ವಿಧಾನಸಭೆಯಲ್ಲಿ ಅಕ್ರಮ ಭೂಕಬಳಿಕೆ ಕುರಿತ ಚರ್ಚೆ; ಕರ್ನಾಟಕ ಭೂಗಳ್ಳರ ಪಾಲಿಗೆ ಸ್ವರ್ಗ ಎಂದ ಎ ಟಿ ರಾಮಸ್ವಾಮಿ

ತಪ್ಪು ಎಲ್ಲಿದೆ? ಕಾರ್ಯಾಂಗದಲ್ಲಿಯೋ, ಶಾಸಕಾಂಗದಲ್ಲಿಯೋ, ನ್ಯಾಯಾಂಗದಲ್ಲಿಯೋ? ಈ ಮೂರರಲ್ಲಿ ಯಾವುದು ತಪ್ಪು ಮಾಡ್ತಾ ಇವೆ? ಅವರನ್ನು ಬಲಿ ಹಾಕಿ. ನಾವು ಶಾಸಕಾಂಗದವರು ಮಾತ್ರ ತಲೆಮೇಲೆ ತಪ್ಪು ಹೊತ್ತುಕೊಂಡು ಹೋಗಬೇಕೇ?, ಎಂದು ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ಅಕ್ರಮ ಭೂಕಬಳಿಕೆ ಕುರಿತ ಚರ್ಚೆ; ಕರ್ನಾಟಕ ಭೂಗಳ್ಳರ ಪಾಲಿಗೆ ಸ್ವರ್ಗ ಎಂದ ಎ ಟಿ ರಾಮಸ್ವಾಮಿ

ಬೆಂಗಳೂರು ಮೆಟ್ರೋಪಾಲಿಟನ್‌ ರೀಜನ್‌ (BMR) ವ್ಯಾಪ್ತಿಯಲ್ಲಿ ಬರುವಂತಹ ಸರ್ಕಾರಿ ಜಮೀನು ಕಬಳಿಕೆಯ ಕುರಿತು ಇಂದು ವಿಧಾನಸಭೆಯಲ್ಲಿ ಪಕ್ಷಾತೀತವಾದ ಚರ್ಚೆ ನಡೆದಿದೆ. ಈ ವಿಚಾರವನ್ನು ಸದನದಲ್ಲಿ ಎತ್ತಿದ ಶಾಸಕ ಎ ಟಿ ರಾಮಸ್ವಾಮಿ ಅವರು, ಕಂದಾಯ ಸಚಿವರ ಲಿಖಿತ ಉತ್ತರವನ್ನು ಇಟ್ಟುಕೊಂಡು ಚರ್ಚೆಯನ್ನು ಆರಂಭಿಸಿದರು.

