ಸದನದಲ್ಲಿ CD ಸದ್ದು: ಜಾರಕಿಹೊಳಿ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಸಿದ್ದರಾಮಯ್ಯ ಪಟ್ಟು

ಎಸ್.ಐ.ಟಿಗೆ ರಾಜ್ಯ ಸರ್ಕಾರ ನೀಡಿರುವ ಕಾರ್ಯವ್ಯಾಪ್ತಿ ಸೀಮಿತವಾಗಿದ್ದು ಅದರಿಂದ ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಸಿಗಲಾರದು, ಎಂದು ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಗುಡುಗಿದ್ದಾರೆ.
ಸದನದಲ್ಲಿ CD ಸದ್ದು: ಜಾರಕಿಹೊಳಿ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಸಿದ್ದರಾಮಯ್ಯ ಪಟ್ಟು

ರಮೇಶ್‌ ಜಾರಕಿಹೊಳಿ ಅವರ CD ಕುರಿತಾಗಿ ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆದಿದೆ. ಈ ವೇಳೆ ಮಾತನಾಡಿರುವ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು, ರಮೇಶ್‌ ಜಾರಕಿಹೊಳಿ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

“ಸಚಿವ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ಮತ್ತು ಅದಕ್ಕೆ ಸಂಬಂಧಿಸಿದ ಉಳಿದೆಲ್ಲ ಬೆಳವಣಿಗೆಗಳ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು, ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಆಧರಿಸಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಅತ್ಯಾಚಾರಕ್ಕಾಗಿ ಭಾರತೀಯ ದಂಡಸಂಹಿತೆ 376ರ ಅಡಿ ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಮೇಶ್‌ ಜಾರಕಿಹೊಳಿ ಅವರ ಸಿ.ಡಿ. ಹೊರ ಬರುತ್ತಿದ್ದಂತೆಯೇ ಸಿ.ಡಿ. ಕುರಿತಾದ ಸುದ್ದಿಯಲ್ಲಿ ತಮ್ಮ ಹೆಸರು ಮತ್ತು ಭಾವಚಿತ್ರ ಬಳಸಿಕೊಳ್ಳದಂತೆ ತಡೆಯಾಜ್ಞೆ ತಂದಿದ್ದ ಆರು ಜನ ಸಚಿವರ ವಿರುದ್ದ ಟೀಕೆ ಮಾಡಿರುವ ಸಿದ್ದರಾಮಯ್ಯ ಅವರು, ಆ ಆರು ಜನ ಸಚಿವರು, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದರು ಎಂಬಂತೆ ನ್ಯಾಯಾಲಯಕ್ಕೆ ಹೋದರು. ಯಾವ ಕಾರಣಕ್ಕಾಗಿ ಅವರು ಹೋದರು? ಬಾಂಬೆಯಲ್ಲಿ ಏನು ನಡೆಯಿತು? ತಕ್ಷಣವೇ ಅವರ ರಾಜಿನಾಮೆ ಪಡೆಯಬೇಕು ಎಂದು ಹೇಳಿದ್ದಾರೆ.

“ಮಾರ್ಚ್ 13 ರಂದು ದೌರ್ಜನ್ಯಕ್ಕೊಳಗಾದ ಹುಡುಗಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತನ್ನ ಜೀವಕ್ಕೆ ಅಪಾಯವಿದೆ, ರಕ್ಷಣೆ ನೀಡಿ ಮತ್ತು ರಮೇಶ್ ಜಾರಕಿಹೊಳಿ ಅವರು ಕೆಲಸ ಕೊಡಿಸುತ್ತೇನೆ ಎಂದು ಹೇಳಿ ನನ್ನನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾಳೆ. ಹಾಗಾಗಿ ಇದು ಅತ್ಯಾಚಾರವಾಗುತ್ತದೆ. ಈ ಬಗ್ಗೆ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ? ಪೊಲೀಸ್ ಇಲಾಖೆಯ ಕರ್ತವ್ಯ ಲೋಪ ಇಲ್ಲಿ ಎದ್ದು ಕಾಣುತ್ತಿದೆ. ರಮೇಶ್ ಜಾರಕಿಹೊಳಿಯವರಿಗೆ ಒಂದು ನ್ಯಾಯ, ಆ ಮಹಿಳೆಗೊಂದು ನ್ಯಾಯವೇ? ಎಸ್.ಐ.ಟಿಗೆ ರಾಜ್ಯ ಸರ್ಕಾರ ನೀಡಿರುವ ಕಾರ್ಯವ್ಯಾಪ್ತಿ ಸೀಮಿತವಾಗಿದ್ದು ಅದರಿಂದ ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಸಿಗಲಾರದು,” ಎಂದು ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಗುಡುಗಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com