ರಾಷ್ಟ್ರೀಯ ರೈತ ನಾಯಕ, ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಮಾರ್ಚ್ 20ರಂದು ಶಿವಮೊಗ್ಗದಲ್ಲಿ ನಡೆದ ರೈತ ಮಹಾ ಪಂಚಾಯತ್ ವೇಳೆ ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ. ಜನರಿಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿ, ಸಮಾವೇಶ ನಡೆದ ಸೈನ್ಸ್ ಮೈದಾನ ವ್ಯಾಪ್ತಿಯ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಮೊಟ್ಟಮೊದಲ ರೈತ ಮಹಾ ಪಂಚಾಯತ್ ಆಗಿ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಕಾಯತ್ ಅವರು, “ಕರ್ನಾಟಕದ ರೈತರು ಬೆಂಗಳೂರನ್ನು ದೆಹಲಿಯನ್ನಾಗಿಸಬೇಕು. ದೆಹಲಿಯಲ್ಲಿ ರೈತರು ಮುತ್ತಿಗೆ ಹಾಗಿ ದಿಗ್ಬಂಧನ ವಿಧಿಸಿದ ಮಾದರಿಯಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿಗೆ ನಾಲ್ಕೂ ದಿಕ್ಕಿನಿಂದ ಮುತ್ತಿಗೆ ಹಾಕಬೇಕು. ಟ್ರ್ಯಾಕ್ಟರುಗಳನ್ನೇ ಬಳಸಿ ಹೋರಾಟ ನಡೆಸಬೇಕು. ಎಪಿಎಂಸಿಗಳನ್ನು ರದ್ದು ಮಾಡುತ್ತಿರುವ ಸರ್ಕಾರ, ರೈತರು ಎಪಿಎಂಸಿಗಳ ಹೊರಗೆ ಎಲ್ಲಿ ಬೇಕಾದರೂ ತಮ್ಮ ಕೃಷಿ ಉತ್ಪನ್ನ ಮಾರಬಹುದು ಎಂದು ಹೇಳಿದೆ. ಹಾಗಾಗಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ವಿಧಾನಸೌಧದಲ್ಲೇ ಕೃಷಿ ಉತ್ಪನ್ನ ಮಾರಾಟ ಮಾಡಬೇಕು” ಎಂದಿದ್ದಾರೆ. ಈ ಮಾತುಗಳು ಪ್ರಚೋದನಕಾರಿ ಮತ್ತು ಜನರಿಗೆ ಹಿಂಸೆಗೆ ಕುಮ್ಮಕ್ಕು ನೀಡುತ್ತವೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯಲ್ಲಿ ಈ ಹಿಂದೆ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರದಂತಹದ್ದೇ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ರೀತಿಯಲ್ಲಿ ಟಿಕಾಯತ್ ಮಾತನಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಆ ಭಾಷಣದಿಂದ ಪ್ರಚೋದನೆಗೊಂಡು ಸಾರ್ವಜನಿಕರು ದೊಂಬಿ ಎಬ್ಬಿಸುವ ಸಾಧ್ಯತೆ ಇದೆ. ಹಾಗಾಗಿ ಉದ್ದೇಶಪೂರ್ವಕವಾಗಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಘಟನೆ ನಡೆದ ಎರಡು ದಿನಗಳ ಬಳಿಕ ಮಾರ್ಚ್ 22ರಂದು ಕೋಟೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕೋಟೆ ಠಾಣೆ ಸಬ್ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದು ಆ ದೂರಿನ ಆಧಾರದ ಮೇಲೆ 23ನೇ ತಾರೀಕು ರಾತ್ರಿ FIR ದಾಖಲಾಗಿದೆ.
ಆದರೆ, ಪೊಲೀಸರ ಈ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಮಹಾ ಪಂಚಾಯತ್ ಸಂಘಟಕರು, ರೈತ ಹೋರಾಟವನ್ನು ಹತ್ತಿಕ್ಕುವ ದಿಸೆಯಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿರುವ ದುರುದ್ದೇಶಪೂರ್ವಕ ಕೃತ್ಯ ಇದು. ವಾಸ್ತವವಾಗಿ ಅಂದಿನ ಸಭೆಯಲ್ಲಿ ಟಿಕಾಯತ್ ಅವರು ಅಸಂವಿಧಾನಿಕವಾದ, ಅಥವಾ ಯಾವುದೇ ಬಗೆಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಯಾವ ಮಾತನ್ನೂ ಆಡಿಲ್ಲ. ಬಿಜೆಪಿ ಸರ್ಕಾರ, ಪೊಲೀಸರನ್ನು ಬಳಸಿಕೊಂಡು ರೈತ ನಾಯಕರನ್ನು ಹತ್ತಿಕ್ಕುವ ಹೇಡಿತನ ಪ್ರದರ್ಶಿಸುತ್ತಿದೆ. ಕೂಡಲೇ, ದುರುದ್ದೇಶಪೂರಿತ ಸುಳ್ಳು ಪ್ರಕರಣವನ್ನು ವಾಪಸು ಪಡೆಯದೇ ಇದ್ದರೆ, ರೈತ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬುಧವಾರ ಬೆಳಗ್ಗೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘಟಕರಾದ ಕೆ ಪಿ ಶ್ರೀಪಾಲ್, ಕೆ ಎಲ್ ಅಶೋಕ್, ಎಚ್ ಆರ್ ಬಸವರಾಜಪ್ಪ ಮತ್ತಿತರರು, ಈ ದೂರಿನ ಹಿಂದೆ ಬಿಜೆಪಿ ಇದೆ ಮತ್ತು ಇದೊಂದು ಬಿಜೆಪಿಯ ಹೇಡಿತನದ ಕೃತ್ಯ ಎಂದು ಕಿಡಿಕಾರಿದ್ದಾರೆ. ಜೊತೆಗೆ ಕೂಡಲೇ ದೂರು ವಾಪಸು ಪಡೆಯುವಂತೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ಮಹಾ ಪಂಚಾಯತ್ ನಲ್ಲಿ ರಾಕೇಶ್ ಟಿಕಾಯತ್ ಅವರೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ಡಾ ದರ್ಶನ್ ಪಾಲ್ ಹಾಗೂ ಯುದ್ಧವೀರ್ ಸಿಂಗ್ ಕೂಡ ಭಾಗವಹಿಸಿದ್ದರು. ಜೊತೆಗೆ ರಾಜ್ಯದ ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಚುಕ್ಕಿ ನಂಜುಂಡಸ್ವಾಮಿ, ಕುರುಬೂರು ಶಾಂತಕುಮಾರ್ ಮತ್ತಿತರ ನಾಯಕರು ಕೂಡ ಭಾಗವಹಿಸಿ ಮಾತನಾಡಿದ್ದರು.
ಕಾಕತಾಳಿಯವೆಂದರೆ, ಶಿವಮೊಗ್ಗ ಮಹಾಪಂಚಾಯತ್ ಮಾರನೇ ದಿನ ಹಾವೇರಿಯಲ್ಲಿ ನಡೆದ, ಮಹಾಪಂಚಾಯತ್ನಲ್ಲಿ ಕೂಡಾ ಠಿಕಾಯತ್ ಅವರು, ಇದೇ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹಾವೇರಿಯಲ್ಲಿ ಕೂಡಾ ಮಂಗಳವಾರ ರಾತ್ರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.