APMC ಕಾಯ್ದೆ ತಿದ್ದುಪಡಿ ಮೂಲಕ ರೈತರ ಸುಲಿಗೆಗೆ ಅವಕಾಶ ಮಾಡಿಕೊಡಲಾಗಿದೆ: ಡಾ. ಪ್ರಕಾಶ್ ಕಮ್ಮರಡಿ

ಬೆಂಬಲ ಬೆಲೆ ಎಲ್ಲೂ ರೈತರಿಗೆ ಸಿಗುತ್ತಿಲ್ಲ. ಕೇವಲ 13 ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಟೊಮೆಟೊ, ಅಡಿಕೆ, ನೀರುಳ್ಳಿ ಮೊದಲಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಿಲ್ಲ, ಅವುಗಳಲ್ಲಿ ದೊಡ್ಡ ಮೊತ್ತದ ಸುಲಿಗೆಗಳಾಗಿವೆ ಎಂದು ಪ್ರಕಾಶ್ ಕಮ್ಮರಡಿ ಆರೋಪಿಸಿದ್ದಾರೆ.
APMC ಕಾಯ್ದೆ ತಿದ್ದುಪಡಿ ಮೂಲಕ ರೈತರ ಸುಲಿಗೆಗೆ ಅವಕಾಶ ಮಾಡಿಕೊಡಲಾಗಿದೆ: ಡಾ. ಪ್ರಕಾಶ್ ಕಮ್ಮರಡಿ

ಕಾಯ್ದೆ ತಂದ ಕೇವಲ 9 ತಿಂಗಳಲ್ಲಿಯೇ ಎಪಿಎಂಸಿಯಿಂದ ಹೊರಗಡೆ 25 ರಿಂದ 70 % ವ್ಯಾಪಾರವಾಗಿದೆ. ಎಪಿಎಂಸಿಯಿಂದ ಹೊರಗಡೆ ಆದ ವ್ಯವಹಾರದಲ್ಲಿ ರೈತರಿಗೆ ನ್ಯಾಯ ಸಿಕ್ಕಿದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಗೊತ್ತಿಲ್ಲ ಎಂದು ಹೋರಾಟಗಾರ, ಕೃಷಿ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್‌ ಪ್ರಕಾಶ್‌ ಕಮ್ಮರಡಿ ಹೇಳಿದ್ದಾರೆ.

