ಹಿಂದುಳಿದ ಜಾತಿಗಳಿಗೆ ಲೋಕಸಭೆ & ವಿಧಾನಸಭೆಗಳಲ್ಲಿ ರಾಜಕೀಯ ಮೀಸಲಾತಿ ನೀಡಬೇಕು: ಸಿದ್ದರಾಮಯ್ಯ

ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಕೂಡಾ ವಿಸ್ತರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ಹಿಂದುಳಿದ ಜಾತಿಗಳಿಗೆ ಲೋಕಸಭೆ & ವಿಧಾನಸಭೆಗಳಲ್ಲಿ ರಾಜಕೀಯ ಮೀಸಲಾತಿ ನೀಡಬೇಕು: ಸಿದ್ದರಾಮಯ್ಯ

ರಾಜ್ಯದ ಬಿಜೆಪಿ ಸರ್ಕಾರ ದುರುದ್ದೇಶವಿಟ್ಟುಕೊಂಡು ಹಿಂದುಳಿದ ಜಾತಿ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ತುಳಿಯುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರದ ಈ ಜನವಿರೋಧಿ ನಿಲುವಿನ ವಿರುದ್ಧ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಯಬೇಕು. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳು ಮೀಸಲಾತಿ ಕೇಳುವ ಕಾಲ ಬಂದಿದೆ. ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಕೂಡಾ ವಿಸ್ತರಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಯೊಂದು ಸಮುದಾಯಕ್ಕೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಶ್ಯಕ ಪ್ರಮಾಣದ ಪ್ರಾತಿನಿಧ್ಯ ನೀಡಬೇಕೆಂಬುದೇ ಸಂವಿಧಾನದ ಆಶಯವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದೆ. ಸಾಮಾಜಿಕ ನ್ಯಾಯದ ಈ ರಥ ಮುಂದಕ್ಕೆ ಹೋಗಬೇಕಾಗುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ರಾಜ್ಯದ ಮಿಲ್ಲರ್ ಆಯೋಗದಿಂದ ಚಿನ್ನಪ್ಪರೆಡ್ಡಿ ಆಯೋಗದ ವರೆಗೆ ಹಾಗೂ ಕೇಂದ್ರದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿರುವುದು ಇತಿಹಾಸದ ಭಾಗವಾಗಿದೆ. ಇದನ್ನು ಹಿಂದುಳಿದ ಜಾತಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಹಿಂದುಳಿದ,ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಹದಿನೆಂಟು ನಿಗಮಗಳಿಗೆ ಕೇವಲ ರೂ.500 ಕೋಟಿ ನೀಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಶೋಷಿತ ಸಮುದಾಯಗಳಿಗೆ ಘೋರ ಅನ್ಯಾಯ ಎಸಗಿದೆ. ಅನ್ಯಾಯಕ್ಕೀಡಾಗಿರುವ ಈ ಸಮುದಾಯಗಳು ಬೀದಿಗಿಳಿಯದೆ ನ್ಯಾಯ ಸಿಗಲಾರದು ಎಂದು ಅವರು ಹೇಳಿದ್ದಾರೆ.

ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ಹಿಂದುಳಿದ ಜಾತಿಗಳ ಹಾಸ್ಟೆಲ್ ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ದುರುದ್ದೇಶವಿಟ್ಟುಕೊಂಡೇ ಹಿಂದುಳಿದ ಜಾತಿಗಳನ್ನು ತುಳಿಯುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕುರುಬರು ಕಾಲ್ನಡಿಗೆ-ಸಮಾವೇಶಗಳನ್ನು ನಡೆಸಿದರು. ನಾನೇನು ಈ ಬೇಡಿಕೆಯನ್ನು ವಿರೋಧಿಸಿಲ್ಲ, ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡ ನಂತರವೇ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯ. ಹೀಗಿದ್ದರೂ ನನ್ನನ್ನು ಗುರಿಯಾಗಿಸಿಕೊಂಡು ಆರ್ ಎಸ್ ಎಸ್ ಕುಮ್ಮಕ್ಕಿನಿಂದ ಹೋರಾಟ ನಡೆಯಿತು. ಈಗ ಯಾಕೆ ಸುಮ್ಮನಾಗಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com