ಜೊ಼ಮ್ಯಾಟೋ ಪ್ರಕರಣ: ಹಿತೇಶಾ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದ ಇ-ಸಿಟಿ ಪೊಲೀಸರು

ಜನರ ಗಮನ ಸೆಳೆಯಲು ಹಿತೇಶಾ ಮಾಡಿರುವ ತಂತ್ರ ಎಂದು ಕೆಲವರು ಹೇಳಿದರೆ, ಮಹಿಳೆಯರಿಗೆ ದೇಶದಲ್ಲಿ ಸುರಕ್ಷೆತೆಯಿಲ್ಲವೇ ಎಂಬ ಪ್ರಶ್ನೆಯೂ ಕೇಳಲಾಗುತ್ತಿದೆ
ಜೊ಼ಮ್ಯಾಟೋ ಪ್ರಕರಣ: ಹಿತೇಶಾ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದ ಇ-ಸಿಟಿ ಪೊಲೀಸರು

ಸಂಪೂರ್ಣ ದೇಶವೇ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಜೊ಼ಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್‌ ಕಾಮರಾಜ್‌ ಮತ್ತು ಹಿತೇಶಾ ಚಂದ್ರಾಣಿ ಪ್ರಕರಣ ಮತ್ತಷ್ಟು ರೋಚಕವಾಗುತ್ತ ಸಾಗಿದೆ. ತಡವಾಗಿ ಆಹಾರ ಡೆಲಿವರಿ ಮಾಡಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಿತೇಶಾ ಅವರು ಆರೋಪಿಸಿದ್ದರೆ, ತಡವಾದ್ದಕ್ಕೆ ಕ್ಷಮೆ ಕೇಳಿದ್ದರೂ, ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಕಾಮರಾಜ್‌ ಆರೋಪಿಸಿದ್ದರು.

ಸದ್ಯಕ್ಕೆ ಇಲೆಕ್ಟ್ರಾನಿಕ್ ಸಿಟಿ ಪೊಲೀಸ್‌ ಠಾಣೆ ಎಲ್ಲಾ ಘಟನೆಗಳ ಕೇಂದ್ರ ಬಿಂದುವಾಗಿದೆ. ಕಾಮರಾಜ್‌ ವಿರುದ್ದ ದೂರು ದಾಖಲಿಸಿದ್ದ ತಕ್ಷಣ ಅವರನ್ನು ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು. ಆ ನಂತರ ಸ್ಟೇಷನ್‌ ಜಾಮೀನು ಮೂಲಕ ಬಿಡುಗಡೆಗೊಂಡಿದ್ದ ಕಾಮರಾಜ್‌ ಅವರು, ಎರಡು ದಿನಗಳ ಹಿಂದೆ ಹಿತೇಶಾ ಅವರ ವಿರುದ್ದ ದೂರು ದಾಖಲಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಮರಾಜ್‌ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ವಿಚಾರಣೆಗಾಗಿ ಹಿತೇಶಾ ಅವರನ್ನು ಸಂಪರ್ಕಿಸಿದ್ದಾರೆ. ಆದರೆ, ಈಗಾಗಲೇ ತಾನು ಮಹಾರಾಷ್ಟ್ರದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದೇನೆ ಎಂದು ಅವರು ಹೇಳಿದ್ದಾರೆ. ಹೀಗಾಗಿ, ಕಾಮರಾಜ್‌ ದೂರಿನ ಕುರಿತಾಗಿ ತಮ್ಮ ಹೇಳಿಕೆಯನ್ನು ದಾಖಲಿಸಲು ಹಿತೇಶಾ ಅವರಿಗೆ ಸಮಯ ನೀಡಲಾಗಿದ್ದು, ಅದರ ಒಳಗಾಗಿ ಹೇಳಿಕೆ ದಾಖಲಿಸದಿದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ತಿಳಿಸಿದ್ದಾರೆಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಜೊ಼ಮ್ಯಾಟೋ ಪ್ರಕರಣ: ಹಿತೇಶಾ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದ ಇ-ಸಿಟಿ ಪೊಲೀಸರು
ಉತ್ತರ ಭಾರತೀಯರು vs ಕನ್ನಡಿಗರು ಎಂಬ ಚರ್ಚೆಗೆ ಕಾರಣವಾದ ʼಝೊಮ್ಯಾಟೋ ಡೆಲಿವರಿ ಬಾಯ್ʼ ಪ್ರಕರಣ

ಹಿತೇಶಾ ಚಂದ್ರಾಣಿ ಅವರು, ಬೆಂಗಳೂರು ಬಿಟ್ಟು ಮಹಾರಾಷ್ಟ್ರಕ್ಕೆ ಹೋಗಿರುವ ಕುರಿತು ಯಾರಿಗೂ ಮಾಹಿತಿಯಿರಲಿಲ್ಲ. ಪೊಲೀಸ್‌ ವಿಚಾರಣೆಯ ಸಂದರ್ಭದಲ್ಲಿಯೇ ಈ ವಿಚಾರ ಬಹಿರಂಗವಾಗಿದೆ. ಕಾಮರಾಜ್‌ ಅವರು ಪ್ರಕರಣ ದಾಖಲಿಸುತ್ತಾರೆಂದು ತಿಳಿದುಬಂದ ನಂತರ ಅವರು ಮಹಾರಾಷ್ಟ್ರಕ್ಕೆ ಓಡಿಹೋಗಿದ್ದಾರೆಂಬ ಕುರಿತು ಗುಮಾನಿಯೂ ಹಬ್ಬುತ್ತಿದೆ.

