ಕಳೆದ ಮೂರು ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ʼಝೊಮ್ಯಾಟೋ ಡೆಲಿವರಿ ಬಾಯ್ Vs ಗ್ರಾಹಕಿʼ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಸಾಮಾಜಿಕ ಜಾಲತಾಣಿಗರ ಅನುಕಂಪ ಗ್ರಾಹಕಿ ಹಿತೇಶಾ ಚಂದ್ರಾನಿಯ ಮೇಲಿದ್ದರೂ, ಡೆಲಿವರಿ ಬಾಯ್ ಕಾಮರಾಜ್ ತನ್ನ ಭಾಗದ ಕತೆಯನ್ನು ಹೇಳುತ್ತಿದ್ದಂತೆ ಕಾಮರಾಜ್ ಪರ ಹೊರಳಿದೆ.
ಇದೀಗ, ಈ ಪ್ರಕರಣವು ಕನ್ನಡಿಗ ಅಥವಾ ದಕ್ಷಿಣ ಭಾರತೀಯ Vs ಉತ್ತರ ಭಾರತೀಯ ಎಂಬಂತೆ ಚರ್ಚಿಸಲ್ಪಡುತ್ತಿದೆ. ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದೌರ್ಜನ್ಯಕ್ಕೆ ಇದೊಂದು ಉದಾಹರಣೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದರೊಂದಿಗೆ ಜನಾಂಗೀಯವಾದ, ಬಡವ vs ಶ್ರೀಮಂತ, ಹುಸಿ ಸ್ತ್ರೀವಾದ vs ಪುರುಷರು ಮೊದಲಾದ ಆಯಾಮಗಳಲ್ಲಿ ಕೂಡಾ ಚರ್ಚೆಗಳು ನಡೆಯುತ್ತಿವೆ.
ನೀವು ಒಬ್ಬ ಕಪ್ಪು ಪುರುಷನಾಗಿದ್ದರೆ, ಬಡವನಾಗಿದ್ದರೆ ಎಚ್ಚರವಿರಲಿ, ನೀವು ಅಪರಾಧಿಯಾಗಲು ಇಷ್ಟೇ ಸಾಕು, ನಿಮ್ಮ ಮೇಲಿರುವ ಆರೋಪಗಳಿಗೆ ನಿಮ್ಮಿಂದ ಸ್ಪಷ್ಟನೆಯನ್ನೂ ಕೇಳಲಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಈ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಕ್ರಿಯೆಯಲ್ಲಿ ಅವರು ʼಕಪ್ಪು ಹಾಗೂ ಪುರುಷʼ ಎಂಬ ಅಂಶವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಘಟನೆ ವಿವರ:
ಮಾರ್ಚ್ 9 ರಂದು ಬೆಂಗಳೂರಿನಲ್ಲಿ ನೆಲೆಸಿರುವ ಸಾಮಾಜಿಕ ಜಾಲತಾಣ ಪ್ರಭಾವಿ, ಮಾಡೆಲ್ ಮತ್ತು ಮೇಕಪ್ ಕಲಾವಿದೆ ಹಿತೇಶಾ ಚಂದ್ರಾನಿ ಅವರು ವ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ತಡವಾಗಿ ಬಂದ ಝೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಬಳಿ ತಡವಾದುದರ ಕುರಿತು ಪ್ರಶ್ನಿಸಿದಾಗ, ತನಗೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿದ್ದರು. ಹಾಗೂ ತನ್ನ ಬೆಂಬಲಕ್ಕೆ ನಿಲ್ಲಬೇಕೆಂದು ವಿಡೀಯೊದಲ್ಲಿ ಕೇಳಿಕೊಂಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋದ ಬೆನ್ನಿಗೆ ಝೊಮ್ಯಾಟೊ ಕಂಪೆನಿ ಕಾಮರಾಜ್ ಅವರ ಲಾಗಿನ್ ಅನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಿತ್ತು.
