ಇನ್ನೂ ಪತ್ತೆಯಾಗದ ಹುಲಿ; ಜನಜೀವನ ಅಸ್ತವ್ಯಸ್ತ

ದಿನನಿತ್ಯ ಜಾನುವಾರುಗಳು ಬಲಿಯಾಗುತ್ತಿವೆ. ಕೇವಲ ರಾತ್ರಿ ವೇಳೆಯಲ್ಲಿ ಮಾತ್ರವಲ್ಲ ಹಾಡಹಗಲೇ ಅಟ್ಟಹಾಸ ತೋರುತ್ತಿರುವ ಹುಲಿಗಳಿಂದಾಗಿ ಮುಂದೇನು ಎಂಬ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ.
ಇನ್ನೂ ಪತ್ತೆಯಾಗದ ಹುಲಿ; ಜನಜೀವನ ಅಸ್ತವ್ಯಸ್ತ

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ವನ್ಯಪ್ರಾಣಿಗಳ ಉಪಟಳ ಒಂದು ರೀತಿಯಲ್ಲಿ ಸಹಜವೇ ಆಗಿದ್ದು ಜನತೆಯೂ ಇದಕ್ಕೆ ಹೊಂದಿಕೊಂಡು ಸಮಸ್ಯೆಗಳ ನಡುವೆಯೂ ತಮ್ಮ ಬದುಕನ್ನು ನಿಭಾಯಿಸಿಕೊಂಡು ಬರುತ್ತಿದ್ದರು. ಆದರೆ ಇದೀಗ ದಿಢೀರನೆ ಕೆಲವು ತಿಂಗಳುಗಳಿಂದ ಉದ್ಭವಿಸಿರುವ ಪರಿಸ್ಥಿತಿ ದಕ್ಷಿಣ ಕೊಡಗಿನಲ್ಲಿ ಎಲ್ಲಾ ರೀತಿಯ ಜನ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ, ಈಗಿನ ಚಿತ್ರಣ ಅಲ್ಲೋಲ ಕಲ್ಲೋಲವಾಗುತ್ತಿದೆ. ಪ್ರಸ್ತುತ ಸಾರ್ವಜನಿಕರು, ರೈತಾಪಿ ವರ್ಗದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಶಿಕ್ಷಕರು, ಉದ್ಯೋಗಿಗಳು, ಉದ್ಯಮಿಗಳು ಈ ರೀತಿಯಾಗಿ ಬಹುತೇಕ ಎಲ್ಲರೂ ಭೀತಿಯ ನೆರಳಿನಲ್ಲಿ ಪ್ರತಿಕ್ಷಣವನ್ನು ಕಳೆಯುವಂತಾಗಿದೆ. ಈ ಹಿಂದೆಂದೂ ಕಂಡು-ಕೇಳರಿಯದಷ್ಟು ಮಾದರಿಯಲ್ಲಿ ಜನತೆ ಹಾಗೂ ಜಾನುವಾರುಗಳ ಮೇಲೆ ಲಗ್ಗೆಯಿಡುತ್ತಿರುವ ವ್ಯಾಘ್ರನ ಹಾವಳಿ ಒಂದೆಡೆಯಾದರೆ, ಕಾಡಾನೆಗಳು, ಕಾಡೆಮ್ಮೆಗಳು, ಕರಡಿಯಂತಹ ಪ್ರಾಣಿಗಳ ಅಟ್ಟಹಾಸದಿಂದ ಕೃಷಿಯನ್ನೇ ಅವಲಂಭಿತವಾಗಿರುವ ಜನತೆಯ ಬದುಕೇ ಅತಂತ್ರವಾಗುತ್ತಿದೆ. ಕುಟ್ಟ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ನಾಲ್ಕೇರಿ, ಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಪ್ರಸ್ತುತ ಭಯದ ವಾತಾವರಣ ನಿರ್ಮಾಣವಾಗಿದೆ. ಕೆಲವೇ

