ಕರೋನಾ ಸೋಂಕು ಹೆಚ್ಚಳ ಹಿನ್ನಲೆ, ಪ್ರಧಾನಿ ಮೋದಿಯವರು ರಾಜ್ಯಗಳ ಮುಖ್ಯ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಸಭೆಯಲ್ಲಿ ಭಾಗಿಯಾಗಿ ರಾಜ್ಯದಲ್ಲಿನ ಕರೋನಾ ಸ್ಥಿತಿಗತಿ ಹಾಗು ನಿಯಂತ್ರಣ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಸರ್ಕಾರದಿಂದ ಈಗಾಗಲೇ ಕಠಿಣ ಕ್ರಮ ಜಾರಿಮಾಡಿ ಮಾರ್ಗಸೂಚಿಯನ್ನು ಹೊರಡಿಸಿದ್ದು, ನಿಯಮಗಳನ್ನು ಕಡ್ದಾಯವಾಗಿ ಅನುಸರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಧಾರ್ಮಿಕ, ರಾಜಕೀಯ, ಮದುವೆ ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಗುಂಪು ಸೇರುವಂತಿಲ್ಲ, ಇಂತಿಷ್ಟೇ ಜನ ಸೇರಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಕೆಲವು ಕ್ಷೇತ್ರಗಳಿಗೆ ವಿಧಾನಸಭಾ, ಲೋಕಸಭಾ ಚುನಾವಣಾ ಹಿನ್ನಲೆ, ದೊಡ್ಡ-ದೊಡ್ಡ ಕೂಟಗಳು ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹೊರಾಂಗಣ ಕಾರ್ಯ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ, ಸರ್ಕಾರ ಸೂಚಿಸಿದ ನಿಯಮಗಳನ್ನು ಅನುಸರಿಸುವುದು ಕಡ್ಡಾಯ.