ತುಮಕೂರಿನಲ್ಲಿ ದಲಿತ ಎಳೆ ಮಗು ಶವ ಹೊರತೆಗೆದು ಶವ ಸಂಸ್ಕಾರಕ್ಕೆ ತಡೆ!

ಗುಂಡಿಯಲ್ಲಿ ಎಳೆ ಮಗು ಮಲಗಿಸಿ ಶವಸಂಸ್ಕಾರ ವಿಧಿಗಳನ್ನು ಪೂರೈಸುವ ಹೊತ್ತಿಗೆ ಆ ಜಾಗಕ್ಕೆ ಇತ್ತೀಚೆಗೆ ಬೇಲಿ ಹಾಕಿರುವ ಶಾಹಿ ಗಾರ್ಮೆಂಟ್ಸ್ ಕಂಪನಿಗೆ ಸೇರಿದ ವ್ಯಕ್ತಿಯೊಬ್ಬರು ಬಂದು ಗುಂಡಿಯಲ್ಲಿ ಹಾಕಿದ್ದ ಮಗುವನ್ನು ಮೇಲೆತ್ತಿಸಿ, ಬೆದರಿಸಿ ಶವ ಸಂಸ್ಕಾರಕ್ಕೆ ಅವಕಾಶ ನೀಡದೇ ವಾಪಸು ಕಳಿಸಿದ ಘಟನೆಯ ಸಂಪೂರ್ಣ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ತುಮಕೂರಿನಲ್ಲಿ ದಲಿತ ಎಳೆ ಮಗು ಶವ ಹೊರತೆಗೆದು ಶವ ಸಂಸ್ಕಾರಕ್ಕೆ ತಡೆ!

ಸಾವಿನ ಹಿನ್ನೆಲೆಯಲ್ಲಿ ಹೂತು ಹಾಕಿದ್ದ ದಲಿತ ಕುಟುಂಬದ ಎಳೆಮಗುವನ್ನು ಸ್ಮಶಾನದ ಜಮೀನಿಗೆ ಬೇಲಿ ಹಾಕಿರುವವರು ಶವದ ಗುಂಡಿಯಿಂದ ವಾಪಸು ತೆಗೆಸಿದ ಅಮಾನುಷ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಂಪೇನಹಳ್ಳಿಯ ದಲಿತ ಕುಟುಂಬವೊಂದರ ಮಗು ಭಾನುವಾರ ಸಂಜೆ ಸಾವು ಕಂಡಿತ್ತು.ಆ ಹಿನ್ನೆಲೆಯಲ್ಲಿ ಸಂಜೆ ಮಗುವನ್ನು ಊರಿನ ಸ್ಮಶಾನ ಜಾಗ ಎನ್ನಲಾದ ಸ್ಥಳದಲ್ಲಿ ಕುಟುಂಬ ವರ್ಗದವರು ಹೋಗಿ ಮಣ್ಣು ಮಾಡಿದ್ದರು. ಗುಂಡಿಯಲ್ಲಿ ಎಳೆ ಮಗು ಮಲಗಿಸಿ ಶವಸಂಸ್ಕಾರ ವಿಧಿಗಳನ್ನು ಪೂರೈಸುವ ಹೊತ್ತಿಗೆ ಆ ಜಾಗಕ್ಕೆ ಇತ್ತೀಚೆಗೆ ಬೇಲಿ ಹಾಕಿರುವ ಶಾಹಿ ಗಾರ್ಮೆಂಟ್ಸ್ ಕಂಪನಿಗೆ ಸೇರಿದ ವ್ಯಕ್ತಿಯೊಬ್ಬರು ಬಂದು ಗುಂಡಿಯಲ್ಲಿ ಹಾಕಿದ್ದ ಮಗುವನ್ನು ಮೇಲೆತ್ತಿಸಿ, ಬೆದರಿಸಿ ಶವ ಸಂಸ್ಕಾರಕ್ಕೆ ಅವಕಾಶ ನೀಡದೇ ವಾಪಸು ಕಳಿಸಿದ ಘಟನೆಯ ಸಂಪೂರ್ಣ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಹಿನ್ನೆಲೆಯಲ್ಲಿ ಪ್ರತಿಧ್ವನಿ ಕೊರಟಗೆರೆ ಪೊಲೀಸ್ ಸಿಪಿಐ ಅವರನ್ನು ಮಾತನಾಡಿಸಿದಾಗ, ಅವರು, “ಇಂತಹ ಘಟನೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಈವರೆಗೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ. ಆದರೂ, ಆ ಜಾಗದ ವಿಷಯದಲ್ಲಿ ಈಗ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಅದು ಸ್ಮಶಾನ ಜಾಗವೇ ಅಥವಾ ಖಾಸಗೀ ಜಮೀನೇ ಎಂಬುದನ್ನು ಪರಿಶೀಲಿಸಲು ಸ್ಥಳಕ್ಕೆ ತಹಶೀಲ್ದಾರರು, ತಾಲೂಕು ಪಂಚಾಯ್ತಿ ಇಒ ಭೇಟಿ ನೀಡಿದ್ದಾರೆ. ಆ ಜಾಗ ಊರಿನ ಸಾಂಪ್ರದಾಯಿಕ ಸ್ಮಶಾನ ಜಾಗ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ, ಅದು ತಮಗೆ ಸೇರಿದ ಜಾಗ ಎಂದು ಶಾಹಿ ಗಾರ್ಮೆಂರ್ಟ್ಸ್ ಕಂಪನಿಯವರು ಹೇಳುತ್ತಿದ್ಧಾರೆ ಎಂಬ ಮಾಹಿತಿ ಇದೆ. ಆ ಹಿನ್ನೆಲೆಯಲ್ಲಿ ಭೂಮಿಯ ವಿಷಯದಲ್ಲಿ ರೆವಿನ್ಯೂ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.

