ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ರಾಜ್ಯಸರ್ಕಾರ ಎಚ್ಚೆತ್ತು ಕಟ್ಟುನಿಟ್ಟಿನ ನಿಯಮವನ್ನು ಜಾರಿಮಾಡಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರದ ಹೊಸ ಮಾರ್ಗ ಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ನೈಟ್ಕರ್ಫ್ಯೂ, ವೀಕೆಂಡ್ ಲಾಕ್ಡೌನ್ ಜಾರಿ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಹಾಗು ಸಚಿವ ಸಂಪುಟದ ಸದಸ್ಯರು, ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ಆಯಾಮಗಳನ್ನು ಪರಿಗಣಿಸಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ನೈಟ್ಕರ್ಫ್ಯೂ, ವೀಕೆಂಡ್ ಲಾಕ್ಡೌನ್ ಬಗ್ಗೆ ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ, ರಾಜ್ಯದ ಜನತೆ ಆರೋಗ್ಯ ದೃಷ್ಟಿಯಿಂದ ಜಾಗರೂಕರಾಗಿರ ಬೇಕು, ಈ ನಿಟ್ಟಿನಲ್ಲಿ ಜಾತ್ರೆ, ಧಾರ್ಮಿಕ ಸಮಾರಂಭಗಳಿಗೂ ಕಡಿವಾಣ ಹಾಕಲಾಗಿದೆ. ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ 2 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಮತ್ತು ಒಂದು ಕ್ಷೇತ್ರದ ಲೋಕಸಭಾ ಚುನಾವಣೆ ಹಿನ್ನಲೆ, ಚುನಾವಣೆಗೂ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದ ಲಾಕ್ ಡೌನ್ ಮತ್ತು ನಂತರದ ನಿರ್ಬಂಧಗಳಿಂದ ಚಿತ್ರರಂಗ ಸೇರಿದಂತೆ ಅನೇಕ ಉದ್ದಿಮೆ, ವ್ಯಾಪಾರ, ವಹಿವಾಟುಗಳಿಗೆ ತೊಂದರೆ ಆಗಿರುವುದರ ಬಗ್ಗೆ ಸರ್ಕಾರಕ್ಕೆ ಅರಿವಿದೆ, ಕಳಕಳಿಯೂ ಇದೆ. ಆದರೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಮತ್ತೆ ಎದುರಾಗಿದೆ ಎಂದು ಹೇಳಿದ್ದಾರೆ.
ಈಗ ಲಸಿಕೆ ಸಹ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಮಂದಿ ಲಸಿಕೆ ಪಡೆದು, ಕೆಲವು ದಿನಗಳ ಕಾಲ ಕಠಿಣ ನಿಯಮಗಳನ್ನು ಪಾಲಿಸಿ ನಿಮ್ಮೆಲ್ಲರ ಸಹಕಾರದಿಂದ ಪ್ರಕರಣಗಳು ಕಡಿಮೆಯಾದರೆ ಮತ್ತೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತದೆ ಎಂದಿದ್ದಾರೆ.
ಈ ನಿರ್ಧಾರ ವೈಜ್ಞಾನಿಕ ನೆಲೆಗಟ್ಟಿನಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಆಡಳಿತಾತ್ಮಕ ನಿರ್ಧಾರವಾಗಿದ್ದು ಇದನ್ನು ರಾಜಕೀಯ ಅಥವಾ ಇನ್ಯಾವುದೇ ದೃಷ್ಟಿಯಿಂದ ಪರಿಗಣಿಸಬಾರದು ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.