ನಮ್ಮ ಹೋರಾಟ ಭ್ರಷ್ಟ ವ್ಯವಸ್ಥೆಯ ವಿರುದ್ಧ: ಯುದ್ಧವೀರ್ ಸಿಂಗ್

ನಮ್ಮ ಹೋರಾಟ ಭ್ರಷ್ಟ ವ್ಯವಸ್ಥೆಯ ವಿರುದ್ಧ: ಯುದ್ಧವೀರ್ ಸಿಂಗ್

ದೇಶವ್ಯಾಪಿ ಹೊಸ ಜನಾಂದೋನಲವಾಗಿ ರೈತರು ಮತ್ತು ಜನಸಾಮಾನ್ಯರ ಪಾಲಿನ ಹೊಸ ಭರವಸೆಯಾಗಿ ಹೊರಹೊಮ್ಮಿರುವ ರೈತ ಹೋರಾಟದ ರೂವಾರಿಗಳಲ್ಲಿ ಒಬ್ಬರಾದ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರೊಂದಿಗೆ ಪ್ರತಿಧ್ವನಿ ನಡೆಸಿದ ವಿಶೇಷ ಸಂದರ್ಶನ.

“ದೆಹಲಿ ಮುತ್ತಿಗೆಯ ಬಳಿಕ ಕಳೆದ ಜನವರಿ ಕೊನೆಯ ವಾರದಲ್ಲಿ ಆರಂಭವಾದ ರೈತ ಮಹಾ ಪಂಚಾಯತ್ ಎಂಬ ರೈತ ಸಮಾವೇಶಗಳು, ಇದೀಗ ದೇಶವ್ಯಾಪಿ ಜನಾಂದೋಲನವಾಗಿ ಬದಲಾಗಿದೆ. ಜನಾಂದೋಲನವೊಂದು ತಾನೇತಾನಾಗಿ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡಲಿದೆ. ಆ ಬದಲಾವಣೆ ತತಕ್ಷಣಕ್ಕೇ ಆಗದೇ ಹೋದರು, ಎಂದಿದ್ದರೂ ಅದು ಆಗಿಯೇ ಆಗುತ್ತದೆ. ಹಾಗಾಗಿ, ರೈತ ಹೋರಾಟಗಾರರಾಗಿ ನಮಗೆ ಅವಸರವೇನಿಲ್ಲ. ನಾವು ಭೂಮಿಯನ್ನು ಉತ್ತಿ-ಭಿತ್ತಿ, ಮೊಳಕೆಯಿಂದ ಫಸಲಿನವರೆಗೆ ಜತನ ಮಾಡಿ, ಒಕ್ಕಲು ಮಾಡುವ ಸಹನೆ ಮತ್ತು ಸೈರಣೆ ಉಳ್ಳವರು. ಹಾಗಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ನಮಗೆ ಕಾಲಮಿತಿಯ ಪರಿವೆ ಇಲ್ಲ”

ರೈತರು, ಕೂಲಿ ಕಾರ್ಮಿಕರು, ನೌಕರರು ಸೇರಿದಂತೆ ದೇಶದ ಜನಸಾಮಾನ್ಯರ ಹಿತ ಬಲಿಕೊಟ್ಟು, ಕೇವಲ ಬೆರಳೆಣಿಕೆಯ ಕಾರ್ಪೊರೇಟ್ ಧಣಿಗಳಿಗೆ ದೇಶದ ಕೃಷಿ, ಶಿಕ್ಷಣ, ಸಾರಿಗೆ, ಉದ್ಯಮ ಸೇರಿದಂತೆ ಇಡೀ ವ್ಯವಸ್ಥೆಯನ್ನು ಧಾರೆ ಎರೆಯಲು ಹೊರಟಿರುವ ಆಡಳಿತದ, ಯಾವ ಎಗ್ಗಿಲ್ಲದ ಹುನ್ನಾರಕ್ಕೆ ಸದ್ಯ ದೊಡ್ಡ ತಡೆಯೊಡ್ಡಿರುವ ಐತಿಹಾಸಿಕ ರೈತ ಹೋರಾಟದ ನಾಯಕರಲ್ಲಿ ಒಬ್ಬರಾದ ಯುದ್ಧವೀರ್ ಸಿಂಗ್ ಅವರ ಮಾತುಗಳಿವು.

