ಜ್ಞಾನಾರ್ಜನೆಗೆ ಪೂರಕವಾದಂತಹ ಕಾರ್ಯಕ್ರಮಗಳು ಯಾವುದೇ ಕಾರ್ಟೂನ್ ವಾಹಿನಿಗಳಲ್ಲೂ ಕಾಣುವುದಿಲ್ಲ. ಸಾಂಪ್ರದಾಯಿಕ ಕಲೆಗಳಾದ ಸೂತ್ರದ ಬೊಂಬೆ, ತೊಗಲು ಬೊಂಬೆ, ಛಾಯಾ ಬೊಂಬೆಯಾಟ ಮುಂತಾದವುಗಳಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವಕಾಶವೇ ಇಲ್ಲದಿರುವುದು ದುರಂತ.

ಶೈಕ್ಷಣಿಕ ನೋಡಿದಾಗಲೂ, ಶಾಲಾ ಪಠ್ಯಗಳಲ್ಲಿ ಈಗಲೂ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ವಿಜ್ಞಾನ ಮತ್ತು ಗಣಿತವನ್ನು, ಮಕ್ಕಳು ಅನವಶ್ಯಕ ಎಂದು ಭಾವಿಸುವ ಚರಿತ್ರೆಯ ಮಜಲುಗಳನ್ನು, ಅವರ ವಯೋಮಿತಿಗೆ ಅನುಗುಣವಾಗಿ ಮನಮುಟ್ಟುವಂತೆ ತಿಳಿಸಿಕೊಡುವ ಕಾರ್ಯಕ್ರಮಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಂಡುಬರುವುದಿಲ್ಲ. ಮಕ್ಕಳು ತಮ್ಮದೇ ಆದ ಬೌದ್ಧಿಕ ನೆಲೆಯಲ್ಲಿ ಗ್ರಹಣ ಶಕ್ತಿಯನ್ನು ಹೊಂದಿರುತ್ತಾರೆ. ಈ ಗ್ರಹಿಕೆಯ ಸಾಮಥ್ರ್ಯಕ್ಕೆ ಪೂರಕವಾದ ಬೌದ್ಧಿಕ, ಶೈಕ್ಷಣಿಕ ಸರಕುಗಳನ್ನು ಒದಗಿಸುವುದು ಒಂದು ಸ್ವಸ್ಥ ಸಮಾಜದ ಆದ್ಯತೆಯಾಗಿರಬೇಕಲ್ಲವೇ ? ತಂತ್ರಜ್ಞಾನ ಯುಗದ ನಾಗಾಲೋಟದಲ್ಲಿ ಇದನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಒಂದೆಡೆ ಬೈಜೂದಂತಹ ಶೈಕ್ಷಣಿಕ ವೆಬ್ ಸಾಧನಗಳು ಮಕ್ಕಳಿಗೆ ಅವರ ವಯೋಸಹಜ ಇತಿಮಿತಿಗಳನ್ನೂ ಮೀರಿದಂತೆ ಸರಕುಗಳನ್ನು ಉಣಬಡಿಸುತ್ತಿವೆ, ಮಧ್ಯಮ ವರ್ಗದ ಮಕ್ಕಳ ಮಿದುಳಿನಲ್ಲಿ ಅವಶ್ಯಕತೆಗಿಂತಲೂ ಹೆಚ್ಚು ಸರಕುಗಳನ್ನು ತುಂಬುತ್ತಿವೆ. ಮತ್ತೊಂದೆಡೆ ಮಕ್ಕಳು ತಮ್ಮ ಸಹಜ ವಿಕಸನಕ್ಕೆ ಅತ್ಯವಶ್ಯವಾದ ವಸ್ತುಗಳಿಂದ ವಂಚಿತರಾಗುತ್ತಿದ್ದಾರೆ.

ಕನ್ನಡದ ಹತ್ತಾರು ವಾಹಿನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೇ ಮರೆತು ಮಾರುಕಟ್ಟೆಯ ಗುಲಾಮಗಿರಿಗೆ ಒಳಗಾಗಿರುವುದರಿಂದ ಮಕ್ಕಳ ಮನೋವಿಕಾಸಕ್ಕೆ ಪೂರಕವಾದಂತಹ ಯಾವುದೇ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲದಂತಾಗಿದೆ. ಮುಂಜಾನೆಯಲ್ಲಿ ಜ್ಯೋತಿಷ್ಯ, ಆಗಮ, ಆರಾಧನೆ ಮತ್ತು ವಾಸ್ತು ಮುಂತಾದ ಮೌಢ್ಯ ಬಿತ್ತನೆ ಪ್ರಧಾನವಾಗಿದ್ದರೆ ರಾತ್ರಿ ವೇಳೆ ಕದನ ಕುತೂಹಲ ಕೆರಳಿಸುವ ಯುದ್ಧ, ಮಹಾಸಮರ, ಪ್ರವಾಹ, ವಿಶ್ವ ವಿನಾಶ ಹೀಗೆ ಭೀತಿ ಬಿತ್ತನೆಯ ಕಾರ್ಯಕ್ರಮಗಳು ಪ್ರಧಾನವಾಗಿರುತ್ತವೆ. ಈ ನಡುವೆ ಪ್ರಸಾರವಾಗುವ ಧಾರಾವಾಹಿಗಳು ಮಕ್ಕಳಿಗೆ ತಲುಪುವುದಕ್ಕಿಂತಲೂ ಹೆಚ್ಚಾಗಿ ಅವರಲ್ಲಿನ ಸೂಕ್ಷ್ಮತೆಯನ್ನೂ ನಾಶಪಡಿಸುವಂತಿರುತ್ತವೆ. ಕನ್ನಡದ ಸುದ್ದಿಮನೆಗಳಿಂದ ಮಕ್ಕಳನ್ನು ದೂರ ಇರಿಸುವುದೇ ಕ್ಷೇಮ ಎನ್ನುವ ರೀತಿಯಲ್ಲಿ ಸುದ್ದಿ ವಾಹಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ವಾಹಿನಿಯಲ್ಲಿ ಮಕ್ಕಳಿಗಾಗಿ ದಿನಕ್ಕೆ ಕನಿಷ್ಟ ಅರ್ಧಗಂಟೆಯಷ್ಟು ಅವಧಿಯನ್ನೂ ಒದಗಿಸಲು ಕನ್ನಡ ವಾಹಿನಿಗಳಿಗೆ ಸಾಧ್ಯವಾಗದಿರುವುದು ದುರಂತ.

