ಮೈಮುಲ್‌ ಚುನಾವಣೆ: ಜಿಟಿಡಿ ಬಣಕ್ಕೆ ಭರ್ಜರಿ ಗೆಲುವು, ಹೆಚ್‌ಡಿಕೆ ಬಣಕ್ಕೆ ಭಾರಿ ಮುಖಭಂಗ

ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮೈಮುಲ್‌ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಜಿಟಿಡಿ ಅವರ ಬಣವನ್ನು ಸೋಲಿಸಲು ಹರಸಾರಸ ಪಟ್ಟಿದ್ದ ಜೆಡಿಎಸ್‌ ವರಿಷ್ಟರ ಬಣಕ್ಕೆ ತೀವ್ರ ಮುಖಭಂಗವಾಗಿದೆ.
ಮೈಮುಲ್‌ ಚುನಾವಣೆ: ಜಿಟಿಡಿ ಬಣಕ್ಕೆ ಭರ್ಜರಿ ಗೆಲುವು, ಹೆಚ್‌ಡಿಕೆ ಬಣಕ್ಕೆ ಭಾರಿ ಮುಖಭಂಗ

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಮೈಮುಲ್‌)ನ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಜೆಡಿಎಸ್‌ ನಾಯಕ ಜಿಟಿ ದೇವೇಗೌಡ ಅವರ ಬಣ ಭರ್ಜರಿಯಾಗಿ ಜಯ ಸಾಧಿಸಿ ಪಾರಮ್ಯ ಮೆರೆದಿದೆ.

ಕಳೆದ ಹಲವು ದಿನಗಳಿಂದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಈ ಚುನಾವಣೆಯಲ್ಲಿ ಜಿಟಿ ದೇವೇಗೌಡ ಅವರ ಬಣವನ್ನು ಸೋಲಿಸಲು ಹೆಚ್‌ಡಿಕೆ ಹಾಗೂ ಸಾ ರಾ ಮಹೇಶ್‌ ಬಣ ಹರಸಾಹಸ ಪಟ್ಟಿತ್ತು. ಸಹಕಾರಿ ಕ್ಷೇತ್ರದಲ್ಲಿ ಜಿಟಿಡಿ ಅವರಿಗಿರುವ ಪ್ರಾಬಲ್ಯವನ್ನು ಕುಗ್ಗಿಸಲು ಜೆಡಿಎಸ್‌ ಹಿರಿಯ ನಾಯಕರೇ ಮುಂದೆ ನಿಂತು ಸಭೆ ನಡೆಸಿದ್ದರು. ಆದರೆ, ಜಿಟಿಡಿ ಪ್ರಭಾವದ ಮುಂದೆ ಇದ್ಯಾವುದೂ ಪರಿಣಾಮ ಬೀರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

15 ನಿರ್ದೇಶಕ ಸ್ಥಾನಗಳಲ್ಲಿ 12 ಸ್ಥಾನಗಳನ್ನು ಜಿಟಿಡಿ ಬಣ ಗೆಲ್ಲುವ ಮೂಲಕ ಮುಂದೆ ಐದು ವರ್ಷಗಳಿಗೆ ಮೈಮುಲ್‌ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದು ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿಕೆ ಹಾಗೂ ಸಾ ರಾ ಮಹೇಶ್‌ ಬಣಕ್ಕೆ ಕೇವಲ ಮೂರು ಸ್ಥಾನಗಳು ಲಭಿಸಿವೆ.

ಮೈಮುಲ್‌ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಸಲುವಾಗಿ ಹೆಚ್‌ಡಿಕೆ ಖುದ್ದು ಮೈಸೂರಿನಲ್ಲಿ ಮೊಕ್ಕಾಂ ಹೂಡಿದ್ದರು. ಸಾಲುಸಾಲು ಸಭೆಗಳನ್ನು ನಡೆಸಿ ಜಿಡಿಟಿ ವಿರುದ್ದ ವಾಗ್ಪ್ರಹಾರ ನಡೆಸಿದ್ದರು. ಆದರೆ, ಜಿಟಿಡಿ ಅವರ ರಣತಂತ್ರದ ಎದುರು ಜೆಡಿಎಸ್‌ ವರಿಷ್ಠರ ಆಟ ನಡೆಯಲಿಲ್ಲ.

ಚುನಾವಣೆಗೂ ಮುನ್ನ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯ ಸ್ಥಳೀಯ ನಾಯಕರೊಂದಿಗೆ ಜಿಟಿಡಿ ಹೊಂದಾಣಿಕೆ ಮಾಡಿಕೊಂಡಿದ್ದು ಜೆಲುವಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಸೋಲಿನ ಕುರಿತಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್‌ ನಾಯಕ ಹೆಚ್‌ ಡಿ ರೇವಣ್ಣ ಸಂಬಂಧಿ ಮಧುಚಂದ್ರ ಅವರು, ಜಿಟಿಡಿ ಅವರ ಪ್ರಾಬಲ್ಯದ ವಿರುದ್ದ ಪೂರ್ವ ಸಿದ್ದತೆ ಇಲ್ಲದೇ ಕಣಕ್ಕಿಳಿದಿದ್ದು ಸೋಲಿಗೆ ಕಾರಣವಾಯಿತು ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com