ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಇದೀಗ ಡಿಕೆ ಶಿವಕುಮಾರ್ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಇದೇ ಮೊದಲ ಬಾರಿ ಎಂಬಂತೆ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಡಿಕೆ ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಸಂತ್ರಸ್ತೆ ಯುವತಿಯ ಕುಟುಂಬಸ್ಥರ ಮಾಧ್ಯಮಗಳ ಎದುರು ನೀಡಿರುವ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣದ ಹಿಂದೆ ಇದ್ದ ಆ ʼಮಹಾನ್ ನಾಯಕʼ ಡಿಕೆ ಶಿವಕುಮಾರ್ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆತ ಒಬ್ಬ ಗಾ**, ಅವ ಗಂಡಸಲ್ಲ, ನಾನು ಗಂಡಸು. ಅವ ರಾಜಕಾರಣಿ ಆಗಲಿಕ್ಕೆ ನಾಲಾಯಕ್, ಅವನಿಗೆ ಮಾಫಿ ಎನ್ನುವುದು ಇಲ್ಲ. ಆತನನ್ನು ರಾಜೀನಾಮೆ ಕೊಡಿಸುವಂತೆ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದು ಜಾರಕಿಹೊಳಿ ಅವ್ಯಾಚ್ಯವಾಗಿ ಡಿಕೆಶಿ ವಿರುದ್ಧ ಮಾತನಾಡಿದ್ದಾರೆ.
ಈ ವೇಳೆ ಡಿಕೆ ಶಿವಕುಮಾರ್ ವಿರುದ್ಧ ನೀಡಿದ ಹೇಳಿಕೆಗಾಗಿ ಯುವತಿಯ ಪೋಷಕರಿಗೆ ಧನ್ಯವಾದ ತಿಳಿಸಿದ ಜಾರಕಿಹೊಳಿ, ಆಕೆಯ ಸಹೋದರನೇ ಎಲ್ಲಾ ಹೇಳಿದ್ದಾನೆ, ಯುವತಿಯ ಕುಟುಂಬಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ನಮ್ಮ ಕುಟುಂಬ ಯಾವ ಹುಡುಗಿಗೂ ಮೋಸ ಮಾಡಿಲ್ಲ. ನನಗೆ ಹೆದರಿಕೆ ಇಲ್ಲ. ನಾನು ಕನಕಪುರಕ್ಕೆ ಬಂದು ತೋರಿಸುತ್ತೇನೆ, ಅವನ ವಿರುದ್ಧ ಹೋರಾಡುತ್ತೇನೆ. ಅವನನ್ನು ಸೋಲಿಸಲು ಕುಮಾರಸ್ವಾಮಿಗೆ ಬೆಂಬಲ ನೀಡಲು ಸಿದ್ದನಿದ್ದೇನೆ. ನನ್ನ ತಮ್ಮನನ್ನು ಕನಕಪುರದಲ್ಲಿ ಕಣಕ್ಕಿಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಅದಕ್ಕೂ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಯುವತಿ ಪೋಷಕರು, ತಮ್ಮ ಮಗಳು ಗೋವಾಗೆ ತೆರಳಲು ಡಿಕೆ ಶಿವಕುಮಾರ್ ನೆರವು ನೀಡಿರುವುದಾಗಿ ಆಕೆಯೇ ಹೇಳಿರುವುದಾಗಿ ತಿಳಿಸಿದ್ದರು.