ಚಿತ್ರಪಥ: ಕನ್ನಡ ಸಿನಿಮಾ ರಂಗದ ಹೆಜ್ಜೆ ಗುರುತುಗಳನ್ನು ನೆನಪಿಸುವ ತಾಣ

ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಚಿತ್ರಪಥದಲ್ಲಿ ಇರಲಿದೆ.
ಚಿತ್ರಪಥ: ಕನ್ನಡ ಸಿನಿಮಾ ರಂಗದ ಹೆಜ್ಜೆ ಗುರುತುಗಳನ್ನು ನೆನಪಿಸುವ ತಾಣ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವಾಗಿ ʼಚಿತ್ರಪಥʼ ಎಂಬ ಅಂತರ್ಜಾಲ ತಾಣ ಲೋಕಾರ್ಪಣೆಗೊಳ್ಳುತ್ತಿದೆ. www.chithrapatha.com ಎಂಬ ಅಂತರ್ಜಾಲ ತಾಣವು ಮಾರ್ಚ್‌ 6ರಂದು ಬಿಡುಗಡೆಗೊಳ್ಳಲಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಮತ್ತು ಚಿತ್ರಸಾಹಿತಿ ಕವಿರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಿನಿಮಾ ಪತ್ರಕರ್ತರಾಗಿ ಸುಮಾರು 15 ವರ್ಷ ದುಡಿದಿರುವ ಶಶಿಧರ್‌ ಚಿತ್ರದುರ್ಗ ಅವರ ಸಂಪಾದಕತ್ವದಲ್ಲಿ ಈ ವೆಬ್‌ ಪೋರ್ಟಲ್‌ ಕಾರ್ಯನಿರ್ವಹಿಸಲಿದೆ. ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಇವರದ್ದು. ಪ್ರತಿಧ್ವನಿಯಲ್ಲಿಯೂ ಸಿನಿಮಾ ಕುರಿತಾದ ಆಕರ್ಷಕ ಲೇಖನಗಳನ್ನು ಪ್ರಕಟಿಸಿರುವ ಶಶಿಧರ್‌ ಅವರು, ಈಗ ಚಿತ್ರಪಥ ಎಂಬ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚಿತ್ರಪಥದ ವಿಶೇಷತೆಯೇನು?

ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ – ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವುದು ‘ಚಿತ್ರಪಥ’ ಪೋರ್ಟಲ್‌ನ ಆಶಯ. ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ – ಲೇಖನ - ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಕೆಲಸ ಮಾಡಲಿದೆ.

ಚಿತ್ರಪಥ ಸಂಪಾದಕರಾದ ಶಶಿಧರ ಚಿತ್ರದುರ್ಗ
ಚಿತ್ರಪಥ ಸಂಪಾದಕರಾದ ಶಶಿಧರ ಚಿತ್ರದುರ್ಗ

ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಷಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋ – ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು – ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್‌ ಪೋರ್ಟಲ್‌ ಕಾರ್ಯನಿರ್ವಹಿಸಲಿದೆ.

ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ.

ಬೆಂಗಳೂರಿನಲ್ಲಿ ನಡೆದ ನಾಸ್ಟಾಲ್ಜಿಯಾ ಕಾರ್ಯಕ್ರಮದಲ್ಲಿ (1977) ಹಿಂದಿ ತಾರೆಯರಾದ ನರ್ಗೀಸ್, ಕಾಮಿನಿ ಕೌಶಲ್, ತಮಿಳು ನಟ ಜೆಮಿನಿ ಗಣೇಶನ್, ಕನ್ನಡ ನಟ ಗಂಗಾಧರ್ ಮತ್ತಿತರರು.
ಬೆಂಗಳೂರಿನಲ್ಲಿ ನಡೆದ ನಾಸ್ಟಾಲ್ಜಿಯಾ ಕಾರ್ಯಕ್ರಮದಲ್ಲಿ (1977) ಹಿಂದಿ ತಾರೆಯರಾದ ನರ್ಗೀಸ್, ಕಾಮಿನಿ ಕೌಶಲ್, ತಮಿಳು ನಟ ಜೆಮಿನಿ ಗಣೇಶನ್, ಕನ್ನಡ ನಟ ಗಂಗಾಧರ್ ಮತ್ತಿತರರು.ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ

‘ನಾಸ್ಟಾಲ್ಜಿಯಾ', ‘ಚಿತ್ರ-ಕಥೆ', ‘ಶೂಟಿಂಗ್ ಸೋಜಿಗ', ‘ಮಾಹಿತಿ – ವಿಶೇಷ’, ‘ನೆನಪು’, ‘ಪೋಸ್ಟರ್ ಮಾಹಿತಿ’, ‘ಅತಿಥಿ ಅಕ್ಷರ’ ವಿಭಾಗಗಳ ಮೂಲಕ ತೀರಾ ಅಕಾಡೆಮಿಕ್ ಧಾಟಿಯಲ್ಲಿ ಸಾಗದೆ, ಓದುಗರೊಂದಿಗೆ ಇಂಟರಾಕ್ಟೀವ್ ಆಗಿ ಮಾಹಿತಿ ನೀಡುವ ಪ್ರಯತ್ನ. ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.

 ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಋಣಮುಕ್ತಳು’ (1984) ಚಿತ್ರದ ಮುಹೂರ್ತ ಸಂದರ್ಭ. ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ನಟಿಯರಾದ ಪದ್ಮಾ ವಾಸಂತಿ, ಭಾರತಿ, ಜಯಮಾಲಾ
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಋಣಮುಕ್ತಳು’ (1984) ಚಿತ್ರದ ಮುಹೂರ್ತ ಸಂದರ್ಭ. ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ನಟಿಯರಾದ ಪದ್ಮಾ ವಾಸಂತಿ, ಭಾರತಿ, ಜಯಮಾಲಾಫೋಟೋ: ಪ್ರಗತಿ ಅಶ್ವತ್ಥ ನಾರಾಯಣ

‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‌ನಲ್ಲಿ ಬಳಕೆಯಾಗಲಿವೆ.

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ನಾಗ್
ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ನಾಗ್ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ

ಭವಾನಿ ಲಕ್ಷ್ಮೀನಾರಾಯಣ :

ಕನ್ನಡ ಸಿನಿಮಾಗಳು ಮದರಾಸಿನ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಕಾಲ ಅದು. ಅಲ್ಲಿನ ಸಿನಿಮಾ ಸುದ್ದಿಗಳನ್ನು ತಮ್ಮ ಫೋಟೋಗಳೊಂದಿಗೆ ಕನ್ನಡನಾಡಿಗೆ ಮುಟ್ಟಿಸುತ್ತಿದ್ದವರು ಭವಾನಿ ಲಕ್ಷ್ಮೀನಾರಾಯಣ. ಆಗ ನಟ-ನಟಿಯರು, ತಂತ್ರಜ್ಞರಿಗೆ ಅವರು 'ಸ್ಟಾರ್ ಫೋಟೋಗ್ರಾಫರ್'! ಕನ್ನಡ ಬೆಳ್ಳಿಪರದೆ ಪ್ರವೇಶಿಸಿದ ಬಹುತೇಕ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಹೆಗ್ಗಳಿಕೆ ಅವರದು. ಫೋಟೋ ಜರ್ನಲಿಸ್ಟ್ ಆಗಿ ಸುಮಾರು ಎರಡೂವರೆ ದಶಕಗಳ ಕಾಲ (1955ರಿಂದ 1980) ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಗುರುಶಿಷ್ಯರು’ (1981) ಚಿತ್ರೀಕರಣ ಸೆಟ್ಗೆ ವರನಟ ಡಾ.ರಾಜಕುಮಾರ್ ಭೇಟಿ ನೀಡಿದ್ದ ಸಂದರ್ಭ. ನಟರಾದ ತೂಗುದೀಪ ಶ್ರೀನಿವಾಸ್, ವಿಷ್ಣುವರ್ಧನ್, ದ್ವಾರಕೀಶ್ ಮತ್ತಿತರರು ಇದ್ದಾರೆ.
ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಗುರುಶಿಷ್ಯರು’ (1981) ಚಿತ್ರೀಕರಣ ಸೆಟ್ಗೆ ವರನಟ ಡಾ.ರಾಜಕುಮಾರ್ ಭೇಟಿ ನೀಡಿದ್ದ ಸಂದರ್ಭ. ನಟರಾದ ತೂಗುದೀಪ ಶ್ರೀನಿವಾಸ್, ವಿಷ್ಣುವರ್ಧನ್, ದ್ವಾರಕೀಶ್ ಮತ್ತಿತರರು ಇದ್ದಾರೆ.ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ

ಪ್ರಗತಿ ಅಶ್ವತ್ಥನಾರಾಯಣ:

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಪ್ರಗತಿ ಸ್ಟುಡಿಯೋ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ಸ್ಥಿರಚಿತ್ರ ಛಾಯಾಗ್ರಹಣದ ಮೂಲಕ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರಜಗತ್ತಿನ ಭಾಗವಾಗಿದ್ದು `ಪ್ರಗತಿ'ಯ ಹೆಮ್ಮೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಹಣದಲ್ಲಿ ಅಶ್ವತ್ಥ ಅವರದ್ದು ನಾಲ್ಕು ದಶಕಗಳ ಅನುಭವ. ಅಧಿಕೃತವಾಗಿ ಅಶ್ವತ್ಥರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿ ಆರಂಭವಾಗಿದ್ದು ಮದರಾಸಿನಲ್ಲಿ `ಬೆಳ್ಳಿಮೋಡ' ಚಿತ್ರದೊಂದಿಗೆ. ಅವರು ಸ್ಥಿರಚಿತ್ರ ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ `ಪ್ರೇಮ ಪ್ರೇಮ ಪ್ರೇಮ'. `ಪ್ರಗತಿ' ಸ್ಟುಡಿಯೋ ಆರಂಭಿಸಿದ ನಂತರ ಸುಮಾರು 275 ಸಿನಿಮಾಗಳಿಗೆ ಅಶ್ವತ್ಥರು ಸ್ಟಿಲ್ ಫೋಟೋಗ್ರಫಿ ಮಾಡಿದ್ದಾರೆ. ಮದರಾಸಿನಲ್ಲಿದ್ದಾಗ ಮಲಯಾಳಂ ಚಿತ್ರಗಳೂ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಗಳಿಗೆ ದುಡಿದಿದ್ದರು. ಒಟ್ಟಾರೆ ಸ್ಟಿಲ್ ಫೋಟೋಗ್ರಾಫರ್ ಆಗಿ ಅವರು ಕೆಲಸ ಮಾಡಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ. ಹೀಗೆ ಅವರ ಸಂಗ್ರಹದಲ್ಲಿನ ಅಸಂಖ್ಯಾತ ಫೋಟೋಗಳು ಕನ್ನಡ ಚಿತ್ರರಂಗದ ಇತಿಹಾಸ ದಾಖಲಿಸುತ್ತವೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com