ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ; ಪ್ರಸ್ತಾವನೆಯನ್ನು ಸಮಿತಿಗೆ ವರ್ಗಾಯಿಸಿದ ಸ್ಪೀಕರ್

ಸಂಗಮೇಶ್ ವಿರುದ್ಧ ಜ್ಞಾನೇಂದ್ರ ಅವರು ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಹಕ್ಕುಚ್ಯುತಿ ಸಮಿತಿಗೆ ವರ್ಗಾಯಿಸಿ ಸ್ಪೀಕರ್ ಆದೇಶಿಸಿದ್ದಾರೆ.
ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ; ಪ್ರಸ್ತಾವನೆಯನ್ನು ಸಮಿತಿಗೆ ವರ್ಗಾಯಿಸಿದ ಸ್ಪೀಕರ್

ಸದನದಲ್ಲಿ ಅಂಗಿ ಬಿಚ್ಚಿದ ಕಾರಣಕ್ಕೆ ಅಮಾನತಾಗಿರುವ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ವಿರುದ್ಧ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಸೋಮವಾರ ಹಕ್ಕುಚ್ಯುತಿ ಮಂಡಿಸಿದ್ದಾರೆ. ಇದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ರಶ್ನೋತ್ತರ ಕಲಾಪದ ನಂತರ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ್ದ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿಸಿದ್ದಾರೆ. ಜ್ಞಾನೇಂದ್ರ ಹಕ್ಕು ಚ್ಯುತಿ ಕುರಿತು ಮಾತನಾಡಲು ಆರಂಭಿಸಿದಾಗ, ಸಭಾಧ್ಯಕ್ಷರ ಸ್ಥಾನ ಮುಖ್ಯಮಂತ್ರಿಗಳ ಸ್ಥಾನಕ್ಕಿಂತ ದೊಡ್ಡದು. ಆದರೆ, ಸಂಗಮೇಶ್ ಸ್ಪೀಕರ್ ಸ್ಥಾನದ ಘನತೆಗೆ ಕುಂದುಂಟಾಗುವಂತೆ ನಡೆದುಕೊಂಡಿದ್ದಾರೆ. ಸ್ಪೀಕರ್‌ ಸ್ಥಾನದ ಎದುರು ಬಂದು ಬಟ್ಟೆ ಬಿಚ್ಚಿದ್ದಲ್ಲದೆ, ಸದನದ ಹೊರಗೆ ಮಾಧ್ಯಮಗಳಿಗೆ ಸ್ಪೀಕರ್ ವಿರುದ್ಧ ಅಸಭ್ಯವಾದ ಹೇಳಿಕೆ ನೀಡಿದ್ದಾರೆ. ಇದು ಹಕ್ಕುಚ್ಯುತಿ ಆಗುತ್ತದೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜ್ನಾನೇಂದ್ರ ಆಗ್ರಹಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಅಂತಹವರು ಸದನದಲ್ಲಿ ಇಲ್ಲದಾಗ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದು ಸರಿಯಲ್ಲ ಅವರ ವಿರುದ್ಧದ ಆರೋಪಗಳಿಗೆ ಸಮಜಾಯಿಷಿ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ಸದನದಲ್ಲಿ ಅಂಗಿ ಬಿಚ್ಚಿದ್ದ ಪ್ರಸಂಗವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕರು ಸ್ಪೀಕರ್ ಎದುರು ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ಉಂಟಾಗಿದೆ.

ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ ಸ್ಪೀಕರ್‌ ವಿಶ್ವೇಶ್ವರಹೆಗಡೆ ಕಾಗೇರಿ, ಹಕ್ಕುಚ್ಯುತಿ ಬಗ್ಗೆ ಚರ್ಚಿಸಲು ಎಲ್ಲ ಪಕ್ಷದವರಿಗೂ ಆಹ್ವಾನಿಸಿದ್ದಾರೆ. ಆದರೆ, ಕಾಂಗ್ರೆಸ್ ಒಪ್ಪದ ಕಾರಣ ಆರಗ ಜ್ಞಾನೇಂದ್ರ ಅವರು ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಹಕ್ಕುಚ್ಯುತಿ ಸಮಿತಿಗೆ ವರ್ಗಾಯಿಸಿ ಸ್ಪೀಕರ್ ಆದೇಶಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com