ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: GC ಚಂದ್ರಶೇಖರ್

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿಷಯದ ಬಗ್ಗೆ ಸುಪ್ರೀಂ ಕೋರ್ಟಿನ‌ ನಿವೃತ್ತ ನ್ಯಾಯಮೂರ್ತಿ ಮಹಾಜನ್ ನೇತೃತ್ವದ ಆಯೋಗವು ವರದಿ ನೀಡಿದ್ದು, ಅವರು ಬೆಳಗಾವಿ ಕರ್ನಾಟಕದ ಭಾಗ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: GC ಚಂದ್ರಶೇಖರ್
Admin

ಬೆಳಗಾವಿ ವಿಷಯದಲ್ಲಿ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಮಹಾರಾಷ್ಟ್ರಕ್ಕೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸೂಕ್ತ ಉತ್ತರ ನೀಡಿದ್ದಾರೆ‌. ಕರ್ನಾಟಕದ ಒಂದೇ ಒಂದು ಇಂಚು ಭೂ ಭಾಗವನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಗುರುವಾರ ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಬೆಳಗಾವಿ ವಿಷಯ ಪ್ರಸ್ತಾಪಿಸಿದ ಕರ್ನಾಟಕದ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಬೆಳಗಾವಿ ಇಂದು, ನಿನ್ನೆಯಿಂದಲ್ಲ, 1956ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದರೆ ಇತ್ಯರ್ಥ ಆಗಿರುವ ಈ ವಿಷಯದ ಬಗ್ಗೆ ಮಹಾರಾಷ್ಟ್ರ ಪದೇ ಪದೇ ವಿವಾದ ಸೃಷ್ಟಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ವಿಷಯದ ಬಗ್ಗೆ ಸುಪ್ರೀಂ ಕೋರ್ಟಿನ‌ ನಿವೃತ್ತ ನ್ಯಾಯಮೂರ್ತಿ ಮಹಾಜನ್ ನೇತೃತ್ವದ ಆಯೋಗವು ವರದಿ ನೀಡಿದ್ದು, ಅವರು ಬೆಳಗಾವಿ ಕರ್ನಾಟಕದ ಭಾಗ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಮಹಾಜನ್ ಆಯೋಗ ಹೇಳಿದ್ದರೂ ಮಹಾರಾಷ್ಟ್ರ ವಿವಾದವನ್ನು ಕೆದಕುತ್ತಿದೆ ಎಂದು ಜಿ.ಸಿ. ಚಂದ್ರಶೇಖರ್ ಕಿಡಿಕಾರಿದರು.

ಮಹಾರಾಷ್ಟ್ರವು ತನ್ನ ರಾಜಕೀಯ ಲಾಭಕ್ಕಾಗಿ ಎರಡೂ ರಾಜ್ಯಗಳ ನಡುವೆ ಸಂಘರ್ಷ ಸೃಷ್ಟಿ ಮಾಡುತ್ತಿದೆ. ಬೆಳಗಾವಿ ವಿಷಯದಲ್ಲಿ ವಿವಾದ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸುವ ವೇಳೆ ಮಹಾರಾಷ್ಟ್ರ ನೆರೆಯ ರಾಜ್ಯವಾಗಿ ಶುಭಾಶಯ ಹೇಳುವ ಬದಲು ಕರಾಳ ದಿನ ಆಚರಿಸಿದೆ. ಈ ರೀತಿ ಎರಡೂ ರಾಜ್ಯಗಳ ನಡುವೆ ದ್ವೇಷ ಹುಟ್ಟುಹಾಕುತ್ತಿದೆ ಎಂದು ಹೇಳಿದರು.

ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾನೂನಿನಲ್ಲೂ ಅವಕಾಶ ಇದೆ. ಆದರೆ ಮಹಾರಾಷ್ಟ್ರವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸುತ್ತಿದೆ. ಮಹಾರಾಷ್ಟ್ರದ ಈ ನಡೆಯಿಂದ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ. ನಾವು ಮಹಾತ್ಮ ಗಾಂಧೀಜಿ ಮಾರ್ಗದಲ್ಲಿ ಹೋರಾಟ ಮಾಡಿ ಗಡಿಯನ್ನು ಸಂರಕ್ಷಿಸಿಕೊಳ್ಳುತ್ತೇವೆಯೇ ಹೊರತು ಒಂದಿಂಚು ಜಾಗವನ್ನು ಸಹ ಬಿಟ್ಟುಕೊಡುವುದಿಲ್ಲ. ಅಂದು, ಇಂದು, ಎಂದಿಗೂ ಬೆಳಗಾವಿ ಕರ್ನಾಟದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ಜಿ.ಸಿ. ಚಂದ್ರಶೇಖರ್ ತೀಕ್ಷ್ಣವಾಗಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ರಾಜ್ಯಸಭೆಯ ಸಭಾಪತಿಯೂ ಆದ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮಾತನಾಡಿ 'ಈ ವಿಷಯ ಸುಪ್ರೀಂ ಕೋರ್ಟ್​ನಲ್ಲಿ ಇರುವುದರಿಂದ ಇಲ್ಲಿ ಚರ್ಚೆಗೆ ಅವಕಾಶ ಇಲ್ಲ' ಎಂದು ಹೇಳಿದರು. ಆದರೆ ನಿನ್ನೆ ಮತ್ತು ಮೊನ್ನೆ ಇದೇ ವಿಷಯ ಲೋಕಸಭೆಯಲ್ಲಿ ಚರ್ಚೆ ಆಗಿತ್ತು. ಕೇಂದ್ರ ಸರ್ಕಾರದ ವತಿಯಿಂದ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ 'ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ' ಎಂಬ ಉತ್ತರವನ್ನೂ ನೀಡಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com