ಅನುದಾನ ವಿಳಂಬ: ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕರ ಧರಣಿ

ಧರಣಿಯಲ್ಲಿ ಶಿವಲಿಂಗೇಗೌಡ, ಎಟಿ ರಾಮಸ್ವಾಮಿ, ಎಚ್ ಕೆ ಕುಮಾರಸ್ವಾಮಿ, ಅನ್ನದಾನಿ, ಪುಟ್ಟರಾಜು, ಕೃಷ್ಣಾ ರೆಡ್ಡಿ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದಾರೆ.
ಅನುದಾನ ವಿಳಂಬ: ವಿಧಾನಸಭೆಯಲ್ಲಿ ಜೆಡಿಎಸ್‌ ಶಾಸಕರ ಧರಣಿ

ತಮ್ಮ ಕ್ಷೇತ್ರಗಳ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವುದಾಗಿ ಆರೋಪಿಸಿ ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಧರಣಿ ಕೂತಿದ್ದಾರೆ.

ವಿಧಾನಸಭೆ ಅಧಿವೇಶನವನ್ನು ಮುಂದೂಡಿದರೂ ಕೂಡಾ ಧರಣಿಯಿಂದ ಹಿಂಜಾರದ ಸದಸ್ಯರು, ಸದನದ ಬಾವಿಯಲ್ಲಿ ಕುಳಿತು, ಸಿಎಂ ಯಡಿಯೂರಪ್ಪ ಅವರ ಸ್ಪಷ್ಟ ಉತ್ತರಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾದ ಅನುದಾನವನ್ನು ತಡೆಹಿಡಿಯಲಾಗಿದೆ. 2019- 20 ರಿಂದ ಅನುದಾನ ಸ್ಥಗಿತಗೊಳಿಸಲಾಗಿದೆ. ಆದರೆ ಅವರಿಗೆ ಬೇಕಾದ ಕ್ಷೇತ್ರಗಳಿಗೆ 3,000 ಕೋಟಿಗಳಷ್ಟು ಅನುದಾನ ಕೊಡಲಾಗಿದೆ ಎಂದು ಜೆಡಿಎಸ್ ಸದಸ್ಯರು ಆರೋಪ ಹೊರಿಸಿದ್ದಾರೆ.

ಜೆಡಿಎಸ್ ಸದಸ್ಯರಿಗೆ ಈಗಾಗಲೇ ಉತ್ತರ ನೀಡಿರುವ ಸಚಿವ ಬಸವರಾಜ ಬೊಮ್ಮಾಯಿ, ಕಾಮಗಾರಿ ಅನುದಾನ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಕುಡಿಯುವ ನೀರಿನ ಯೋಜನೆ ಅನುದಾನ ಆದ್ಯತೆಯ ಮೇಲೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು.

ಅನುದಾನ ಕಡಿತ ಹಾಗೂ ವಿಳಂಬನೀತಿಯ ಕುರಿತಂತೆ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಉತ್ತರಕ್ಕೆ ತೃಪ್ತರಾಗದ ಶಾಸಕರು, ಮುಖ್ಯಮಂತ್ರಿ ಸ್ಪಷ್ಟ ಉತ್ತರ ನೀಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿ, ಧರಣಿ ನಡೆಸುತ್ತಿದ್ದಾರೆ.

ಹಳೆಯ ಕಾಮಗಾರಿಯ ಅನುದಾನವನ್ನು ತಡೆ ಹಿಡಿಯಲಾಗಿದೆ. ಹೊಸ ಕಾಮಗಾರಿಗೂ ಅನುದಾನವೂ ಸಿಗುತ್ತಿಲ್ಲ ಎಂಬ ಜೆಡಿಎಸ್‌ ಸದಸ್ಯರ ಅಸಮಾಧಾನವನ್ನು ಶಮನಗೊಳಿಸಲು ಸ್ಪೀಕರ್‌ ಮಾಡಿದ ಪ್ರಯತ್ನಗಳು ಯಶಸ್ಸು ಕಂಡಿಲ್ಲ. ನಾವು ಯಾವುದೇ ಕಾರಣಕ್ಕೂ ಪಟ್ಟು ಸಡಿಲಿಸಲ್ಲ ಎಂದು ಎಚ್‌ ಡಿ ರೇವಣ್ಣ ಹೇಳಿದ್ದಾರೆ. ತಮ್ಮ ಯಾವ ಪ್ರಯತ್ನಗಳೂ ಫಲ ನೀಡದ ಹಿನ್ನೆಲೆಯಲ್ಲಿ, ರಾತ್ರಿ ಮಲಗಲು ಹಾಸಿಗೆ, ದಿಂಬು, ಊಟದ ವ್ಯವಸ್ಥೆ ಮಾಡಲು ತಮ್ಮ ಕಾರ್ಯದರ್ಶಿಗೆ ಸ್ಪೀಕರ್‌ ಸೂಚಿಸಿದ್ದಾರೆ.


ಧರಣಿಯಲ್ಲಿ ಶಿವಲಿಂಗೇಗೌಡ, ಎಟಿ ರಾಮಸ್ವಾಮಿ, ಎಚ್ ಕೆ ಕುಮಾರಸ್ವಾಮಿ, ಅನ್ನದಾನಿ, ಪುಟ್ಟರಾಜು, ಕೃಷ್ಣಾ ರೆಡ್ಡಿ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಹಿಂದೆ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವಿದ್ದಾಗ ಎಲ್ಲ ಶಾಸಕರಿಗೂ ಅನುದಾನ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಸರ್ಕಾರ ಅನುದಾನ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಹಣಕಾಸು ಇಲಾಖೆ ಅನುಮತಿ ತೆಗೆದುಕೊಂಡು ಹಲವು ಯೋಜನೆಗಳನ್ನು ಮಾಡಲಾಗಿತ್ತು. ಆದರೆ ಈಗಿರುವ ಬಿಜೆಪಿ ಸರ್ಕಾರ ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಗಳಲ್ಲೂ ಕೆಲಸಗಳನ್ನ ಸ್ಥಗಿತಗೊಳಿಸಿದೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com