ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!

ಈಗ ಪಂಚಮಸಾಲಿ ಹೋರಾಟದ ಮೂಲಕ ಆರಂಭವಾಗಿರುವ ಲಿಂಗಾಯತ ಸಮುದಾಯದ ಹೊಸ ನಾಯಕತ್ವ ಕಟ್ಟುವ ಈ ಪ್ರಕ್ರಿಯೆಯಲ್ಲಿ; ಪರ್ಯಾಯ ನಾಯಕನಾಗಿ ಯತ್ನಾಳ್ ಎಷ್ಟರಮಟ್ಟಿಗೆ ಹೊರಹೊಮ್ಮುತ್ತಾರೆ ಎಂಬುದರ ಮೇಲೆ ರಾಜ್ಯ ಬಿಜೆಪಿಯ ಭವಿಷ್ಯದ ಬೆಳವಣಿಗೆಗಳು ನಿಂತಿವೆ!
ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!

ಸದ್ಯ ರಾಜ್ಯ ರಾಜಕಾರಣದ ರೆಬೆಲ್ ಸ್ಟಾರ್ ಬಸನಗೌಡ ಪಾಟೀಲ್ ಯತ್ನಾಳ್ ದಿಢೀರ್ ದೆಹಲಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಪಂಚಮಸಾಲಿ ಮೀಸಲಾತಿ ಹೋರಾಟದ ಭಾಗವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರು ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಸಿಎಂ ಮತ್ತು ಅವರ ಕುಟುಂಬದ ಭ್ರಷ್ಟಾಚಾರ, ಅಕ್ರಮಗಳ ಕುರಿತು, ಸ್ವತಃ ಆಡಳಿತ ಪಕ್ಷದ ಶಾಸಕರಾಗಿ ಯತ್ನಾಳ್ ಮಾಡಿದ್ದ ಬಹಿರಂಗ ಟೀಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯ ಶಿಸ್ತು ಸಮಿತಿ ಅವರಿಗೆ ಕಳೆದ ವಾರ ನೋಟೀಸ್ ನೀಡಿತ್ತು. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ, “ಯಡಿಯೂರಪ್ಪನವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ, ನೋಟೀಸ್ ಕೊಟ್ಟು ನೀವು ನನ್ನ ಬಾಯಿ ಮುಚ್ಚಿಸಲಾರಿರಿ” ಎಂದು ಯತ್ನಾಳ್ ತಮ್ಮ ಎಂದಿನ ಶೈಲಿಯ ವಾಗ್ದಾಳಿ ಮುಂದುವರಿಸುವ ಮೂಲಕ ನೋಟೀಸ್ ಗೆ ತಾವು ಯಾವ ಬೆಲೆಯನ್ನೂ ಕೊಡುವುದಿಲ್ಲ ಎಂಬುದನ್ನು ಸಾರ್ವಜನಿಕವಾಗೇ ಖಚಿತಪಡಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಬಳಿಕ ಪಕ್ಷದ ಶಿಸ್ತು ಸಮಿತಿಯ ನೋಟೀಸ್ ಗೆ 11 ಪುಟಗಳ ಉತ್ತರವನ್ನೂ ನೀಡಿದ್ದು, “ನೋಟೀಸ್ ನಲ್ಲಿ ಪ್ರಸ್ತಾಪಿಸಿದ ಎಲ್ಲಾ ವಿಷಯಗಳಿಗೆ ನಾನು ಸಾಕ್ಷ್ಯ ಸಹಿತ ಪ್ರತಿಕ್ರಿಯೆ ನೀಡಿದ್ದೇನೆ. ನೋಟೀಸ್ ಗೆ ನೀಡಿರುವ ಆ ಉತ್ತರ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂಬ ಸಮಜಾಯಿಷಿಯೇ ವಿನಃ, ಕ್ಷಮಾಪಣೆಯಾಗಲೀ, ವಿಷಾದವಾಗಲೀ ವ್ಯಕ್ತಪಡಿಸಿಲ್ಲ. ನಾನು ಪಕ್ಷ, ಪಕ್ಷದ ಮೇರು ನಾಯಕ ಮೋದೀಜಿ ಅವರ ಬಗೆಗಿನ ಕಾಳಜಿಯಿಂದಲೇ ಈವರೆಗೆ ಮಾತನಾಡಿದ್ದೇನೆಯೇ ವಿನಃ ಪಕ್ಷದ, ಅಥವಾ ಪಕ್ಷದ ನಾಯಕರ ವಿರುದ್ಧ ಅಲ್ಲ. ಮುಖ್ಯಮಂತ್ರಿ ಮತ್ತು ಅವರ ಮಗ ವಿಜಯೇಂದ್ರರ ಕೃತ್ಯಗಳು ಪಕ್ಷ ಮತ್ತು ಪಕ್ಷದ ರಾಷ್ಟ್ರೀಯ ನಾಯಕರು, ಕೋಟ್ಯಂತರ ಕಾರ್ಯಕರ್ತರಿಗೆ ಮಸಿ ಬಳಿಯುತ್ತಿವೆ. ಆ ಹಿನ್ನೆಲೆಯಲ್ಲೇ ನಾನು ಅಂತಹ ಕೃತ್ಯದ ಬಗ್ಗೆ ಪ್ರಶ್ನಿಸಿದ್ದೇನೆ” ಎಂದೂ ಯತ್ನಾಳ್ ಹೇಳಿದ್ದಾರೆ.

ಅಲ್ಲದೆ, ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ರಾಜ್ಯದ ಕಾಂಗ್ರೆಸ್ ಪ್ರಭಾವಿ ನಾಯಕರ ಜೊತೆ ಕೈಜೋಡಿಸಿ, ಸ್ವತಃ ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಪೆಟ್ಟು ಕೊಡುವ ಷಢ್ಯಂತ್ರ ರೂಪಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಪಕ್ಷವನ್ನು ಸೋಲಿಸಲು ಹವಾಲಾ ಹಣದ ವ್ಯವಹಾರ ನಡೆಸಿದ್ದಾರೆ. ಆ ಮೂಲಕ ಮೋದಿಯವರ ವರ್ಚಸ್ಸಿಗೆ ಪೆಟ್ಟು ಕೊಡುವುದು ಅವರ ಉದ್ದೇಶವಾಗಿತ್ತು ಎಂಬ ಹೊಸ ಬಾಂಬ್ ಕೂಡ ಸಿಡಿಸಿದ್ದಾರೆ.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ವಿಜಯೇಂದ್ರ ರಾಜ್ಯದ ಸೂಪರ್ ಸಿಎಂ: ಸಾಕ್ಷಿಗೆ ವಿಡಿಯೋ ಹಂಚಿಕೊಂಡ ಯತ್ನಾಳ್

ಈ ನಡುವೆ ದೆಹಲಿ ಭೇಟಿಯ ಕುರಿತು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಯತ್ನಾಳ್, ತಾವು ಯಾವುದೇ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿಲ್ಲ. ಪಕ್ಷದ ನಾಯಕರನ್ನು ಭೇಟಿಯಾಗುವ ಉದ್ದೇಶವೂ ಇಲ್ಲ. ವಿಜಯಪುರದ ಶಾಲೆಯೊಂದರ ಸಿಬಿಎಸ್ ಸಿ ಪಠ್ಯಕ್ರಮದ ಕುರಿತ ಕೆಲಸಕ್ಕಾಗಿ ದಿಢೀರ್ ಹೊರಟುಬಂದಿರುವೆ. ತಮ್ಮ ಈ ಭೇಟಿಗೂ ಪಕ್ಷದ ನೋಟೀಸ್ ಗೂ ಯಾವುದೇ ಸಂಬಂಧವಿಲ್ಲ. ತಮ್ಮ ಬಗ್ಗೆ ಟೀಕೆ ಮಾಡಿರುವ ಸಚಿವ ನಿರಾಣಿ ಮತ್ತು ಸಿ ಸಿ ಪಾಟೀಲರಿಗೆ ಕರ್ನಾಟಕಕ್ಕೆ ವಾಪಸ್ಸಾದ ಬಳಿಕ ತಕ್ಕ ಉತ್ತರ ಕೊಡುವೆ ಎಂದಿದ್ದಾರೆ.

