ದಶಕದ ಹಿಂದಿನ ಬಿಜೆಪಿಯ ಬ್ರಾಂಡ್ ‘ಕರ್ ನಾಟಕ’ ಮತ್ತೆ ಮರುಪ್ರಸಾರ ಕಾಣುತ್ತಿದೆ !

2008ರಿಂದ 2013ರವರೆಗೆ ನಾಲ್ಕೂವರೆ ವರ್ಷಗಳ ಕಾಲ ಬಿಜೆಪಿಯ ಆಡಳಿತದಲ್ಲಿ ರಾಜ್ಯದಲ್ಲಿ ಕಂಡ ಬಿಜೆಪಿಯ ಬ್ರಾಂಡ್ ‘ಕರ್ ನಾಟಕ’ ಮತ್ತೆ ಒಂದು ದಶಕದ ಬಳಿಕ ಮರು ಪ್ರಸಾರ ಆರಂಭಿಸಿದೆ. ರಾಮಾಯಣ, ಮಹಾಭಾರತ, ಧಾರಾವಾಹಿಗಳನ್ನು ಮೂರ್ನಾಲ್ಕು ದಶಕಗಳ ಬಳಿಕ ಮರು ಪ್ರಸಾರ ಮಾಡಿದ ಕೇಂದ್ರದ ಬಿಜೆಪಿಯ ಮಾದರಿಯನ್ನೇ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಭಿನ್ನ ರೀತಿಯಲ್ಲಿ ಜಾರಿಗೆ ತರುತ್ತಿದೆ..!
ದಶಕದ ಹಿಂದಿನ ಬಿಜೆಪಿಯ ಬ್ರಾಂಡ್ ‘ಕರ್ ನಾಟಕ’ ಮತ್ತೆ ಮರುಪ್ರಸಾರ ಕಾಣುತ್ತಿದೆ !

ರಾಜ್ಯ ಬಿಜೆಪಿಯ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ, ದಶಕದ ಹಿಂದಿನ ಅದರ ಇತಿಹಾಸ ಮತ್ತೆ ಮರುಪ್ರಸಾರವಾಗುತ್ತಿದೆಯೇ ಎಂಬ ಅನುಮಾನ ಬರುವುದು ಸಹಜ.

ಆಪರೇಷನ್ ಕಮಲದ ಮೂಲಕವೇ 2008ರಲ್ಲೂ ಅಧಿಕಾರಕ್ಕೆ ಬಂದಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೂಡ ಆರಂಭದಿಂದಲೂ ಗುಂಪುಗಾರಿಕೆ, ಭಿನ್ನಮತ, ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಲೂಟಿ ಸೇರಿದಂತೆ ಸಾಲು ಸಾಲು ಹಗರಣ, ಕೃತ್ಯಗಳಲ್ಲೇ ಮುಳುಗಿ, ಕೊನಗೇ ಸಿಎಂ ಯಡಿಯೂರಪ್ಪ ಸ್ವತಃ ಲಂಚ ಪ್ರಕರಣದಲ್ಲಿ ಜೈಲು ಪಾಲಾಗುವಂತಾಗಿತ್ತು. ನಾಲ್ಕು ವರ್ಷದಲ್ಲಿ ಮೂವರು ಸಿಎಂಗಳನ್ನು ಕಾಣುವಂತಾಗಿತ್ತು.

