ಅಕ್ರಮ ಕ್ರಷರ್‌ಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದ ಸರ್ಕಾರ?

ರಾಜ್ಯದ ಸಂಪತ್ತನ್ನು ಉಳಿಸಿ ಬೆಳೆಸಬೇಕಾಗಿದ್ದ ಸರ್ಕಾರವು, ಲೂಟಿಕೋರರಿಗೆ ರಹದಾರಿ ನಿರ್ಮಿಸಿಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಅಕ್ರಮ ಕ್ರಷರ್‌ಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದ ಸರ್ಕಾರ?

ರಾಜ್ಯದಲ್ಲಿ ಶಿವಮೊಗ್ಗ ಕಲ್ಲು ಕ್ವಾರಿ ಸ್ಫೊಟ ದುರಂತದ ನೆನಪು ಮಾಸುವ ಮುನ್ನವೇ, ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಫೋಟ ನಿಜಕ್ಕೂ ಆತಂಕ ಮೂಡಿಸಿದೆ. ಅಕ್ರಮವಾಗಿ ಜಿಲೆಟಿನ್‌ ಸಂಗ್ರಹ ಮಾಡುವ ವಿಚಾರದ ಕುರಿತಾಗಿ ಹಸಿಬಿಸಿ ಚರ್ಚೆಗಳು ಆರಂಭವಾಗಿವೆ. ರಾಜಕೀಯ ನಾಯಕರ ಬೆಂಬಲದಲ್ಲಿಯೇ ರಾಜ್ಯದಲ್ಲಿ ಹಲವು ಅಕ್ರಮ ಕ್ವಾರಿ ಹಾಗೂ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿರುವುದರ ಕುರಿತು ತನಿಖೆಯನ್ನು ತೀವ್ರಗೊಳಿಸುವ ಒತ್ತಾಯವೂ ಕೇಳಿ ಬಂದಿದೆ.

ಇವುಗಳ ಬೆನ್ನಲ್ಲೇ, ಈ ರೀತಿಯ ಘಟನೆಗಳಿಗೆ ಕಲ್ಲು ಕ್ರಷರ್‌ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯೂ ಕಾರಣ ಎಂಬ ಕುರಿತು ನಾವು ದೃಷ್ಟಿ ಹರಿಸಬೇಕಾಗಿದೆ. ರಾಜ್ಯ ಸರ್ಕಾರವು ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಕಾರಣಕ್ಕೆ ಯಾವ ಎಲ್ಲಾ ಮೂಲಗಳಿಂದ ಹಣ ಸಂಗ್ರಹ ಸಾಧ್ಯವೋ ಅಲ್ಲಿಂದ ಹಣ ಸಂಗ್ರಹಣೆಯಲ್ಲಿ ಸರ್ಕಾರ ತೊಡಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನೀಡದೇ ಇರುವುದು ಕೂಡಾ ರಾಜ್ಯ ಸರ್ಕಾರದ ಚಿಂತೆಗೆ ಕಾರಣವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕಾರಣಕ್ಕೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಇತರ ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದು ಬೊಕ್ಕಸ ತುಂಬಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಸುಳ್ಳಲ್ಲ. ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ, ರಾಜ್ಯ ಸರ್ಕಾರವು ಕಲ್ಲು ಕ್ರಷರ್‌ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ತಂದಿತ್ತು. ಸದ್ದಿಲ್ಲದ ರೀತಿಯಲ್ಲಿ, ಭೂಮಿ ತಾಯಿಯ ಒಡಲಿಗೆ ಕನ್ನ ಹಾಕುವವರಿಗೆ ಸರ್ಕಾರವು ಕಾರ್ಪೆಟ್‌ ಹಾಕಿ ಸ್ವಾಗತ ಕೋರಿದೆ.