ಮತ್ತೊಂದು ಕುತೂಹಲದ ಸಂಗತಿಯೆಂದರೆ; ಯತ್ನಾಳ್ ದಿಢೀರ್ ದೆಹಲಿ ಭೇಟಿಯ ವೇಳೆಯೇ ಸಚಿವ ಮುರುಗೇಶ್ ನಿರಾಣಿ ಕೂಡ ದೆಹಲಿಗೆ ಭೇಟಿ ನೀಡಿದ್ದಾರೆ. ಆದರೆ, ಅವರು ತಮ್ಮದು ಅಧಿಕೃತ ಭೇಟಿ. ತಮ್ಮ ಖಾತೆಗೆ ಸಂಬಂಧಿಸಿದ ಕೆಲವು ಅಧಿಕೃತ ಕೆಲಸಗಳಿಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಬಂದಿರುವುದಾಗಿ ಹೇಳಿದ್ದು, ಪಕ್ಷದ ವರಿಷ್ಟರನ್ನು ಭೇಟಿ ಮಾಡುವ ಯೋಚನೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ, ಪಂಚಮಸಾಲಿ ಮೀಸಲಾತಿ ಹೋರಾಟ ರಾಜ್ಯ ಸರ್ಕಾರಕ್ಕೆ ಮೀಸಲಾತಿ ಘೋಷಣೆಗೆ ನೀಡಿರುವ ಗಡುವು, ಸಿಎಂ ಯಡಿಯೂರಪ್ಪ ವಿರುದ್ಧದ ಬಹಿರಂಗ ಟೀಕೆ ಮತ್ತು ಸವಾಲುಗಳು ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ನಿರಾಣಿ ಮತ್ತು ಸಿಸಿ ಪಾಟೀಲರು ಸಿಎಂ ಪರ ವಕಾಲತು ವಹಿಸಿ ಯತ್ನಾಳ್ ವಿರುದ್ದ ಮಾಡಿದ ಬಹಿರಂಗ ಟೀಕೆಗಳ ಹಿನ್ನೆಲೆಯಲ್ಲೇ ಯತ್ನಾಳ್ ಮತ್ತು ನಿರಾಣಿ ಅವರನ್ನು ವರಿಷ್ಟರು ಕರೆಸಿಕೊಂಡಿದ್ದಾರೆ. ಇಬ್ಬರನ್ನೂ ಕೂರಿಸಿಕೊಂಡು ಮಾತುಕತೆ ಮೂಲಕ ಪರಿಸ್ಥಿತಿಯನ್ನು ಶಮನಗೊಳಿಸುವ ಮತ್ತು ಇಬ್ಬರಿಗೂ ಪಕ್ಷದ ವರ್ಚಸ್ಸು ಮತ್ತು ಸರ್ಕಾರಕ್ಕೆ ಕಳಂಕ ಹಚ್ಚದಂತೆ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ದಿಢೀರ್ ಬುಲಾವ್ ಕಳಿಸಲಾಗಿತ್ತು ಎಂಬುದು ಪಕ್ಷದ ಮೂಲಗಳ ಮಾಹಿತಿ.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ಬಿಹಾರ ಚುನಾವಣೆ: ಮೋದಿ ಶಕ್ತಿ ಕುಂದಿಸಲು ವಿಜಯೇಂದ್ರ ಫಂಡಿಂಗ್;‌ ಯತ್ನಾಳ್‌ ಗಂಭೀರ ಆರೋಪ

