ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆಗೆ KRS ಪಕ್ಷದಿಂದ ವಿರೋಧ

ವಾರ್ಷಿಕವಾಗಿ ಸಾವಿರದ ಇನ್ನೂರು ಕೋಟಿ ಖರ್ಚು ಮಾಡಿ ಕಸವನ್ನು ಸುಡಲಾಗುತ್ತಿದೆಯೇ ಹೊರತು ಅದರ ನಿರ್ವಹಣೆ ಮಾಡುತ್ತಿಲ್ಲ. ಕಸ ನಿರ್ವಹಣೆಗಾಗಿ ದೇಶದ ಮಹಾನಗರಗಳ ಪೈಕಿ ಬಿಬಿಎಂಪಿ ಅತಿ ಹೆಚ್ಚು ವೆಚ್ಚ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆಗೆ KRS ಪಕ್ಷದಿಂದ ವಿರೋಧ

ಕರ್ನಾಟಕ ರಾಜ್ಯ ಸರ್ಕಾರವು ನಿನ್ನೆ ನಡೆದ ಸಂಪುಟದ ಸಭೆಯಲ್ಲಿ ಬೆಂಗಳೂರಿನ ಕಸ ನಿರ್ವಹಣೆಗಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಿದೆ. ಸರ್ಕಾರದ ಈ ನಡೆ ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದ್ದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇದನ್ನು ವಿರೋಧಿಸಿದೆ. ನಗರದ ಕಸ ನಿರ್ವಹಣೆಯು ನಗರ ಸ್ಥಳೀಯ ಸಂಸ್ಥೆಗಳ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದ್ದು, ಈ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ನಿರ್ವಹಿಸುತ್ತಿದ್ದು, ಪ್ರಸ್ತುತ ನಡೆಯು ಈ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಕೆಆರ್‌ಎಸ್‌ ಪಕ್ಷವು ಹೇಳಿದೆ.

ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಕ್ಷದ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಯಾದ ಆರೋಗ್ಯಸ್ವಾಮಿ ಚಿನ್ನಪ್ಪ ಅವರು, ಸಂವಿಧಾನದ 74ನೇ ತಿದ್ದುಪಡಿಯ ಆಶಯದಂತೆ ಹೆಚ್ಚೆಚ್ಚು ಅಧಿಕಾರ ವಿಕೇಂದ್ರೀಕರಣ ಆಗಬೇಕಿತ್ತು, ಆದರೆ ಪ್ರಸ್ತುತ ನಡೆಯು ಅದಕ್ಕೆ ತದ್ವಿರುದ್ಧವಾಗಿದೆ. ನಗರದ ಕಸ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಹೇಳುತ್ತಲೇ ಬಂದಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾರ್ಷಿಕವಾಗಿ ಸಾವಿರದ ಇನ್ನೂರು ಕೋಟಿ ಖರ್ಚು ಮಾಡಿ ಕಸವನ್ನು ಸುಡಲಾಗುತ್ತಿದೆಯೇ ಹೊರತು ಅದರ ನಿರ್ವಹಣೆ ಮಾಡುತ್ತಿಲ್ಲ. ಕಸ ನಿರ್ವಹಣೆಗಾಗಿ ದೇಶದ ಮಹಾನಗರಗಳ ಪೈಕಿ ಬಿಬಿಎಂಪಿ ಅತಿ ಹೆಚ್ಚು ವೆಚ್ಚ ಮಾಡುತ್ತಿದೆ. ಆದರೆ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಬಿಬಿಎಂಪಿಯು ಸಂಪೂರ್ಣವಾಗಿ ವಿಫಲವಾಗಿದೆ. ಪ್ರಸ್ತುತ ಪಾಲಿಕೆಯ ಕೌನ್ಸಿಲ್ ಇಲ್ಲದ ಸಮಯದಲ್ಲಿ ಅದನ್ನು ಮತ್ತೊಂದು ಉತ್ತರದಾಯಿತ್ವವಿಲ್ಲದ ಸಂಸ್ಥೆಗೆ ವರ್ಗಾಯಿಸಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಬಿಬಿಎಂಪಿ ಮಾಡಿದೆ ಮತ್ತು ಅದಕ್ಕೆ ಒತ್ತಾಸೆಯಾಗಿ ರಾಜ್ಯ ಸರ್ಕಾರ ನಿಂತಿದೆ. ಬೆಂಗಳೂರು ನಗರದ ಕಸದ ಸಮಸ್ಯೆಗೆ ಪಾಲಿಕೆಯಲ್ಲಿನ ಭ್ರಷ್ಟಾಚಾರ ಮತ್ತು ದುರಾಡಳಿತ ಕಾರಣವೇ ಹೊರತು ಮತ್ತೇನೂ ಅಲ್ಲ. ಈ ಮೂಲ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕುತ್ತಿರುವುದು ಸಮಸ್ಯೆಗೆ ಪರಿಹಾರ ನೀಡುವ ಸೂಕ್ತ ವಿಧಾನವಲ್ಲ. ಕಸ ನಿರ್ವಹಣೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮತ್ತು ದಿನನಿತ್ಯ ಕಸ ಸುಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದರು ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದೆ ಮತ್ತೊಂದು ಸಂಸ್ಥೆಯ ವತಿಯಿಂದ ಹೇಗೆ ಸರಿಪಡಿಸುತ್ತಾರೆ ಎಂಬ ಸಂಶಯವಿದೆ, ಎಂದು ಪಕ್ಷ ಹೇಳಿದೆ.

