ಸೋಶಿಯಲ್‌ ಮೀಡಿಯಾ ಸಮರಕ್ಕೆ ಕಾರಣವಾದ CD ಪ್ರಕರಣ: ಟ್ವಿಟರ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಕೆಸರೆರಚಾಟ

ಡಿಕೆ ಶಿವಕುಮಾರ್‌ ರಾಜಿನಾಮೆಗೆ ಆಗ್ರಹಿಸಿರುವ ಬಿಜೆಪಿ, ಸಿ.ಡಿ ಪ್ರಕರಣದ ಹಿಂದಿರುವ ಮಹಾನಾಯಕ ಇನ್ನೂ ಯಾಕೆ ರಾಜಿನಾಮೆ ನೀಡಿಲ್ಲ ಎಂದು ಪ್ರಶ್ನಿಸಿದೆ.
ಸೋಶಿಯಲ್‌ ಮೀಡಿಯಾ ಸಮರಕ್ಕೆ ಕಾರಣವಾದ CD ಪ್ರಕರಣ: ಟ್ವಿಟರ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಕೆಸರೆರಚಾಟ

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸಿ.ಡಿ ಪ್ರಕರಣದ ರಾದ್ಧಾಂತ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿರುವ ಪ್ರಕರಣದಲ್ಲಿ ಇದೀಗ ಡಿಕೆ ಶಿವಕುಮಾರ್‌ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಸಿ.ಡಿ ಪ್ರಕರಣಕ್ಕೆ ಸಂಬಂಧಪಟ್ಟ ಮಹಿಳೆಯದ್ದೆನ್ನಲಾದ ಕಾಲ್‌ ರೆಕಾರ್ಡ್‌ ಒಂದು ವೈರಲ್‌ ಆಗಿದ್ದು, ಆಡಿಯೊದಲ್ಲಿ ಮಹಿಳೆ ಡಿಕೆ ಶಿವಕುಮಾರ್‌ ಹೆಸರು ಉಲ್ಲೇಖಿಸಿದ್ದಾರೆಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ಮೇಲೆ ಮುಗಿಬಿದ್ದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಕೆ ಶಿವಕುಮಾರ್‌ ರಾಜಿನಾಮೆಗೆ ಆಗ್ರಹಿಸಿರುವ ಬಿಜೆಪಿ, ಸಿ.ಡಿ ಪ್ರಕರಣದ ಹಿಂದಿರುವ ಮಹಾನಾಯಕ ಇನ್ನೂ ಯಾಕೆ ರಾಜಿನಾಮೆ ನೀಡಿಲ್ಲ ಎಂದು ಪ್ರಶ್ನಿಸಿದೆ.

ಷಡ್ಯಂತ್ರದ ಹಿಂದೆ ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕ ಕೂಡಾ ಆರೋಪಿಯಲ್ಲವೇ? ರಾಜಕಾರಣದಲ್ಲಿ ಅತಿಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಕಾಂಗ್ರೆಸ್‌ ಪಕ್ಷಕ್ಕೆ ಬದ್ಧತೆ ಅನ್ನುವುದಿದ್ದರೆ ಮೊದಲು ಮಹಾನಾಯಕನ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ಆಗ್ರಹಿಸಿದೆ.

ಪ್ರಕರಣದ ಆರೋಪಿಗಳೊಂದಿಗೆ ಸಂಬಂಧವಿರುವುದನ್ನು ಮಹಾನಾಯಕ ಒಪ್ಪಿಕೊಂಡಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್‌ಗಳೊಂದಿಗೆ ಯಾವ ರೀತಿಯ ಸಂಬಂಧವಿತ್ತೆಂಬುದನ್ನು ರಾಜ್ಯದ ಜನತೆಯ‌ ಮುಂದೆ ಖಳನಾಯಕ ಬಹಿರಂಗಪಡಿಸಬೇಕು. ಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ರಮೇಶ್‌ ಜಾರಕಿಹೊಳಿ, ʼಆಡಿಯೊದಲ್ಲಿ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪ ಆಗಿದೆ. ತನಿಖೆ ನಡೆಯಲಿ. ಆಡಿಯೊದಲ್ಲಿ ಹೆಸರು ಬಂದ ಮಾತ್ರಕ್ಕೆ ಡಿ.ಕೆ ಶಿವಕುಮಾರ್ ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿ. ನನಗೆ ಆದ ರೀತಿ ಅನ್ಯಾಯ ಅವರಿಗೆ ಆಗಬಾರದು. ನನ್ನ ಹಾಗೆ ಅವರು ರಾಜಿನಾಮೆ ಕೊಡುವುದು ಬೇಡ’ ಎಂದಿದ್ದಾರೆ.