ಎಂಎಸ್‌ಪಿ ದಿಲಾವೋ ಆಂದೋಲನದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರೇ ಖುದ್ದು ರಚಿಸಿದ ಕರ್ನಾಟಕದಲ್ಲಿ ಪ್ರಸ್ತುತ ಬೆಂಬಲ ಬೆಲೆ ಸಿಗುತ್ತಿರುವ ಬೆಳೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ 13 ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿದ್ದು, ಉಳಿದ ಬೆಳೆ ಬೆಳೆದ ರೈತರನ್ನು ಸುಲಿಗೆ ಮಾಡಲಾಗುತ್ತಿದೆಯೆಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರ ಸಮಸ್ಯೆಯ ಮೂಲ ಪೇಮೆಂಟಿಂದಲೇ ಶುರುವಾಗುತ್ತದೆ. ರೈತರಿಂದ ಭತ್ತ ಖರೀದಿ ಮಾಡಿ ಕಡಿಮೆ ಮೊತ್ತ ನೀಡಿ, ಉಳಿದ ಮೊತ್ತವನ್ನು ನಾಳೆ ನೀಡುತ್ತೇನೆಂದು ಸಾಗ ಹಾಕುತ್ತಾರೆ. ರೈತರಿಗೆ ಇಲ್ಲಿಂದಲೇ ಸಮಸ್ಯೆ ಶುರುವಾಗುತ್ತದೆ. ತೂಕದಲ್ಲೂ ಮೋಸ ಆಗುತ್ತದೆ. ಇವುಗಳಿಗೆ ನ್ಯಾಯ ಒದಗಿಸಬೇಕೆಂಬ ಕಾರಣಗಳಿಂದ ಎಪಿಎಂಸಿಯನ್ನು ಆರಂಭಿಸಲಾಗಿತ್ತು. ‌ಎಪಿಎಂಸಿ ಒಳಗಡೆ ಮೋಸ ಆಗದಂತೆ ಎಪಿಎಂಸಿ ಕಾರ್ಯದರ್ಶಿ ನಿಯಂತ್ರಣವಿತ್ತು. ಈಗ ಎಪಿಎಂಸಿ ಹೊರಗಡೆ ಮುಕ್ತ ವಲಯವೆಂದು ಕೇಂದ್ರ ಸರ್ಕಾರ ಘೋಷಿಸಿ ಕಾಯ್ದೆ ತಂದಿದೆ. ಆದರೆ ಮುಕ್ತ ವಲಯದ ಯಾವುದೇ ಹತೋಟಿ ನಮ್ಮಲ್ಲಿಲ್ಲ, ನಮ್ಮ ಜವಾಬ್ದಾರಿ ಎಪಿಎಂಸಿಯ ಒಳಗಡೆ ಮಾತ್ರ ಎಂದು ಮಾರುಕಟ್ಟೆಯ ಕಾರ್ಯದರ್ಶಿ ಹೇಳಿದ್ದಾರೆ. ಹಿಂದೆಯೂ ಸಮಸ್ಯೆಗಳು, ಮೋಸ ನಡೆಯುತ್ತಿತ್ತು. ಆ ವೇಳೆ ಕಾರ್ಯದರ್ಶಿಗಳಿಗೆ ದೂರು ನೀಡಬಹುದಿತ್ತು. ಈಗ ಇಂತಹ ವ್ಯವಸ್ಥೆ ಇಲ್ಲವಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಮೋಸಗಳಿಗೆ ಬೀಳುತ್ತಿದ್ದ ಕಡಿವಾಣವನ್ನು ತೆಗೆಯಲಾಗಿದೆ, ಆ ಮೂಲಕ ರೈತರ ಸುಲಿಗೆಗೆ ದೊಡ್ಡ ಅವಕಾಶ ಮಾಡಿಕೊಡಲಾಗಿದೆ ಎಂದು ಕಮ್ಮರಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೆ, ಬೆಂಬಲ ಬೆಲೆ ಎಲ್ಲೂ ರೈತರಿಗೆ ಸಿಗುತ್ತಿಲ್ಲ. ಕೇವಲ 13 ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಟೊಮೆಟೊ, ಅಡಿಕೆ, ನೀರುಳ್ಳಿ ಮೊದಲಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಿಲ್ಲ, ಅವುಗಳಲ್ಲಿ ದೊಡ್ಡ ಮೊತ್ತದ ಸುಲಿಗೆಗಳಾಗಿವೆ.

ಈ ಸಮಸ್ಯೆಗಳಿಗೆ ಪರಿಹಾರ ತರಲೆಂಬ ಕಾರಣದಿಂದ ನಾನು ಕೃಷಿ ಆಯೋಗದ ಅಧ್ಯಕ್ಷನಾಗಿದ್ದಾಗ, ಬೆಂಬಲ ಬೆಲೆಗಳಿಗೆ ಕಾನೂನು ಸ್ವರೂಪ ತಂದು ಅದಕ್ಕಿಂತ ಕಡಿಮೆ ಬೆಲೆಗಳಿಗೆ ಖರೀದಿ ಮಾಡಿದವರಿಗೆ ಶಿಕ್ಷೆಯಾಗಬೇಕೆಂಬ ನಿಟ್ಟಿನಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಸರ್ಕಾರದ ಎದುರು ಒಂದು ಬಿಲ್‌ ತಂದಿದ್ದೆವು. ಆದರೆ ಅದಿನ್ನೂ ಹಾಗೆಯೇ ಇದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇಡೀ ದೇಶದ ರೈತರು ಕೃಷಿ ಕಾಯ್ದೆ ತಿದ್ದುಪಡಿಯನ್ನು ತಿರಸ್ಕರಿಸುತ್ತಿದ್ದಾರೆ, ಅವರು ಕೇಳುತ್ತಿರುವುದು ಕನಿಷ್ಟ ಬೆಂಬಲ ಬೆಲೆ. ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಿದರೆ ಸಾಲದು, ಅದು ನಮಗೆ ಸಿಗುವಂತೆ ಮಾಡಬೇಕು ಹಾಗಾಗಿ ಎಂಎಸ್‌ಪಿಗೆ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com