ಹಾಗೆಂದ ಮಾತ್ರಕ್ಕೆ ಯತ್ನಾಳ್ ವಿರುದ್ಧ ಅಮಾನತು ಅಥವಾ ವಜಾದಂತಹ ಕಠಿಣ ಕ್ರಮ ಜರುಗಿಸುವ ಪರಿಸ್ಥಿತಿಯಲ್ಲಿ ದೆಹಲಿ ನಾಯಕರು ಇಲ್ಲ. ಏಕೆಂದರೆ; ಯತ್ನಾತ್ ಒಂದು ವರ್ಷದ ಹಿಂದೆ ಇದ್ದಂತೆ ಈಗ ಕೇವಲ ಒಬ್ಬ ಮಾಜಿ ಸಚಿವ ಮತ್ತು ಹಾಲಿ ಶಾಸಕರಾಗಿ ಉಳಿದಿಲ್ಲ. ಅಥವಾ ಕಟ್ಟಾ ಹಿಂದುತ್ವವಾದಿ, ಪಕ್ಷ ಸಿದ್ಧಾಂತನಿಷ್ಟ ನಾಯಕರಷ್ಟೇ ಆಗಿಯೂ ಇಲ್ಲ. ಈಗ ಅವರು ಬಿಜೆಪಿಯ ಮತಬ್ಯಾಂಕ್ ಆದ ಮತ್ತು ಅದರ ಏಳುಬೀಳಿನ ಏಕೈಕ ಮಾನದಂಡವಾಗಿರುವ ಲಿಂಗಾಯತ ಸಮುದಾಯದ ಶೇ.80ರಷ್ಟು ಪಾಲು ಹೊಂದಿರುವ ಪ್ರಬಲ ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಇತ್ತೀಚಿನ ಅವರ ಸಾರ್ವಜನಿಕ ಭಾಷಣಗಳಲ್ಲಿ ಪದೇಪದೆ ಮುಖ್ಯಮಂತ್ರಿ ಕುರ್ಚಿಯ ವಿಷಯ ಪ್ರಸ್ತಾಪಿಸಿ, ನಾವು ಅಲ್ಲಿಗೆ ಬರುತ್ತೇವೆ, ನಿಮ್ಮನ್ನು ಅಲ್ಲಿಂದ ಇಳಿಸುತ್ತೇವೆ ಎನ್ನುತ್ತಲೇ ಇದ್ದಾರೆ.

ಇಡೀ ಸಮುದಾಯ ಅವರೊಂದಿಗೆ ಒಗ್ಗಟ್ಟಾಗಿ ನಿಂತಿದೆ. ಹಾಗಾಗಿ, ಕೇವಲ ಸಿಎಂ ಮತ್ತು ಅವರ ಕುಟುಂಬದ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ ಕಾರಣಕ್ಕಾಗಿ ಅವರನ್ನು ಪಕ್ಷದಿಂದ ಹೊರಹಾಕುವ ಮೂಲಕ ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಮೂರ್ಖತನ ಎಂಬುದು ವರಿಷ್ಠರಿಗೆ ಗೊತ್ತಿದೆ. ಹಾಗಾಗಿ ನೋಟೀಸ್, ನೋಟೀಸ್ ಗೆ ಯತ್ನಾಳ್ ಪ್ರತಿಕ್ರಿಯೆ, ದೆಹಲಿ ಭೇಟಿ ಯಂತಹ ಯಾವ ಬೆಳವಣಿಗೆಗಳೂ ಸದ್ಯಕ್ಕಂತು ಯತ್ನಾಳ್ ಅವರ ವಿಷಯದಲ್ಲಿ ಅಂತಹ ಮಹತ್ವದ ಬದಲಾವಣೆಯನ್ನೇನೂ ತರಲಾರವು ಎಂಬುದು ಪಕ್ಷದ ಆಂತರಿಕ ವಲಯದಲ್ಲೇ ಕೇಳಿಬರುತ್ತಿರುವ ಮಾತು.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆಯುವ ಷಡ್ಯಂತ್ರವನ್ನು ವಿಜಯೇಂದ್ರ ಮಾಡುತ್ತಿದ್ದಾರೆ -ಯತ್ನಾಳ್‌ ಆರೋಪ

