ಕಳೆದ ಕೆಲವು ತಿಂಗಳಿನಿಂದ ಸರ್ಕಾರದ ಅನುದಾನದ ಕೊರತೆಯಿಂದಾಗಿ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಆರಂಭಿಸಲಾಗಿದ್ದ ಇಂದಿರಾ ಕ್ಯಾಂಟೀನ್ ಈ ತಿಂಗಳು ಮುಚ್ಚುತ್ತಿವೆ. ರಾತ್ರೋರಾತ್ರಿ ಮಠ ಮಂದಿರಗಳಿಗೆ ಪ್ರಸಾದ ಹಂಚುವ ರೀತಿಯಲ್ಲಿ ಎಂಬತ್ತು ಕೋಟಿ ಹಣ ಹಂಚುವ ನಾಡಿನ ಮುಖ್ಯಮಂತ್ರಿಗೆ ಬಡವರ ಪಾಲಿಗೆವಿಶೇಷವಾಗಿ ಹಳ್ಳಿಗಳಿಂದ ನಗರದ ಸರ್ಕಾರಿ ಕಚೇರಿಗಳು, ಆಸ್ಪತ್ರೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮತ್ತು ನಗರಗಳ ಪೌರ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ ಕುರಿತು ಕಾಳಜಿ ಇಲ್ಲವಾಗಿದೆ.
ಹಿಂದಿನ ಸರ್ಕಾರದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿತು ಎಂಬ ಕಾರಣಕ್ಕೆ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದ ಬಿ.ಜೆ.ಪಿ. ಸರ್ಕಾರ ಕಡಿಮೆ ಹಣದಿಂದ ಬಡವರ ಹೊಟ್ಟೆ ತುಂಬಿಸುವ ಮಾನವೀಯ ಮುಖವುಳ್ಳ ಈ ಯೋಜನೆಯ ಕತ್ತು ಹಿಸುಕಲು ಮುಂದಾಗಿರುವುದು ಖಂಡನೀಯ.
ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿಂದವರು ಅಥವಾ ಕಾಫಿ ಕುಡಿದವರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂಬ ಭಯ ಇರುವ ಯಡಿಯೂರಪ್ಪ ಮತ್ತು ಬಿ.ಜೆ.ಪಿ. ಪ್ರತಿನಿಧಿಗಳು ಮೋದಿ ಕ್ಯಾಂಟೀನ್ ಅಥವಾ ಲಿಂಗಾಯತರ ಖಾನಾವಳಿ ಎಂದು ಹೆಸರು ಬದಲಾಯಿಸಲಿ ಚಿಂತೆಯಿಲ್ಲ. ಬದುಕು ದುಬಾರಿಯಾಗಿರುವ ಈ ದಿನಗಳಲ್ಲಿ ಬಡವರು ಹಸಿವು ಮತ್ತು ನೋವಿನಿಂದ ನರಳಬಾರದು. ಈ ಕಾಳಜಿ ಅರ್ಧ ಶತಮಾನದ ರಾಜಕಾರಣ ಮಾಡಿರುವ ಯಡಿಯೂರಪ್ಪನವರಿಗೆ ಅರ್ಥವಾಗುವುದಿಲ್ಲ ಎನ್ನುವುದಾದರೆ, ಇಂದಿನ ಜನಪ್ರತಿನಿಧಿಗಳು ಸಾರ್ವಜನಿಕ ಕಾಳಜಿ ಮತ್ತು ಲಜ್ಜೆ ಎರಡನ್ನೂ ಕಳೆದುಕೊಂಡಿದ್ದಾರೆ ಎಂದರ್ಥ.
ಕಳೆದ ಹತ್ತು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಜಯಲಲಿತಾ ಆರಂಭಿಸಿದ ಅಮ್ಮಾ ಕ್ಯಾಂಟೀನ್ ಪರಿಕಲ್ಪನೆ ಯನ್ನು ಇಂದು ದೇಶಾದ್ಯಂತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಜಾರಿಗೆ ತಂದಿವೆ. ಸರ್ಕಾರಗಳು ಬದಲಾದರೂ ಪಕ್ಷಬೇಧ ಮರೆತು ಯೋಜನೆ ಮುಂದುವರಿಸಿವೆ.
ತಮಿಳುನಾಡಿನ ಯಾವುದೇ ನಗರ ಅಥವಾ ಜಿಲ್ಲಾ ಕೇಂದ್ರ ಗಳ ಬಸ್ ನಿಲ್ದಾಣಗಳಲ್ಲಿ ಹತ್ತು ರೂಪಾಯಿ ಗೆ ಒಂದು ಲೀಟರ್ ಅಮ್ಮಾ ನೀರಿನ ಬಾಟಲ್ ದೊರೆಯುತ್ತದೆ. ಜೊತೆಗೆ ಕ್ಯಾಂಟೀನ್ ಸೌಲಭ್ಯ ಇದೆ.
ರಾಜ್ಯದ ಇಂದಿರಾ ಕ್ಯಾಂಟೀನ್ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಧ್ಯಮ ಗಳಿಂದ ಮತ್ತು ಪ್ರಜ್ಞಾವಂತರಿಂದ ಆಗಬೇಕಿದೆ.
(ಜಗದೀಶ್ ಕೊಪ್ಪ ಅವರ ಫೇಸ್ಬುಕ್ ಪುಟದಿಂದ)