ಸಿ.ಡಿ ಪ್ರಕರಣದ ಸಂತ್ರಸ್ತೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕೆಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಹೆಣ್ಣುಮಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿ ಮೊರೆಯಿಡುತ್ತಿರುವುದು ರಾಜ್ಯ ಪೊಲೀಸರ ವೈಫಲ್ಯ ಮತ್ತು ಪೂರ್ವಗ್ರಹಕ್ಕೆ ಹಿಡಿದ ಕನ್ನಡಿ. ಮುಖ್ಯಮಂತ್ರಿಗಳು ತಕ್ಷಣ ಗಮನಹರಿಸಿ ಆ ಹೆಣ್ಣುಮಗಳಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕಳಿಸಿದ್ದ ಸಿಡಿಯನ್ನು ಮಾಧ್ಯಮಕ್ಕೆ ಸೋರಿಬಿಡಲಾಗಿದೆ ಎಂದು ಸಂತ್ರಸ್ತ ಮಹಿಳೆ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ಇದರಿಂದಾಗಿ ಸರ್ಕಾರ ತನಿಖೆಗಾಗಿ ರಚಿಸಿರುವ ಎಸ್.ಐ.ಟಿ ಯ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಸಿಡಿ ಹಗರಣದ ಪೊಲೀಸ್ ತನಿಖೆ ಪ್ರಾರಂಭದ ದಿನದಿಂದಲೂ ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲ ದೂರು ದಾಖಲಾದ ತಕ್ಷಣ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸದಿರುವುದು ನಿರ್ಭಯಾ ಪ್ರಕರಣದ ಸುಪ್ರೀಂ ಕೋರ್ಟಿನ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.