ದಿನಗಳ ಅಂತರದಲ್ಲಿ ಮೂವರು ಅಮಾಯಕ ವ್ಯಕ್ತಿಗಳ ಬಲಿ, ಓರ್ವರು ಗಂಭೀರ ಗಾಯಗೊಂಡಿದ್ದಾರೆ. ದಿನಕ್ಕೆ ಎರಡು-ಮೂರರಂತೆ ಪ್ರತಿನಿತ್ಯ ಜಾನುವಾರುಗಳು ಬಲಿಯಾಗುತ್ತಿವೆ. ಕೇವಲ ರಾತ್ರಿ ವೇಳೆಯಲ್ಲಿ ಮಾತ್ರವಲ್ಲ ಹಾಡಹಗಲೇ ಅಟ್ಟಹಾಸ ತೋರುತ್ತಿರುವ ಹುಲಿಗಳಿಂದಾಗಿ ಮುಂದೇನು ಎಂಬ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ. ದಿನಕ್ಕೊಂದು ಕಡೆಯಂತೆ ಹುಲಿಗಳು ಪ್ರತ್ಯಕ್ಷವಾಗುತ್ತಿರುವುದು ಜನತೆಯನ್ನು ಇನ್ನೂ ಕಂಗೆಡಿಸುವಂತೆ ಮಾಡಿದ್ದು ಮತ್ತೊಂದೆಡೆ ಜನತೆಯ ಆಕ್ರೋಶವೂ ಹೆಚ್ಚಾಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನರಹಂತಕ ಹುಲಿಯನ್ನು ಗುಂಡಿಟ್ಟು ಕೊಲ್ಲುವಂತೆ ಜಿಲ್ಲಾ ರೈತ ಸಂಘವು ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಗೆ ನೂರಾರು ಜನರು ಪಾಲ್ಗೊಂಡಿದ್ದರು. ಕೊಡಗಿನ ಮೂಲೆಮೂಲೆಗಳಿಂದ ಬಂದಿರುವ ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ನರಹಂತಕ ಹುಲಿಯು ಕಳೆದ 24 ದಿನಗಳಿಂದ 20ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ಹಾಕಿದೆ.

ಪ್ರತಿಭಟನಾಕಾರರು ಜಿಲ್ಲಾ ರೈತ ಸಂಘದ ಅದ್ಯಕ್ಷ ಕಾಡ್ಯ ಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಿದ್ದಲ್ಲದೆ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಜನರಿಗೆ ಉಪಟಳ ನೀಡಿ ಜಾನುವಾರುಗಳನ್ನು ಕೊಲ್ಲುತ್ತಿರುವ ಇತರ 7 ಹುಲಿಗಳನ್ನೂ ಸೆರೆಹಿಡಿಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಈ ರೈತರ ಬೃಹತ್‌ ಪ್ರತಿಭಟನೆಗೆ ಕೊಡಗು ಮಾತ್ರವಲ್ಲದೇ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದಲೂ ರೈತರು ಆಗಮಿಸಿದ್ದರು.

