ಬಟ್ಟೆ ಬಿಚ್ಚಲು ಕಾಂಗ್ರೆಸ್‌ ಹೇಳಿಕೊಟ್ಟಿತಾ? ಡಿಕೆ ಶಿವಕುಮಾರ್ ಪ್ರಶ್ನೆ

ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಇರೋದು ಕಾಂಗ್ರೆಸ್‌, ನಾನು 20 ವರ್ಷದಿಂದ ಆ ಪಕ್ಷವನ್ನು ನೋಡಿದ್ದೇನೆ. ಇದು ಕಾಂಗ್ರೆಸ್‌ ನವರದ್ದೇ ಕೆಲಸ ಎಂದು ಎಸ್‌ಟಿ ಸೋಮಶೇಖರ್ ಆರೋಪಿಸಿದ್ದರು.
ಬಟ್ಟೆ ಬಿಚ್ಚಲು ಕಾಂಗ್ರೆಸ್‌ ಹೇಳಿಕೊಟ್ಟಿತಾ? ಡಿಕೆ ಶಿವಕುಮಾರ್ ಪ್ರಶ್ನೆ
Admin

ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಕಾಂಗ್ರೆಸ್‌ ವಿರುದ್ಧ ಬರುತ್ತಿರುವ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣದಲ್ಲಿ ಷಡ್ಯಂತ್ರ ಸಹಜ, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂದು ಅವರು ಹೇಳಿದ್ದಾರೆ.

ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್‌ ಇದೆ ಎಂದು ಆರೋಪಿಸಲಾಗುತ್ತಿದೆ. ಇವರಿಗೆ (ರಮೇಶ್‌ ಜಾರಕಿಹೊಳಿಗೆ) ಶರ್ಟು, ಪ್ಯಾಂಟ್ ಬಿಚ್ಚಲು ಯಾರಾದರೂ ಹೇಳಿ ಕೊಟ್ಟಿದ್ರಾ? ಅವರು ಆಡಿರುವ ಮಾತುಗಳಿಗೆ ಸ್ಕ್ರಿಪ್ಟ್ ನಾವು ಬರೆದು ಕೊಟ್ಟಿದ್ದೇವಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್ ಕುರಿತು 'ಸಿಡಿ' ಹಿನ್ನೆಲೆ ಬಗ್ಗೆ ಮಾತನಾಡಿರುವ ಆ ಸಚಿವನನ್ನು (ಎಸ್‌. ಟಿ ಸೋಮಶೇಖರ್)‌ ಬಿಜೆಪಿಯವರಗಿಂತ ನಾನು ಹತ್ತಿರದಿಂದ ನೋಡಿದ್ದೇನೆ. ಅವರು ನಮ್ಮ ನಾಯಕರಾಗಿದ್ದವರು. ಪಕ್ಷದ ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಾವು ಜೊತೆಯಲ್ಲೇ ರಾಜಕಾರಣ ಮಾಡಿದ್ದೇವೆ. ಹೀಗಿದ್ದಾಗ 20 ವರ್ಷಗಳಿಂದ ಅವರು ಏನೇನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ ಎಂದು ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಇದಕ್ಕೂ ಮೊದಲು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಸ್‌ಟಿ ಸೋಮಶೇಖರ್‌, ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಇರೋದು ಕಾಂಗ್ರೆಸ್‌, ನಾನು 20 ವರ್ಷದಿಂದ ಆ ಪಕ್ಷವನ್ನು ನೋಡಿದ್ದೇನೆ. ಇದು ಕಾಂಗ್ರೆಸ್‌ ನವರದ್ದೇ ಕೆಲಸ ಎಂದು ಆರೋಪಿಸಿದ್ದರು.

ಸೋಮಶೇಖರ್‌ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಡಿಕೆಶಿ, ʼಇದನ್ನು ಅವರೇ ಹೇಳಿದ್ದಾರೋ, ಬೇರೆಯವರು ಹೇಳಿಸಿದ್ದಾರೋ, ಅಂತೂ ಬಿಜೆಪಿ ಪಕ್ಷದ ಪರವಾಗಿ ಹೇಳಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಏನು ಮಾಡಿದ್ದಾರೆ ಅಂತಾ ಸಾಕ್ಷಿ ಸಮೇತ ಹೇಳಲಿ. ಈ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಸುಮ್ಮನೆ ಏನೂ ಕುಳಿತಿಲ್ಲ ಎಂದು ಎಚ್ಚರಿಸಿದ್ದಾರೆ.