BMRನಲ್ಲಿ 19.8 ಲಕ್ಷ ಎಕರೆ ಜಮೀನಿದೆ. ಅದರಲ್ಲಿ 7.21 ಲಕ್ಷ ಎಕರೆ ಸರ್ಕಾರಕ್ಕೆ ಸೇರಿದ ಭೂಮಿ. ಈ ಜಮೀನು ಏನಾಗಿದೆ? ಯಾರ ಪಾಲಾಗಿದೆ? ಕಂದಾಯ ಸಚಿವರು ಲಿಖಿತ ಉತ್ತರ ಕೊಟ್ಟಿದ್ದರು. ಭೂಮಾಫಿಯಾ ಎಷ್ಟೊಂದು ಬಲಾಢ್ಯವಾಗಿದೆ. ಅವರು ಹೇಗೆ ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ, ಎಂಬುದು ಇದರ ಅರ್ಥ. ಆಡಳಿತ ಭೂಮಾಫಿಯಾವನ್ನು ನಿಯಂತ್ರಿಸುತ್ತಿಲ್ಲ. ಆದರೆ, ಭೂಮಾಫಿಯಾ ಆಡಳಿತವನ್ನು ನಿಯಂತ್ರಿಸುತ್ತಿದೆ. ಭೂಗಳ್ಳರಿಗೆ ಕರ್ನಾಟಕ ರಾಜ್ಯ ಸ್ವರ್ಗದಂತಾಗಿದೆ, ಎಂದು ಅವರು ಸದನದಲ್ಲಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಯಾರೇ ಆಡಳಿತ ಪಕ್ಷದಲ್ಲಿ ಇರಲಿ. ಇಲ್ಲಿ ಬಂದು ಕುಳಿತಾಗ ಒಂದು ರೀತಿ ಕೈಕಟ್ಟಿ ಹಾಕಿದಂತೆ ಇರುತ್ತದೆ ಎಂದರೂ ತಪ್ಪಾಗಿಲಿಕ್ಕಿಲ್ಲ, ಎಂದು ಕಂದಾಯ ಮಂತ್ರಿಗಳಾದ ಆರ್‌ ಅಶೋಕ್‌ ಅವರು ಉತ್ತರ ನೀಡಿದ್ದಾರೆ. ಕೆಆರ್‌ ಪುರದಲ್ಲಿ 150 ಕೋಟಿ ಬೆಲೆಬಾಳುವ ಸರ್ಕಾರಿ ಜಾಗದಲ್ಲಿ ಫ್ಲ್ಯಾಟ್‌ ನಿರ್ಮಾಣ ಮಾಡುತ್ತಿದ್ದಾರೆ ವಿಚಾರ ತಿಳಿಯುತ್ತಿದ್ದಂತೆಯೇ ಆ ವ್ಯಾಪ್ತಿಯ ಸಬ್‌ರಿಜಿಸ್ಟ್ರಾರ್‌ ಅವರನ್ನು ವಜಾಗೊಳಿಸಲಾಗಿದೆ. ತಹಶಿಲ್ದಾರರನ್ನು ಕೂಡಾ ಸಸ್ಪೆಂಡ್‌ ಮಾಡಲಾಗಿದೆ. ಆದರೆ, ವಿಪರ್ಯಾಸವೆಂದರೆ, ಸಸ್ಪೆಂಡ್‌ ಮಾಡಿದ ನಾಲ್ಕು ಗಂಟೆಯ ಒಳಗಾಗಿ ಸ್ಟೇ ಆರ್ಡರ್‌ ಬಂದುಬಿಡ್ತು. ಆದರೆ, ಬೆನ್ನು ಬಿಡದ ಬೇತಾಳನ ರೀತಿಯಲ್ಲಿ ವಾಪಾಸ್‌ ಬಂದ ಅಧಿಕಾರಿಯನ್ನು ತುಮಕೂರಿಗೆ ವರ್ಗ ಮಾಡಿದೆ. ಆದರೆ, ಆ ಅಧಿಕಾರಿ ಮತ್ತೆ ಕೋರ್ಟ್‌ಗೆ ಹೋಗಿ ಬೆಂಗಳೂರಿಗೇ ವಾಪಾಸ್‌ ಬಂದ. ಬೆಂಗಳೂರಿನಲ್ಲಿ ಇಂತಹ ಲಕ್ಷಾಂತರ ಕೇಸುಗಳಿವೆ. ಲಕ್ಷಾಂತಹ ಎಕರೆ ಭೂ ಕಬಳಿಕೆಯಾಗಿದೆ, ಎಂದು ಕಂದಾಯ ಸಚಿವರೇ ಉತ್ತರ ನೀಡಿದ್ದಾರೆ,” ಎಂಬ ಮಾತನ್ನು ಎ ಟಿ ರಾಮಸ್ವಾಮಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ 43 ಸಬ್‌-ರಿಜಿಸ್ಟ್ರಾರ್‌ ಕಚೇರಿಗಳ ಸಿಂಡಿಕೇಟ್‌ ನಿರ್ಮಾಣವಾಗಿದೆ. ಇಲ್ಲಿಯ ಅಧಿಕಾರಿ ಅಲ್ಲಿಗೆ, ಅಲ್ಲಿಯವರು ಇಲ್ಲಗೆ ಬರುತ್ತಾರೆ. ನಾನು ಮುಖ್ಯಮಂತ್ರಿಗಲ್ಲಿ ಮನವಿ ಸಲ್ಲಿಸಿದ್ದೆ, ಬೆಂಗಳೂರಿನ ಸಬ್‌-ರಿಜಿಸ್ಟ್ರಾರ್‌ ಅಧಿಕಾರಿಗಳನ್ನು ಹೊರಗೆ ಹಾಕಿ, ಕಂದಾಯ ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರಗೆ ಹಾಕಿ, ಪೊಲೀಸ್‌ ಅಧಿಕಾರಿಗಳನ್ನು, ಸರ್ವೇ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳನ್ನು ಹೊರಗೆ ಹಾಕಿ. ಆಡಳಿತದಲ್ಲಿ ಹೊಸತನ ಬರುತ್ತದೆ, ಚುರುಕು ಬರುತ್ತದೆ ಎಂದು ನಾನು ಹೇಳಿದ್ದೆ

ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಪಿ ಟಿ ಪರಮೇಶ್ವರ್‌ ನಾಯ್ಕ್‌ ಅವರು, ಅಧಿಕಾರಿಗಳನ್ನು ನಾವು ಹೊರಗೆ ಹಾಕಲು ಹೋಗಿ ಅವರೇ ನಮ್ಮನ್ನು ಹೊರಗೆ ಹಾಕುವಂತಾಗಿದೆ. ಅಷ್ಟು ಪ್ರಭಾವಿಗಳಿದ್ದಾರೆ ಅವರು, ಎಂದು ಹೇಳಿದರು.

ಶಾಸಕ ಪಿ ಟಿ ಪರಮೇಶ್ವರ್‌ ನಾಯ್ಕ್
ಶಾಸಕ ಪಿ ಟಿ ಪರಮೇಶ್ವರ್‌ ನಾಯ್ಕ್

ನಂತರ ಮತ್ತೆ ಮಾತು ಮುಂದುವರೆಸಿದ ಎ ಟಿ ರಾಮಸ್ವಾಮಿ ಅವರು, ಒತ್ತುವರಿ ದೊಡ್ಡ ಸಮಸ್ಯೆ ಅಲ್ಲ ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಒತ್ತುವರಿ ಮಾಡಿಕೊಂಡವರನ್ನು ಯಾವಗಾ ಬೇಕಾದರೂ ತೆರವುಗೊಳಸಬಹುದು. ಅವರ ಬಳಿ ಹಕ್ಕು ದಾಖಲೆಗಳಿರುವುದಿಲ್ಲ. ಆದರೆ, ಸರ್ಕಾರಿ ಭೂಮಿಗೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಭೂಮಾಲಿಕರಾಗಿ ಕುಳಿತಿದ್ದಾರೆ. ಅದು ಸುಳ್ಳು ದಾಖಲೆ ಅಂತ ನೀವು ಹೇಳ್ತೀರಿ, ನಾವು ಹೇಳ್ತೀವಿ, ಆದರೆ ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಹೇಳಿ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗುತ್ತಾ ಇಲ್ಲ. ಅವರು ಬಲಾಢ್ಯರು ಇದ್ದಾರೆ ಅಂತ ಆದರೆ, ಅವರು ಕಾನೂನಿಗಿಂತಲೂ ದೊಡ್ಡವರಾ? ಇಂತಹ ಅಕೃತ್ಯಗಳನ್ನು ನಾವು ಸಹಿಸಿಕೊಂಡು ಹೋದರೆ, ಈ ರಾಜ್ಯದ ಜನ ನಮ್ಮನ್ನು ಸಹಿಸುವುದಿಲ್ಲ. ಈಗಿನ ಬಜೆಟ್‌ ಮೊತ್ತ ಎಷ್ಟಿದೆ, ಆ ಪ್ರಕಾರ ಎರಡು ಬಜೆಟ್‌ಗಳಿಗಾಗುವಷ್ಟು ದುಡ್ಡನ್ನು ಬರೀ BMR ವ್ಯಾಪ್ತಿಯೇನಿದೆ ಅಲ್ಲೇ ನಾವು ತಂದುಕೊಡಬಹುದು. ಅಷ್ಟು ಹಣ ಬಂದಿಲ್ಲವಾದರೆ ನಾನು ಈ ಸದನಕ್ಕೆ ಬರುವುದಿಲ್ಲ, ಎಂದು ರಾಮಸ್ವಾಮಿ ಅವರು ಸವಾಲು ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು, ನೈಸ್‌ ಕಂಪೆನಿಯ ಕುರಿತು ನಾವೆಲ್ಲಾ ಸೇರಿ ಸಾವಿರ ಪುಟಗಳ ವರದಿ ನೀಡಿದ್ದೆವು. ಅದು ಏನಾಗಿದೆ? ಅದನ್ನು ಮುಚ್ಚಿ ಹಾಕಿದ್ದೀರಿ. ಕರ್ನಾಟಕ ರಾಜ್ಯದ ಒಂದು ಬಜೆಟ್‌ ಅಲ್ಲ. ಎರಡು ಬಜೆಟ್‌ ಅದರಲ್ಲಿ ಬರುತ್ತದೆ. BMR ಹಾಗೂ ನೈಸ್‌ ಕಂಪೆನಿಯ ಅಕ್ರಮಗಳ ಬಗ್ಗೆ ಕ್ರಮ ತೆಗೆದುಕೊಂಡರೆ ಸಾಕು, ರಾಜ್ಯಕ್ಕೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಆದರೆ, ನೀವು ಅದನ್ನು ಸಕ್ರಮಗೊಳಿಸುತ್ತಾ ಇದ್ದೀರಾ. ನೈಸ್‌ ವಿಚಾರಣೆ ಎಲ್ಲಿ ಬಂತು ನಿಲ್ಲಿತು? ಸತ್ತು ಹೋಯ್ತಾ ಅದು? ಎಂದು ಪ್ರಶ್ನಿಸಿದರು.

