ಕಾಂಗ್ರೆಸ್ ತಂತ್ರಗಾರಿಕೆಯ ಯಡವಟ್ಟಿಗೆ ಬಲಿಯಾಯ್ತೆ ಬಜೆಟ್ ಅಧಿವೇಶನ?

ಸದನದಲ್ಲಿ ಚರ್ಚೆ ಮಾಡಲೇಬೇಕಿದ್ದ ಈ ಸಂಗತಿಗಳನ್ನು ಹೊರಗೆ ಪ್ರಸ್ತಾಪಿಸಿ, ಹೊರಗೆ ಬೀದಿ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಸಿಡಿ ಪ್ರಕರಣವನ್ನು ಇಟ್ಟುಕೊಂಡು ಸದನದ ಒಳಗೆ ಸಮರ ಸಾರಿದ್ದು ಎಷ್ಟು ಸರಿ ಎಂಬುದು ಪ್ರಶ್ನೆ.
ಕಾಂಗ್ರೆಸ್ ತಂತ್ರಗಾರಿಕೆಯ ಯಡವಟ್ಟಿಗೆ ಬಲಿಯಾಯ್ತೆ ಬಜೆಟ್ ಅಧಿವೇಶನ?

ಕರೋನಾ ಸಂಕಷ್ಟ ಮತ್ತು ವಿವೇಚನಾಹೀನ ಲಾಕ್ ಡೌನ್ ಕ್ರಮಗಳಿಂದಾಗಿ ಹೈರಾಣಾಗಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ದಿಕ್ಕಿನಲ್ಲಿ ಈ ಬಾರಿಯ ರಾಜ್ಯ ಬಜೆಟ್ ಮಹತ್ವದ್ದು. ಅಂತಹ ಬಜೆಟ್ ಕುರಿತು ವ್ಯಾಪಕ ಚರ್ಚೆ ನಡೆಯಬೇಕಿದ್ದ ಬಜೆಟ್ ಅಧಿವೇಶನ ನಿಗದಿತ ಅವಧಿಗಿಂತ ಐದು ದಿನ ಮುಂಚಿತವಾಗಿಯೇ ಮೊಟಕುಗೊಂಡಿದೆ.

ಮಾರ್ಚ್ 31ರವರೆಗೆ ನಡೆಯಬೇಕಿದ್ದ ಅಧಿವೇಶನವನ್ನು ಬುಧವಾರಕ್ಕೇ ಮೊಟುಕುಗಳಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀಡಿರುವ ಕಾರಣ, ಸದನದಲ್ಲಿ ಸದಸ್ಯರು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ, ಗುಂಪಾಗಿ ಸದನದ ಬಾವಿಗಿಳಿದು ಕೋಲಾಹಲವೆಬ್ಬಿಸುವುದನ್ನು ಮುಂದುವರಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಅಧಿವೇಶನ ಮೊಟಕು ಮಾಡಲಾಗಿದೆ ಎಂಬುದು. ಬಜೆಟ್ ನಂತಹ ಪ್ರಮುಖ ವಿಷಯದ ಕುರಿತ ಚರ್ಚೆಯ ಬದಲಿಗೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಬಿಡದೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಿರಂತರ ಮನವಿ, ಸಂಧಾನ ಸಭೆಗಳ ಹೊರತಾಗಿಯೂ ಗದ್ದಲ, ಕೋಲಾಹಲ ಮುಂದುವರಿದ ಹಿನ್ನೆಲೆಯಲ್ಲಿ ಕೋವಿಡ್ ಹರಡುವ ಭೀತಿ ಇರುವುದರಿಂದ ಅಧಿವೇಶವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಾಗಿ ಸರಿಸುಮಾರು ಎರಡೂವರೆ ಲಕ್ಷ ಕೋಟಿ ರಾಜ್ಯ ಬಜೆಟ್ ಮೇಲೆ ಯಾವುದೇ ಚರ್ಚೆ ಇಲ್ಲದೆ, ಅನುಮೋದನೆ ನೀಡಲಾಗಿದೆ. ಹಣ ವಿನಿಯೋಗ ವಿಧೇಯಕ, ಪೂರಕ ಅಂದಾಜು ಬೇಡಿಕೆ ಪ್ರಸ್ತಾವನೆ, ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ಸೇರಿದಂತೆ ವಿಧಾನಮಂಡಲದ ಅನುಮೋದನೆ ಪಡೆಯಲೇಬೇಕಿದ್ದ ಅನಿವಾರ್ಯ ವಿಧೇಯಕಗಳಿಗೂ ಗದ್ದಲ ಮತ್ತು ಕೋಲಾಹಲದ ನಡುವೆ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಅನುಮೋದನೆ ಪಡೆಯಲಾಗಿದೆ. ಇನ್ನು ಬಜೆಟ್ ನಲ್ಲಿ ವಿವಿಧ ಇಲಾಖೆಗಳಿಗೆ ನೀಡಿರುವ ಅನುದಾನ ಮತ್ತು ಅವುಗಳ ವಾಸ್ತವಿಕ ಬೇಡಿಕೆ, ವಿವಿಧ ಯೋಜನೆಗಳ ಅನುದಾನ ಹಂಚಿಕೆ, ಯೋಜನೇತರ ವೆಚ್ಚಗಳು, ಜನ ಕಲ್ಯಾಣ ಯೋಜನೆಗಳಿಗೆ ಹಂಚಿಕೆ, ಶಿಕ್ಷಣ, ಆರೋಗ್ಯದಂತಹ ಮಾನವಾಭಿವೃದ್ಧಿ ವಲಯಗಳಿಗೆ ಸಂಕಷ್ಟದ ಹೊತ್ತಲ್ಲಿ ಆಗಲೇಬೇಕಿದ್ದ ಹಂಚಿಕೆಗಳ ಕುರಿತ ಯಾವ ಚರ್ಚೆಯೂ ನಡೆಯದೆ ಬಜೆಟ್ ಅಧಿವೇಶನಕ್ಕೆ ಇತಿಶ್ರೀ ಹಾಡಲಾಗಿದೆ.

