ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಅಶ್ಲೀಲ ಸಿ.ಡಿ ಪ್ರಕರಣ ಕುರಿತಂತೆ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ನಾಯಕರ ವಿರುದ್ಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆಯೂ ತನಿಖೆಯಾಗಲಿ ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಬಿ.ಮುನಿಯಪ್ಪ, ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಸತ್ಯಹರಿಶ್ಚಂದ್ರರೇ? ಇವರೆಲ್ಲರೂ ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದರೆ, 224 ಶಾಸಕರ ಮೇಲೆ ತನಿಖೆ ನಡೆಯಲು ಒಪ್ಪಿಕೊಳ್ಳಲಿ. ಯಾರ್ ಯಾರ ಬಂಡವಾಳ ಏನೆಂಬುದು ರಾಜ್ಯದ ಜನರಿಗೆ ಗೊತ್ತಾಗುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶ್ರೀರಾಮಚಂದ್ರರೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಯಾರು ಯಾರು ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ. 224 ಶಾಸಕರು ತನಿಖೆ ಎದುರಿಸಲಿ, ಯಾರ್ಯಾರು ವಿವಾಹೇತರ ಮತ್ತು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿ. ಯಾರೆಲ್ಲ ಮರ್ಯಾದಾ ಪುರುಷರು ಎಂಬುದು ಗೊತ್ತಾಗಿಹೋಗಲಿ ಎಂದು ಅವರು ಹೇಳಿದ್ದಾರೆ.
ಸುಧಾಕರ್ ಸವಾಲಿಗೆ ಕುಮಾರಸ್ವಾಮಿ ಆಕ್ಷೇಪ
ಆರೋಗ್ಯ ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು, ಭೂಮಿ ಮೇಲೆ ಹುಟ್ಟಿರುವ ಹಾಗೂ ಜೀವ ಇರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆಗಳು ಇರುತ್ತವೆ. ಇವನ್ನು ಅವರು ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ನನ್ನ ಹೆಸರನ್ನು ಯಾಕೆ ಎಳೆದು ತರಬೇಕು? ಎಲ್ಲರ ಮನೆ ದೋಸೆನೂ ತೂತು, ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಸದನದ ಒಳಗೆ ನಾನು ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ಮತ್ತೆ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ? ಇಂತಹ ವಿಚಾರಗಳನ್ನು ಚರ್ಚೆ ಮಾಡಿ ಯಾಕೆ ನಗೆಪಾಟಲಾಗುತ್ತೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನೀವೇ ಸಮಸ್ಯೆ ತಂದು ಬೇರೆಯವರ ಮೇಲೆ ಕೆಸರು ಎರಚುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಕಡೆ ಗಮನ ಕೊಡಿ, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡಬೇಡಿ. ಸದನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಷಯವಿದೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಅದರ ಕುರಿತು ಚರ್ಚೆ ಮಾಡೋಣ, ನಾಲ್ಕು ಗೋಡೆಗಳ ನಡುವೆ ಇರಬೇಕಾದನ್ನ ರಸ್ತೆಗೆ ತರಬೇಡಿ ಎಂದು ಅವರು ಕಿಡಿಕಾರಿದ್ದಾರೆ.
'ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ' – ಡಿಕೆ ಶಿವಕುಮಾರ್
ಕೆ.ಸುಧಾಕರ್ ಸವಾಲಿಗೆ ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 'ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ' ಎಂದು ಹೇಳಿದ್ದಾರೆ
ಸುಧಾಕರ್ ಹೇಳಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಾಮೂಹಿಕ ವಿಚಾರ. ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನದ್ದು ತಿಳಿಸುತ್ತೇವೆ. ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಹೇಳಿ ನಿರ್ಗಮಿಸಿದ್ದಾರೆ.