ಆ ಎಲ್ಲಾ ಅಪಸವ್ಯಗಳಿಗೆ ಕಾರಣವಾಗಿದ್ದು ಮೂಲಭೂತವಾಗಿ ಸ್ಪಷ್ಟ ಬಹುಮತವಿಲ್ಲದಿದ್ದರೂ ಯಡಿಯೂರಪ್ಪ ಅಧಿಕಾರ ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಗೆದ್ದು ಬಂದ ಶಾಸಕರನ್ನು ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣಕ್ಕೆ ಚಾಲನೆ ನೀಡಿದ್ದು. ಹಣ ಮತ್ತು ಅಧಿಕಾರದ ಆಸೆಯ ಮೇಲೆ ಗೆದ್ದ ಪಕ್ಷ ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದವರು ಮತ್ತು ಅವರನ್ನು ಹಣದ ಥೈಲಿಯ ಮೇಲೆ ಕರೆತಂದ ಗಣಿ ಧಣಿಗಳೇ ಕೊನೆಗೆ ಯಡಿಯೂರಪ್ಪ ಮಾತ್ರವಲ್ಲದೆ ರಾಜ್ಯ ಬಿಜೆಪಿಯ ಪಥನಕ್ಕೂ ಕಾರಣವಾದರು ಎಂಬುದು ಈಗ ಮರೆತ ಇತಿಹಾಸ.

ಆದರೆ, ಇದೀಗ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತದೇ ಮರೆತ ಇತಿಹಾಸವನ್ನು ಬಿಜೆಪಿಗೆ ನೆನಪಿಸುವಂತಿವೆ ಎಂಬುದು ಹೊಸ ಸಂಗತಿ. ಆಪರೇಷನ್ ಕಮಲದ ಮೂಲಕ ಹಿಂದಿನ ಕಾಂಗ್ರೆಸ್ –ಜೆಡಿಎಸ್ ಸರ್ಕಾರವನ್ನು ಉರುಳಿಸಿ ಯಡಿಯೂರಪ್ಪ ಮತ್ತೊಮ್ಮೆ ಅಧಿಕಾರ ಹಿಡಿದ ದಿನದಿಂದಲೇ ಶಾಸಕರ ಅನರ್ಹತೆ, ವಿಶ್ವಾಸಮತ ಸಾಬೀತು ಸವಾಲುಗಳೊಂದಿಗೆ ಆರಂಭವಾದ ಬಿಜೆಪಿ ಸರ್ಕಾರದ ಸವಾಲುಗಳು, ಆ ಬಳಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ, ಉಪ ಚುನಾವಣೆ, ಹಿಂದೆಂದೂ ಕಂಡರಿಯದ ಪ್ರಮಾಣದ ಅತಿವೃಷ್ಟಿ ಅನಾಹುತ, ಕರೋನಾ ಸಂಕಷ್ಟಗಳ ಮೂಲಕ ಸಾಲು ಸಾಲು ಸಂಕಷ್ಟಗಳಾಗಿ ಬದಲಾದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಯಡಿಯೂರಪ್ಪ ಹರಸಾಹಸ ಮಾಡಿ ಅಧಿಕಾರ ಹಿಡಿದ ಆರೇ ತಿಂಗಳಲ್ಲಿ, ಮತ್ತೆ ಹತ್ತು ವರ್ಷಗಳ ಹಿಂದಿನ ಅದೇ ಪುತ್ರ ವಾತ್ಸಲ್ಯ, ಆಡಳಿತದಲ್ಲಿ ಪುತ್ರ ಸೇರಿದಂತೆ ಕುಟುಂಬದವರ ಹಸ್ತಕೇಪ, ಸಾಲು ಸಾಲು ಹಗರಣಗಳ ಕಳಂಕಗಳು ತಲೆ ಎತ್ತಿದವು. ರಹಸ್ಯ ಸಿಡಿಯೊಂದಕ್ಕೆ ಸಂಬಂಧಿಸಿದ್ದು ಎನ್ನಲಾದ ಸಿಎಂ ಪುತ್ರ ಮತ್ತು ಅವರ ಆಪ್ತ ಸಹಾಯಕನ ನಡುವಿನ ಸಂಘರ್ಷ ಅಸಹ್ಯಕರ ತಿರುವು ಪಡೆಯಿತು. ಅದೇ ಹೊತ್ತಿಗೆ ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಸರ್ಕಾರವನ್ನು ರಚಿಸುವಲ್ಲಿ ಮಧ್ಯವರ್ತಿಗಳಾಗಿ ನಿರ್ಣಾಯಕ ಪಾತ್ರ ವಹಿಸಿದ ಇಬ್ಬರು ಪತ್ರಕರ್ತರು ಸೇರಿದಂತೆ ಕೆಲವರು ಸಿಎಂ ಕಚೇರಿಯ ವಿವಿಧ ಹುದ್ದೆಗಳನ್ನು ತೊರೆದು ಹೊರನಡೆದರು. ಅವರ ಅಂತಹ ದಿಢೀರ್ ನಿರ್ಗಮನದ ಹಿಂದೆಯೂ ಸಿಎಂ ಪುತ್ರರೊಂದಿಗಿನ ಸಂಬಂಧ ಹಳಸಿದ ಕಾರಣವಿದೆ ಎಂಬ ಮಾತು ಕೇಳಿಬಂದಿತ್ತು.

