ಟ್ಯಾಕ್ಸಿ ಚಾಲನೆಯಲ್ಲಿ ನಷ್ಟ ಉಂಟಾಗಿ ಮಂಗಳವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದ ಕ್ಯಾಬ್ ಚಾಲಕ ಪ್ರತಾಪ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಬೆಂಗಳುರು ಉತ್ತರ ವಿಭಾಗದ ಡಿಸಿಪಿ ಸಿ ಕೆ ಬಾಬ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ (ಕೆಎಸ್ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದ ಪ್ರತಾಪ್ ಅವರು ಕಾರಿನ ಇಎಂಐ ಕಟ್ಟಲೂ ಹಣವಿಲ್ಲದೇ ನಷ್ಟದಲ್ಲಿ ಸಿಲುಕಿದ್ದರು. ಈ ಕಾರಣಕ್ಕೆ ಬೇಸತ್ತಿದ್ದ ಪ್ರತಾಪ್, ವಿಮಾನ ನಿಲ್ದಾಣದ ಹೊರಗಡೆ ಕಾರಿನೊಳಗೆ ಕುಳಿತುಕೊಂಡಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದರ ಪರಿಣಾಮ ಕಾರಿಗೂ ಬೆಂಕಿ ಹತ್ತಿಕೊಂಡಿದ್ದು, ಇತರೆ ಚಾಲಕರು ಕೂಡಲೇ ಬೆಂಕಿ ನಂದಿಸಿ ಗಾಯಾಳು ಪ್ರತಾಪ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಇತರ ಕ್ಯಾಬ್ ಕಂಪೆನಿಗಳಾದ ಓಲಾ ಮತ್ತು ಊಬರ್ ಪ್ರತೀ ಕಿಲೋಮೀಟರ್ಗೆ 10 ರೂ. ದರ ನಿಗದಿ ಮಾಡಿದ್ದರೆ, KSTDC ಕ್ಯಾಬ್ಗಳಿಗೆ ಕಿಲೋಮೀಟರ್ಗೆ 24 ರೂ. ದರ ನಿಗದಿಯಾಗಿತ್ತು. ಇದರಿಂದಾಗಿ ಪ್ರಯಾಣಿಕರು ಓಲಾ, ಊಬರ್ಗಳಿಗೇ ಹೆಚ್ಚಾಗಿ ಮೊರೆ ಹೋಗುತ್ತಿದ್ದರು. KSTDC ಕಾರು ಚಾಲಕರ ಜೀವನ ನಿರ್ವಹಣೆಯೂ ಕಷ್ಟಕರವಾಗುವ ಪರಿಸ್ಥಿತಿ ಎದುರಾಗಿತ್ತು. ಈಗ ಪ್ರತಾಪ್ ಅವರ ಆತ್ಮಹತ್ಯೆ ಈ ವಿಚಾರವನ್ನು ಬಯಲಿಗೆ ಎಳೆದಿದೆ.
ಪ್ರತಾಪ್ ಸಾವಿನಿಂದ ಆಕ್ರೋಶಕ್ಕೆ ಒಳಗಾಗಿರುವ ಕ್ಯಾಬ್ ಚಾಲಕರು, ಮುಷ್ಕರಕ್ಕೆ ಮುಂದಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಟ್ಯಾಕ್ಸಿ ಸೇವೆಗಳು ಬಾಧಿಸಲಿವೆ. ಪ್ರಯಾಣಿಕರು ಬಿಎಂಟಿಸಿ ಬಸ್ಗಳನ್ನು ಉಪಯೋಗಿಸಿ ಏರ್ಪೋರ್ಟ್ಗೆ ಬರಬಹುದು ಅಥವಾ ಹೋಗಬಹುದು ಎಂದು ಏರ್ಪೋರ್ಟ್ ನ ಅಧಿಕೃತ ಮೂಲಗಳು ತಿಳಿಸಿವೆ.
ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ ಉಂಟಾದರೆ, ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗಬಹುದು ಎಂದು ಮುಂಜಾಗರೂಕ ಕ್ರಮವಾಗಿ ಈ ಪ್ರಕಟಣೆಯನ್ನು ಮಾಡಲಾಗಿದೆ.