ಆದರೆ, ವೈರಲ್ ಆಗಿರುವ ವೀಡಿಯೋದಲ್ಲಿ ಮಗು ಹೂಳುತ್ತಿರುವಾಗ ಅದನ್ನು ತಡೆಯಲು ಬರುವ ವ್ಯಕ್ತಿ ಮತ್ತು ಮಗುವಿನ ಕಡೆಯವರ ನಡುವೆ ನಡೆಯುವ ವಾಗ್ವಾದದಲ್ಲಿ ಕೆಲವು ವಿವರಗಳು ಪ್ರಸ್ತಾಪವಾಗಿವೆ. ಆ ಮಾತುಕತೆಯ ಪ್ರಕಾರ, ಆ ಜಾಗ ಹಳ್ಳದ ಜಾಗ. ಅಲ್ಲಿ ಈ ಮುಂಚಿನಿಂದಲೂ ಶವ ಸಂಸ್ಕಾರ ಮಾಡುತ್ತಾ ಬರಲಾಗಿದೆ. ಈ ಮಗುವಿನ ಶವ ಹೂಳಲು ತೆಗೆದ ಗುಂಡಿನ ಅಕ್ಕಪಕ್ಕದಲ್ಲಿ ಕೂಡ ಸಮಾಧಿಗಳಿವೆ. ಹಾಗಿರುವಾಗ, ಈಗ ಮಗುವಿನ ಶವ ಹೂಳಲು ಅಡ್ಡಿಪಡಿಸುತ್ತಿರುವುದರ ಹಿಂದೆ ಆ ಮಗು ದಲಿತ ಕುಟುಂಬದ ಮಗು ಎಂಬುದೇ ಕಾರಣ. ದಲಿತರಿಗೆ ಸಾವು ಕಂಡ ಎಳೆ ಮಗುವೊಂದನ್ನು ಗೌರವಯುತವಾಗಿ ಹೂಳಲು ಕೂಡ ಅಂಗೈ ಅಗಲದ ಜಾಗ ಈ ದೇಶದಲ್ಲಿ ಇಲ್ಲವೇ? ಎಂಬುದು ಆ ಕುಟುಂಬದವರ ಪ್ರಶ್ನೆ.