admin

ಆ ಬಳಿಕ ಸಂಪುಟ ವಿಸ್ತರಣೆಯ ಸರ್ಕಸ್ ತಿಂಗಳುಗಟ್ಟಲೆ ನಡೆದು, ಮೂಲ ಬಿಜೆಪಿ ಹಿರಿಯ ನಾಯಕರ ರಂಪಾಟದ ನಡುವೆ ಅಳೆದು ತೂಗಿ ಆಪರೇಷನ್ ಕಮಲದ ಫಲಾನುಭವಿಗಳಿಗೆ ಮಂತ್ರಿಗಿರಿ ನೀಡಲಾಯಿತು. ಅದಾದ ಬೆನ್ನಲ್ಲೇ ಒಂದು ಕಡೆ ಸರ್ಕಾರದ ಸಚೇತಕ ಸುನೀಲ್ ಕುಮಾರ್ ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಪತ್ರ ಬರೆದು ಶಾಸಕರ ಸಭೆ ಕರೆಯುವಂತೆ ಒತ್ತಾಯಿಸಿದ್ದರು. ಆ ಪತ್ರದ ಹಿಂದೆ ಕೂಡ ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ, ಪಕ್ಷದ ಮೂಲ ಶಾಸಕರನ್ನು ಮೂಲೆ ಗುಂಪು ಮಾಡುತ್ತಿರುವ ಬಗೆಗಿನ ಅಸಮಾಧಾನವೇ ಇತ್ತು ಎಂಬುದು ಗುಟ್ಟೇನಾಗಿರಲಿಲ್ಲ.

ಇನ್ನು ಸಂಪುಟ ವಿಸ್ತರಣೆಗೂ ಮುಂಚೆಯಿಂದಲೇ ಆರಂಭವಾಗಿದ್ದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾಗ್ದಾಳಿಗಳಂತೂ ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟದ ವೇಳೆ ಇನ್ನಷ್ಟು ಬಿರುಸುಗೊಂಡಿದ್ದವು. ಅದರಲ್ಲೂ ಇದೀಗ ರಮೇಶ್ ಜಾರಕಿಹೊಳಿ ಎಂಬ ಆಪರೇಷನ್ ಕಮಲ ಮೂಲಕ ಯಡಿಯೂರಪ್ಪ ಸರ್ಕಾರದ ಊರುಗೋಲಾದ ‘ಮೆಕೆನಸ್ ಗೋಲ್ಡ್ ಟೀಂ’ ಎಂಬ ಶಾಸಕರ ಗುಂಪಿನ ನಾಯಕನ ರಾಸಲೀಲೆ ಸಿಡಿ ಬಹಿರಂಗಗೊಂಡ ಬಳಿಕವಂತೂ ಯತ್ನಾಳ್ ಹೇಳಿಕೆಗಳು ಸಿಎಂ ಮತ್ತು ಅವರ ಬಳಗವಷ್ಟೇ ಅಲ್ಲದೆ ಇಡೀ ರಾಜ್ಯ ಬಿಜೆಪಿಯ ಪಾಲಿಗೇ ತೀವ್ರ ಮುಜುಗರ ತಂದಿವೆ. ಸಿಎಂ ಮತ್ತು ಅವರ ಪುತ್ರನ ಕುರಿತು ಯತ್ನಾಳ್, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸಿಡಿ, ಹೀಗೆ ಯತ್ನಾಳ್ ಪ್ರಸ್ತಾಪಿಸದೆ ಇರುವ ಸಂಗತಿಗಳೇ ಇಲ್ಲ. ಯತ್ನಾಳ್ ಮಾಡುತ್ತಿರುವ ಆರೋಪಗಳು ಮತ್ತು ಪ್ರಶ್ನೆಗಳು ಎಷ್ಟು ದಿಟ್ಟವಾಗಿವೆ ಎಂದರೆ, ಸ್ವತಃ ಯಡಿಯೂರಪ್ಪ ಅವರಾಗಲೀ, ಪಕ್ಷದ ವರಿಷ್ಠರಾಗಲೀ ಅವರ ಬಾಯಿ ಮುಚ್ಚಿಸುವುದಿರಲಿ, ಪ್ರತ್ಯುತ್ತರ ನೀಡುವುದು ಕೂಡ ಸಾಧ್ಯವಾಗುತ್ತಿಲ್ಲ.

ಯತ್ನಾಳ್ ಹೀಗೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಪಾಲಿಗೆ ಮಗ್ಗುಲ ಮುಳ್ಳಾಗಿರುವ ಹೊತ್ತಲ್ಲೇ, ಅವರಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಸಂಘಪರಿವಾರ ಮತ್ತು ಮೂಲ ಬಿಜೆಪಿಗರ ದನಿಯಾಗಿ ಇದೀಗ ಹಿರಿಯ ನಾಯಕ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸರ್ಕಾರದ ಭಾಗವೇ ಆಗಿರುವ ಕೆ ಎಸ್ ಈಶ್ವರಪ್ಪ ನೇರವಾಗಿ ಸಿಎಂ ವಿರುದ್ಧ ಹಣಕಾಸು ಅಕ್ರಮ ಮತ್ತು ಸ್ವಜನ ಪಕ್ಷಪಾತ್ರ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಜ್ಯಾಧ್ಯಕ್ಷರು ಸೇರಿ ಹಲವು ವರಿಷ್ಠರಿಗೂ ಪ್ರತಿ ರವಾನಿಸಿರುವ ಆ ಪತ್ರದಲ್ಲಿ ಇಲಾಖೆಯ ಅನುದಾನದ ವಿಷಯದಲ್ಲಿ ಸಿಎಂ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದಾರೆ, ಅಲ್ಲದೆ ಈ ಬಗ್ಗೆ ಕೂಡಲೇ ಮಧ್ಯಪ್ರವೇಶಿಸಿ ಸರಿಪಡಿಸದೇ ಇದ್ದರೆ ಪಕ್ಷ ಮತ್ತು ರಾಜ್ಯಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ ಕೂಡ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಇಡಿಯಾಗಿ ಬಿಜೆಪಿ ಪಕ್ಷ ಮತ್ತು ಸರ್ಕಾರ ಇನ್ನಿಲ್ಲದ ಮುಜುಗರಕ್ಕೆ ಈಡಾಗಿರುವ ಹೊತ್ತಿನಲ್ಲಿ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಕಾವೇರಿರುವ ಹೊತ್ತಲ್ಲಿ, ಆರ್ ಎಸ್ ಎಸ್ ಮೂಲದ, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯರಲ್ಲಿ ಒಬ್ಬರಾದ ಮತ್ತು ಯಡಿಯೂರಪ್ಪ ಅವರ ಒಂದು ಕಾಲದ ಖಾಸಾ ದೋಸ್ತ್ ಮತ್ತು ಹಾಲಿ ಪ್ರತಿಸ್ಪರ್ಧಿಯಾಗಿರುವ ಈಶ್ವರಪ್ಪ ಅವರ ಈ ಪತ್ರದ ಹಿಂದೆ ಕೇವಲ ಅವರೊಬ್ಬರ ಕೈ ಇಲ್ಲ; ಬಿಜೆಪಿಯಲ್ಲಿ ಕಳೆದ ಆರು ತಿಂಗಳುಗಳಿಂದ ತೆರೆಮರೆಯಲ್ಲಿ ಪ್ರಬಲವಾಗಿ ಬೆಳೆದಿರುವ ಯಡಿಯೂರಪ್ಪ ವಿರೋಧಿ ಬಣದ ಕೈವಾಡವಿದೆ ಎಂಬ ಮಾತೂ ಕೇಳಿಬಂದಿದೆ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಯಡಿಯೂರಪ್ಪ ನಿಷ್ಠ ಅಧಿಕಾರಕೇಂದ್ರಿತ ಬಣ ವರ್ಸಸ್ ಆರ್ ಎಸ್ ಎಸ್ ನಿಷ್ಠ ಬಣ ಎಂಬ ಎರಡು ಪ್ರತ್ಯೇಕ ಬಣಗಳಿರುವುದು ಇದೇ ಮೊದಲೇನಲ್ಲ. ಹನ್ನೆರಡು ವರ್ಷಗಳ ಹಿಂದೆ ಮೊದಲ ಬಾರಿ ಸ್ವಂತ ಬಲದ ಮೇಲೆ(ಆಪರೇಷನ್ ಕಮಲದ ಊರುಗೋಲು ಮೇಲೆ) ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಿಂದಲೇ ಈ ಬಣಗಳಿವೆ. ಆದರೆ ಈಗ ಯತ್ನಾಳ್, ಈಶ್ವರಪ್ಪ ಎತ್ತುತ್ತಿರುವ ಪ್ರಶ್ನೆಗಳ ಮೂಲಕ ನಾಯಕತ್ವ ಬದಲಾವಣೆಯ ದಿಕ್ಕಿನಲ್ಲಿ ಬಣ ಸಂಘರ್ಷ ಸಾಗುತ್ತಿದೆ. ಮತ್ತು ಬಹುತೇಕ ಯುಗಾದಿಯ ಹೊತ್ತಿಗೆ ಈ ಸಂಘರ್ಷಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲಿದೆ ಎನ್ನಲಾಗುತ್ತಿದೆ.

ಹಾಗೆ ನೋಡಿದರೆ, ಮೇಲ್ನೋಟಕ್ಕೆ ಈಶ್ವರಪ್ಪ ಮತ್ತು ಯತ್ನಾಳ್ ಅವರ ಯಡಿಯೂರಪ್ಪ ವಿರೋಧಿ ವಾಗ್ವಾಳಿಗಳ ನಡುವೆ ಸಂಬಂಧವಿದ್ದಂತೆ ಕಾಣುವುದಿಲ್ಲ. ಆದರೆ, ಆ ಇಬ್ಬರೂ ಆರ್ ಎಸ್ ಎಸ್ ನಿಷ್ಠ ನಾಯಕರ ಈ ದಾಳಿಗಳ ಹಿಂದೆ ಸಂಘ ಮತ್ತು ಬಿಜೆಪಿಯ ಮೂಲ ನಾಯಕರ ಯೋಜಿತ ಲೆಕ್ಕಾಚಾರಗಳಿಲ್ಲದೇ ಇಲ್ಲ. ಯಾಕೆಂದರೆ ಇಬ್ಬರೂ ನಾಯಕರು ಕಟ್ಟಾ ಹಿಂದುತ್ವವಾದಿಗಳು, ಪಕ್ಷ ಸಿದ್ಧಾಂತನಿಷ್ಠರು. ಜೊತೆಗೆ ಇಬ್ಬರೂ ಅನುಭವಿಗಳು, ಆಡುವ ಮಾತುಗಳು, ಟೀಕೆಗಳು ಅತಿರೇಕವೆನಿಸಿದರೂ, ಅವರ ಆ ಅತಿರೇಕದ ಹಿಂದೆಯೂ ಸಂಘದ ದಾಳಗಳ ಲೆಕ್ಕಾಚಾರಗಳೇ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ತಳ್ಳಿಹಾಕಲಾಗದು. ಹಾಗಾಗಿ ಅಂತಹ ಅನುಭವಿ ನಾಯಕರೇ ಹೀಗೆ ನೇರ ದಾಳಿಗೆ ಇಳಿದಿದ್ದಾರೆ ಎಂದರೆ; ಅದು ಅವರ ಹೆಗಲ ಮೇಲಿನ ಬಂದೂಕಿನ ಗುಂಡುಗಳೇ ವಿನಃ, ಸ್ವತಃ ಅವರೇ ಬಂದೂಕಿನ ನಳಿಕೆ ಒತ್ತಿದ್ದಲ್ಲ ಎಂಬುದು ಕೂಡ ಬಹಳ ಮುಖ್ಯ. ಏಕೆಂದರೆ, ಸುನೀಲ್ ಕುಮಾರ್ ಪತ್ರದಿಂದ ಹಿಡಿದು, ಯತ್ನಾಳ್ ಬಂಡಾಯದವರೆಗೆ ಮತ್ತು ಈಗ ಈಶ್ವರಪ್ಪ ಪತ್ರಾಸ್ತ್ರದವರೆಗೆ ಪಕ್ಷ ಮತ್ತು ಸರ್ಕಾರಕ್ಕೆ ತೀರಾ ಮುಖವೆತ್ತದಷ್ಟು ಮುಜಗರವಾದರೂ ಅವರಾರ ವಿರುದ್ಧವೂ ಯಾವ ಶಿಸ್ತುಕ್ರಮವೂ ಜರುಗಿಲ್ಲ(ಯತ್ನಾಳ್ ಗೆ ನೋಟೀಸ್ ನೀಡಿದ್ದು ಬಿಟ್ಟು) ಎಂಬುದು ಗಮನಾರ್ಹ.

ಆ ಹಿನ್ನೆಲೆಯಲ್ಲಿ; “ಸಂಘ ಮತ್ತು ಮೂಲ ಬಿಜೆಪಿ ಮಂದಿಗೆ ಪಕ್ಷದ ವರ್ಚಸ್ಸು ಮತ್ತು ಭವಿಷ್ಯದ ಕಾಳಜಿಯ ಅನಿವಾರ್ಯತೆ ಇದೆ. ಆ ಕಾರಣಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರರ ಅಧಿಕಾರ ಮತ್ತು ಆಸ್ತಿಯ ವ್ಯಾಮೋಹಕ್ಕೆ ಪಕ್ಷ ಬಲಿಯಾಗುತ್ತಿದೆ ಎಂಬ ಆತಂಕವಿದೆ. ಆದರೆ, ದೀಢೀರನೇ ನಾಯಕತ್ವ ಬದಲಾವಣೆ ಮಾಡಿದರೆ ಪಕ್ಷಕ್ಕೆ ಪೆಟ್ಟು ಬೀಳಲಿದೆ ಮತ್ತು ಯಡಿಯೂರಪ್ಪ ಮತ್ತು ಅವರ ಪುತ್ರನ ನಿರ್ಧಾರ 2013ರ ವಿಧಾನಸಭೆಯಲ್ಲಿ ಬಿದ್ದ ಪೆಟ್ಟನ್ನೇ ಪುನರಾವರ್ತನೆ ಮಾಡಬಹುದು ಎಂಬ ಭಯ ಕೂಡ ಇದೆ. ಹಾಗಂತ ಎಲ್ಲವನ್ನೂ ಕಂಡೂ ಕಣ್ಣುಮುಚ್ಚಿ ಕೂತರೆ ಪಕ್ಷದ ಭವಿಷ್ಯ ಏನು ಎಂಬ ಪ್ರಶ್ನೆಯೂ ಕಾಡುತ್ತಿದೆ. ಹಾಗಾಗಿ, ಸಂಘದವರು ಮತ್ತು ಸಂಘನಿಷ್ಠ ಬಿಜೆಪಿಯವರಿಗೆ ಇದು ಧರ್ಮಸಂಕಟದ ವಿಷಯ. ಅಂತಹ ಅನಿವಾರ್ಯತೆಗೆ ಸಿಕ್ಕೇ ಯತ್ನಾಳ್, ಈಶ್ವರಪ್ಪ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಅದೂ ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬಂತೆ ಹುಸಿ ಗುಂಡು ಹಾರಿಸಲಾಗುತ್ತಿದೆ. ಆ ಮೂಲಕ ಒಂದು ಕಡೆ ತತ್ವ ಸಿದ್ಧಾಂತ ನಿಷ್ಠತೆಯ ಪೋಜು ಕೊಡುವುದೂ, ಮತ್ತೊಂದು ಕಡೆ ಯಡಿಯೂರಪ್ಪ ಮತ್ತು ಪುತ್ರರ ಓಟಕ್ಕೆ ಲಗಾಮು ಹಾಕುವುದನ್ನೂ ಮಾಡಲಾಗುತ್ತಿದೆ. ಒಂದು ವೇಳೆ ಹಾಗೆ ಮಾಡಲಾಗದಿದ್ದರೂ, ಜನರ ಕಣ್ಣಿಗೆ ಅಂತಹ ಯತ್ನಗಳನ್ನು ಮಾಡುತ್ತಿರುವುದಾಗಿ ಬಿಂಬಿಸಲಾಗುತ್ತಿದೆ” ಎಂಬ ಸಂಘದ ಹಿನ್ನೆಲೆಯ ಬಿಜೆಪಿ ಹಿರಿಯ ನಾಯಕರೊಬ್ಬರ(ಹೆಸರು ಹೇಳಲಿಚ್ಛಿಸದ) ವಿಶ್ಲೇಷಣೆಯಲ್ಲಿ ನಿಜವಿರದೇ ಇರದು.

ಒಟ್ಟಾರೆ, ಬಿಜೆಪಿಯ ಈ ಎಲ್ಲಾ ಗೊಂದಲ ಮತ್ತು ಸಂಶಯಗಳ ನಡುವೆಯೂ, ಸ್ಪಷ್ಟವಾಗಿ, ನಿಚ್ಛಳವಾಗಿ ಕಾಣಿಸುತ್ತಿರುವುದೇನೆಂದರೆ; 2008ರಿಂದ 2013ರವರೆಗೆ ನಾಲ್ಕೂವರೆ ವರ್ಷಗಳ ಕಾಲ ಬಿಜೆಪಿಯ ಆಡಳಿತದಲ್ಲಿ ರಾಜ್ಯದಲ್ಲಿ ಕಂಡ ‘ಕರ್ ನಾಟಕ’ ಮತ್ತೆ ಒಂದು ದಶಕದ ಬಳಿಕ ಮರು ಪ್ರಸಾರ ಆರಂಭಿಸಿದೆ. ರಾಮಾಯಣ, ಮಹಾಭಾರತ, ಧಾರಾವಾಹಿಗಳನ್ನು ಮೂರ್ನಾಲ್ಕು ದಶಕಗಳ ಬಳಿಕ ಮರು ಪ್ರಸಾರ ಮಾಡಿದ ಕೇಂದ್ರದ ಬಿಜೆಪಿಯ ಮಾದರಿಯನ್ನೇ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಭಿನ್ನ ರೀತಿಯಲ್ಲಿ ಜಾರಿಗೆ ತರುತ್ತಿದೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com