ಇದೀಗ ಕಾಫಿ, ಕರಿಮೆಣಸು ಕುಯಿಲು ಸೇರಿದಂತೆ ಇವುಗಳ ನಿರ್ವಹಣೆಯ ಪರ್ವಕಾಲವೂ ಇದಾಗಿದೆ. ಆದರೆ ರೈತರು ಬೆಳೆಗಾರರಿಗೆ ತೋಟಗಳಿಗೆ ಹೋಗಲಾಗುತ್ತಿಲ್ಲ. ಫಸಲನ್ನು ಮನೆಗೆ ಸಾಗಿಸುವುದು, ನೀರು ಹಾಯಿಸುವುದೂ ಮತ್ತಿತರ ಕೆಲಸಗಳೂ ದುಸ್ತರವಾಗುತ್ತಿದೆ. ಕಾರ್ಮಿಕರೂ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ಮನೆಯಲ್ಲೇ ಇರುವ ಖಾಯಂ ಕಾರ್ಮಿಕರಿಗೂ, ಮಾಲೀಕರ ಬದುಕಿಗೆ ಸಹಕಾರ ನೀಡಬೇಕಾಗಿದೆ. ಸುತ್ತಮುತ್ತಲ ಶಾಲೆಗಳು, ಕಾಲೇಜುಗಳಿಗೆ ವಿದ್ಯಾರ್ಥಿಗಳು, ಶಿಕ್ಷಕರು ತೆರಳಲೂ ಭಯ ಪಡುವಂತಾಗಿದ್ದು, ಹಲವು ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಲೇ ಇಲ್ಲ. ಇನ್ನು ಕೆಲವೆಡೆ ಪೋಷಕರೇ ನಿತ್ಯವೂ ಮಕ್ಕಳನ್ನು ಕರೆತರುವುದು, ಕರೆದೊಯ್ಯುವ ಕೆಲಸ ಮಾಡುವಂತಾಗಿದೆ. ವ್ಯಾಪಾರ-ವಹಿವಾಟಿನ ಮೇಲೂ ಈ ಭಯಾನಕತೆಯ ಸನ್ನಿವೇಶ ಪರಿಣಾಮಬೀರುತ್ತಿದ್ದು ವ್ಯಾಪಾರಸ್ಥರ ಬದುಕೂ ಕ್ಲಿಷ್ಟಕರವಾಗುತ್ತಿದೆ. ಇದೀಗ ವಿವಿಧ ಗ್ರಾಮಗಳಲ್ಲಿ ದೇವರ ಉತ್ಸವಗಳೂ ಜರುಗುವ ಸಮಯವಾಗಿದ್ದು, ಪೂಜಾ ಕೈಂಕರ್ಯಗಳಿಗೆ ತೆರಳಲೂ ಭಯಪಡುವಂತಾಗಿದೆ.

ಹುಲಿ ಸೆರೆಗೆ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದರೂ, ಇದು ಪ್ರಯೋಜನ ಕಾಣುತ್ತಿಲ್ಲ. ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸುತ್ತಿದ್ದು, ತೋಟಗಳ ನಡುವೆ ಆನೆಗಳು ತಿರುಗಾಡುವುದರಿಂದ ಹಲವರ ತೋಟಗಳೂ ಹಾನಿಗೀಡಾಗುತ್ತಿವೆ ಎಂಬ ಅಸಹಾಯಕತೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಗೊಂಡು ಇದೀಗ ಆನೆ ಕಾರ್ಯಾಚರಣೆ ನಿಲ್ಲಿಸಲಾಗಿದೆಯಾದರೂ ಹಲವಾರು ತೋಟಗಳಿಗೆ ಭಾರೀ ಹಾನಿಯಾಗಿವೆ. ಈ ರೀತಿಯ ಜಾತ್ರೆಯ ಮಾದರಿಯ ಕಾರ್ಯಾಚರಣೆಯಿಂದ ಹುಲಿಯ ಸೆರೆ ಸಾಧ್ಯವಾಗದು. ಇದರ ಬದಲಿಗೆ ಸ್ಥಳೀಯ ಅನುಭವಿ ವ್ಯಕ್ತಿಗಳನ್ನು ಸೇರಿಸಿಕೊಂಡು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಲವು ತೋಟಗಳಲ್ಲಿ ಕಳ್ಳರು ಕರಿಮೆಣಸು ಬೆಳೆ ಕೊಯ್ಯುವುದೂ ಮಾಡುತಿದ್ದಾರೆ. ಇದರ ಜತೆಗೇ ಜನರ ಹೋರಾಟದ ಕಾವೂ ಹೆಚ್ಚಾಗುತ್ತಿದೆ. ರೈತರ ಹೋರಾಟದಲ್ಲಿ ಇದೀಗ ವಿದ್ಯಾರ್ಥಿಗಳೂ ಪಾಲ್ಗೊಳ್ಳುವಂತಾಗಿ ರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ಶನಿವಾರ ರಾತ್ರಿ ಅರಣ್ಯ ಇಲಾಖೆಯ ಶಾರ್ಪ್‌ ಶೂಟರ್‌ ಸುನೀಲ್‌ ಅವರು ಸಿಸಿಎಫ್‌ ಅವರೊಂದಿಗೆ ಮಾತನಾಡಿ ಬೆಂಗಳೂರಿಗೆ ದಿಡೀರ್‌ ಆಗಿ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆಯ ಪಿಸಿಸಿಎಫ್‌ ಅವರು ನೀಡಿರುವ ಆದೇಶದಲ್ಲಿ ಹುಲಿಯನ್ನು ಕೊಲ್ಲುವ ಸ್ಪಷ್ಟ ನಿರ್ದೇಶನವಿಲ್ಲ ಬದಲಿಗೆ ಹುಲಿಯನ್ನು ಸಾದ್ಯವಾದಷ್ಟೂ ಸೆರೆ ಹಿಡಿಯಲು ಪ್ರಯತ್ನಿಸಬೇಕೆಂದೂ ಸೆರೆ ಸಾದ್ಯವಾಗದಿದ್ದಲ್ಲಿ ಮಾತ್ರ ಗುಂಡಿಕ್ಕುವ ಯತ್ನ ಮಾಡಬೇಕೆಂದೂ ತಿಳಿಸಿದ್ದಾರೆ.

