ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣದ ಕುರಿತಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸೋಶಿಯಲ್ ಮೀಡಿಯಾ ವಾರ್ ಶುರುವಾಗಿದೆ.
ಸಿಡಿ ಪ್ರಕರಣದ ಪ್ರಮುಖ ಆರೋಪಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ನಿಂತಿರುವ ಚಿತ್ರವನ್ನು ಹಂಚಿರುವ ಕರ್ನಾಟಕ ಬಿಜೆಪಿಯ ಅಧಿಕೃತ ಖಾತೆ, “ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ?” ಎಂದು ಪ್ರಶ್ನಿಸಿದೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಖಾತೆ ನಿರ್ವಹಣಾಕಾರರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೆಹಲಿ ಕೆಂಪುಕೋಟೆ ಬಳಿ ಗಲಭೆ ಆರೋಪಿ ದಿಪ್ ಸಿಧು, ಮಾದಕ ದ್ರವ್ಯ ಪ್ರಕರಣದ ಆರೋಪಿಯೊಂದಿಗಿನ ತೇಜಸ್ವಿ ಸೂರ್ಯ ಫೋಟೋ, ಲಕ್ಷಣ ಸವದಿ ಹಾಗೂ ಪ್ರತಾಪ್ ಸಿಂಹ ವಿವಿಧ ಪ್ರಕರಣದ ಆರೋಪಿಗಳೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದು, ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಕರ್ನಾಟಕ ಬಿಜೆಪಿ ಎಂದು ಆರೋಪಿಸಿದೆ.
ದೇಶದ್ರೋಹಿ & ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಹಾಗೂ ತೇಜಸ್ವಿ ಸೂರ್ಯ ಮತ್ತು ಡ್ರಗ್ ಡೀಲರ್ಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.