ಅಕ್ರಮ ಕ್ರಷರ್‌ಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದ ಸರ್ಕಾರ?
ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್‌ ಸ್ಫೋಟ ದುರಂತ: ಚಿಕ್ಕಬಳ್ಳಾಪುರದಲ್ಲಿ ಗ್ರಾಮಸ್ಥರಿಂದ ಆಕ್ರೋಶ

ಕಳೆದ ವರ್ಷ ತಂದಿರುವ ತಿದ್ದುಪಡಿಯ ಸೆಕ್ಷನ್‌ 4A ಪ್ರಕಾರ, ಕ್ರಷರ್‌ ಸನ್ನದುದಾರರು ತಮ್ಮ ಸನ್ನದನ್ನು ತಮಗೆ ಬೇಕಾದ ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಬಹುದಾಗಿದೆ. ಸೆಕ್ಷನ್‌ 5 ಪ್ರಕಾರ, ಕ್ರಷರ್‌ ಸನ್ನದನ್ನು 20 ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಮುಂದಿನ 10 ವರ್ಷಗಳಿಗೆ ಮತ್ತೆ ಇದನ್ನು ನವೀಕರಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಈ ವಿಚಾರದ ಕುರಿತಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವರ್ಷವೇ ದಾಖಲಿಸಲಾಗಿದೆ. ಅರ್ಜಿದಾರರಾದ ಆಂಜನೇಯ ರೆಡ್ಡಿ ಅವರ ಪರ ವಕೀಲರಾದ ಐಸಾಕ್‌ ಪ್ರಿನ್ಸ್‌ ಅವರು ಪ್ರತಿಧ್ವನಿಯೊಂದಿಗೆ ಮಾತನಾಡಿ, 1998ರ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಗಾಳಿಗೆ ತೂರಿ 2011 ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಇಗ ತಂದಿರುವ ತಿದ್ದುಪಡಿಯೂ ಹೈಕೋರ್ಟ್‌ ಆದೇಶಕ್ಕೆ ವಿರುದ್ದವಾಗಿದೆ, ಎಂದಿದ್ದಾರೆ.

ಅಕ್ರಮ ಕ್ರಷರ್‌ಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದ ಸರ್ಕಾರ?
ಜಿಲೆಟಿನ್‌ ಸ್ಫೋಟ: ಸರ್ಕಾರ ಮಾಧ್ಯಮದ ಮುಂದೆ ತಾತ್ಕಾಲಿಕ ಹೇಳಿಕೆ ಕೊಡದೆ ಕಠಿಣ ಕ್ರಮಕೈಗೊಳ್ಳಲಿ -ಹೆಚ್‌ಡಿಕೆ

“ಇಂದು ನಾವು ಹಾಕಿರುವ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ನಡೆಯಲಿದೆ,” ಎಂದು ಅವರು ಹೇಳಿದ್ದಾರೆ.

ಅರ್ಜಿದಾರರಾದ ಆಂಜನೇಯ ರೆಡ್ಡಿ ಅವರು ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಇದು ಅಪಘಾತ ಅಲ್ಲ. ಅಚಾನಕ್‌ ಆಗಿ ಆಗಿರುವಂತದ್ದಲ್ಲ. ಅಥವಾ ಪ್ರಾಕೃತಿಕ ವಿಕೋಪವೂ ಅಲ್ಲ. ಇದು ಅಧಿಕಾರಿಗಳ ಗಮನಕ್ಕೆ ಬಂದು ಆಗಿರುವಂತಹ ಘಟನೆ, ಎಂದಿದ್ದಾರೆ.

ಆಂಜನೇಯ ರೆಡ್ಡಿ
ಆಂಜನೇಯ ರೆಡ್ಡಿ

“ಕ್ರಷರ್‌ ಹಾಗೂ ಗಣಿಗಾರಿಕೆ ಒಂದು ನಾಣ್ಯದ ಎರಡು ಮುಖಗಳ ಹಾಗೆ. ಮುಂಚೆ ಪರಿಣತಿ ಹೊಂದಿದವರಿಂದ ಕ್ವಾರಿಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಆದರೆ, ಕ್ರಷರ್‌ಗಳು ಬಂದ ಮೇಲೆ ಪರಿಣತಿ ಪಡೆದು ಗಣಿಗಾರಿಕೆ ನಡೆಸುವವರು ಯಾರೂ ಇಲ್ಲ ಎಂಬಂತಾಗಿದೆ. ಪ್ರತೀ ಕ್ರಷರ್‌ ಮಾಲಿಕರೂ ಈಗ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಕ್ರಷರ್‌ ನಡೆಸಲು ಪರವಾನಿಗೆ ಇರಬಹುದು. ಆದರೆ, ಸ್ಫೋಟ ನಡೆಸಲು ಪರವಾನಿಗೆ ಇಲ್ಲ. ಈ ಕುರಿತಾಗಿ ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ, ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅವರೇ ರಕ್ಷಣೆ ಕೊಡುತ್ತಿದ್ದಾರೆ,” ಎಂದು ಆಂಜನೇಯ ರೆಡ್ಡಿ ಆರೋಪಿಸಿದ್ದಾರೆ.