ಜೆಡಿಎಸ್‌ ಶಾಸಕ ಶಿವಲಿಂಗೇಗೌಡ
ಜೆಡಿಎಸ್‌ ಶಾಸಕ ಶಿವಲಿಂಗೇಗೌಡ

ನಂತರ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ ಅವರು ಇದು ಇತ್ತೀಚಿಗೆ ಆಗಿದ್ದಲ್ಲ. ಸುಮಾರು 30-40 ವರ್ಷಗಳಿಂದ ಆಗಿರುವಂತಹ ಅಕ್ರಮಗಳು ಇದ್ದಾವೆ. ಕಾಯಿಲೆ ಬಂದಾಗಲೇ ಔಷಧಿ ಕೊಟ್ಟಿದ್ದಿದ್ರೆ ಈ ಪರಿಸ್ಥಿತಿ ಬರ್ತಾ ಇರ್ಲಿಲ್ಲ. ಈಗ ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಸುಪ್ರಿಂಕೋರ್ಟ್‌ ಆದೇಶ ನೀಡಿದ ಪ್ರಕಾರ ಹೆಚ್ಚುವರಿಯಾಗಿ ನೀಡಿದ ಜಮೀನನ್ನು ವಾಪಾಸು ಪಡೆಯಬೇಕು. ಆದರೆ, ಇನ್ನೂ ಅದು ಮಾಡಲು ಆಗುತ್ತಾ ಇಲ್ಲ. 400 ಎಕರೆಗಿಂತಲೂ ಹೆಚ್ಚು ಜಮೀನು ಹೆಚ್ಚುವರಿಯಾಗಿದೆ. ಈಗ ಎ ಟಿ ರಾಮಸ್ವಾಮಿ ಅವರು ಹೇಳಿದ ಪ್ರಕಾರ ಜೈಲಿಗೆ ಹಾಕಿದರೆ, ಎಷ್ಟು ಜನರನ್ನು ಜೈಲಿಗೆ ಹಾಕಲಾಗುತ್ತದೆ? ಹಾಗಾಗಿ, ಇಂತಹ ಅಕ್ರಮಗಳಿಗೆ ಸರಿಯಾದ ಕಾನೂನುಗಳನ್ನು ತರಬೇಕಾಗಿದೆ. ಇದರಿಂದಾಗಿ ಕೋರ್ಟ್‌ಗಳಲ್ಲಿ ಅವರು ಯಾವುದೇ ರಿಲೀಫ್‌ ಪಡೆಯಲು ಸಾಧ್ಯವಾಗಬಾರದು. ಅಂತಹ ಕಠಿಣ ಕಾನೂನು ತರಲು ನಾನು ಸಿದ್ದನಿದ್ದೇನೆ. ಇದನ್ನು ಈಗ ನಿಲ್ಲಿಸಿಲ್ಲವಾದರೆ, ಇದು ಬೆಳೆಯುತ್ತಾ ಹೋಗುತ್ತದೆ. ಅದಕ್ಕೆ ಅರ್ಥನೇ ಇರುವುದಿಲ್ಲ. ನೈಸ್‌ ಕಂಪೆನಿಯ ಅಕ್ರಮಗಳ ಕುರಿತು ತನಿಖೆ ನಡೆಸಲೂ ನಮ್ಮ ಸರ್ಕಾರ ತಯಾರಿದೆ, ಎಂದರು.

ಕಂದಾಯ ಸಚಿವ ಆರ್‌ ಅಶೋಕ
ಕಂದಾಯ ಸಚಿವ ಆರ್‌ ಅಶೋಕ

ರೇವಣ್ಣ ಮಾತನಾಡಿ, ನೈಸ್‌ ಕಂಪೆನಿಯವರು ಎಷ್ಟು ಬಲಿಷ್ಟರಾಗಿದ್ದಾರೆ ಎಂದರೆ, ಅವರು ಕಾನೂನು ಸಚಿವರನ್ನೇ ಕಿತ್ತು ಹಾಕಿದ್ದಾರೆ, ಎಂದು ನಾನು ಕೇಳಿದ್ದೆ. ಅಷ್ಟೊಂದು ಶಕ್ತಿ ಇದೆ ನೈಸ್‌ಗೆ. ಈಗ ರಾಂಸ್ವಾಮಿ ಅವರು ಒಂದು ಸಲಹೆ ಕೊಟ್ಟಿದ್ದಾರೆ. ಅದರ ಪ್ರಕಾರ ಎರಡು ವರ್ಷ ಬಜೆಟ್‌ನ ಹಣ ಬರುತ್ತದೆ. ಶಿವಲಿಂಗೇಗೌಡರು ಕೊಟ್ಟ ಸಲಹೆಯ ಪ್ರಕಾರ ಎರಡು ಬಜೆಟ್‌ ಮಂಡಿಸಬಹುದು. ಹಾಗಾಗಿ ಇದನ್ನು ಪಾಲಿಸಿದರೆ 2025ರ ವರೆಗೆ ದುಡ್ಡಿಗೆ ಬರ ಇರುವುದಿಲ್ಲ, ಎಂದು ಹೇಳಿದರು.

