ಕೊಡಗು: ಎರಡು ತಾಲ್ಲೂಕು ರಚನೆ ಆದರೂ ಇನ್ನೂ ಸಿಗದ ಮೂಲ ಸೌಕರ್ಯ

ತಾಲ್ಲೂಕು ರಚನೆಯನ್ನು ಜನರು ಹೋರಾಟದ ಮೂಲಕವೇ ಪಡೆದಿದ್ದಾರೆ. ಈಗ ತಾಲ್ಲೂಕಿಗೆ ಅಧಿಕಾರಿಗಳನ್ನೂ ಕಚೇರಿಗಳನ್ನೂ ಪಡೆಯಲು ಇನ್ನೊಂದು ಹೋರಾಟವನ್ನೆ ಮಾಡಬೇಕಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೊಡಗು: ಎರಡು ತಾಲ್ಲೂಕು ರಚನೆ ಆದರೂ ಇನ್ನೂ ಸಿಗದ ಮೂಲ ಸೌಕರ್ಯ
admin

ಪುಟ್ಟ ಜಿಲ್ಲೆ ಕೊಡಗು ಸ್ವಾತಂತ್ರ ದೊರೆತ ನಂತರದಿಂದಲೂ ಮೂರು ತಾಲ್ಲೂಕುಗಳನ್ನು ಹೊಂದಿತ್ತು. ಕಾಲ ಕಳೆದಂತೆ ಜನಸಂಖ್ಯೆ ಹೆಚ್ಚತೊಡಗಿತು. ಜನರ ಅಗತ್ಯಗಳಿಗೆ ಸರ್ಕಾರೀ ಕಚೇರಿಗಳಿಗೆ ಹೋಗುವುದು ಹೆಚ್ಚಾಗತೊಡಗಿದಂತೆ ಕಚೇರಿಗಳಲ್ಲೂ ಕೆಲಸದ ಹೊರೆ ಹೆಚ್ಚಾಗತೊಡಗಿತು. ನಂತರ ಜನಪರ ಸಂಘಟನೆಗಳ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ವೀರಾಜಪೇಟೆ ತಾಲ್ಲೂಕನ್ನು ವಿಭಾಗಿಸಿ ಪೊನ್ನಂಪೇಟೆ ತಾಲ್ಲೂಕನ್ನೂ ಸೋಮವಾರಪೇಟೆ ತಾಲ್ಲೂಕನ್ನು ವಿಭಾಗಿಸಿ ಕುಶಾಲನಗರ ತಾಲ್ಲೂಕನ್ನು ರಚಿಸಲಾಯಿತು. ಪೊನ್ನಂಪೇಟೆ ತಾಲ್ಲೂಕನ್ನು ರಚಿಸಿ ಸುಮಾರು 4 ತಿಂಗಳು ಕಳೆದಿದ್ದರೂ ಇನ್ನೂ ಕೂಡ ಮೂಲಭೂತ ಸೌಕರ್ಯ ದೊರೆತಿಲ್ಲ.

ಕುಗ್ರಾಮಗಳಿಂದ ವೀರಾಜಪೇಟೆ ನಗರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡ ಹಿರಿಯರು ದಶಕಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಪೊನ್ನಂಪೇಟೆ ನೂತನ ತಾಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಆದರೆ ಕಚೇರಿಯಲ್ಲಿ ಮೂಲ ಸೌಕರ್ಯಗಳನ್ನು , ಸಿಬ್ಬಂದಿಗಳನ್ನು ಇನ್ನೂ ಕೂಡ ನೀಡಿಲ್ಲ.. ತಾಲೂಕು ಮಿನಿ ವಿಧಾನಸೌಧ, ಸುಸಜ್ಜಿತ ತಾಲೂಕು ಆಡಳಿತ ಭವನ, ಸರ್ಕಾರದ ಅಧೀನದ ಸುಮಾರು 33 ಇಲಾಖೆಗಳು ಒಂದೇ ಕಟ್ಟಡದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊನ್ನಂಪೇಟೆಯಲ್ಲಿ ಸುಸಜ್ಜಿತವಾದ ನ್ಯಾಯಾಲಯ ಸಂಕೀರ್ಣ ಆರಂಭಗೊಂಡು ಇದೀಗ ಹಲವು ವರ್ಷಗಳು ಕಳೆದಿವೆ. ಸುಂದರ ನ್ಯಾಯಾಲಯ ಸಮುಚ್ಚಯ ನೋಡುಗರನ್ನು ಈಗಲೂ ಆಕರ್ಷಿಸುತ್ತಿದೆ. ಇಂತಹ ಮಾದರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನತೆಯ ನಿರೀಕ್ಷೆಯಾಗಿದೆ. ಪೊನ್ನಂಪೇಟೆ ಹಳೆಯ ಬಿಎಚ್ಇಎಲ್ ಕಟ್ಟಡವೇ ನೂತನ ತಾಲೂಕು ಕಟ್ಟಡವಾಗಿ ಕೆಲಸ ನಿರ್ವಹಿಸುತ್ತಿದೆ.