ಶನಿವಾರ ಶಿವಮೊಗ್ಗದ ನಡೆದ ದಕ್ಷಿಣ ಭಾರತದ ಮೊಟ್ಟಮೊದಲ ರೈತ ಮಹಾ ಪಂಚಾಯತ್ ನಲ್ಲಿ ಭಾಗಿಯಾಗಲು ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈವರೆಗೆ ಉತ್ತರಭಾರತಕ್ಕೆ ಸೀಮಿತವಾಗಿದ್ದ ರೈತ ಮಹಾ ಪಂಚಾಯತ್, ಮಲೆನಾಡಿನ ಚಳವಳಿಗಳ ನೆಲ ಶಿವಮೊಗ್ಗದ ಮೂಲಕ ದಕ್ಷಿಣ ಭಾರತದ ತನ್ನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಶಿವಮೊಗ್ಗದಲ್ಲಿ ರೈತ ಪಂಚಾಯತ್ ಗೆ ವ್ಯಕ್ತವಾದ ಭಾರೀ ಜನಬೆಂಬಲದಿಂದ ಉತ್ತೇಜಿತರಾಗಿದ್ದ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ಯುದ್ಧವೀರ್ ಸಿಂಗ್, ರಾಕೇಶ್ ಟಿಕಾಯತ್ ಮತ್ತು ಡಾ ದರ್ಶನ್ ಪಾಲ್ ಅವರ ಮುಖದಲ್ಲಿ ಹೊಸ ಭರವಸೆ ಮತ್ತು ವಿಶ್ವಾಸ ಕಾಣುತ್ತಿತ್ತು.

ಶಿವಮೊಗ್ಗ ಮಹಾ ಪಂಚಾಯತ್ ಮಾರನೇ ದಿನ ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು, ತಮ್ಮ ಹೋರಾಟ ದೇಶದ ರಾಜಕೀಯ, ಕಾರ್ಪೊರೇಟ್, ಆಡಳಿತ ವ್ಯವಸ್ಥೆಯ ವಿರುದ್ಧವೇ ವಿನಃ ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಆ ಮಾತುಕತೆಯ ಸಂಕ್ಷಿಪ್ತ ವಿವರ ಇಂತಿದೆ;

ಪ್ರತಿಧ್ವನಿ: ರೈತ ಹೋರಾಟದ ಮುಂದಿನ ದಿಕ್ಕುದೆಸೆ ಏನು?

ಯುದ್ಧವೀರ್ ಸಿಂಗ್: ರೈತ ಹೋರಾಟ ಎಂಬುದು ಈಗ ರೈತರಿಗೆ ಸೀಮಿತವಾಗಿ ಉಳಿದಿಲ್ಲ. ಅದು ಈ ದೇಶದ ಕಾರ್ಪೊರೇಟ್ ಪರ ವ್ಯವಸ್ಥೆಯಿಂದ ನೊಂದಿರುವ, ಆತಂಕಿತರಾಗಿರುವ ಎಲ್ಲಾ ಜನಸಾಮಾನ್ಯರ ಜನಾಂದೋಲವಾಗಿ ಬದಲಾಗಿದೆ. ನಮ್ಮ ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧವಲ್ಲ. ರೈತರು, ಕೂಲಿಕಾರ್ಮಿಕರು, ಬಡವರು ಸೇರಿದಂತೆ ಎಲ್ಲಾ ಜನಸಾಮಾನ್ಯರ ಬದುಕನ್ನು ನಾಶ ಮಾಡುತ್ತಿರುವ ಮತ್ತು ಅದೇ ಹೊತ್ತಿಗೆ ಕೆಲವೇ ಮಂದಿ ಕಾರ್ಪೊರೇಟ್ ಕುಳಗಳಿಗೆ ದೇಶದ ಸಮಗ್ರ ಸಂಪತ್ತಿನ ಲೂಟಿಗೆ ಮಣೆ ಹಾಕುತ್ತಿರುವ ಇಡೀ ಭ್ರಷ್ಟ ವ್ಯವಸ್ಥೆಯ ವಿರುದ್ಧದ ಹೋರಾಟವಿದು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾರ್ಪೊರೇಟ್ ಕುಳಗಳಿಗೆ ಸಂಪತ್ತು ಧಾರೆ ಎರೆದುಕೊಡಲಾಗುತ್ತಿದೆ ಎಂದಿರಿ.. ಅದನ್ನು ಸ್ವಲ್ಪ ವಿವರಿಸುವಿರಾ.?