ಸಂಪೂರ್ಣ ರಾಜಕೀಯ ವ್ಯವಸ್ಥೆ ಅಕ್ರಮವಾಗಿ ಸ್ಫೋಟಕಗಳನ್ನು ಬಳಸುವವರ ಬೆಂಬಲಕ್ಕೆ ನಿಂತಿದೆ. ರಾಜಕೀಯ ನಾಯಕರ ಅನುಮತಿ ಇಲ್ಲದೇ, ಇಲ್ಲಿ ಒಂದು ಕಲ್ಲು ಕೂಡಾ ಅಲ್ಲಾಡುವುದಿಲ್ಲ. ಜಿಲೆಟಿನ್‌ ಬಳಕೆಗೆ ಹಲವು ನಿಯಮಗಳಿವೆ. ಯಾರು ಜಿಲೆಟಿನ್‌ ಖರೀದಿಸುತ್ತಾರೆ? ಯಾಕೆ ಖರೀದಿಸುತ್ತಾರೆ? ಎಲ್ಲಿಂದ ಖರೀದಿಸುತ್ತಾರೆ? ಎಷ್ಟು ಖರೀದಿಸುತ್ತಾರೆ? ಎಂಬುದರ ಕುರಿತು ಸರ್ಕಾರ ನಿಗಾ ವಹಿಸಬೇಕಿತ್ತು. ಶಿವಮೊಗ್ಗದ ಘಟನೆಯಿಂದ ಬುದ್ದಿ ಕಲಿಯಬೇಕಿತ್ತು. ಆದರೆ ಇದಾವುದೂ ನಡೆಯಲಿಲ್ಲ, ಎಂದಿದ್ದಾರೆ.

“ಅಕ್ರಮವಾಗಿ ಕ್ವಾರಿ ಮತ್ತು ಕ್ರಷರ್‌ ನಡೆಸುವುದರಿಂದ ವಸತಿ ಪ್ರದೇಶಗಳಿಗೆ ಹಾನಿ ಉಂಟಾಗಿದೆ. ಕೃಷಿ ಚಟುವಟಿಕೆಗಳಿಗೆ ಹಾನಿ ಉಂಟಾಗಿದೆ. ಬೆಟ್ಟಗಳನ್ನೆಲ್ಲಾ ನೆಲಸಮ ಮಾಡಿದ್ದರಿಂದ ಇಲ್ಲಿನ ಪರಿಸರ ಹಾಗೂ ಜೀವ ವೈವಿಧ್ಯತೆ ವಿನಾಶದ ಅಂಚಿಗೆ ತಲುಪುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು, ರಾಜಕೀಯ ನಾಯಕರು ಕೂಡಾ ಶಾಮೀಲಾಗಿರುವುದರಿಂದ, ಇದನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ನಿವೃತ್ತ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ತಜ್ಞರು ಹಾಗೂ ನಿವೃತ್ತ ನ್ಯಾಯಾಧೀಶರ ತಂಡದಿಂದ ಇದರ ತನಿಖೆ ನಡೆಸಬೇಕು ಎಂದು ಒತ್ತಾಯಪಡಿಸಿದ್ದಾರೆ.

ಒಟ್ಟಿನಲ್ಲಿ, ರಾಜ್ಯದ ಸಂಪತ್ತನ್ನು ಉಳಿಸಿ ಬೆಳೆಸಬೇಕಾಗಿದ್ದ ಸರ್ಕಾರವು, ಲೂಟಿಕೋರರಿಗೆ ರಹದಾರಿ ನಿರ್ಮಿಸಿಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಶಿವಮೊಗ್ಗ ಘಟನೆಯ ನಂತರ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ ಸಿಎಂ ಅವರು, ಉನ್ನತ ಮಟ್ಟದ ತನಿಖೆಗೂ ಆದೇಶ ನೀಡಿದ್ದರು. ಆದರೂ, ಮತ್ತೆ ಮತ್ತೆ ಜಿಲೆಟಿನ್‌ ಸ್ಫೋಟದ ಘಟನೆಗಳು ಮರುಕಳಿಸುತ್ತಿರುವುದು, ನಿಜಕ್ಕೂ ದುರಂತಮಯ ಹಾಗೂ ಆತಂಕಕಾರಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com