ಭೂಕುಸಿತಕ್ಕೆ ಅರಣ್ಯ ನಾಶವೇ ಕಾರಣ ; ಸರ್ಕಾರಕ್ಕೆ ವರದಿ ಸಲ್ಲಿಸಿದ ತಜ್ಞರ ಸಮಿತಿ

ಮಲೆನಾಡು ಮತ್ತು ಕರಾವಳಿ ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳ ನಾಶವಾದ ಅರಣ್ಯಭೂಮಿಯಲ್ಲಿ, ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ, ಸ್ಥಳೀಯ ಸಸ್ಯ ಪ್ರಬೇಧಗಳನ್ನು ನೆಟ್ಟು, ಕಾಡು ಬೆಳೆಸುವ ಯೋಜನೆಗಳನ್ನು ರೂಪಿಸಬೇಕೆಂದು ವರದಿ ಹೇಳಿದೆ.
ಭೂಕುಸಿತಕ್ಕೆ ಅರಣ್ಯ ನಾಶವೇ ಕಾರಣ ; ಸರ್ಕಾರಕ್ಕೆ ವರದಿ ಸಲ್ಲಿಸಿದ ತಜ್ಞರ ಸಮಿತಿ

ಕಳೆದ ಮೂರು ವರ್ಷಗಳಿಂದ ರಾಜ್ಯದ ಅನೇಕ ಭಾಗಗಳಲ್ಲಿ ಮಳೆಗಾಲದಲ್ಲಿ ಭೂ ಕುಸಿತ ಸಂಭವಿಸಿದೆ. ಅದರಲ್ಲೂ ಪುಟ್ಟ ಪ್ರವಾಸೀ ಜಿಲ್ಲೆ ಕೊಡಗಿನಲ್ಲಿ ಭೂಕುಸಿತದಿಂದಾಗಿ ಸಾವಿರಾರು ಜನರು ಮನೆ ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಭೂಕುಸಿತ ಸಂಭವಿಸಿರುವುದೂ ಕೊಡಗಿನಲ್ಲೆ ಆಗಿದ್ದು ಇದಕ್ಕೆ ಬೆಟ್ಟ ಗುಡ್ಡಗಳನ್ನೆಲ್ಲ ಅವೈಜ್ಞಾನಿಕವಾಗಿ ಜೆಸಿಬಿ ಬಳಸಿ ಸಮತಟ್ಟು ಮಾಡಿ ಕಟ್ಟಡ ನಿರ್ಮಿಸಿರುವುದೇ ಕಾರಣ ಎಂದು ಸ್ಥಳಿಯ ಪರಿಸರವಾದಿಗಳು ಆರೋಪಿಸಿದ್ದರು. ಈಗ ಆ ಆರೋಪಕ್ಕೆ ಪುಷ್ಟಿ ನೀಡುವಂತೆ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭೂಕುಸಿತ ಹೆಚ್ಚಾಗಲು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರುವ ಅರಣ್ಯ ನಾಶ ಮತ್ತು ಅರಣ್ಯ ಛಿದ್ರೀಕರಣವೇ ಪ್ರಮುಖ ಕಾರಣವಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯ ಈ ಸಮಿತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುರುವಾರ ವರದಿ ಸಲ್ಲಿಸಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರ ನೀಡುವ ‘ಮಿಟಿಗೇಷನ್ ಫಂಡ್’ ಮೂಲಕ ಭೂ ಕುಸಿತ ಪ್ರದೇಶದ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನವನ್ನೂ ಮೀಸಲಿಡುವ ಬಗ್ಗೆ ಸರ್ಕಾರ ಪರಿಶೀಲಿಸುವುದು ಹಾಗೂ ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಅನುಷ್ಠಾನಕ್ಕೆ ಸರ್ಕಾರ ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು. ವರದಿಯಲ್ಲಿ ಕರಾವಳಿಯ ನೈಸರ್ಗಿಕ ಸಂಪತ್ತು, ಮಲೆನಾಡಿನ ನದಿ-ಕಣಿವೆಗಳ ಉಳಿವಿಗೆ ಪೂರಕವಾದ ಮತ್ತು ಭೂ-ಕುಸಿತ ತಡೆಗಟ್ಟಲು ಭಾರಿ ಭೂ-ಕುಸಿತ ಪ್ರಕರಣಗಳನ್ನು ನೈಸರ್ಗಿಕ ವಿಪತ್ತು