‌ಬಸವಣ್ಣನ ತತ್ವ, ಆದರ್ಶ ಪಾಲಿಸುತ್ತಿರುವ ಬಸನಗೌಡಗೆ ನಿಮ್ಮ ಮತಹಾಕಿ -ಡಿಕೆ ಶಿವಕುಮಾರ್‌

ನಾನು ಇಂಧನ ಸಚಿವನ್ನಾಗಿದ್ದಾಗ, ಈ ಭಾಗಕ್ಕೆ 2 ಸಾವಿರ ಕೋಟಿ ಅನುದಾನ ಕೊಡಲಾಗಿತ್ತು, ಇಲ್ಲಿನ ಮತದಾರರು ಕಾಂಗ್ರೆಸ್ ಗೆ ಮತ ಹಾಕಿದ್ದಕ್ಕೆ ಕೊಟ್ಟಿದ್ದೆವೇ ಹೊರತು ಪ್ರತಾಪ್ ಗೌಡನಿಗಾಗಿ ಕೊಟ್ಟಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
‌ಬಸವಣ್ಣನ ತತ್ವ, ಆದರ್ಶ ಪಾಲಿಸುತ್ತಿರುವ ಬಸನಗೌಡಗೆ ನಿಮ್ಮ ಮತಹಾಕಿ -ಡಿಕೆ ಶಿವಕುಮಾರ್‌

ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನಲೆ, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಾಥ್‌ಕೊಟ್ಟಿದ್ದು, ನಂತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌ ಬಸವಣ್ಣನ ತತ್ವ, ಆದರ್ಶ ಪಾಲಿಸುತ್ತಿರುವ ಬಸನಗೌಡಗೆ ಮತಹಾಕಿ ಎಂದು ಕೇಳಿಕೊಂಡಿದ್ದಾರೆ.

