ಮಸ್ಕಿಯಲ್ಲಿ ನಡೆದ ಬಿಜೆಪಿಯ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು. ಸಮಾವೇಶ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡಿದ್ದರು. ಅದಕ್ಕೆ ಸಿದ್ದರಾಮಯ್ಯ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಒಳಜಗಳದ ಪಕ್ಷವಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿಯೂ ಅಸ್ಥಿತ್ವ ಕಳೆದುಕೊಳ್ಳುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಅದಕ್ಕಾಗಿ 90 ಜೊತೆ ಬಟ್ಟೆ ಹೊಲೆಸಿಕೊಂಡಿರುವುದಾಗಿ ಅಪಹಾಸ್ಯ ಮಾಡಿದ್ದರು, ಜೊತೆಗೆ ಬಿಜೆಪಿ ಗೆಲ್ಲುವ ಪಕ್ಷವಾಗಿದೆ, ಕಾಂಗ್ರೆಸ್ ಸೋಲುವ ಪಕ್ಷವಾಗಿದೆ, ಈ ಹಿಂದೆ ಸಿದ್ದರಾಮಯ್ಯ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ನಲ್ಲಿಯೂ ಕೂಡ ಅವರು ನೆಲೆಯೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಪಹಾಸ್ಯ ಮಾಡಿದ್ದರು.
ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ಕಟೀಲ್ ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ ಎಂದು ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಖಡಕ್ಕಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಿಗೆ ಕೂಡಾ ಎಂದು ಬಿಜೆಪಿ ನಾಯಕರನ್ನು ವ್ಯಂಗ್ಯಮಾಡಿ ಎಚ್ಚರಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಮತ್ತು ಸಿದ್ದರಾಮಯ್ಯ ಅವರ ವಾಕ್ ಸಮರದ ನಡುವೆ ಎರಡು ಪಕ್ಷಗಳು ಮದ್ಯಸ್ಥಿಕೆ ವಹಿಸಿ ಟ್ವೀಟ್ ಸಮರ ನಡೆಸಿವೆ.