ದೇಶದ ಪ್ರಧಾನಿ ಮೋದಿಯವರು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಾಯಿ ತೀರಿಕೊಂಡಾಗ ಸಂತಾಪ ವ್ಯಕ್ತಪಡಿಸುತ್ತಾರೆ. ಆದರೆ, ದೇಶದ 307 ರೈತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದರೂ ಕನಿಷ್ಠ ಸಂತಾಪವನ್ನು ಸೂಚಿಸಲಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಹೋರಾಟದಲ್ಲಿ ಮಡಿದ 307 ಹುತಾತ್ಮ ರೈತರಿಗೆ ಶೃದ್ಧಾಂಜಲಿ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಜನಸಾಮಾನ್ಯರ ಸೇವಕರು ಎಂದು ಅಧಿಕಾರಕ್ಕೆ ಬಂದ ಮೋದಿಯವರು ಇಂದು ಕಾರ್ಪೊರೇಟ್ ಕಂಪನಿಗಳ ಅಂಬಾನಿ ಅದಾನಿಯ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಹಿತರಕ್ಷಣೆಗಾಗಿ ದೇಶದ ರೈತರ ಮರಣಶಾಸನ ಬರೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಂದು ನಾಯಿ ಸತ್ತರು ಸಂತಾಪ ವ್ಯಕ್ತಪಡಿಸುವ ಮಂತ್ರಿಗಳು, ಜನಪ್ರತಿಧಿಗಳು ರೈತರ ಸಾವಿನ ಬಗ್ಗೆ ಮಾತನಾಡುತ್ತಿಲ್ಲ. ಇದು ದೇಶದ ದೌರ್ಭಾಗ್ಯ. ದೇಶದ ರೈತರಿಗಾಗಿ ಪ್ರಾಣತೆತ್ತ ರೈತ ಕುಟುಂಬಗಳಿಗೆ ರೈತರ ಮನೆ ಮನೆಯಿಂದಲೂ ಹಣ ಸಂಗ್ರಹಿಸಿ ದೇಣಿಗೆ ನೀಡಲು ದೇಶದ ರೈತರು ಮುಂದಾಗಬೇಕು. ಈ ಬಗ್ಗೆ ರಾಷ್ಟ್ರೀಯ ಮುಖಂಡರು ಕರೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡ ಶಿವಕುಮಾರ್ ಕಕ್ಕಾಚಿ, ಪ್ರಧಾನಿ ಮಹಾನ್ ಸುಳ್ಳುಗಾರರಾಗಿ ದೇಶದ ಜನರ ಮೋಸಗೋಳಿಸುತ್ತಿದ್ದಾರೆ. ದೇಶದ ರೈತರ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತಿಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಎಂಟು ರಾಜ್ಯಗಳಲ್ಲಿ ಕಿಸಾನ್ ಮಹಾ ಪಂಚಾಯತ್ ಕಾರ್ಯಕ್ರಮ ನಡೆಸಲಾಗಿದೆ. ಇದೇ 26ರಂದು ಭಾರತ್ ಬಂದ್ ನಡೆಸಲು ಕರೆನೀಡಲಾಗಿದೆ. ಕರ್ನಾಟಕದ ರೈತರು ಇದಕ್ಕೆ ಸಹಕಾರ ನೀಡಬೇಕು. ರಾಜ್ಯಗಳ ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾದ ತಂಡ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಸೋಲಿಸುವಂತೆ ರೈತರಿಗೆ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಎಪಿಎಂಸಿ ಹೊಸ ಕಾಯ್ದೆ ಜಾರಿ ಬಂದ ನಂತರ ಶೇಕಡ 70ರಷ್ಟು ಎಪಿಎಂಸಿಗಳು ಮುಚ್ಚುವ ಹಂತಕ್ಕೆ ಬಂದಿದೆ. ಎಂ ಎಸ್ ಪಿ ಕಾನೂನು ಮುಂದುವರಿಸಲಾಗುತ್ತದೆ ಎನ್ನುತ್ತಾರೆ. ಆದರೆ, ಶಾಸನಬದ್ಧ ಖಾತ್ರಿ ಬೆಲೆ ನೀಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ. ಇದು ಇಬ್ಬದಿ ನೀತಿಯಲ್ಲವೇ ಎಂದವರು ಪ್ರಶ್ನಿಸಿದ್ದಾರೆ.
400ಕ್ಕೂ ಹೆಚ್ಚು ರೈತಸಂಘಟನೆಗಳು ಸೇರಿ ಸಂಯುಕ್ತ ಕಿಸಾನ್ ರಚಿಸಿ ಕೊಂಡಿದ್ದೇವೆ. ಅದರಲ್ಲಿ ಕೆಲವು ರಾಜಕೀಯ ಹಿತಾಸಕ್ತಿ ಹೊಂದಿದಿದ್ದರು ಸಹ ಕರಾಳ ಕೃಷಿ ಕಾನೂನಿನ ವಿರುದ್ಧ ಒಟ್ಟಾಗಿ ಹೋರಾಟ ಮಾಡಲು ಪಣತೊಟ್ಟಿದೆ ಎಂದು ಅವರು ತಹೇಳಿದ್ದಾರೆ.
ಹರಿಯಾಣದ ರೈತ ಮುಖಂಡ ಅಭಿಮನ್ಯು ಕೋಹರ ಮಾತನಾಡಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದ ಪ್ರಧಾನಿಗಳು ಅಂಬಾನಿ ಅದಾನಿ ಕಾರ್ಪೊರೇಟ್ ಕಂಪನಿಗಳ ಆದಾಯವನ್ನು ದುಪ್ಪಟ್ಟು ಮಾಡಿದ್ದಾರೆ. ರೈತರ ಹೆಸರಿನಲ್ಲಿ ದರ್ಬಾರ್ ನಡೆಸುವ ಪ್ರಧಾನಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.
ವೇದಿಕೆಯಲ್ಲಿ ರಾಜ್ಯ ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ಸಾಮೂಹಿಕ ನಾಯಕತ್ವ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ ಗೋಪಾಲ್, ರಾಷ್ಟ್ರೀಯ ಕಿಸಾನ್ ಸಂಘದ ಭೀಮಯ್ಯ ಮೊದಲಾದವರು ಉಪಸ್ಥಿತರಿದ್ದರು.