ಕಳೆದ ವರ್ಷ ಪೊನ್ನಂಪೇಟೆ ತಾಲೂಕು ಉದ್ಘಾಟನೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್‌ ಅಶೋಕ್‌ ಅವರು ನೂತನ ತಾಲ್ಲೂಕಿನ ಮೂಲ ಸೌಕರ್ಯಕ್ಕಾಗಿ 50 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿ ಹೋದರು. ಅದರೆ ಈತನಕವೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಪೊನ್ನಂಪೇಟೆಯ ಹಳೆ ನಾಡ ಕಚೇರಿ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ನೀರು ಸೋರಿಕೆ ಆಗಿ ಕಂಪ್ಯೂಟರ್ಗಳು ಹಾಳಾಗಿವೆ. ಗೋಡೆಯ ಗಾರೆ ಉದುರುತ್ತಿದೆ. ಈ ಕಟ್ಟಡದ ದುರಸ್ತಿ ಕಾರ್ಯ ನಡೆಸಲು 10 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದರೂ ಇಲ್ಲಿಯ ತನಕ ಬಿಡುಗಡೆಯಾದ ಅನುದಾನ ಬಳಕೆಯಾಗಿಲ್ಲ ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಕರ್ತವ್ಯ ನಿರ್ವಹಿಸುತ್ತಿದ್ದು ಆದಷ್ಟು ಬೇಗನೆ ಈ ದುರಸ್ತಿ ಕಾರ್ಯ ನಡೆಯಬೇಕಾಗಿದೆ.

admin

ಪೊನ್ನಂಪೇಟೆ ತಾಲೂಕು ಆಡಳಿತ ಭವನದ ಭವ್ಯ ಸೌಧಕ್ಕೂ ಈಗಲೇ ರೂಪು ರೇಷೆಗಳನ್ನು ಹಾಕಿಕೊಳ್ಳಬೇಕಾಗಿದೆ. ಮಿನಿ ವಿಧಾನಸೌಧ ಎಲ್ಲಾ ಸುಸಜ್ಜಿತ ವ್ಯವಸ್ಥೆ ಗಳೊಂದಿಗೆ ಕಾರ್ಯ ನಿರ್ವಹಿಸಲು ಉತ್ತಮ ನೀಲಿನಕ್ಷೆ ತಯಾರಾಗ ಬೇಕಾಗಿದೆ. ವಿಸ್ತಾರವಾಗಿರುವ ಈ ಪ್ರದೇಶದಲ್ಲಿ ಸುಸಜ್ಜಿತ ಮಿನಿ ವಿಧಾನ ಸೌಧ ನಿರ್ಮಾಣವಾದಲ್ಲಿ ಪೊನ್ನಂಪೇಟೆ ಹಳೇ ನಾಡಕಚೇರಿ ಸುತ್ತ ಮುತ್ತಲು ಇರುವ ಜಾಗವನ್ನು ಬಳಕೆ ಮಾಡಿಕೊಂಡು ತಹಶೀಲ್ದಾರ್ ಅವರ ವಸತಿ ಗೃಹ, ಸಿಬ್ಬಂದಿಗಳ ವಸತಿಗೃಹ ನಿರ್ಮಿಸಲು ಅವಕಾಶ ವಿದೆ. . ಪ್ರಸ್ತುತ ಇರುವ ಪೊನ್ನಂಪೇಟೆ ತಾಲೂಕು ಕಚೇರಿಯ ಸಿಬ್ಬಂದಿಗಳನ್ನು ಇಲ್ಲಿಯೇ ಉಳಿಸಿಕೊಂಡು ವೀರಾಜಪೇಟೆಯ ತಾಲೂಕಿಗೆ ಹೊಸ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನೇಮಿಸಲು ಹೋರಾಟ ಸಮಿತಿಯು ಶಾಸಕರ ಗಮನ ಸೆಳೆಯಬೇಕಿದೆ. ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾದ ಸುಸಜ್ಜಿತ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಕರ್ಯ, ಕಚೇರಿಯಲ್ಲಿ ನಿರ್ವಹಿಸಬೇಕಾದ ಕಂಪ್ಯೂಟರ್ಗಳಿಗೆ ಗುಣಮಟ್ಟದ ವಿದ್ಯುತ್ ಸೌಕರ್ಯ ಆಗಬೇಕಾಗಿದೆ.

