ಅಕ್ರಮವಾಗಿ ಗಡಿ ದಾಟಲು ನಕಲಿ ಕೋವಿಡ್ ಸರ್ಟಿಫಿಕೇಟ್ ಬಳಕೆ: ಕೊಡಗಿನಲ್ಲಿ ಹೆಚ್ಚಿದ ಆತಂಕ

ಇದೀಗ ಈ ಕೋವಿಡ್ ನಕಲಿ ಸರ್ಟಿಫಿಕೇಟಿನದೇ ಒಂದು ದೊಡ್ಡ ದಂಧೆ ಆಗಿದೆ ಎನ್ನಲಾಗಿದೆ. ಅಸಲಿಯನ್ನೂ ನಾಚಿಸುವ ನಕಲಿ ಸರ್ಟಿಫಿಕೇಟ್ ಗಳನ್ನು ಪತ್ತೆ ಹಚ್ಚುವುದೇ ಗಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಹುದೊಡ್ಡ ಸವಾಲಾಗಿದೆ.
ಅಕ್ರಮವಾಗಿ ಗಡಿ ದಾಟಲು ನಕಲಿ ಕೋವಿಡ್ ಸರ್ಟಿಫಿಕೇಟ್ ಬಳಕೆ: ಕೊಡಗಿನಲ್ಲಿ ಹೆಚ್ಚಿದ ಆತಂಕ

ಗಡಿಪ್ರದೇಶದಲ್ಲಿ ತಪಾಸಣೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಅದರಲ್ಲೂ ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟನ್ನು ಹೊಂದಿರಲೇಬೇಕು. ಆದರೆ ಕಾನೂನು ಪ್ರಕಾರ ಹೋದರೆ ಒಂದು ಕೋವಿಡ್ ಸರ್ಟಿಫಿಕೇಟ್ ಪಡೆಯಲು ಖಾಸಗೀ ಪ್ರಯೋಗಾಲಯಗಳು 2500 ರೂಪಾಯಿಗಳಷ್ಟು ದರ ವಿಧಿಸುತ್ತಿವೆ. ಮದ್ಯಮ ವರ್ಗದವರಿಗೆ ಇದು
ದುಬಾರಿಯೇ. ಇಷ್ಟು ಹಣ ನೀಡಿದರೂ ಸರ್ಟಿಫಿಕೇಟ್ ಕೂಡಲೇ ಕೈಗೆ ಸಿಗುವುದಿಲ್ಲ.
ಹಣವೂ ಉಳಿದು ಸರ್ಟಿಫಿಕೇಟ್ ಕೂಡ ಕೂಡಲೇ ಕೈಗೆ ಸಿಕ್ಕಿದರೆ ತುಂಬಾ ಅನುಕೂಲವಲ್ಲವೇ? ಹಾಗಾಗಿ ಗಡಿ ದಾಟಿ ಬರುವವರು ಕಂಡು ಕೊಂಡಿರುವ ಸುಲಭ ಉಪಾಯ ಎಂದರೆ ನಕಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಬಳಕೆ. ಇದರಿಂದ ಕೂಡಲೇ ಸರ್ಟಿಫಿಕೇಟ್ ಸಿಗುವುದಲ್ಲದೆ ಮುನ್ನೂರು - ಐನೂರು ರೂಪಾಯಿ ನೀಡಿದರೆ ಒರಿಜಿನಲ್ ನಾಚಿಸುವಂತೆ ನಕಲಿ ಸರ್ಟಿಫಿಕೇಟ್ ಕೈಗೆ ಬರುತ್ತದೆ. ಆದರೆ ಪ್ರಯೋಗಾಲಯಗಳ ಸಿಬ್ಬಂದಿ ಈ ಸರ್ಟಿಫಿಕೇಟನ್ನು ಮಾರುತಿದ್ದಾರೋ ಅಥವಾ ಕಂಪ್ಯೂಟರ್ ಸೆಂಟರಿನವರು ಕಲರ್ ಜೆರಾಕ್ಸ್ ಮಾಡಿ ಹೆಸರು ಬದಲಾಯಿಸಿ ಈ ದಂಧೆಯಲ್ಲಿ ತೊಡಗಿದ್ದಾರೋ ತಿಳಿದು ಬಂದಿಲ್ಲ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೊಡಗಿನ ಗಡಿಯಾಚೆ ಕೇರಳದಲ್ಲಿ ಪಟ್ಟಣಗಳೇ ಇದ್ದು ಮಾನಂದವಾಡಿ, ಇರಿಟ್ಟಿ, ಪಯ್ಯನೂರು ನಗರಗಳಲ್ಲಿ ಬೇಕಾದಷ್ಟು ಕಂಪ್ಯೂಟರ್ ಸೆಂಟರ್ ಗಳು ಮತ್ತು ಪ್ರಯೋಗಾಲಯಗಳೂ ಬಹಳಷ್ಟಿವೆ. ಇದೀಗ ಈ ಕೋವಿಡ್ ನಕಲಿ ಸರ್ಟಿಫಿಕೇಟಿನದೇ ಒಂದು ದೊಡ್ಡ ದಂಧೆ ಆಗಿದೆ ಎನ್ನಲಾಗಿದೆ. ಅಸಲಿಯನ್ನೂ ನಾಚಿಸುವ ನಕಲಿ ಸರ್ಟಿಫಿಕೇಟ್ ಗಳನ್ನು ಪತ್ತೆ ಹಚ್ಚುವುದೇ ಗಡಿ ಪ್ರದೇಶದಲ್ಲಿ