ಇದರ ವಿಚಾರಣೆಯನ್ನು ನಡೆಸಿದಾಗ ಪೊಲೀಸರಿಗೆ ಯಾವುದೇ ಸಿಸಿಟಿವಿ ವೀಡಿಯೋ ಲಭ್ಯವಾಗದೇ ಇರುವುದು ವಿಚಾರಣೆಗೆ ತೊಡಕಾಗಿದೆ.

ಪರ-ವಿರೋಧ ಚರ್ಚೆಯಲ್ಲಿ ಇಬ್ಬಾಗವಾದ ಸಾಮಾಜಿಕ ಜಾಲತಾಣಗಳು:

ಈ ಪ್ರಕರಣ ಬೆಳಕಿಗೆ ಬರುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ಆರಂಭವಾಗಿದ್ದವು. ಮೊದಲಿಗೆ ಹಿತೇಶಾ ಅವರಿಗಾದ ಗಾಯವನ್ನು ನೋಡಿ ಎಲ್ಲರೂ ಅವರನ್ನು ಕನಿಕರ ದೃಷ್ಟಿಯಿಂದ ನೋಡಿ ಬೆಂಬಲ ನೀಡಿದ್ದರು. ಯಾವಾಗ ಕಾಮರಾಜ್‌ ಅವರು ತಮ್ಮ ಪರವಾದ ವಾದವನ್ನೂ ಮಂಡಿಸಿದರೋ, ಆ ಸಂದರ್ಭದಲ್ಲಿ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು.

ಈಗ ಸಾಂಆಜಿಕ ಜಾಲತಾಣವು ಸಂಪೂರ್ಣವಾಗಿ ಇಬ್ಬಾಗವಾದಂತಿದೆ. ಪರ ವಿರೋಧ ಚರ್ಚೆಗಳು ತೀವ್ರವಾಗಿ ಸಾಗುತ್ತಿವೆ. ಹಿತೇಶಾ ಹಾಗೂ ಕಾಮರಾಜ್‌ ಅವರು ರಾಷ್ಟ್ರಮಟ್ಟದಲ್ಲಿ ಟ್ರೆಂಡ್‌ ಆಗುವ ಮಟ್ಟಕ್ಕೆ ಈ ಚರ್ಚೆಗಳು ನಡೆದಿವೆ.

#JusticeforHitesha, #JusticeforKamaraj ಎಂಬೆರಡು ಹ್ಯಾಷ್‌ಟ್ಯಾಗ್‌ಗಳು ಸಂಪೂರ್ಣ ಟ್ವಿಟರ್‌ ಅನ್ನು ಆವರಿಸಿಕೊಂಡಿವೆ.

ಇನ್ನು ರಾಜ್ಯಸಭಾ ಸಂಸದರಾದ ಜಿ ಸಿ ಚಂದ್ರಶೇಖರ್‌ ಅವರು ಕೂಡಾ ಈ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ. “ಮಾನವೀಯತೆಯ ದೃಷ್ಟಿಯಿಂದ ಜೊಮ್ಯಾಟೋ ಡೆಲಿವರಿ ಕಾಮರಾಜು ಅವರ ಬೆಂಬಲಕ್ಕೆ ನಾನಿದ್ದೇನೆ. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡ ಜನರಿಗೆ ಎಂದಿಗೂ ಅನ್ಯಾಯವಾಗಬಾರದು. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡಿಸಿ ಕಾಮರಾಜು ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇನೆ,” ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹೀಗೆ ಅತ್ಯಂತ ರೋಚಕವಾಗಿ ಸಾಗುತ್ತಿರುವ ಈ ಪ್ರಕರಣದ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಜನರ ಗಮನ ಸೆಳೆಯಲು ಹಿತೇಶಾ ಮಾಡಿರುವ ತಂತ್ರ ಎಂದು ಕೆಲವರು ಹೇಳಿದರೆ, ಮಹಿಳೆಯರಿಗೆ ದೇಶದಲ್ಲಿ ಸುರಕ್ಷೆತೆಯಿಲ್ಲವೇ ಎಂಬ ಪ್ರಶ್ನೆಯೂ ಕೇಳಲಾಗುತ್ತಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com