ಮುಖ್ಯವಾಗಿ ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸಿಡಿ ಪ್ರಕರಣ ಮತ್ತು ಆ ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ನ್ಯಾಯಾಲಯದ ಮೊರೆ ಹೋಗಿ ತಮ್ಮ ವಿರುದ್ಧವೂ ಅಂತಹ ಸಿಡಿ ಬರಬಹುದು ಎಂಬ ಭೀತಿಯಲ್ಲಿ ತಡೆಯಾಜ್ಞೆ ತಂದಿರುವ ಆರು ಮಂದಿ ಸಚಿವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಉಭಯ ಸದನಗಳಲ್ಲಿ ನಡೆಸಿದ ಹೋರಾಟದಿಂದಾಗಿ ಬಜೆಟ್ ಅಧಿವೇಶನ ಗದ್ದಲ- ಕೋಲಾಹಲದಲ್ಲಿ ಕೊಚ್ಚಿಹೋಗಿದೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ತಮ್ಮ ಸ್ಥಾನಮಾನ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಬೇಕು, ಪ್ರಕರಣದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆಯಾಗಬೇಕು ಮತ್ತು ತಡೆಯಾಜ್ಞೆ ತಂದಿರುವ ಆರು ಮಂದಿ ಸಚಿವರು ರಾಜೀನಾಮೆ ನೀಡಬೇಕು ಎಂಬ ತನ್ನ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಿರಂತರ ಹೋರಾಟ ನಡೆಸಿದ ಪರಿಣಾಮ, ಬಜೆಟ್ ಅಧಿವೇಶನದಲ್ಲಿ ಯಾವುದೇ ಅರ್ಥಪೂರ್ಣ ಚರ್ಚೆ ನಡೆಯದೆ ಕಲಾಪ ವ್ಯರ್ಥವಾಗಿದೆ.

ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತಮ್ಮ ಅಧಿಕಾರ ಮತ್ತು ಸಂವಿಧಾನಿಕ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಕೆಲಸ ಕೇಳಿಕೊಂಡು ಬಂದ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಅವರಿಗೆ ಸಂಬಂಧಿಸಿದ್ದು ಎನ್ನಲಾದ, ಅವರ ರಾಜೀನಾಮೆಗೆ ಕಾರಣವಾದ ಸಿಡಿಯಂತಹದ್ದೇ ಸರಕು ತಮ್ಮದೂ ಹೊರಬರಬಹುದು ಎಂಬ ಆತಂಕದಲ್ಲಿ ಉಳಿದ ಆರು ಮಂದಿ ಸಚಿವರೂ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಇದೊಂದು ಅನೈತಿಕ ಸರ್ಕಾರ, ಆಡಳಿತರೂಢ ಬಿಜೆಪಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಆರು ಮಂದಿ ಸಚಿವರು ರಾಜೀನಾಮೆ ನೀಡಬೇಕು ಮತ್ತು ಆ ಬಗ್ಗೆ ಮುಖ್ಯ ನ್ಯಾಯಾಧೀಶರ ಕಣ್ಗಾವಲಿನಲ್ಲಿ ತನಿಖೆಯಾಗಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯಲ್ಲಿ ತಪ್ಪಿಲ್ಲ. ಆದರೆ, ಆ ಬೇಡಿಕೆಯನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷ ಮತ್ತು ಆಡಳಿತಪಕ್ಷಗಳು ಪ್ರದರ್ಶಿಸಿದ ಹಠಮಾರಿತನಕ್ಕೆ ರಾಜ್ಯದ ಜನರ ಹಿತ ಕಾಯಬೇಕಾದ, ಸಂಕಷ್ಟದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಬೇಕಾದ ಗುರುತರ ಹೊಣೆಗಾರಿಕೆಯ ಬಜೆಟ್ ಅಧಿವೇಶನವನ್ನೇ ಇಡಿಯಾಗಿ ಬಲಿಕೊಟ್ಟಿದ್ದು ಸರಿಯೇ? ಎಂಬುದು ಈಗಿರುವ ಪ್ರಶ್ನೆ.

ಸಂಸದೀಯ ಪಟು ಸಿದ್ದರಾಮಯ್ಯ ಅವರಂಥವರು ಪ್ರತಿಪಕ್ಷ ನಾಯಕರಾಗಿರುವಾಗ, ಸರ್ಕಾರವನ್ನು ಸಿಡಿ ಹಗರಣ, ಸಚಿವ ಡಾ ಸುಧಾಕರ್ ಅವರ ಕೀಳು ಅಭಿರುಚಿಯ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸುವುದಕ್ಕಿಂತ, ಬಜೆಟ್ ಮತ್ತು ಹೊರಲಾರದ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಆರ್ಥಿಕ ಅಧೋಗತಿಯನ್ನು ಮುಂದಿಟ್ಟುಕೊಂಡು ಸರ್ಕಾರದ ಬೆವರಿಳಿಸುವುದು ಸರಿಯಾದ ಮಾರ್ಗವಲ್ಲವೆ? ಆದರೂ, ಕಾಂಗ್ರೆಸ್ ನಾಯಕರು ಈ ಸಿಡಿ ವಿಷಯದಲ್ಲಿ ಇಷ್ಟು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಚುನಾವಣೆ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆ ಲೆಕ್ಕಾಚಾರಗಳು ಕೆಲಸ ಮಾಡಿವೆ ಎಂಬ ಮಾತೂ ಕೇಳಿಬರುತ್ತಿದೆ.

ಅದೇನೇ ಇರಲಿ; ಮುಂದಿನ ಒಂದು ವರ್ಷದ ರಾಜ್ಯದ ಹಣಕಾಸು ಆಯ-ವ್ಯಯದ, ಹಣಕಾಸು ಹಂಚಿಕೆಯ, ಖೋತಾ ಬಜೆಟ್ ಮತ್ತು ವಿಪರೀತ ಸಾಲದ ಹೊರೆಯ ಪರಿಣಾಮಗಳು ರಾ್ಜ್ಯದ ಜನತೆಯ ಬದುಕಿನ ಮೇಲೆ ಬೀರುವ ಪರಿಣಾಮಗಳನ್ನು ಚರ್ಚಿಸಿ, ಸರ್ಕಾರದ ಕಿವಿ ಹಿಂಡುವ ಅವಕಾಶವನ್ನು, ಕೇವಲ ಸಿಡಿ ಮತ್ತು ಸಚಿವರ ರಾಜೀನಾಮೆಯ ವಿಷಯಕ್ಕಾಗಿ ಕೈಚೆಲ್ಲಿದ ಪ್ರತಿಪಕ್ಷಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಕೋವಿಡ್ ಮತ್ತು ಲಾಕ್ ಡೌನ್ ಸಂಕಷ್ಟಗಳ ನಡುವೆಯೂ ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪಾಲು ಮತ್ತು ಇತರ ಅನುದಾನಗಳನ್ನು ನೀಡುವಲ್ಲಿ ತೀವ್ರ ಅನ್ಯಾಯ ಎಸಗುತ್ತಿರುವ ಬಿಜೆಪಿಯ ಕೇಂದ್ರ ಸರ್ಕಾರ ಕನ್ನಡಿಗರಿಗೆ ಎಸಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲು ಕೂಡ ಪ್ರತಿಪಕ್ಷಗಳು ಸದನದ ಕಲಾಪವನ್ನು ಬಳಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ.

