ಟಿಕಾಯತ್ ಮೇಲೆ ಪ್ರಕರಣ ದಾಖಲು: ಹೆಚ್‌ಡಿಕೆ, ಪಂಡಿತಾರಾಧ್ಯ ಸ್ವಾಮಿ ಖಂಡನೆ

ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು?” ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ
ಟಿಕಾಯತ್ ಮೇಲೆ ಪ್ರಕರಣ ದಾಖಲು: ಹೆಚ್‌ಡಿಕೆ, ಪಂಡಿತಾರಾಧ್ಯ ಸ್ವಾಮಿ ಖಂಡನೆ

ಶಿವಮೊಗ್ಗ ಮತ್ತು ಹಾವೇರಿಯಲ್ಲಿ ನಡೆದಂತಹ ರೈತ ಮಹಾಪಂಚಾಯತ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಕಾರಣಕ್ಕೆ ರಾಷ್ಟ್ರೀಯ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ವಿರುದ್ದ ಎಫ್‌ಐಆರ್‌ ದಾಖಲಾಗಿರುವುದನ್ನು ಹೆಚ್‌ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಈ ಎಫ್‌ಐಆರ್‌ಗಳನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

“ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಅವರ ಮೇಲಿದೆ. ರೈತರ ಧ್ವನಿ ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿವು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ನಿಜಕ್ಕೂ ಕೇಸು ದಾಖಲಿಸುವುದೇ ಆದರೆ ಬಿಜೆಪಿಯ ಎಷ್ಟು ನಾಯಕರ ಮೇಲೆ ಎಷ್ಟೆಷ್ಟು ಪ್ರಕರಣ ದಾಖಲಾಗಬೇಕಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ.

“ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ," ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ. ಇದರಲ್ಲಿ ತಪ್ಪು ಕಂಡವರದ್ದು ಗ್ರಹಿಕೆ ದೋಷವಷ್ಟೇ. ಹೋರಾಟ, ಹೋರಾಟಕ್ಕೆ ಕರೆ ನೀಡುವುದು ಸಂವಿಧಾನ ಬದ್ಧ. ಅವರು ಕೊಚ್ಚಿ ಎನ್ನಲಿಲ್ಲ, ಕೊಲ್ಲಿರಿ ಎನ್ನಲಿಲ್ಲ. ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು, ಎಂದು ಅವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಟಿಕಾಯತ್‌ ಪ್ರಕರಣ ವಾಪಸ್‌ ಪಡೆಯಬೇಕು: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಟಿಕಾಯತ್ ಅವರ ಮೇಲೆ ಕೇಸ್ ಹಾಕಿರುವುದು ವಿಷಾದನೀಯ. ಪ್ರಜಾಪ್ರಭುತ್ವ ಇನ್ನೂ ಈ ದೇಶದಲ್ಲಿ ಇದೆ ಎನ್ನುವುದನ್ನು ಮರೆಯಬಾರದು. ಈ ದೇಶದ ಜನರಿಗೆ ಅನ್ನ ಕೊಡುವವರು ರೈತರು. ಅಂತಹವರ ನೋವು ಅರಿತು ಪರಿಹಾರ ಒದಗಿಸಬೇಕಾದ್ದು ಸರ್ಕಾರದ ಜವಾಬ್ದಾರಿ. ಆದುದರಿಂದ ಏನೋ ತಪ್ಪು ಅಭಿಪ್ರಾಯದಿಂದ ಕೇಸ್ ದಾಖಲಾಗಿರಬಹುದು. ಅದನ್ನು ಕೂಡಲೆ ವಾಪಾಸ್ ಪಡೆಯುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಈ ಮೂಲಕ ಕರೆಕೊಡುತ್ತಿದ್ದೇವೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕೂಡಾ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com