ಈಗ ಆರಂಭಿಸಲು ಹೊರಟಿರುವ ಸಂಸ್ಥೆಯನ್ನು ಮುಂದಿಟ್ಟುಕೊಂಡು ನಾಗರಿಕರಿಂದ ಕಸ ನಿರ್ವಹಣೆಗಾಗಿ ಪ್ರತ್ಯೇಕ ಶುಲ್ಕ ವಸೂಲಿ ಮಾಡಲಾಗುತ್ತದೆ. ಈ ಹಿಂದೆ ಪಾಲಿಕೆ ಕಸ ನಿರ್ವಹಣೆಗೆಂದು ಬೆಸ್ಕಾಂ ಮೂಲಕ ಸೆಸ್ ಸಂಗ್ರಹಣೆಗೆ ಮುಂದಾಗಿತ್ತು ಮತ್ತು ಅದನ್ನು ನಗರದ ನಾಗರಿಕರು ಬಲವಾಗಿ ವಿರೋಧಿಸಿದ್ದರು. ಈಗ ಅದನ್ನು ಹಿಂಬಾಗಿಲಿನ ಮೂಲಕ ರಾಜ್ಯ ಸರ್ಕಾರವು ಮಾಡಲು ಹೊರಟಿದೆ. ನಾಗರಿಕರು ಬಿಬಿಎಂಪಿಗೆ ಕಸ ನಿರ್ವಹಣೆ ಸೇರಿ ಇತರ ಮೂಲಭೂತ ಸೌಕರ್ಯಗಳಿಗಾಗಿ ಆಸ್ತಿ ತೆರಿಗೆ ಮತ್ತು ಅದರ ಮೇಲೆ ಉಪಕರ ನೀಡುತ್ತಿದ್ದಾರೆ. ಆದರೆ ಇದಾವುದು ಸದ್ಬಳಕೆಯಾಗುತ್ತಿಲ್ಲ. ಬಿಬಿಎಂಪಿಯು ವಾರ್ಷಿಕವಾಗಿ ಸಾವಿರದ ಇನ್ನೂರು ಕೋಟಿ ಖರ್ಚು ಮಾಡಿ ಮಾಡುತ್ತಿದ್ದ ಕೆಲಸವನ್ನು ಇನ್ನೊಂದು ಸಂಸ್ಥೆ ಅದೇ ಹಣ ಖರ್ಚು ಮಾಡಿ ಅದೇ ನೌಕರರು, ಅಧಿಕಾರಿಗಳು, ಗುತ್ತಿಗೆದಾರರು ಯಾವ ರೀತಿಯಲ್ಲಿ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗೆಯೇ ಪ್ರಸ್ತುತ ಪರಿಸ್ಥಿತಿಗೆ ಬಿಬಿಎಂಪಿಯ ಭ್ರಷ್ಟಾಚಾರದ ಜೊತೆಗೆ ನಿಗದಿತ ಸಮಯದಲ್ಲಿ ಕಸ ನಿರ್ವಹಣೆಗೆ ಟೆಂಡರುಗಳನ್ನು ಕರೆಯದಿರುವುದು, ಪದೇಪದೇ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವುದು ಮತ್ತು ಇಂತಹ ಹಲವು ವಿಚಾರಗಳು ಕಾರಣವಾಗಿವೆ. ಇನ್ನು ಮುಂದೆ ಜನರು ಕಸ ನಿರ್ವಹಣೆಗಾಗಿ ಹೆಚ್ಚುವರಿ ಶುಲ್ಕ ನೀಡುವುದಲ್ಲದೆ ತಮ್ಮ ದೂರುಗಳನ್ನು ಹೊತ್ತು ಶಾಸಕರ ಮನೆ ಬಾಗಿಲಿಗೆ ಅಥವಾ ವಿಧಾನಸೌಧಕ್ಕೆ ಅಲೆಯುವುದೇ ಅವರಿಗೆ ಸಿಗುವ ಭಾಗ್ಯವಾಗಿದೆ. ಇಂತಹ ನಡೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿರೋಧಿಸುತ್ತದೆ, ಎಂದು ಆರೋಗ್ಯಸ್ವಾಮಿ ಚಿನ್ನಪ್ಪ ಅವರು ಹೇಳಿದ್ದಾರೆ.