ಹಾಗೆ ನೋಡಿದರೆ; ಈಗ್ಗೆ ಒಂದು ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ; ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭದ ಬಳಿಕ ಸ್ವತಃ ಸಿಎಂ ಯಡಿಯೂರಪ್ಪ ಅಖಂಡ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ ಎಂಬುದಕ್ಕೆ ಸಾಲು ಸಾಲು ನಿದರ್ಶನಗಳು ಸಿಗುತ್ತವೆ. ಪಂಚಮಸಾಲಿ ಲಿಂಗಾಯತ ಮೀಸಲಾತಿ ಹೋರಾಟದ ಪಾದಯಾತ್ರೆ ಮತ್ತು ಬಹಿರಂಗ ಸಮಾವೇಶದಲ್ಲಿ ಕೂಡ ಯತ್ನಾಳ್ ಮತ್ತಿತರ ಹಲವು ಆ ಸಮುದಾಯದ ಪ್ರಭಾವಿ ನಾಯಕರು ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿರುವುದು ಅಂತಹ ಬೆಳವಣಿಗೆಯ ಒಂದು ಉದಾಹರಣೆ.

ಸಮುದಾಯದಲ್ಲಿ ಹೀಗೆ ಕುಗ್ಗುತ್ತಿರುವ ತಮ್ಮ ಜನಪ್ರಿಯತೆ ಮತ್ತು ತಮ್ಮ ವಿರುದ್ಧ ಬಂಡೇಳುತ್ತಿರುವ ಸಮುದಾಯದ ನಾಯಕರನ್ನು ಬಗ್ಗುಬಡಿಯುವ ತಂತ್ರವಾಗಿಯೇ ಯಡಿಯೂರಪ್ಪ ಕೆಲವು ದಿನಗಳ ಹಿಂದೆ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮೀಸಲಾತಿ ಘೋಷಣೆಯ ದಾಳ ಉರುಳಿಸಿದ್ದರು. ಆ ಹೊತ್ತಿಗೆ ತಮ್ಮ ಕುರ್ಚಿಗೆ ಎದುರಾಗಿದ್ದ ಸಂಚಕಾರದಿಂದ ಪಾರಾಗಲು ಪಕ್ಷದ ವರಿಷ್ಠರ ವಿರುದ್ದ ಹೂಡಿದ ದಾಳವಾದಂತೆ, ಆ ತಂತ್ರ ಸ್ವತಃ ತಮ್ಮದೇ ಸಮುದಾಯದ ನಡುವೆ ತಮ್ಮ ವರ್ಚಸ್ಸು ಕಾಯ್ದಿಟ್ಟುಕೊಳ್ಳುವ ದಾಳವೂ ಆಗಿತ್ತು. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಆ ತಂತ್ರ ಆ ಕ್ಷಣಕ್ಕೆ ಯಡಿಯೂರಪ್ಪ ಕುರ್ಚಿ ಉಳಿಸಿತ್ತಾದರೂ, ಅವರ ಮತ್ತೊಂದು ಗುರಿ ಸಾಧನೆಗೆ ಬದಲಾಗಿ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತೀವ್ರತೆ ತಂದುಕೊಟ್ಟು ತಿರುಗುಬಾಣವೇ ಆಯಿತು.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ನಾವು ಹಿಂದೂಗಳು, ಕನ್ನಡಿಗರ ಓಟು ಹೋಗುತ್ತದೆಂಬ ಭಯವಿಲ್ಲ; ಬಸನಗೌಡ ಯತ್ನಾಳ್