ಚಲನ ಚಿತ್ರ ಕ್ಷೇತ್ರದಲ್ಲಿ ಬಹುಶಃ ಮಕ್ಕಳ ಕಲ್ಪನೆಯೇ ಮಾಯವಾಗಿದೆ. ಕನ್ನಡದಲ್ಲಿ ಒಂದು ಸುಂದರ ಮಕ್ಕಳ ಚಿತ್ರವನ್ನು ಕಂಡು ದಶಕಗಳೇ ಕಳೆದಿರಬಹುದು. ವಯಸ್ಕರಿಗಾಗಿ ಹೆಣೆಯುವ ಕತೆಗಳು, ಹೊಡಿಬಡಿ ದೃಶ್ಯಗಳು, ಅತಿಮಾನುಷ ಶಕ್ತಿಯ ನಾಯಕ ಮತ್ತು ಸತ್ವಹೀನ ನಾಯಕಿ ಹೀಗೆ ಹಳಸಲು ಸೂತ್ರಗಳನ್ನೇ ಬಳಸುತ್ತಿರುವ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕೆಲವೇ ಚಿತ್ರಗಳು ಮಕ್ಕಳಿಗೆ ತಲುಪುವಂತಿರುವುದು ದುರಂತ. ಮಕ್ಕಳಿಗಾಗಿಯೇ ಮನರಂಜನೆಯನ್ನೊಳಗೊಂಡ ಮನೋವಿಕಾಸ ಭೂಮಿಕೆಯ ಚಿತ್ರಗಳು ಕಾಣುತ್ತಲೇ ಇಲ್ಲ. ಇಲ್ಲಿ ಮತ್ತೊಮ್ಮೆ ಡಾ ರಂಗನಾಥ್ ನಾಟಕವನ್ನು ಕುರಿತು ಹೇಳಿದ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ನಮ್ಮಲ್ಲಿ ಪ್ರತಿಭೆಗಳ ಕೊರತೆ ಇಲ್ಲ, ಅವಕಾಶಗಳ ಕೊರತೆ ಇದೆ. ಟಿ ಆರ್ ಪಿ ಮತ್ತು ಮಾರುಕಟ್ಟೆಯ ಚೌಕಟ್ಟಿನಿಂದಾಚೆಗೆ ಒಂದು ಉತ್ತಮ ಕೌಟುಂಬಿಕ ಧಾರಾವಾಹಿಯನ್ನೂ ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ಇರುವುದು ದುರಂತ.

ವಿಕಸಿಸುವ ಕುಸುಮಗಳ ಪಕಳೆಗಳಿಗೆ ವಿಷದ ಲೇಪನ ಮಾಡುವ ಬೌದ್ಧಿಕ ಪ್ರಕ್ರಿಯೆಯಲ್ಲಿ ಸಾಂಸ್ಕೃತಿಕ ರಾಜಕಾರಣದ ಮತಾಂಧ ಶಕ್ತಿಗಳು ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ನಮ್ಮ ಆದ್ಯತೆಗಳಿಗೆ ಎರಡು ಆಯಾಮಗಳಿರಬೇಕಾಗುತ್ತದೆ. ಮೊದಲನೆಯದು ಇಂದಿನ ಎಳೆ ಮಕ್ಕಳ ಮಿದುಳಿನಲ್ಲಿ ಸಮ ಸಮಾಜದ ಕಲ್ಪನೆಯನ್ನು ಜೀವಂತವಾಗಿರಿಸುವುದು ಮತ್ತು ವೈಜ್ಞಾನಿಕ-ವೈಚಾರಿಕ ಚಿಂತನೆಯ ನೆಲೆಯನ್ನು ಭವಿಷ್ಯಕ್ಕಾಗಿ ಕಾಪಾಡುವುದು. ಈ ನಿಟ್ಟಿನಲ್ಲಿ ನಾವು ಯೋಚಿಸದೆ ಹೋದರೆ ಇಡೀ ಪೀಳಿಗೆಯನ್ನೇ ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಲು ಮತಾಂಧ, ಜಾತಿವಾದಿ ಶಕ್ತಿಗಳು ಆವರಿಸುತ್ತವೆ. ಈ ಬೌದ್ಧಿಕ ವಿಕಸನದ ಮಾರ್ಗಗಳನ್ನು ಮರುಶೋಧಿಸುವ ಪ್ರಯತ್ನ ನಮ್ಮದಾಗಬೇಕಿದೆ. ಮಾಧ್ಯಮಗಳು ಪ್ರಜ್ಞೆ ಕಳೆದುಕೊಂಡಿವೆ ಆದರೆ ನಾಗರಿಕ ಸಮಾಜದ ಪ್ರಜ್ಞೆ ಜೀವಂತವಾಗಿದೆ ಅಲ್ಲವೇ ?

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com