ರಾಜ್ಯದಲ್ಲಿ ಮೀಸಲಾತಿಗಾಗಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಮಗ್ರ ಪರಿಶೀಲನೆಗಾಗಿ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಲವು ಸಮುದಾಯಗಳಿಂದ ಮೀಸಲಾತಿಗಾಗಿ ಬೇಡಿಕೆಗಳು ಬರುತ್ತಿವೆ. %ಕ್ಕಿಂತ ಅಧಿಕ ಮೀಸಲಾತಿ, ಇವುಗಳ ಕುರಿತು ಇರುವಂತಹ ಕಾನೂನು ಚೌಕಟ್ಟು ಮತ್ತು ಸುಪ್ರಿಂಕೋರ್ಟ್ನ ತೀರ್ಪುಗಳ ಕುರಿತು ಅಧ್ಯಯನ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗುವುದು. ಇದರ ನೇತೃತ್ವವನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ವಹಿಸಲಿದ್ದಾರೆ. ಇವರೊಂದಿಗೆ ನಿವೃತ್ತ ಅಧಿಕಾರಿ ಮತ್ತು ಸಮಾಜ ವಿಜ್ಞಾನಿಯೊಬ್ಬರು ತಂಡದಲ್ಲಿ ಇರಲಿದ್ದಾರೆ, ಎಂದಿದ್ದಾರೆ.
“ಸಮಿತಿ ಸದಸ್ಯರ ನೇಮಕಾತಿಯ ಜವಾಬ್ದಾರಿಯನ್ನು ಖುದ್ದು ಸಿಎಂ ಬಿ ಎಸ್ ಯಡಿಯೂರಪ್ಪನವರೇ ವಹಿಸಿದ್ದಾರೆ,” ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕುರುಬರು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಡ ಹೇರುತ್ತಿದ್ದಾರೆ, ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಅಡಿಯಲ್ಲಿ ತರುವಂತೆ ಪ್ರತಿಭಟನೆಗಲು ನಡೆಯುತ್ತಿವೆ. ವಾಲ್ಮಿಕಿ ಸಮುದಾಯ, ವೀರಶೈವ ಸಮುದಾಯ, ಹಾಲು ಸೇರಿದಂತೆ ಹಲವು ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿವೆ. ಎಲ್ಲ ಒತ್ತಾಯಗಳನ್ನು ಪರಿಗಣಿಸಿದರೆ ಮೀಸಲಾತಿಯ ಪ್ರಮಾಣ ಶೇ. 50 ಮೀರುತ್ತದೆ, ಎಂದು ಗೃಹ ಸಚಿವರು ಹೇಳಿದ್ದಾರೆ.
“ಮೀಸಲಾತಿಯ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಈ ಆದೇಶ ಹಾಗೂ ಇದಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತಾಗಿ ತ್ರಿಸದಸ್ಯ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಲಿದೆ,” ಎಂದು ಅವರು ಹೇಳಿದ್ದಾರೆ.