ಜೆಡಿಎಸ್‌ ಶಾಸಕ ಹೆಚ್‌ ಡಿ ರೇವಣ್ಣ
ಜೆಡಿಎಸ್‌ ಶಾಸಕ ಹೆಚ್‌ ಡಿ ರೇವಣ್ಣ

ರೇವಣ್ಣ ಮಾತು ಮುಗಿಸುತ್ತಿದ್ದಂತೆಯೇ ಮಾತನಾಡಿದ ಸಭಾಪತಿ ಸ್ಥಾನದಲ್ಲಿದ್ದ ಶಾಸಕ ಅರಗ ಜ್ಞಾನೇಂದ್ರ ಅವರು, 192A ಕಾಯ್ದೆ ನಾವು ತಂದಿದ್ದೆವೆ. ಸರ್ಕಾರಿ ಜಮೀನನ್ನು ನಕಲಿ ದಾಖಲೆ ಬಳಸಿ ಕಬಳಿಸುವವರನ್ನು ಜೈಲಿಗೆ ಹಾಕುವ ಕಾಯ್ದೆ ಅದು. ಹಳ್ಳಿಗಳಲ್ಲಿ ಒಂದು ಗುಂಟೆ, ಅರ್ಧ ಗುಂಟೆ ಜಮೀನು ಕಬಳಿಸಿದವರು ಬೆಂಗಳೂರಿನ ನ್ಯಾಯಾಲಯಕ್ಕೆ ಅಲಿಯುತ್ತಾ ಇದ್ದಾರೆ. ಆದರೆ, ಬೆಂಗಳುರಿನಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಒಬ್ಬನೇ ಒಬ್ಬ ಕಂದಾಯ ಅಧಿಕಾರಿ ಅಥವಾ ಅರಣ್ಯಾಧಿಕಾರಿ ಬೆಂಗಳುರಿನಲ್ಲಿ 192ಎ ಪ್ರಕರಣ ದಾಖಲಿಸಲೇ ಇಲ್ಲ. ಕಾಯ್ದೆ ಇಡೀ ರಾಜ್ಯಕ್ಕೇ ಅನ್ವಯಿಸುತ್ತೆ ಅಂತ ಹೇಳಿದರೆ, ಬೆಂಗಳೂರನ್ನು ಬಿಟ್ಟಿದೆಯೇ ಅದು? ಇದು ಪರಿಸ್ಥಿತಿ ಎಂದು ಖೇದ ವ್ಯಕ್ತಪಡಿಸಿದರು.

ಅರಗ ಜ್ಞಾನೇಂದ್ರ
ಅರಗ ಜ್ಞಾನೇಂದ್ರ

ನಂತರ ಚರ್ಚೆ ಮುಂದುವರೆಸಿದ ರಾಮಸ್ವಾಮಿ ಅವರು, ನಕಲಿ ದಾಖಲೆ ಸೃಷ್ಟಿಸಿದವರಲ್ಲಿ ಯಾರೂ ಬಡವರಿಲ್ಲ. ಅವರೆಲ್ಲಾ ಶ್ರೀಮಂತರು. ವಿಧಾನಸೌಧದ ಸುತ್ತಲೇ ಗಿರಕಿ ಹೊಡೆಯುವವರು. ಲಕ್ಷಾಂತರ ಎಕರೆ ಜಮೀನು ಕಬಳಿಸಿದ್ದಾರೆ. ಅವರೊಬ್ಬರ ಮೇಲೂ ಕ್ರಮ ಆಗಿಲ್ಲ. ಗೂಂಡಾ ಕಾಯ್ದೆ ಉಪಯೋಗ ಮಾಡಿ. ಈಗಲೂ ನಕಲಿ ದಾಖಲೆ ಸೃಷ್ಟಿ ಮಾಡುತ್ತಾ ಇದ್ದಾರೆ. ಅಧಿಕಾರಿಗಳು ಶಾಮೀಲಾಗದೇ ಇದನ್ನು ಸೃಷ್ಟಿ ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ನೋಡಿಯೂ ನಾವು ಮೌನವಾಗಿ ಕುಳಿತರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಕರ್ನಾಟಕ ರಾಜ್ಯದ ಜನತೆಯೂ ಕ್ಷಮಿಸುವುದಿಲ್ಲ, ಎಂದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್‌ ಅಶೋಕ್‌ ಅವರು, ಕೆ ಆರ್‌ ಪುರ ಜಮೀನಿನ ಕುರಿತು ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ನನ್ನ ಆದೇಶದ ಮೇರೆಗೆ ಪತ್ರ ಬರೆದಿದ್ದರು. ಯಾವ ಸರ್ವೇ ನಂಬರ್‌ನಲ್ಲಿ ಅಕ್ರಮ ನಡೆದಿದೆ, ಆ ಜಮೀನನ್ನು ನೋಂದಾಯಿಸದಂತೆ ಪತ್ರ ಬರೆದಿದ್ದೆವು. ಪತ್ರ ಬರೆದ ನಂತರ ನೋಂದಾವಣಿಯಾಗಿದೆ. ಆ ನಂತರ ಅವರು ವಜಾ ಆಗಿದ್ದಾರೆ, ನಂತರ ಕೋರ್ಟ್‌ಗೆ ಹೋಗೆ ವಜಾ ಮಾಡಿದ ಆದೇಶಕ್ಕೆ ಸ್ಟೇ ಆರ್ಡರ್‌ ತಂದಿದ್ದಾರೆ, ಎಂದರು.