ಬೆಳಗಾವಿ ಹಾಗೂ ಬಸವಕಲ್ಯಾಣದಲ್ಲಿ ಅಭ್ಯರ್ಥಿಗಳು ದೇವರ ಪಾದ ಸೇರಿದ್ದಕ್ಕೆ ಈ ಉಪ ಚುನಾವಣೆ ಬಂದಿದೆ ಅಂತಾ ನಮ್ಮ ನಾಯಕರು ಹೇಳಿದರು. ಆದರೆ ಇಲ್ಲಿ ಮಸ್ಕಿ ಉಪಚುನಾವಣೆ ಅಭ್ಯರ್ಥಿ ಸತ್ತಿಲ್ಲ, ನಿಮ್ಮ ತೀರ್ಪು, ಸ್ವಾಭಿಮಾನವನ್ನು ಸಾಯಿಸಿದ್ದಾರೆ. ಅದಕ್ಕಾಗಿ ಈ ಚುನಾವಣೆ ಬಂದಿದೆ. ಪ್ರತಾಪ್ ಗೌಡನ ಕಾಟ ಇದ್ದದ್ದೆ. ಹಿಂದೆ ಬಿಜೆಪಿಯಲ್ಲಿ ಗೆದ್ದಿದ್ದಾಗ ಗೋವಾದಲ್ಲಿ ಕೂತಿದ್ದ, ಈಗ ಬಾಂಬೆಯಲ್ಲಿ ಹೋಗಿ ಕೂತಿದ್ದಾನೆಂದು ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್‌ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಧರ್ಮಗಳ ಪಕ್ಷ. ಬಿಜೆಪಿ ಕೇವಲ ನಾವು ಹಿಂದುಗಳು ಮುಂದು ಅಂತಾರೆ. ನಾವು ಹಾಗಲ್ಲ, ಹಿಂದೂ, ಸಿಖ್, ಕ್ರೈಸ್ತ, ವೀರಶೈವರು, ಬ್ರಾಹ್ಮಣ ಎಲ್ಲರೂ ನಮಗೆ ಒಂದೇ, ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವಾಗ ಆತ ಯಾವುದಾದರು ಒಬ್ಬ ಮತದಾರನ ಅಭಿಪ್ರಾಯ ಕೇಳಿದನಾ? ಯಾರನ್ನೂ ಕೇಳಲಿಲ್ಲ, ಸೀದಾ ಬಾಂಬೆಗೋಗಿ ಸೇಲ್‌ ಆದರು, ಅದಕ್ಕೀಗ ಮತದಾರರು ಉತ್ತರಕೊಡಬೇಕೆಂದು ಎಚ್ಚರಿಸಿದ್ದಾರೆ.ಈಗಿನ ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿ ಆಗಬೇಕೆಂದರೆ ಬಸವನಗೌಡ ಅವರನ್ನು ಗೆಲ್ಲಿಸಿ, ಅವರು ವಿಧಾನಸೌಧಕ್ಕೆ ಹೋಗಬೇಕೆಂದಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕ್ಷೇತ್ರದ ಕಾಲುವೆ ಯೋಜನೆ ಬಗ್ಗೆ ಯಡಿಯೂರಪ್ಪ ಸರ್ಕಾರಕ್ಕೆ ನಿಖರವಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ನಾನು ಇಂಧನ ಸಚಿವನ್ನಾಗಿದ್ದಾಗ, ಈ ಭಾಗಕ್ಕೆ 2 ಸಾವಿರ ಕೋಟಿ ಅನುದಾನ ಕೊಡಲಾಗಿತ್ತು, ಇಲ್ಲಿನ ಮತದಾರರು ಕಾಂಗ್ರೆಸ್ ಗೆ ಮತ ಹಾಕಿದ್ದಕ್ಕೆ ಕೊಟ್ಟಿದ್ದೆವೇ ಹೊರತು ಪ್ರತಾಪ್ ಗೌಡನಿಗಾಗಿ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕನಕಪುರ ಕ್ಷೇತ್ರದ ಬಗ್ಗೆ ಹೇಗೆ ನನಗೆ ಅಭಿಮಾನವಿದೆಯೋ ಹಾಗೆ ಈ ಕ್ಷೇತ್ರದ ಬಗ್ಗೆಯೂ ಅಭಿಮಾನ ಇಟ್ಟುಕೊಳ್ಳುತ್ತೇನೆ. ಇಲ್ಲಿ ಬಸವನಗೌಡಗೆ ಕೊಡುವ ತೀರ್ಪು ಕೇವಲ ಅವರಿಗಲ್ಲ. ಈ ತೀರ್ಪು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಲುಪುತ್ತದೆ. ಈ ಚುನಾವಣೆಯಲ್ಲಿ ಬಸವನಗೌಡ ಆಗಲಿ, ಡಿ.ಕೆ ಶಿವಕುಮಾರ್ ಆಗಲಿ, ಸಿದ್ದರಾಮಯ್ಯನವರು ಅಭ್ಯರ್ಥಿ ಅಲ್ಲ. ಇಲ್ಲಿರುವ ಮತದಾರರು ನಿಜವಾದ ಅಭ್ಯರ್ಥಿಗಳು. ನೀವು ಇಲ್ಲಿ ಬಟನ್ ಒತ್ತಿದರೆ, ಅದರ ಶಬ್ಧ ಮೋದಿ, ಯಡಿಯೂರಪ್ಪ ಅವರಿಗೆ ಕೇಳಿಸಬೇಕೆಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಗೆ ಮತಹಾಕಿದರೆ ಬಿಜೆಪಿಗೆ ಮತ ಬೀಳುತ್ತಿದೆಯಂತೆ. ಅವರು ಏನು ಬೇಕಾದರೂ ಮಾಡುತ್ತಾರೆ ಎಂಬುದನ್ನು ನೋಡುತ್ತಿದ್ದೀರಲ್ಲಾ. ಇಲ್ಲಿರುವ ಬೂತ್ ಏಜೆಂಟರು ಎಚ್ಚರಿಕೆಯಿಂದ ಇರಬೇಕು. ಆ ವಿದ್ಯೆ ಎಲ್ಲ ಬಸವನಗೌಡಗೆ ಗೊತ್ತಿದೆ. ಯಾಕೆಂದರೆ ಅವರೂ ಬಿಜೆಪಿಯಲ್ಲಿ ಸ್ವಲ್ಪ ದಿನ ಇದ್ದರು. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಂತೆ. ಇದು ಒಂದು ವರ್ಗ ಒಂದು ಜಾತಿಗೆ ಸೀಮಿತವಲ್ಲ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಇಲ್ಲಿನ ಕಾಲುವೆ ಯೋಜನೆಯನ್ನು ಪೂರ್ಣಗೊಳಿಸುತ್ತದೆ ಎಂದು ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯ ಬಳಿ ಹೇಳುತ್ತೇನೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com