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಹುದೊಡ್ಡ ಸವಾಲಾಗಿದೆ. ಕೇರಳದಿಂದ ಮೈಸೂರು , ಕೊಡಗಿನೆಡೆಗೆ ಬರುವ ಪ್ರಯಾಣಿಕರು ಮಾಕುಟ್ಟ ಚೆಕ್ ಪೋಸ್ಟ್ ಗಳನ್ನು ಹಾದು ಬರಬೇಕಾಗುತ್ತದೆ.

ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಪ್ರದೇಶಗಳಲ್ಲಿ ಆರೋಗ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳ ತಂಡ ಶಿಫ್ಟ್ ಆಧಾರದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಈ ತಪಾಸಣೆಯಲ್ಲಿ ಕಳೆದ 72 ಗಂಟೆಗಳ ಹಿಂದಿನ ಕೋವಿಡ್ ನೆಗೆಟಿವ್ ವರದಿಯ ಅಧಿಕೃತ ಸರ್ಟಿಫಿಕೇಟ್ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ವಾಹನಗಳಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಈ ನಿಯಮ ಅನ್ವಯವಾಗುತ್ತದೆ. ಆದರೆ ಕೆಲವರು ನೆಗೆಟಿವ್ ರಿಪೋರ್ಟ್ಗಳನ್ನು ಕಂಪ್ಯೂಟರ್ನಲ್ಲಿ ತಿದ್ದುಪಡಿಗೊಳಿಸಿ ಹೆಸರು ಮತ್ತು ವಿಳಾಸ ಬದಲಿಸಿ ಮುದ್ರಿಸಿಕೊಂಡು ತಂದು ತಪಾಸಣೆ ವೇಳೆ ಹಾಜರುಪಡಿಸಿ ಬರುತ್ತಿದ್ದಾರೆ.

ಈ ರೀತಿಯ ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದೆ. ಕೆಲವು ನಕಲಿ ಸರ್ಟಿಫಿಕೇಟುಗಳು ಅಸಲಿಯಂತೆಯೇ ಇರುವುದರಿಂದ ಸಿಬ್ಬಂದಿಗಳಿಗೂ ಕೂಡ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದರಿಂದ ತಪಾಸಣೆ ಸಂದರ್ಭ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಗಡಿ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮತ್ತೆ ಕೆಲವು ಬುದ್ಧಿವಂತರು ಕೂಟುಹೊಳೆ ಸೇತುವೆ ಬಳಿಯಿಂದ ಕಾಲ್ನಡಿಗೆಯಲ್ಲಿ ಅಡ್ಡಲಾಗಿ ರಸ್ತೆ ದಾಟಿ ಸಿಬ್ಬಂದಿಗಳ ಕಣ್ಣುತಪ್ಪಿಸಿಕೊಂಡು ಒಳಬರುತ್ತಿದ್ದಾರೆ. ತಪಾಸಣೆ ಕೇಂದ್ರದ ಹಿಂದಿನಿಂದ ಕಾಲ್ನಡಿಗೆಯಲ್ಲಿ ನುಸುಳಿಕೊಂಡು ರಸ್ತೆಗೆ ಬಂದು ವಾಹನಗಳನ್ನು ಹತ್ತಿಕೊಂಡು ವೀರಾಜಪೇಟೆಯತ್ತ ಬರುತ್ತಿದ್ದಾರೆ. ಇದಕ್ಕಾಗಿಯೇ ಕೆಲವು ವಾಹನಗಳು ಸಿದ್ಧವಾಗಿರುತ್ತದೆ. ಈ ರೀತಿಯ ಹಲವಾರು ಪ್ರಕರಣಗಳ ಪೈಕಿ ಒಂದೆರಡು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.