admin

ಒಟ್ಟಿನಲ್ಲಿ ಈ ಭಾಗದ ಜನತೆಗೆ ತಾಲೂಕು ಆಡಳಿತ ಸೇವೆ ತ್ವರಿತವಾಗಿ ದೊರೆಯಲು ನೂತನ ತಹಶೀಲ್ದಾರರು, ಶಿರಸ್ತೇದಾರರು, ಸಿಬ್ಬಂದಿಗಳು ಅಗತ್ಯ ನೇಮಕಾತಿ ಆಗಬೇಕಾಗಿದೆ. ಈ ಭಾಗದ ಕಾಫಿ ಬೆಳೆಗಾರರು ಕೃಷಿಕರು, ಶಾಲಾ ಕಾಲೇಜುಗಳು, ಉದ್ಯಮಿಗಳು, ವರ್ತಕರು ಹಾಗೂ ಮತ್ತಿತರರು ಅತ್ಯಧಿಕ ತೆರಿಗೆ ಪಾವತಿ ಮಾಡುತ್ತಿದ್ದು ಜನತೆಯ ಮನೆಬಾಗಿಲಿಗೆ ತುರ್ತು ಸೇವೆ ಒದಗಲು ಆದಷ್ಟು ಶೀಘ್ರ ತಹಶೀಲ್ದಾರ್ ಕಚೇರಿಯಲ್ಲಿ ಸಂಪೂರ್ಣ ಸೇವೆ ಸಿಗುವಂತಾಗಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಕಟ್ಟಡದಲ್ಲಿ ಸುಸಜ್ಜಿತವಾದ ರೆಕಾರ್ಡ್ ರೂಂ ಮಾಡಬೇಕಾಗಿದೆ. ಕಟ್ಟಡಕ್ಕೆ ಪೂರ್ಣ ಪ್ರಮಾಣದಲ್ಲಿ ಗುಣಮಟ್ಟದ ವಿದ್ಯುತ್ ಕಾಮಗಾರಿ ಆಗಿಲ್ಲದ ಕಾರಣ ಕಂಪ್ಯೂಟರ್ಗಳು ಆಗಿಂದಾಗ್ಗೆ ಹಾಳಾಗುತ್ತಿವೆ. ಅಲ್ಲದೆ ಮುಖ್ಯವಾಗಿ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅರ್ಥಿಂಗ್ ವ್ಯವಸ್ಥೆಯೆ ಕಲ್ಪಿಸಿಲ್ಲ. ಕಚೇರಿ ಸಿಬ್ಬಂದಿಗಳಿಗೆ ತುರ್ತು ಕೆಲಸಕ್ಕೆ ಬೇಕಾದ ಕಂಪ್ಯೂಟರ್ ಆಪರೇಟರ್ಗಳು ಲಭ್ಯವಿಲ್ಲ. ಅಗತ್ಯವಾಗಿ ಬೇಕಾದ ಸ್ಟೇಷನರಿ ಸಾಮಗ್ರಿಗಳು, ಜೆರಾಕ್ಸ್ ಮೆಷಿನ್ಗಳು, ಪ್ರಿಂಟರ್ ಮಷಿನ್ಗಳು, ದೂರವಾಣಿ ಸಂಪರ್ಕ, ಸರಬರಾಜು ಆಗಿಲ್ಲ. ಲಭ್ಯವಿರುವ ಕಂಪ್ಯೂಟರ್ಗಳು ವಿದ್ಯುತ್ ಭಯದಿಂದಲೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾಗಿ ದ್ದರೂ ಕಚೇರಿಗೆ ಬೇಕಾದ ತುರ್ತು ಕೆಲಸಗಳಿಗೆ ಇನ್ನೂ ಕೂಡ ಮಂಜೂರಾತಿ ಆಗಿಲ್ಲ. ಇದಕ್ಕೆ ಕಾರಣ ಸಿಬ್ಬಂದಿಗಳ ಕೊರತೆ ಎಂದು ಎದ್ದು ಕಾಣುತ್ತಿದೆ.

ಇದು ಪೊನ್ನಂಪೇಟೆ ತಾಲ್ಲೂಕಿನ ಕಥೆ ಆದರೆ ಕುಶಾಲನಗರ ತಾಲ್ಲೂಕಿನ ರಚನೆ ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇದೆ. ಈ ತಾಲ್ಲೂಕಿಗೆ ರಾಜ್ಯ ಸರ್ಕಾರ ತಹಶೀಲ್ದಾರರನ್ನು ನೇಮಿಸಿದೆ. ಆದರೆ ತಾಲ್ಲೂಕಿನ ಇತರ ಎಲ್ಲಾ ಇಲಾಖೆಗಳಿಗೂ ಯಾವುದೇ ಅಧಿಕಾರಿಗಳನ್ನು ನೇಮಿಸಿಲ್ಲ. ತಹಶೀಲ್ದಾರರು ನಾಡ ಕಚೇರಿಯಲ್ಲೆ ಇರಬೇಕಾಗಿದ್ದು ನೂತನ ಕಟ್ಟಡವನ್ನೂ ಇನ್ನೂ ಗುರುತಿಸಿಲ್ಲ. ತಾಲ್ಲೂಕು ರಚನೆಯನ್ನು ಜನರು ಹೋರಾಟದ ಮೂಲಕವೇ ಪಡೆದಿದ್ದಾರೆ. ಈಗ ತಾಲ್ಲೂಕಿಗೆ ಅಧಿಕಾರಿಗಳನ್ನೂ ಕಚೇರಿಗಳನ್ನೂ ಪಡೆಯಲು ಇನ್ನೊಂದು ಹೋರಾಟವನ್ನೆ ಮಾಡಬೇಕಾ ಎಂದು ಜನರು ಪ್ರಶ್ನಿಸುತಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com