ಬುಧವಾರ ಅಧಿವೇಶನವನ್ನು ಮೊಟಕುಗೊಳಿಸಿದ ಬಳಿಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಂಕಿಅಂಶಗಳ ಸಹಿತ ವಿವರ ನೀಡಿದ್ದಾರೆ. ಹೆಚ್ಚುತ್ತಿರುವ ಸಾಲ, ಕೇಂದ್ರದಿಂದ ಆಗುತ್ತಿರುವ ಅನ್ಯಾಯ, ಆರ್ಥಿಕ ಶಿಸ್ತಿನ ಕೊರತೆ, ಆದಾಯ ಕ್ರೋಡೀಕರಣ ಮತ್ತು ಸಾಲ ಕಡಿಮೆ ಮಾಡುವ ನಿಟ್ಟಿನಲ್ಲಿ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಅವರ ಮುಂದೆ ಯಾವುದೇ ನಿರ್ದಿಷ್ಟ ಯೋಜನೆಗಳೇ ಇಲ್ಲದ ಆತಂಕಕಾರಿ ಪರಿಸ್ಥಿತಿ, ಈ ಎಲ್ಲದರಿಂದಾಗಿ ಭವಿಷ್ಯದಲ್ಲಿ ರಾಜ್ಯ ಗಂಭೀರ ಸಂಕಷ್ಟಕ್ಕೆ ಸಿಲುಕುವ ಅಪಾಯದ ಬಗ್ಗೆ ಕರಾರುವಾಕ್ಕು ಮಾಹಿತಿಯೊಂದಿಗೆ ವಿವರಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯ ಬದಲಾಗಿ, ಇದೇ ಮಾಹಿತಿಯನ್ನು ಸದನದ ಒಳಗೆ ಮಂಡಿಸಿದ್ದರೆ, ಅದಕ್ಕೆ ಅಧಿಕೃತತೆ ಬರುತ್ತಿತ್ತು ಮತ್ತು ಅದೊಂದು ಸಭಾ ದಾಖಲೆಯಾಗಿರುತ್ತಿತ್ತು. ಹಾಗಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಒತ್ತಡಕ್ಕೆ ಸಿಲುಕುತ್ತಿತ್ತು.

ಆದರೆ, ಸದನದಲ್ಲಿ ಚರ್ಚೆ ಮಾಡಲೇಬೇಕಿದ್ದ ಈ ಸಂಗತಿಗಳನ್ನು ಹೊರಗೆ ಪ್ರಸ್ತಾಪಿಸಿ, ಹೊರಗೆ ಬೀದಿ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕಾದ ಸಿಡಿ ಪ್ರಕರಣವನ್ನು ಇಟ್ಟುಕೊಂಡು ಸದನದ ಒಳಗೆ ಸಮರ ಸಾರಿದ್ದು ಎಷ್ಟು ಸರಿ ಎಂಬುದು ಪ್ರಶ್ನೆ. ಹಾಗಾಗಿ ಪ್ರತಿಪಕ್ಷವಾಗಿ, ರಾಜ್ಯದ ಆಡಳಿತ ಪಕ್ಷ ಮತ್ತು ಸರ್ಕಾರದ ವಿರುದ್ಧದ ತನ್ನ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಎಡವಿತೆ? ಬೀದಿ ಹೋರಾಟದ ಮೂಲಕ ಎದುರಿಸಬೇಕಾದ ವಿಷಯವನ್ನು ಸದನದ ಒಳಗೂ, ಸದನದಲ್ಲಿ ಚರ್ಚೆಯ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ವಿಷಯವನ್ನು ಬೀದಿಯಲ್ಲೂ ಪ್ರಸ್ತಾಪಿಸಿ ಯಾಮಾರಿತೆ? ಎಂಬ ಅನುಮಾನ ಈಗ ಎದ್ದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com