ಆದರೆ, ಆ ಮಾತಿಗೆ ಆಕ್ಷೇಪವೆತ್ತುವ ಆ ಜಮೀನಿನ ವಾರಸುದಾರರ ಪರ ಬಂದ ವ್ಯಕ್ತಿ, ಇದು ತಮ್ಮ ಜಾಗ. ಬೇಲಿ ಹಾಕಿಸಿರುವುದು ಕಾಣಿಸುವುದಿಲ್ಲವೇ. ನೀವು ಇಲ್ಲಿ ಮಗು ಹೂಳಲು ಅವಕಾಶ ನೀಡುವುದಿಲ್ಲ ಎನ್ನುತ್ತಾರೆ. ಜೊತೆಗೆ ಹೂತು ಹಾಕಿದ್ದ ಮಗುವನ್ನು ಗುಂಡಿಯಿಂದ ಬಲವಂತವಾಗಿ ಎತ್ತಿಸಿ, ಅಲ್ಲಿಂದ ಆ ಕುಟುಂಬದವರನ್ನು ಮಗು ಸಹಿತ ವಾಪಸು ಕಳಿಸುವ ಆ ವ್ಯಕ್ತಿ, ನೀವೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಬಡ ಕುಟುಂಬಕ್ಕೆ ಬೆದರಿಕೆಯನ್ನೂ ಹಾಕಿರುವುದು ವೀಡಿಯೋದಲ್ಲಿದೆ.

ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಹೃದಯವಿದ್ರಾವಕ ಘಟನೆಯ ವೀಡಿಯೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿ, ಕೊರಟಗೆರೆ ಪೊಲೀಸರು ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದಿರುವ ದಲಿತ ಹೋರಾಟಗಾರ ಹಾಗೂ ಲೇಖಕ ಡಾ ವಡ್ಡಗೆರೆ ನಾಗರಾಜಯ್ಯ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿ, ಇದೊಂದು ಅತ್ಯಂತ ಅಮಾನವೀಯ ಘಟನೆ. ನಾಗರಿಕರಾಗಿ ನಾವೆಲ್ಲಾ ತಲೆತಗ್ಗಿಸುವಂತಹ ಪ್ರಕರಣ. ದಲಿತ ಎಳೆಮಗುವೊಂದು ಸಾವು ಕಂಡರೆ, ಭೂ ರಹಿತ, ಕೂಲಿಕಾರ್ಮಿಕ ದಲಿತ ಕುಟುಂಬದವರಿಗೆ ಊರಿನ ಸ್ಮಶಾನ ಜಾಗದಲ್ಲಿ ಮಗು ಶವ ಸಂಸ್ಕಾರಕ್ಕೂ ಜಾಗ ನೀಡುವುದಿಲ್ಲ ಎಂದರೆ ನಾವು ನಾಗರಿಕ ಸಮಾಜವೇ ಎಂಬುದನ್ನು ಎದೆ ಮುಟ್ಟಿ ನೋಡಿಕೊಳ್ಳಬೇಕು. ಈ ಕೂಡಲೇ ಆ ಪ್ರಕರಣದ ಕುರಿತು ತನಿಖೆಯಾಗಬೇಕು. ಆ ಜಾಗದಲ್ಲಿ ಮಗು ಶವ ಸಂಸ್ಕಾರಕ್ಕೆ ಅವಕಾಶ ನೀಡದೆ, ಹೂತಿದ್ದ ಮಗುವನ್ನು ಮೇಲೆತ್ತಿಸಿ ಹೊರಹಾಕಿದ ವ್ಯಕ್ತಿಗಳ ವಿರುದ್ಧ ಪ್ರಕರಣದ ದಾಖಲಾಗಬೇಕು. ಜೊತೆಗೆ ಭೂರಹಿತ ದಲಿತ ಕುಟುಂಬಗಳಿಗೆ ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕು, ಇಲ್ಲವೇ ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಇನ್ನು ಮುಂದೆ ಗ್ರಾಮೀಣ ಭಾಗದಲ್ಲಿ ಇಂತಹ ಅಮಾನುಷ ಘಟನೆಗಳಿಗೆ ನಿತ್ಯ ಮೂಕಸಾಕ್ಷಿಯಾಗಬೇಕಾಗುತ್ತದೆ” ಎಂದು ಆಗ್ರಹಿಸಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ದಲಿತರ ಮೇಲಿನ ನಿರಂತರ ದೌರ್ಜನ್ಯಗಳು, ಸವರ್ಣೀಯರ ಅಟ್ಟಹಾಸಗಳು ಮತ್ತೆ ಮತ್ತೆ ವರದಿಯಾಗುತ್ತಿರುವ ನಡುವೆಯೇ, ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆಯಲ್ಲಿ ನಡೆದಿರುವ ಈ ಘಟನೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಸಿಗಿವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com