ವ್ಯಾಖ್ಯೆಯಡಿ ತರಬೇಕು. ಭೂ-ಕುಸಿತ ನಿಯಂತ್ರಣ ಮಾರ್ಗೋಪಾಯಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಬೇಕು. ಕರ್ನಾಟಕ ರಾಜ್ಯ ವಿಕೋಪ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಸೂಕ್ತ ನೀತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕು. ಇವುಗಳ ಜಾರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿಗಳನ್ನು ನೀಡುವ ನೋಡಲ್ ಸಂಸ್ಥೆಯಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವನ್ನು ಗುರುತಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಲೆನಾಡು ಮತ್ತು ಕರಾವಳಿಯ ಎಲ್ಲ ತಾಲ್ಲೂಕುಗಳಲ್ಲಿ ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳ ಗ್ರಾಮ ಮಟ್ಟದ ನಕ್ಷೆ ರಚಿಸುವುದು. ಭೂಕುಸಿತದ ಕುರಿತು ಮೊದಲೇ ಶೀಘ್ರ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸುವುದು. ಜಿಲ್ಲಾಡಳಿತಗಳು ಸಕಾಲದಲ್ಲಿ ಅವುಗಳ ಸೂಕ್ತ ಸಹಾಯ ಪಡೆಯುವಂಥ ಆಡಳಿತಾತ್ಮಕ ನೀತಿ ರೂಪಿಸುವುದು. ತಳಮಟ್ಟದಲ್ಲಿ ಜನ ಸಹಭಾಗಿತ್ವದ ವಿಕೋಪ ಅಪಾಯ ತಡೆ ಯೋಜನೆ ರೂಪಿಸಬೇಕು. ಮಲೆನಾಡು ಮತ್ತು ಕರಾವಳಿ ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳ ನಾಶವಾದ ಅರಣ್ಯಭೂಮಿಯಲ್ಲಿ, ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ, ಸ್ಥಳೀಯ ಸಸ್ಯ ಪ್ರಬೇಧಗಳನ್ನು ನೆಟ್ಟು, ಕಾಡು ಬೆಳೆಸುವ ಯೋಜನೆಗಳನ್ನು ರೂಪಿಸಬೇಕೆಂದು ವರದಿ ಹೇಳಿದೆ.

ಮೇಲ್ಮೈ ನೀರು ಹರಿಯುವ ಸಹಜ ಮಾರ್ಗಗಳಾದ ಹೊಳೆ–ತೊರೆಗಳು, ಕೆರೆ ಕೋಡಿ ಹರಿಯುವ ಕಣಿವೆಗಳು ಹಾಗೂ ಮಳೆಗಾಲದಲ್ಲಿ ನೀರು ಹರಿಯುವ ಸಹಜ ಜಲ ಮಾರ್ಗಗಳು ಹೂಳು ತುಂಬದಂತೆ, ಅತಿಕ್ರಮಣವಾಗದಂತೆ ಕಸ ಕಟ್ಟದಂತೆ ಸೂಕ್ತವಾಗಿ ನಿರ್ವಹಿಸಬೇಕು. ಅನಧಿಕೃತವಾಗಿ ಬಳಕೆಯಾಗುತ್ತಿರುವ ಮರ ಕಡಿಯುವ ವಿದ್ಯುತ್ ಯಂತ್ರಗಳು, ಭೂಕೊರೆತ ಯಂತ್ರಗಳು, ಗಣಿಗಳಲ್ಲಿ ಬಳಸುವ ಸ್ಫೋಟಕಗಳು, ಭೂ ಅಗೆತದ ಬೃಹತ್ ಯಂತ್ರಗಳನ್ನು ಸೂಕ್ತ ಕಾನೂನು ಮತ್ತು ಸಕ್ರಮ ಪ್ರಾಧಿಕಾರದ ಮೂಲಕ ನಿಯಂತ್ರಿಸಬೇಕು. ಇಸ್ರೊದ ರಾಷ್ಟ್ರೀಯ ದೂರ ಸಂವೇದಿ ಸಂಸ್ಥೆ ಮತ್ತು ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಗಳು ಪಶ್ಚಿಮ ಘಟ್ಟದಲ್ಲಿ ಸಂಭವಿಸಿರುವ ಭೂ ಕುಸಿತಗಳ ಸಮಗ್ರ ಅಧ್ಯಯನ ನಡೆಸಿವೆ. ಅದರ ಪ್ರಕಾರ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ 23 ತಾಲ್ಲೂಕುಗಳಲ್ಲಿ ಭವಿಷ್ಯದಲ್ಲೂ ಭೂಕುಸಿತದ ಸಾಧ್ಯತೆಗಳಿವೆ. ಇದು ರಾಜ್ಯದ ಶೇ 13 ರಷ್ಟು ಪ್ರದೇಶವಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ . ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಮೂಡಿಗೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸಾಗರ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ ಹಾಗೂ ಜೋಯ್ಡಾ ,ಉಡುಪಿ ಜಿಲ್ಲೆಯ ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಮಂಗಳೂರು, ಉಡುಪಿ ಜಿಲ್ಲೆಯ ಕುಂದಾಪುರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕುಗಳ ಹಲವು ಪ್ರದೇಶಗಳಲ್ಲಿ ಭೂಕುಸಿತವಾಗುತ್ತಿದೆ. ಈ ಎಲ್ಲ ತಾಲ್ಲೂಕು ಪ್ರದೇಶಗಳ ಕಡಿದಾದ ಗುಡ್ಡ– ಕಣಿವೆ ಪ್ರದೇಶ ಭೂಕುಸಿತವಾಗಬಲ್ಲ ಸೂಕ್ಷ್ಮ ಪ್ರದೇಶವೆಂದು ಗುರುತಿಸಬೇಕು ಎಂದು ವರದಿ ಹೇಳಿದೆ.

ಅಪರೂಪದ ಜೀವ ವೈವಿಧ್ಯವನ್ನೂ ದಟ್ಟ ಅರಣ್ಯವನ್ನೂ ಹೊಂದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಎರ್ರಾ ಬಿರ್ರಿ ಬೆಳೆಯುತ್ತಿದೆ. ಇದರಿಂದಾಗಿ ಕೃಷಿಕರಿಗೆ ಒಂದಷ್ಟು ಆದಾಯ ಲಭಿಸುತ್ತದೆಯಾದರೂ ಅವೈಜ್ಞಾನಿಕ ಕಟ್ಟಡ ನಿರ್ಮಾಣದಿಂದಾಗಿ ಪರಿಸರದ ಮೇಲಾಗುತ್ತಿರುವ ಹಾನಿ ಬೆಲೆ ಕಟ್ಟಲಾಗದ್ದಾಗಿದೆ. ಕೊಡಗು ಜಿಲ್ಲಾಡಳಿತ ಈಗ ಕೃಷಿ ಜಮೀನುಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸಿದ್ದು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು ಮನೆ ಕಟ್ಟಲು ಅವಶ್ಯವಿರುವ 0.05 ಸೆಂಟು ಪರಿವರ್ತನೆ ಹೊರತುಪಡಿಸಿ ಹೆಚ್ಚಿನ ವಿಸ್ತೀರ್ಣದ ಭೂ ಪರಿವರ್ತನೆಯು ಸಮಿತಿಯ ಒಪ್ಪಿಗೆ ಪಡೆದೇ ನೀಡಲಾಗುತ್ತಿದೆ. ಆದರೆ ಹೋಂ ಸ್ಟೇ ನಿರ್ಮಿಸಬಯಸುವ ಮಾಲೀಕರು ಶೀಘ್ರವಾಗಿ ಭೂಪರಿವರ್ತನೆ ಮಾಡಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತಿದ್ದಾರೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ಇನ್ನಷ್ಟು ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಭೂಕುಸಿತ ತಡೆಯಲು ಸಾಧ್ಯ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com