ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಐತಿಹಾಸಿಕ ಪ್ರತಿಭಟನೆ ನಾಲ್ಕು ತಿಂಗಳು ಪೂರೈಸಿದರ ಹಿನ್ನೆಲೆಯಲ್ಲಿ ಶುಕ್ರವಾರದಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಭಾರತ್ ಬಂದ್ಗೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಕರೆ ನೀಡಿದ್ದು, ಬಂದ್ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಸಂಕಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ಬಂದ್ಗೆ ರಾಜ್ಯ ರೈತ ಸಂಘಗಳು, ಕಾರ್ಮಿಕ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬೆಂಗಳೂರಿನ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನ ಟೌನ್ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಮೊದಲದ ಕಡೆ ಬಂದ್ ಬೆಂಬಲಿಸಿ ಪ್ರತಿಭಟನೆಗಳು ನಡೆದಿವೆ. ಟೌನ್ ಹಾಲ್ ಬಳಿ ಪ್ರತಿಭಟನೆಗೆ ಬಂದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ರೈತ ಮುಖಂಡರನ್ನು, ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, “ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಭಟನಾಕಾರರನ್ನ ತಡೆಯುತ್ತಿರುವುದು, ಪ್ರತಿಭಟನೆಗೆ ಅಡ್ಡಿಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಪ್ರಜಾಪ್ರಭುತ್ವ ಉಳಿಸಲು ನಮ್ಮ ಹೋರಾಟ ಮುಂದುವರೆಯುತ್ತಿದೆ. ಚಳುವಳಿಯ ಒತ್ತಡಕ್ಕೆ ಪೆಟ್ರೋಲ್ ಬೆಲೆ ಇಳಿಸುವ ನಾಟಕವಾಡುತ್ತಿದೆ. ಸರ್ಕಾರ ಎಲ್ಲವನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನ ಮಾಡುತ್ತಿದೆ. ರಾಜ್ಯಾದ್ಯಂತ ಇಂದು ಪ್ರತಿಭಟನೆ ನಡೆಯುತ್ತಿದೆ. ಸಿಎಂ ಯಡಿಯೂರಪ್ಪನವರು ಈ ಧೋರಣೆಯನ್ನ ಮುಂದುವರಿಸುವುದು ಸರಿಯಲ್ಲ ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಟೌನ್ ಹಾಲ್ ಬಳಿ ಧರಣಿ ನಡೆಸಲು ಮುಂದಾದ ಹಲವು ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನೆಗೆ ಅನುಮತಿ ಇಲ್ಲ. ಹೀಗಾಗಿ ಪ್ರತಿಭಟನಾ ನಿರತರನ್ನು ಪೊಲೀಸರು ಅರೆಸ್ಟ್ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮೆಜೆಸ್ಟಿಕ್ ಸಮೀಪ ಪ್ರತಿಭಟನೆ ನಡೆಸಲು ಮುಂದಾದ ವಾಟಾಳ್ ನಾಗರಾಜ್ ಅವರನ್ನು ಧರಣಿಗೂ ಮೊದಲೇ ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ವಾಟಾಳ್ ಕೆಂಡಾಮಂಡಲರಾಗಿದ್ದಾರೆ.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ʼಇಂದು ದೇಶದಲ್ಲಿ ಗಂಭಿರವಾದ ಪರಿಸ್ಥಿತಿಯಲ್ಲಿದ್ದೇವೆ. ಕರ್ನಾಟಕ ರಾಜ್ಯ ಇಷ್ಟೊಂದು ಹದಗೆಟ್ಟಿದ್ದು ಕಂಡಿರಲಿಲ್ಲ. ಚಳುವಳಿ ಮಾಡೋದಕ್ಕೆ ಮುಂಚೆ ಚಳುವಳಿಗಾರರನ್ನು ಬಂಧಿಸುವುದು ಸರಿಯಲ್ಲ. ಇದು ನಾಚಿಕೆಗೆಟ್ಟ ಸರ್ಕಾರ. ನನ್ನ ಜೀವನದಲ್ಲಿ ಸುಮಾರು ಲಕ್ಷಾಂತರ ಚಳುವಳಿ ಮಾಡಿದ್ದೇನೆ. ಲೆಕ್ಕವಿಲ್ಲದಷ್ಟು ಬಂಧನವಾಗಿದ್ದೇನೆ. ಆದರೆ ಇದೀಗ ಚಳುವಳಿ ಮಾಡುವ ಮೊದಲೇ ಬಂಧಿಸುತ್ತಿದ್ದಾರೆ. ಯಡಿಯೂರಪ್ಪ ಆಡಳಿತದಲ್ಲಿ ಪೊಲೀಸ್ ರಾಜ್ಯವಾಗಿದೆ. ಶಾಸನ ಸಭೆ ವಿಫಲವಾಗಿದೆ. ಯಡಿಯೂರಪ್ಪ ಈ ರಾಜ್ಯದ ಸರ್ವಾಧಿಕಾರಿ. ಯಡಿಯೂರಪ್ಪಯಂತಹ ಹೀನಾಯ ಮುಖ್ಯಮಂತ್ರಿ ಎಂದು ನಾವು ನೋಡಿರಲಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ಹಾಳಾಗಿದೆ. ಶಾಸನ ಸಭೆ ತನ್ನ ಗೌರವ ಘನತೆ ಕಳೆದುಕೊಂಡಿತುʼ ಎಂದು ಕಿಡಿಕಾರಿದ್ದಾರೆ.
ಭಾರತ್ ಬಂದ್ಗೆ ಕಾಂಗ್ರೆಸ್ ಬೆಂಬಲ
ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ಇದೆ ಎಂದು ತಿಳಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರೊನಾ ವೇಳೆ ಬಿಜೆಪಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಆಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಈಗ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇರಬೇಕು. ಹೋರಾಟಗಾರರನ್ನು ಕುಗ್ಗಿಸುವಂತಹ ಕೆಲಸ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.