ಸಿಎಂ ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದ ಬಿಜೆಪಿ ಶಾಸಕರೇ ಸಿಡಿ ಬಿಡುಗಡೆ ಅಂತಾ ವಿಶ್ವನಾಥ್ ಅವರು ಹೇಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಡಿ ಗುಮ್ಮಾ ಎಂದೂ ಕರೆದಿದ್ದರು. ಜೊತೆಗೆ ಬ್ಲ್ಯಾಕ್‌ಮೇಲ್ ಮಾಡಿ ಕೆಲವರು ಸಚಿವರಾಗಿದ್ದಾರೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಹೇಳಿಕೆ ನೀಡಿದ್ದರು. ಇದೆಲ್ಲ ಬಿಟ್ಟು ಇದೀಗ ಕಾಂಗ್ರೆಸ್ ಕಡೆಗೆ ಕೈತೋರಿಸಿದರೇ ಸುಮ್ಮನೆ ಬಿಡಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸಿಡಿಯಲ್ಲಿ, ಎಲ್ಲರನ್ನು ಒಗ್ಗೂಡಿಸಲು ಯೋಗೇಶ್ವರ್ ಅವರು 9 ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎಂದು ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಸಿ.ಡಿ.ಯಲ್ಲಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ, ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಕನ್ನಡಿಗನಾಗಿ ನಾನು ಆ ಮಾತು ಹೇಳಬಾರದು. ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ಮನೆ ಇದ್ದಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಎಲ್ಲ ವಿಚಾರವಾಗಿ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಯಾಕೆ ಇನ್ನೂ ಕೇಸು ಹಾಕಿಲ್ಲ, ಕೇಸು ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ಕೆಲವರು ಕೋರ್ಟ್‌ಗೆ ಹೋಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಸಿ.ಡಿ. ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದಾರೆ. ಯಾಕೆ ಕೋರ್ಟ್‌ಗೆ ಹೋಗಿದ್ದಾರೆ ಎಂಬುದು ಅವರಿಗೇ ಗೊತ್ತಿದೆ. ನಮಗೇನು ಗೊತ್ತು? ಈ 'ಸಿಡಿ' ಪ್ರಸಂಗ ಬಾಂಬೆಯಲ್ಲಿ ನಡೆಯಿತೋ? ಬೆಂಗಳೂರಿನಲ್ಲಿ ನಡೆಯಿತೋ? ಪೂನಾದಲ್ಲಿ ನಡಿತೋ? ಬಿಜೆಪಿ ಸರ್ಕಾರ ಇತ್ತೋ? ಶಿವಸೇನೆ ಸರ್ಕಾರ ಇತ್ತೋ? ಯಾರು? ಏನು? ಎಂಬುದನ್ನು ಅವರೇ ಹೇಳಬೇಕು? ಇದರಲ್ಲಿ ತಿರುಚುವುದು ಏನಿದೆ? ಒಂದೋ ಎರಡೋ ತಿರುಚಬಹುದು. 19 "ಸಿಡಿ' ಗಳನ್ನೂ ತಿರುಚಲು ಆಗುತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನವರು 'ಸಿಡಿ' ಮಾಡಿದ್ದಾರೆ ಅಂದ್ರೆ, ಕಾಂಗ್ರೆಸ್ ಅವರು ಬಂದು ನಿಮ್ಮ ಶರ್ಟು, ಪ್ಯಾಂಟ್ ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ? ಸಿಎಂ ಭ್ರಷ್ಟ ಎಂದು ಹೇಳಲು ಸ್ಕ್ರಿಪ್ಟ್ ಬರೆದು ಕೊಟ್ಟಿದ್ರಾ? ಕನ್ನಡಿಗರ ವಿರುದ್ಧ ಮಾತಾಡಿ ಎಂದು ಹೇಳಿಕೊಟ್ಟಿದ್ದೇವಾ? ನಾವೇನು ಸ್ಕ್ರಿಪ್ಟ್ ಕೊಟ್ಟಿದ್ದೇವಾ? ಇದೇನು ಸಿನಿಮಾನಾ? 'ಸಿಡಿ'ನ ಮಾತುಗಳೆಲ್ಲ ನೇರವಾಗಿ ಅವರ ಬಾಯಿಂದ ಬಂದಂತಹ ನುಡಿಮುತ್ತುಗಳು. ಕಾಂಗ್ರೆಸ್‌ ಹೇಳಿಕೊಟ್ಟದ್ದಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com