ನಕಲಿ ಸರ್ಟಿಫಿಕೇಟ್ ದಂಧೆಯಲ್ಲಿ ಕೇವಲ ಕೇರಳಿಗರು ಮಾತ್ರವಲ್ಲದೆ, ಜಿಲ್ಲೆಯಿಂದ ಸಂಚರಿಸಿ ಕೇರಳದಿಂದ ವಾಪಸು ಬರುವ ಕೊಡಗಿನವರು ಕೂಡ ಭಾಗಿಯಾಗುತ್ತಿದ್ದಾರೆ. ಹಣ ನೀಡಿ ಕೋವಿಡ್ ಪರೀಕ್ಷೆಯನ್ನು ಮಾಡದೆ ನಿಯಮವನ್ನು ಉಲ್ಲಂಘಿಸಿ ಸುಲಭವಾಗಿ ಕೊಡಗಿಗೆ ಪ್ರವೇಶಿಸುತ್ತಿರುವ ಸ್ಥಳೀಯರ ಸಂಖ್ಯೆಗೇನು ಕೊರತೆಯಿಲ್ಲ. ಕೆಲವರು ರಾತ್ರಿವರೆಗೂ ಸ್ಥಳದಲ್ಲೇ ಕಾದು ನಂತರ ರಾತ್ರಿ ವೇಳೆ ಸಿಬ್ಬಂದಿಗಳ ‘ಕೈ ಬಿಸಿ’ಮಾಡಿಕೊಂಡು ಜಿಲ್ಲೆಗೆ ಬರುತ್ತಿದ್ದಾರೆ ಎಂಬ ವದಂತಿಯೂ ಕೇಳಿ ಬರುತ್ತಿದೆ.
ನಕಲಿ ಸರ್ಟಿಫಿಕೇಟ್ಗಳ ಹಾವಳಿಯನ್ನು ನಿಯಂತ್ರಿಸಬೇಕಾದರೆ ಗಡಿಯಲ್ಲಿ ತಪಾಸಣೆ ಕ್ರಮಗಳನ್ನು ಆಧುನಿಕರಣಗೊಳಿಸಬೇಕಿದೆ. ‘ಬಾರ್ ಕೋಡ್ ಸ್ಕ್ಯಾನಿಂಗ್’ ವ್ಯವಸ್ಥೆಯಿಂದ ಮಾತ್ರ ನಕಲಿ ಸರ್ಟಿಫಿಕೇಟ್ ಹಾವಳಿ ತಡೆಗಟ್ಟಬಹುದಾಗಿದೆ ಎಂದು ತಪಾಸಣಾ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರ ಕೋವಿಡ್ ಪ್ರಸರಣವನ್ನು ತಡೆಗಟ್ಟಲೆಂದೇ ಗಡಿಯಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ಜನರು ಸರ್ಕಾರದ ಕಾಳಜಿಯನ್ನು ಅರ್ಥ ಮಾಡಿಕೊಳ್ಳದೆ ತಮಗೆ ಅನುಕೂಲವಾದರೆ ಸಾಕು ಎಂಬ ಮನೋಸ್ಥಿತಿಯಲ್ಲಿ ಗಡಿ ದಾಟಿ ಬರುತ್ತಿರುವುದು ನಿಯಮಗಳನ್ನು ಮಾಡಿಯೂ ಪ್ರಯೋಜನ ಇಲ್ಲದಂತಾಗಿದೆ. ಈಗಾಗಲೇ ಕೋವಿಡ್ ಸೋಂಕಿತರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತಿದ್ದು , ರೂಪಾಂತರ ಕರೋನಾ ವೈರಸ್ ದಾಳಿಯನ್ನು ತಪಿಸಲು ಲಾಕ್ ಡೌನ್ ಮಾಡಬೇಕೆ ಎಂದು ರಾಜ್ಯ ಸರ್ಕಾರಗಳು ಚಿಂತನೆ ನಡೆಸಿವೆ ಎನ್ನಲಾಗಿದೆ. ಹೀಗಿರುವಾಗ ಬೇಜವಾಬ್ದಾರಿ ಜನರ ಈ ನಕಲಿ ಸರ್ಟಿಫಿಕೇಟ್ ಕೊಡಗಿನಲ್ಲಿ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com