ಜನರ ಸಹಭಾಗಿತ್ವದೊಂದಿಗೆ ಕಸವನ್ನು ಸ್ಥಳೀಯವಾಗಿ ನಿರ್ವಹಣೆ ಮಾಡುವುದರಿಂದ ಕಸದ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದಾಗಿದೆ. ಆದರೆ ಹಣ ವ್ಯಯ ಮಾಡಿ ನೂರಾರು ಕೋಟಿ ಲೂಟಿ ಮಾಡಲು, ಯಾವುದೇ ಉತ್ತರದಾಯಿತ್ವವಿಲ್ಲದ ದಾರಿಯನ್ನು ಹುಡುಕುತ್ತಿರುವುದು ಸಮಂಜಸವಲ್ಲ. ನಗರದ ಕಸವನ್ನು ದೂರದ ಊರುಗಳಿಗೆ ಸಾಗಿಸಿ, ಅದಕ್ಕೆ ಹೆಚ್ಚಿನ ದರ ವಸೂಲಿ ಮಾಡುವುದು ಮತ್ತು ನಗರದ ಹೊರವಲಯದ ಹಳ್ಳಿಗಳನ್ನು ತಿಪ್ಪೆಗಳನ್ನಾಗಿ ಮಾಡುವುದು ಯಾವುದೇ ನಾಗರಿಕ ಸಮಾಜಕ್ಕೆ ಗೌರವ ತರುವಂತಹ ನಡೆಯಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯೋಚಿಸಿ ತಕ್ಷಣವೇ ತನ್ನ ಈ ನಿರ್ಧಾರವನ್ನು ಕೈಬಿಡಬೇಕೆಂದು ಮತ್ತು ಪಾಲಿಕೆಯ ಕಸ ನಿರ್ವಹಣೆಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com