ಸರಕಾರ-ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನ ಬಳಸಿ ಆತಂಕ ಸೃಷ್ಟಿಸಿರುವ ಹುಲಿಯನ್ನು ತ್ವರಿತವಾಗಿ ಸೆರೆ ಹಿಡಿಯುವುದೋ ಅಥವಾ ಕೈಮೀರಿರುವ ಪರಿಸ್ಥಿತಿಯಲ್ಲಿ ಗುಂಡಿಕ್ಕಿ ಸಾಯಿಸುವ ಕೆಲಸವನ್ನು ತ್ವರಿತವಾಗಿ ಮಾಡಲೇಬೇಕಾಗಿದೆ. ಈಗ ಹುಲಿಯ ಸೆರೆ ವಿಳಂಬವಾಗುತ್ತಿರುವುದಕ್ಕೆ ಕಾರಣವೇ ಜನರ ಗದ್ದಲ ಎನ್ನಲಾಗಿದೆ. ಏಕೆಂದರೆ ಹುಲಿ ಪತ್ತೆಯಾದ ಕೂಡಲೇ ವಾಟ್ಸ್‌ ಅಪ್‌ ನ ಮೂಲಕ ಗ್ರಾಮಸ್ಥರು ಗ್ರೂಪ್‌ ಗಳಲ್ಲಿ ಮಾಹಿತಿ ನೀಡುತ್ತಾರೆ. ಕೂಡಲೇ ನೂರಾರು ಜನರು ಹುಲಿಯು ಕೊಂದಿರುವ ಜಾನುವಾರುವನ್ನು ನೋಡಲು ಆಗಮಿಸುತ್ತಾರೆ.

ಸಾಮಾನ್ಯವಾಗಿ ಹುಲಿಯು ತಾನು ಕೊಂದಿರುವ ಮೃಗದ ಅವಶೇಷವನ್ನು ತಿನ್ನಲು ರಾತ್ರಿ ಪುನಃ ಬರುತ್ತದೆ. ಆದರೆ ಈವರೆಗೂ ಹುಲಿಯು ಆನೇಕ ಜಾನುವಾರುಗಳನ್ನು ಕೊಂದಿದ್ದರೂ ಪುನಃ ಅದೇ ಸ್ಥಳಕ್ಕೆ ಬಂದಿಲ್ಲ. ಜನರ ದಟ್ಟಣೆಯಿಂದಲೇ ಹುಲಿ ಬೇರೆಡೆ ತೆರಳಿ ಬೇಟೆ ಆಡುತ್ತಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಈ ಬಗ್ಗೆ ತ್ವರಿತ ತೀರ್ಮಾನ ತೆಗೆದುಕೊಳ್ಳಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com