ಹಾಗಾಗಿ, ಈಗ ಬಹುಸಂಖ್ಯಾತ ಲಿಂಗಾಯತ ಸಮುದಾಯದವಾದ ಪಂಚಮಸಾಲಿಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿರುವ ಮತ್ತು ಆ ಮೂಲಕ ರಾಜ್ಯದ ಲಿಂಗಾಯತ ಸಮುದಾಯದ ಪರ್ಯಾಯ ನಾಯಕರಾಗಿ ಕಾಣಿಸುತ್ತಿರುವ ಯತ್ನಾಳ್ ಅವರ ಬಾಯಿ ಮುಚ್ಚಿಸುವುದು ಸರಳವಿಲ್ಲ. ಹಾಗೆ ನೋಡಿದರೆ; ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರ ರಚನೆಯ ವೇಳೆ ಯಡಿಯೂರಪ್ಪಗೆ ಪರ್ಯಾಯವಾಗಿ ಲಿಂಗಾಯತ ನಾಯಕರನ್ನು ಹುಟ್ಟುಹಾಕುವ ತಂತ್ರವನ್ನು ಸ್ವತಃ ಪಕ್ಷದ ವರಿಷ್ಠರೇ ಹೆಣೆದಿದ್ದರು. ಅಂತಹ ತಂತ್ರದ ಭಾಗವಾಗಿಯೇ ಲಕ್ಷ್ಮಣ ಸವದಿಯಂಥ ಉತ್ತರಕರ್ನಾಟಕದ ಲಿಂಗಾಯತ ನಾಯಕ ಚುನಾವಣೆಯಲ್ಲಿ ಸೋತಿದ್ದರೂ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಪರ್ಯಾಯ ನಾಯಕನನ್ನು ಹುಟ್ಟುಹಾಕುವ ಲೆಕ್ಕಾಚಾರ ಹೆಣೆಯಲಾಗಿತ್ತು. ಆದರೆ, ಲಕ್ಷ್ಮಣ ಸವದಿ ವರಿಷ್ಠರ ನಿರೀಕ್ಷೆಯ ಮಟ್ಟಕ್ಕೆ ಬೆಳೆಯದೇ ಅಂತಹ ತಂತ್ರ ಯಶ ಕಂಡಿರಲಿಲ್ಲ.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ಬಿ ವೈ ವಿಜಯೇಂದ್ರ ವಿರುದ್ಧ ಸರಣಿ ಆರೋಪ ಮಾಡಿದ ಬಸನಗೌಡ ಪಾಟೀಲ ಯತ್ನಾಳ

ಇದೀಗ ಪಂಚಮಸಾಲಿ ಹೋರಾಟ ಮತ್ತು ಯಡಿಯೂರಪ್ಪ ವಿರುದ್ಧದ ರೆಬೆಲ್ ಹೇಳಿಕೆಗಳ ಮೂಲಕ ಯತ್ನಾಳ್ ಪರೋಕ್ಷವಾಗಿ ವರಿಷ್ಠರ ಆ ತಂತ್ರವನ್ನು ಯಶಸ್ವಿಗೊಳಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲೇ ಯತ್ನಾಳ್ ಗೆ ಪಕ್ಷದ ದೆಹಲಿ ಮತ್ತು ರಾಜ್ಯ ಮಟ್ಟದ ನಾಯಕರಲ್ಲೂ ಹಲವರ ಪರೋಕ್ಷ ಬೆಂಬಲವಿದೆ ಮತ್ತು ಮುಖ್ಯವಾಗಿ ಆರ್ ಎಸ್ ಎಸ್ ಮತ್ತು ಪರಿವಾರದ ಆಶೀರ್ವಾದವೂ ಇದೆ. ಆ ದೃಷ್ಟಿಯಿಂದ ಕೂಡ ಯತ್ನಾಳ್ ವಿರುದ್ಧ ಕಠಿಣ ಶಿಸ್ತು ಕ್ರಮಗಳು ಜಾರಿಯಾಗುವ ಸಾಧ್ಯತೆಗಳು ವಿರಳ. ಯಾಕೆಂದರೆ, ಯಡಿಯೂರಪ್ಪ ಮತ್ತು ಕುಟುಂಬ ತಮಗಿರುವ ಸಮುದಾಯ ಮತ್ತು ಹಣ ಬಲದ ಮೇಲೆ ಪಕ್ಷ ಮತ್ತು ಸಂಘಟನೆಯ ಮೇಲೆ ಸವಾರಿ ನಡೆಸುತ್ತಿರುವುದು ವರಿಷ್ಠರಿಗೆ ಈಗಾಗಲೇ ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಯತ್ನಾಳ್ ಗೆ ಕಡಿವಾಣ ಹಾಕದೇ ಸಡಿಲ ಬಿಟ್ಟು ಅವರ ಬಂಡಾಯ ಹುಟ್ಟಿಸಬಹುದಾದ ಪ್ರತಿಕ್ರಿಯೆ, ಫಲಿತಾಂಶಗಳನ್ನು ನೋಡಿ ದಾಳ ಉರುಳಿಸುವ ಕಾದುನೋಡುವ ತಂತ್ರಕ್ಕೆ ವರಿಷ್ಠರು ಮಾರುಹೋಗಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್ ವೈಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುವರೇ ‘ರೆಬೆಲ್ ಸ್ಟಾರ್’ ಯತ್ನಾಳ್!
ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಿದ ಬಿಜೆಪಿಯಿಂದ ಈಗ ತೇಪೆ ಹಚ್ಚುವ ಪ್ರಯತ್ನ 

ಹಾಗಾಗಿ ಸದ್ಯಕ್ಕೆ ಯತ್ನಾಳ್ ಒಂದು ರೀತಿಯಲ್ಲಿ ವರಿಷ್ಟರ ಪಾಲಿಗೆ ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎಂಬಂತಾಗಿದ್ದಾರೆ. ಆದರೆ, ಸುಲಭವಾಗಿ ಯಡಿಯೂರಪ್ಪ ಅವರನ್ನೂ ಬದಿಗೆ ಸರಿಸಲಾಗದ ಇಕ್ಕಟ್ಟಿನ ಸ್ಥಿತಿಯಲ್ಲಿ ಬಿಜೆಪಿ ಇದೆ. ಹಾಗಾಗಿ ಸದ್ಯಕ್ಕೆ ಕಾದುನೋಡುವ ತಂತ್ರವೊಂದೇ ವರಿಷ್ಟರ ಮುಂದಿರುವ ಸದ್ಯದ ಆಯ್ಕೆ. ಹಾಗಾಗಿ, ಈಗ ಪಂಚಮಸಾಲಿ ಹೋರಾಟದ ಮೂಲಕ ಆರಂಭವಾಗಿರುವ ಲಿಂಗಾಯತ ಸಮುದಾಯದ ಹೊಸ ನಾಯಕತ್ವ ಹೊರಹೊಮ್ಮುವ ಈ ಪ್ರಕ್ರಿಯೆಯಲ್ಲಿ; ಪರ್ಯಾಯ ನಾಯಕನಾಗಿ ಯತ್ನಾಳ್ ಎಷ್ಟರಮಟ್ಟಿಗೆ ಹೊರಹೊಮ್ಮುತ್ತಾರೆ ಎಂಬುದರ ಮೇಲೆ ರಾಜ್ಯ ಬಿಜೆಪಿಯ ಭವಿಷ್ಯದ ಬೆಳವಣಿಗೆಗಳು ನಿಂತಿವೆ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com