ದೇಶದ ನೈಸರ್ಗಿಕ ಸಂಪತ್ತು, ಕೃಷಿ, ಉದ್ಯಮ, ಹಣಕಾಸು ವ್ಯವಸ್ಥೆ, ಸಾರಿಗೆ ಸೇರಿದಂತೆ ಪ್ರತಿ ವಲಯದಲ್ಲಿಯೂ ಜನ ಸಾಮಾನ್ಯರ, ಆ ವಲಯಗಳ ಶ್ರಮಿಕರ ಹಿತವನ್ನು ಬಲಿಕೊಟ್ಟು, ಎಲ್ಲವನ್ನೂ ಕಾರ್ಪೊರೇಟ್ ಕುಳಗಳಿಗೆ ಯಾವ ಎಗ್ಗಿಲ್ಲದೆ ಧಾರೆ ಎರೆದುಕೊಡಲಾಗುತ್ತಿದೆ. ಬಡ ರೈತರು ತಮ್ಮ ಫಸಲು ಉಳಿಸಿಕೊಳ್ಳಲು ಚಿಲ್ಲರೆ ಸಾಲ ಕೇಳಿದರೆ, ಬೆಳೆ ನಷ್ಟ, ಬೆಲೆ ನಷ್ಟದಿಂದ ಹಾಕಿದ ಬಂಡವಾಳ ಬರದೇ ಇದ್ದಾಗ ಸಾಲ ಮನ್ನಾ ಮಾಡಿ ಎಂದು ಕೇಳಿದರೆ, ಹಾಗೆ ಮಾಡಿದರೆ ಇಡೀ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಸರ್ವನಾಶವಾಗಿ ಹೋಗುತ್ತದೆ ಎನ್ನುತ್ತಾರೆ. ಆದರೆ, ದೇಶದ ಹತ್ತು ಮಂದಿ ಕಾರ್ಪೊರೇಟ್ ಕುಳಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಲಾಗುತ್ತಿದೆ. 2019-20ರಲ್ಲಿ ಹಾಗೆ ಮನ್ನಾ ಮಾಡಲಾದ ಬ್ಯಾಂಕ್ ಸಾಲದ ಮೊತ್ತ ಬರೋಬ್ಬರಿ 115 ಲಕ್ಷ ಕೋಟಿ ರೂಪಾಯಿ! ಹಾಗಾಗಿ, ಬ್ಯಾಂಕಿಂಗ್ ವ್ಯವಸ್ಥೆ ಮುಳುಗುತ್ತಿದೆ. ಹೀಗೆ ಮುಳುಗಿಸಿದವರು ಕಾರ್ಪೊರೇಟ್ ಕುಳಗಳು. ಮತ್ತು ಆ ಪೈಕಿ ಬಹುತೇಕರು ಗುಜರಾತಿಗಳು ಎಂಬುದು ಗಮನಾರ್ಹ. ಬ್ಯಾಂಕುಗಳು ಜನಸಾಮಾನ್ಯರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಈ ಹಿಂದೆ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಗಿತ್ತು. ಆದರೆ, ಈಗ ಸರ್ಕಾರ, ಜನಸಾಮಾನ್ಯರಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ದೂರ ಮಾಡಿ, ತಮ್ಮ ಆಪ್ತ ಉದ್ಯಮಿಗಳ ಖಾಸಗೀ ಸ್ವತ್ತು ಮಾಡುತ್ತಿದೆ. ಅದೇ ಬ್ಯಾಂಕ್ ಖಾಸಗೀಕರಣ.

admin

ಅಂದರೆ; ಸರ್ಕಾರ ನಡೆಯುತ್ತಿರುವುದೇ ಉದ್ಯಮಿಗಳಿಗಾಗಿ ಎಂದೇ?