ತನ್ನಲ್ಲಿ ಸ್ಪೋಟಕ ಮಾಹಿತಿಯೊಂದಿದ್ದು, ಶೀಘ್ರವೇ ಸಾರ್ವಜನಿಕವಾಗಿ ಅದನ್ನು ಪ್ರಸ್ತುತಪಡಿಸುತ್ತೇನೆ ಎಂದು ಹೇಳಿರುವ ಜಾರಕಿಹೊಳಿ, ‘ನಾಳೆ (ಶನಿವಾರ) ಸಂಜೆ 4 ರಿಂದ 6 ಗಂಟೆಯ ಒಳಗೆ ದೊಡ್ಡ ಬಾಂಬ್‌ ಸ್ಫೋಟವಾಗುತ್ತದೆ. ದೊಡ್ಡ ಮಟ್ಟದ ಬೆಳವಣಿಗೆ ಆಗಲಿದ್ದು, ನಾನೇ ಆಗ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.

ಜಾರಕಿಹೊಳಿ ಬಾಂಬ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಸರ್ಕಾರವನ್ನೇ ಬೀಳಿಸುತ್ತೇನೆ ಎಂದಿರುವ ರಮೇಶ್ ಜಾರಕಿಹೊಳಿಗೆ ಇಡೀ ಸರ್ಕಾರವೇ ಹೆದರಿ ಕುಳಿತಿರುವಾಗ ಸಿಡಿಯಲ್ಲಿನ ಯುವತಿಗೆ ಜೀವ ಬೆದರಿಕೆ ಇಲ್ಲದಿರುತ್ತದೆಯೇ? ತನಿಖೆಯ ದಿಕ್ಕು ತಪ್ಪದಿರುತ್ತದೆಯೇ? ಸಾಕ್ಷಿಗಳು ನಾಶವಾಗದೆ ಇರುತ್ತದೆಯೇ? ಬಸವರಾಜ್‌ ಬೊಮ್ಮಾಯಿ ಅವರೇ, ಕೂಡಲೇ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿ ಎಂದು ಆಗ್ರಹಿಸಿದೆ.

ಅತ್ಯಾಚಾರ ಆರೋಪಿ ಸರ್ಕಾರವನ್ನೇ ಉರುಳಿಸಿಬಿಡಬಲ್ಲೆ, ಬಾಂಬ್ ಹಾಕುತ್ತೇನೆ, ಮತ್ತೊಂದು ಮಾಡುತ್ತೇನೆ ಎನ್ನುವ ಬೆದರಿಕೆ ಹಾಕುತ್ತಾ ರಾಜಾರೋಷವಾಗಿ ತಿರುಗುತ್ತಿರುವುದು ಬಹುಶಃ ಇದೇ ಮೊದಲೇನೋ. ಕೂಡಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು, ಪ್ರಕರಣ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಕಾಂಗ್ರೆಸ್‌ ಹೇಳಿದೆ.

ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್‌ ʼಲಂಚ, ಮಂಚದ ಸರ್ಕಾರದಿಂದ ಈಗಾಗಲೇ ಕರ್ನಾಟಕದ ಮರ್ಯಾದೆ ದೇಶದೆದುರು ಹರಾಜಾಗಿದೆ, ದೂರು ದಾಖಲಾದರೂ, FIR ಹಾಕಿದ್ದರೂ ಅತ್ಯಾಚಾರ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬ ಕಳಂಕ, ಕರ್ನಾಟಕಕ್ಕೆ ಬೇಡ, ಅದೇನಿದ್ದರೂ ಯುಪಿಯ ಯೋಗಿ ಆಡಳಿತಕ್ಕಿರಲಿ. ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com