ಹಾಗೂ, ಹಿತೇಶಾ ಚಂದ್ರಾನಿಯ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಡೆಲಿವರಿ ಬಾಯ್ ಕಾಮರಾಜ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಿತೇಶಾ ಅವರಿಗೆ ಭರಪೂರ ಬೆಂಬಲವೂ ಬಂದಿತ್ತು. ಮಹಿಳಾ ಸುರಕ್ಷತೆ ಕುರಿತು ಚರ್ಚೆಗಳು ನಡೆಸಲ್ಪಟ್ಟವು.
ಇಷ್ಟೆಲ್ಲಾ ಆಗುವಾಗಲೂ, ಆರೋಪಕ್ಕೊಳಗಾದ ಕಾಮರಾಜ್ ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅಥವಾ ತನ್ನ ಆಯಾಮವನ್ನು ಹೇಳಿಕೊಳ್ಳಲು ಸಂದರ್ಭ ದೊರೆತಿರಲಿಲ್ಲ. ಪರಿಣಾಮ ಒಂದೇ ಆಯಾಮವನ್ನು ಹಿಡಿದುಕೊಂಡು ಕಾಮರಾಜ್ ವಿರುದ್ಧ ಸಾಕಷ್ಟು ಜನ ಮುಗಿದು ಬಿದ್ದಿದ್ದರು.
ಯಾವಾಗ, ಕಾಮರಾಜ್ ದುಖತಪ್ತ ದನಿಯೊಂದಿಗೆ ತನ್ನ ಆಯಾಮವನ್ನು ಜನರ ಮುಂದಿಟ್ಟರೋ, ಚಿತ್ರಣ ಮಗ್ಗುಲು ಬದಲಾಯಿಸಿತು. ಅಲ್ಲಿಯವರೆಗೂ ಹಿತೇಶಾ ಪರವಾಗಿದ್ದ ಅನುಕಂಪದ ಅಲೆ ಕಾಮರಾಜ್ ಕಡೆ ಹೊರಳಿದೆ.
ಹಿತೇಶಾ ವಿಡೀಯೊದಲ್ಲಿ ಹೇಳಿರುವ ಪ್ರಕಾರ, ಡೆಲಿವರಿ ತಡವಾದ ಕುರಿತು ಪ್ರಶ್ನಿಸಿದ ಕಾರಣಕ್ಕೆ ಡೆಲಿವರಿ ಬಾಯ್ ಕಾಮರಾಜ್ ಆಕೆಯ ಮೂಗಿಗೆ ಗುದ್ದಿದ್ದಾರೆ (ಅಥವಾ ಪಂಚ್ ಮಾಡಿದ್ದಾರೆ). ಆದರೆ, ಕಾಮರಾಜ್ ಹೇಳುವ ಕತೆಯೇ ಬೇರೆ.
ಕಾಮರಾಜ್ ಹೇಳುವ ಪ್ರಕಾರ, ಅಲ್ಲಲ್ಲಿ ಬಿಬಿಎಂಪಿ ಕೆಲಸ ನಡೆಯುತ್ತಿರುವುದರಿಂದ ಹಾಗೂ ಕಿಕ್ಕಿರಿದ ಟ್ರಾಫಿಕ್ ನಿಂದಾಗಿ ಆರ್ಡರ್ ತಲುಪಿಸಲು ತಡವಾದದ್ದು ನಿಜ. ತಡವಾದುದರ ಕುರಿತು ಕ್ಷಮೆ ಕೇಳಿದ್ದೆ. ಆದರೆ ಆಹಾರದ ಪೊಟ್ಟಣ ಪಡೆದ ಹಿತೇಶಾ, ದುಡ್ಡು ಕೊಡಲು ನಿರಾಕರಿಸಿದ್ದಾರೆ. ದುಡ್ಡಿಗೆ ಮನವಿ ಮಾಡಿದಾಗ ಏರು ದನಿಯಲ್ಲಿ ಹಿಂದಿಯಲ್ಲಿ ನನ್ನನ್ನು ನಿಂದಿಸಲು ತೊಡಗಿದ್ದರಿಂದ ನಾನು ದುಡ್ಡಿಗೂ ಕಾಯದೆ ಅಲ್ಲಿಂದ ಹೊರಡಲು ಅನುವಾದೆ. ಆದರೆ, ಈ ವೇಳೆ ನನ್ನ ಮೇಲೆ ಚಪ್ಪಲಿ ಎಸೆದ ಹಿತೇಶಾ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನ್ನ ರಕ್ಷಣೆಗಾಗಿ ಅವರ ಕೈಯನ್ನು ತಡೆದೆ, ಈ ವೇಳೆ ಅವರ ಬೆರಳಲ್ಲಿದ್ದ ಉಂಗುರ ಅವರ ಮೂಗಿಗೆ ತಾಗಿ ರಕ್ತ ಸೋರಲು ಶುರುವಾಗಿದೆ. ಆದರೆ ನಾನು ಹಲ್ಲೆ ಮಾಡಿಲ್ಲ, ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಾಮರಾಜ್ ಅವರ ಮಾತುಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಹಾಯ ಕಾರಣರಾದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಎಲ್ಲಿಂದಲೋ ಬಂದು ಇಲ್ಲಿ ಕನ್ನಡಿಗರ ಮೇಲೆ ದರ್ಪ ತೋರುತ್ತಿದ್ದಾರೆ, ಕನ್ನಡಿಗರು ಈ ಬಡ ಹುಡುಗನ ಪರ ನಿಲ್ಲಬೇಕು ಯಾಕೆಂದರೆ ಇವರ ಕಡೆ ಸತ್ಯ ಇದೆ ಎಂದು ಕೇಳಿಕೊಂಡಿದ್ದಾರೆ.
ಕಾಮರಾಜ್ ಅವರ ವಿಡಿಯೋ ಸಂದೇಶ ಹೊರಬಂದ ಬೆನ್ನಲ್ಲೇ ಕಾಮರಾಜ್ ಪರವಾಗಿ ದನಿಗಳು ಎದ್ದಿವೆ. ಕಾಮರಾಜ್ ಒಬ್ಬ ಅಮಾಯಕ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಉತ್ತರ ಭಾರತೀಯರು ದಕ್ಷಿಣ ಭಾರತೀಯರ ಮುಖ್ಯವಾಗಿ ಕನ್ನಡಿಗರ ಮೇಲೆ ನಡೆಸುವ ದೌರ್ಜನ್ಯಕ್ಕೆ ಇದೊಂದು ಉದಾಹರಣೆ. ಬಡ ಕನ್ನಡಿಗನ ಪರವಾಗಿ ನಿಲ್ಲಬೇಕೆಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ಉತ್ತರ ಭಾರತೀಯರು ಇಲ್ಲಿ ದರ್ಪ ತೋರುವುದು ಪದೇ ಪದೇ ಕೇಳಿಬರುತ್ತಿದೆ. ರಸ್ತೆಗಳಲ್ಲಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಅದನ್ನು ಪ್ರಶ್ನಿಸಿದ ಕನ್ನಡಿಗ ಪೊಲೀಸರನ್ನು ನಿಂದಿಸುವುದು, ಅವಮಾನಿಸುವುದು ನಾವು ನೋಡುತ್ತಿದ್ದೇವೆ. ಉತ್ತರ ಭಾರತೀಯ ದರ್ಪ ನಿಲ್ಲಬೇಕು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಒಟ್ಟಾರೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಈ ಪ್ರಕರಣವು, ಹುಸಿ ಸ್ತ್ರೀವಾದ, ಶ್ರೀಮಂತಿಕೆಯ ದರ್ಪ ಮೊದಲಾದ ಬೇರೆ ಬೇರೆ ಆಯಾಮಗಳಲ್ಲಿ ಚರ್ಚಿಸಲ್ಪಟ್ಟು, ಇದೀಗ ಜನಾಂಗೀಯವಾದ ಹಾಗೂ ಉತ್ತರ ಭಾರತೀಯ vs ಕನ್ನಡಿಗ ಯಾ ದಕ್ಷಿಣ ಭಾರತೀಯ ಎಂಬ ಇನ್ನೊಂದು ಆಯಾಮಕ್ಕೆ ತೆರೆದುಕೊಂಡಿದೆ.