ಹೌದು, ಈ ಸರ್ಕಾರಕ್ಕೆ, ದೇಶದ ಜನ ಸಾಮಾನ್ಯರ ಹಿತಕ್ಕಿಂತ ಕೇವಲ ಹತ್ತು ಮಂದಿ ತಮ್ಮ ಪರಮಾಪ್ತ ಕಾರ್ಪೊರೇಟ್ ಕುಳಗಳ ಸಂಪತ್ತು ವೃದ್ಧಿಯೇ ಆದ್ಯತೆ. ಅದರಲ್ಲೂ ‘ಗುಜರಾತ್ ಗ್ಯಾಂಗ್’ ಹಿತವಷ್ಟೇ ಮುಖ್ಯ. ಜನಸಾಮಾನ್ಯರ ಬದುಕನ್ನು ನಾಶ ಮಾಡಿ, ‘ಗುಜರಾತ್ ಗ್ಯಾಂಗ್’ ಕೊಬ್ಬಿಸುವುದೇ ತನ್ನ ಪರಮ ಕರ್ತವ್ಯ ಎಂದು ಈ ಸರ್ಕಾರ ಭಾವಿಸಿದೆ. ಮತ್ತು ಹಾಗೇ ನಡೆದುಕೊಳ್ಳುತ್ತಿದೆ ಕೂಡ. ಹಾಗಾಗಿ ಸದ್ಯ ದೇಶದಲ್ಲಿ ರಾಜಕಾರಣ, ಆಡಳಿತ ಎಂಬುದೇ ಇಲ್ಲ. ಈಗ ಇರುವುದೇನಿದ್ದರೂ ಉದ್ಯಮ, ಬ್ಯುಸಿನೆಸ್ ಮಾತ್ರ. ಕಾರ್ಪೊರೇಟ್ ಕುಳಗಳು ರಾಜಕೀಯ ಪಕ್ಷಗಳ ಮೂಲಕ ಚುನಾವಣೆಯಲ್ಲಿ ಹಣ ಹೂಡುತ್ತಿವೆ ಮತ್ತು ಆರಿಸಿಬಂದ ರಾಜಕೀಯ ಪಕ್ಷದ ಮೂಲಕ ತಮ್ಮ ಉದ್ಯಮ ಸಾಮ್ರಾಜ್ಯ ವಿಸ್ತರಣೆಗೆ ಬೇಕಾದ ಕೆಲಸಗಳನ್ನಷ್ಟೇ ಮಾಡಿಸಿಕೊಳ್ಳುತ್ತಿವೆ. ಕಳೆದ ಚುನಾವಣೆಯಲ್ಲಿ 50 ಸಾವಿರ ಕೋಟಿ ಹಣವನ್ನು ಹೀಗೆ ಹೂಡಿಕೆ ಮಾಡಲಾಗಿತ್ತು. ಈಗ ಆ ಹೂಡಿಕೆಗೆ ಪ್ರತಿಫಲ ಪಡೆಯುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಇರುವುದು ವ್ಯವಹಾರ, ಉದ್ಯಮ ನಿರ್ವಹಣೆಯ ವ್ಯವಸ್ಥೆಯೇ ವಿನಃ, ಜನರ ಹಿತ ಕಾಯುವ ಆಡಳಿತವಲ್ಲ.

ಆದರೆ, ಧರ್ಮ ಮತ್ತು ದೇವರಂತಹ ಭಾವನಾತ್ಮಕ ವಿಷಯಗಳಲ್ಲಿ ಆಡಳಿತ ನಡೆಸುವವರು ಬಹಳಷ್ಟು ಜನ ಬೆಂಬಲ ಪಡೆಯುತ್ತಿದ್ದಾರೆ ಅಲ್ಲವೆ?

ಅವರ ಏಕೈಕ ಅಜೆಂಡಾ ರಾಮಮಂದಿರ. ಅದು ಅವರು ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಲು ಕಂಡುಕೊಂಡ ಅಸ್ತ್ರ. ಆದರೆ, ವಾಸ್ತವವಾಗಿ ದೇಶದ ಉದ್ದಗಲಕ್ಕೆ ಲಕ್ಷಾಂತರ ಮಂದಿರಗಳಿರುವಾಗ, ರಾಮಮಂದಿರಕ್ಕೇ ಹೋಗಿ ದೇವರನ್ನು ಕಾಣುವವರು ಯಾರು? ಹಾಗೆ ನೋಡಿದರೆ, ರಾಮ ಇರಬೇಕಾದುದು ಮಂದಿರದಲ್ಲಿ ಅಲ್ಲ. ಬದಲಾಗಿ ಪ್ರತಿಯೊಬ್ಬರ ಎದೆಯಲ್ಲಿ, ಮನಸ್ಸಿನಲ್ಲಿ ರಾಮನಿರಬೇಕು. ರಾಮನಿದ್ದರೆ ನಮ್ಮೊಳಗೆ ಇರಬೇಕು. ಅಲ್ಲಿ ಇಲ್ಲ ಎಂದರೆ, ಮತ್ತೆಲ್ಲೂ ಇರಲಾರ. ಆದರೆ, ಜನಸಾಮಾನ್ಯರ ಮುಗ್ಧತೆಯನ್ನೇ ಬಳಸಿಕೊಂಡು ಅವರನ್ನು ರಾಮನ ಹೆಸರಿನಲ್ಲಿ ಮರುಳು ಮಾಡಿ ರಾಜಕೀಯ ಲಾಭ ಪಡೆಯಲಾಗುತ್ತಿದೆ.