ಆಗ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ ಅವರು, ಈ ಅಕ್ರಮ ಭೂ ಕಬಳಿಕೆದಾರರ ಮೂಲ ಪರಾಮರ್ಶಿಸದೇ ಹೋದರೆ, ನಮ್ಮ ರಾಜ್ಯಕ್ಕೆ ನಾವೇ ಬೆಂಕಿ ಹಾಕಿದಂತೆ ಎಂಬುದನ್ನು ತಿಳಿದುಕೊಳ್ಳಿ. ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಈ ಅಕ್ರಮದ ಬೇರುಗಳನ್ನು ಕಿತ್ತು ಎಸೆಯಬೇಕು. ಅದಕ್ಷ ಅಧಿಕಾರಿಗಳಿಗೆ ಕಾನೂನಿನ ರಕ್ಷಣೆ ಕೊಟ್ಟಿದ್ದು ಕೆಎಟಿ, ತೆಗೆದುಹಾಕಿ ಅದನ್ನು. ಏನಾಗುತ್ತೆ ಕೆಎಟಿ ತೆಗೆದು ಹಾಕಿದರೆ? ನಿಮ್ಮ ಅಸಹಾಯಕತೆಯನ್ನು ವಿಧಾನಸಭೆಯಲ್ಲಿ ತೋರಿಸಿಕೊಳ್ಳುವುದಾದರೆ, ನಾವು ಯಾಕೆ ಇರಬೇಕು ಇಲ್ಲಿ. ತಪ್ಪು ಎಲ್ಲಿದೆ? ಕಾರ್ಯಾಂಗದಲ್ಲಿಯೋ, ಶಾಸಕಾಂಗದಲ್ಲಿಯೋ, ನ್ಯಾಯಾಂಗದಲ್ಲಿಯೋ? ಈ ಮೂರರಲ್ಲಿ ಯಾವುದು ತಪ್ಪು ಮಾಡ್ತಾ ಇದ್ದಾವೆ? ಅವರನ್ನು ಬಲಿ ಹಾಕಿ. ನಾವು ಶಾಸಕಾಂಗದವರು ಮಾತ್ರ ತಲೆಮೇಲೆ ತಪ್ಪು ಹೊತ್ತುಕೊಂಡು ಹೋಗಬೇಕೇ? ಉಳಿದ ಎರಡು ಅಂಗಗಳು ತಪ್ಪೇ ಮಾಡಿಲ್ವಾ ಈ ಆಡಳಿತ ವ್ಯವಸ್ಥೆಯೊಳಗೆ? ನಡೀಲಿ ಚರ್ಚೆ. ಯಾರ ತಪ್ಪು ಎಂಬುದನ್ನು ವಿಮರ್ಶೆ ಮಾಡೋಣ. ಅದರ ಪ್ರಕಾರ ಶಿರಸ್ಸಾವಹಿಸಿ ನಡೆದುಕೊಳ್ಳೋಣ, ಎಂದು ತೀಕ್ಷ್ಣ ನುಡಿಗಳನ್ನಾಡಿದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com