ಅಶ್ಲೀಲ ಸಿಡಿ ಪ್ರಕರಣದ ಕೇಂದ್ರ ಬಿಂದು ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೋಮವಾರ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನನ್ನು ಲೈಂಗಿಕವಾಗಿ ರಮೇಶ್ ಜಾರಕಿಹೊಳಿಯವರು ಬಳಸಿಕೊಂಡಿದ್ದಾರೆ, ತನಗೂ, ತನ್ನ ಕುಟುಂಬಕ್ಕೂ ಜೀವ ಬೆದರಿಕೆಯಿದೆ ಎಂದು ಸೆಕ್ಸ್ ಸಿಡಿ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನಿನ್ನೆ ರಮೇಶ್ ಜಾರಕಿಹೊಳಿಗೆ ನೊಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ತಂಡದ ಮುಂದೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೋಮವಾರ ಬೆಳಗ್ಗೆ ರಮೇಶ್ ಜಾರಕಿಹೊಳಿ ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿರುವ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಸುಮಾರು 2 ಗಂಟೆಗಳ ಕಾಲ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ.
ವಿಚಾರಣೆಯ ವೇಳೆ, ಯುವತಿ ಹೇಗೆ ಮತ್ತು ಎಷ್ಟು ಸಮಯದಿಂದ ಪರಿಚಯ, ಸಿ.ಡಿ ತಯಾರಿಯಾದದ್ದು ಹೇಗೆ, ಬಹಿರಂಗಪಡಿಸಿರುವುದರ ಹಿಂದೆ ಯಾರಿದ್ದಾರೆ, ಅದರ ಹಿಂದಿನ ಆರೋಪಿಗಳ ಬಗ್ಗೆ ರಮೇಶ್ ಜಾರಕಿಹೊಳಿಯವರ ಹೇಳಿಕೆಗಳನ್ನು ಎಸ್ ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ ಸಿ.ಡಿ ಪ್ರಕರಣ ಹಿಂದೆ ಡಿ ಕೆ ಶಿವಕುಮಾರ್ ಅವರ ಕೈವಾಡವಿದೆಯೆಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಇಂದು (ಸೋಮವಾರ) ಅಪರಾಹ್ನ ಸಂತ್ರಸ್ತೆ ಯುವತಿ ಕೂಡ ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.