ಆದರೆ, ರೈತರಿಗೆ ಯಾವ ಧರ್ಮವೂ ಇಲ್ಲ, ಯಾವ ಧರ್ಮಗ್ರಂಥವೂ ಇಲ್ಲ. ನಮಗೆ ನಮ್ಮ ಕಾಯಕವೇ ಧರ್ಮ, ದೇವರು, ಧರ್ಮಗ್ರಂಥ. ದೇವರು ನಮ್ಮೊಂದಿಗೆ ಸದಾ ಇರುತ್ತಾನೆ. ನಮ್ಮ ಕಾಯಕದಲ್ಲಿ, ನಮ್ಮ ಬೆವರಿನಲ್ಲಿ, ಉಣ್ಣುವ ಅನ್ನದಲ್ಲಿ ದೇವರನ್ನು ಕಾಣುವವರು ನಾವು. ನಮ್ಮ ಹೊಲಗದ್ದೆಯಲ್ಲಿ, ನಮ್ಮ ದನಕರು, ಜಾನುವಾರುಗಳಲ್ಲಿ, ಪ್ರತಿ ಕಾಳು ಧವಸ ಧಾನ್ಯದಲ್ಲೂ ರಾಮನನ್ನು ಕಾಣುವವರು ನಾವು. ಹಾಗಾಗಿ ಕೋಮುವಾದಿ ಅಸ್ತ್ರ ಪ್ರಯೋಗಿಸಿ ನಮ್ಮನ್ನು ಒಡೆಯಲಾಗದು. ನಾವು ಕೋಮುವಾದಿಗಳೂ ಅಲ್ಲ; ಮೂಲಭೂತವಾದಿಗಳೂ ಅಲ್ಲ. ಎಲ್ಲ ಧರ್ಮ, ದೇವರನ್ನು ನಾವು ಸಮಾನವಾಗಿ ಕಾಣುವವರು.

ದೇಶವ್ಯಾಪಿ ರೈತ ಹೋರಾಟದ ವಿಷಯದಲ್ಲಿ ಕೆಲವು ಮಾಧ್ಯಮಗಳು ಪೂರ್ವಗ್ರಹಪೀಡಿತವಾಗಿವೆ. ವಾಸ್ತವಾಂಶಗಳನ್ನು ಮರೆಮಾಚುತ್ತಿವೆ ಎಂಬ ಮಾತಿದೆಯಲ್ಲ.. ಆ ಬಗ್ಗೆ ಏನು ಹೇಳುವಿರಿ.

ಮಾಧ್ಯಮಗಳಲ್ಲಿ ಕೂಡ ಹೊರಗಿನ ಸಮಾಜದಂತೆಯೇ ಬೇರೆ ಬೇರೆ ರೀತಿಯ ಜನಗಳಿದ್ದಾರೆ. ಬಹಳಷ್ಟು ಜನ ಹೋರಾಟದ ಪರ ಇದ್ದಾರೆ. ಕೆಲವರು ವ್ಯತಿರಿಕ್ತವಾಗಿಯೂ ಇದ್ದಾರೆ. ಕೆಲವೊಮ್ಮೆ ವರದಿಗಾರರಾಗಿ ಅವರಿಗೆ ವಾಸ್ತವಾಂಶಗಳನ್ನು ಹೇಳುವ ಕಾಳಜಿ ಇದ್ದರೂ, ಮಾಧ್ಯಮಗಳ ನಿಯಂತ್ರಿಸುವ ಮಾಲೀಕರ ಮರ್ಜಿಗೆ ಬಿದ್ದು ಹೇಳಲಾರದ ಅಸಹಾಯಕತನವೂ ಇದೆ. ಅವರಿಗೂ ಹೊಟ್ಟೆಪಾಡಿನ ಪ್ರಶ್ನೆ. ಏಕೆಂದರೆ ಇಂದು ದೇಶದ ಬಹುತೇಕ ದೊಡ್ಡ ಮಾಧ್ಯಮಗಳು ಬೃಹತ್ ಕಾರ್ಪೊರೇಟ್ ಕಂಪನಿಗಳ ಕೈವಶವಾಗಿವೆ. ಹಾಗಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟದ ಬಗ್ಗೆ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು.

ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದು ಸೇರಿದಂತೆ ನಿಮ್ಮ ಬೇಡಿಕೆಗಳನ್ನು ಸರ್ಕಾರ ಪೂರ್ಣವಾಗಿ ಒಪ್ಪಿಲ್ಲ. ಮುಂದೆಯೂ ಅದೇ ನಿಲವು ಕಾಯ್ದುಕೊಂಡರೆ, ನಿಮ್ಮ ಮುಂದಿನ ನಡೆ ಏನು?

ನಿರಂತರ ಹೋರಾಟ. ನಿರಂತರ ಹೋರಾಟವೇ ನಮ್ಮ ಮುಂದಿನ ಇಂದಿನ ಮತ್ತು ಮುಂದಿನ ನಡೆ. ನಾವು ರೈತರು, ನಾವು ಭೂಮಿಯನ್ನು ಉತ್ತಿ-ಭಿತ್ತಿ, ಮೊಳಕೆಯಿಂದ ಫಸಲಿನವರೆಗೆ ಜತನ ಮಾಡಿ, ಒಕ್ಕಲು ಮಾಡುವ ಸಹನೆ ಮತ್ತು ಸೈರಣೆ ಉಳ್ಳವರು. ಹಾಗಾಗಿ ನಾವು ಅಂದುಕೊಂಡಿದ್ದನ್ನು ಸಾಧಿಸಲು ನಮಗೆ ಕಾಲಮಿತಿಯ ಪರಿವೆ ಇಲ್ಲ. ಬಿತ್ತುವ, ಬೆಳೆಸುವ, ಫಸಲಿಗೆ ಕಾಯುವ ಕಲೆ ನಮಗೆ ಸಿದ್ಧಿಸಿದೆ. ನಾವು ಕಾಯುತ್ತೇವೆ. ಅವಸರವಿಲ್ಲ, ನಮಗೆ ಆತುರವಿಲ್ಲ. ವರ್ಷಗಳ ಕಾಲ ಕಾಯುವ ಸೈರಣೆ ನಮಗಿದೆ. ಅದರಲ್ಲೂ ಈಗ ನಾವು ಹೋರಾಡುತ್ತಿರುವುದು ಭ್ರಷ್ಟ ವ್ಯವಸ್ಥೆಯ ವಿರುದ್ದ ಎಂಬ ಅರಿವು ನಮಗಿದೆ. ಅದು ಇಂದು, ನಾಳೆಗೆ ಮುಗಿಯವ ಕೆಲಸವನ್ನು ಎಂಬುದೂ ಗೊತ್ತಿದೆ. ಜನರ ಬೆಂಬಲದ ಮೇಲೆ ಎಲ್ಲವೂ ನಿಂತಿದೆ. ಜನ ಮತ್ತು ಜನ ಬೆಂಬಲದ ಹೋರಾಟವೇ, ಚಳವಳಿಯೇ ಎಲ್ಲವನ್ನೂ ನಿರ್ಧರಿಸಲಿದೆ.

ಬಹಳ ಮುಖ್ಯವಾಗಿ ನಾವು ರಾಜಕಾರಣಿಗಳಲ್ಲ, ರಾಜಕಾರಣಕ್ಕಾಗಿ ಇದನ್ನು ಮಾಡುತ್ತಿಲ್ಲ. ಮತಕ್ಕಾಗಿ ಮಾಡುತ್ತಿಲ್ಲ. ದೇಶದ ರೈತರಿಗೆ, ಜನಸಾಮಾನ್ಯರಿಗೆ ಮತ್ತು ಮುಖ್ಯವಾಗಿ ದೇಶದ ಭವಿಷ್ಯಕ್ಕಾಗಿ ಈ ಹೋರಾಟ. ಇದು ಜನರಿಗೆ ಅರ್ಥವಾಗಿದೆ. ಹಾಗಾಗಿ ನಾವು ಬಯಸಿದ ಬದಲಾವಣೆ ಖಂಡಿತವಾಗಿಯೂ ಬರಲಿದೆ ಎಂಬ ವಿಶ್ವಾಸವಿದೆ. ಶತಮಾನಗಳ ಕಾಲದಿಂದಲೂ ಹೋರಾಡುತ್ತಲೇ ಬಂದ ರೈತರು ನಾವು, ನಮಗೆ ಈ ಎಲ್ಲದರ ಅರಿವಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com